Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 61

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸಾರ್ವಭೌಮ ಯೆಹೋವ ದೇವರ ಆತ್ಮರು ನನ್ನ ಮೇಲೆ ಇದ್ದಾರೆ. ಏಕೆಂದರೆ ಯೆಹೋವ ದೇವರು ನನ್ನನ್ನು ಬಡವರಿಗೆ ಶುಭಸಂದೇಶವನ್ನು ಸಾರುವುದಕ್ಕೆ ಅಭಿಷೇಕಿಸಿದ್ದಾರೆ. ಮುರಿದ ಹೃದಯಗಳನ್ನು ಕಟ್ಟುವುದಕ್ಕೂ, ಬಂಧಿತರಿಗೆ ಸ್ವಾತಂತ್ರ್ಯವನ್ನು ಘೋಷಿಸಲು ಮತ್ತು ಕೈದಿಗಳಿಗೆ ಕತ್ತಲೆಯಿಂದ ಬಿಡುಗಡೆ ಮಾಡಲು
2ಯೆಹೋವ ದೇವರ ಮೆಚ್ಚುಗೆಯ ವರ್ಷವನ್ನು ಸಾರಿ ಹೇಳುವುದಕ್ಕೂ, ನಮ್ಮ ದೇವರು ಮುಯ್ಯಿಗೆ ಮುಯ್ಯಿ ಕೊಡುವ ದಿವಸವನ್ನು ಪ್ರಸಿದ್ಧ ಮಾಡುವುದಕ್ಕೂ, ದುಃಖವುಳ್ಳವರೆಲ್ಲರನ್ನು ಆದರಿಸುವುದಕ್ಕೂ,
3ಚೀಯೋನಿನಲ್ಲಿ ದುಃಖಿಸುವವರಿಗೆ ಬೂದಿಗೆ ಬದಲಾಗಿ ಸೌಂದರ್ಯದ ಕಿರೀಟವನ್ನೂ, ದುಃಖಕ್ಕೆ ಬದಲಾಗಿ ಆನಂದ ತೈಲವನ್ನೂ, ಕುಂದಿದ ಆತ್ಮಕ್ಕೆ ಬದಲಾಗಿ ಸ್ತೋತ್ರ ಎಂಬ ಮೇಲಂಗಿಯನ್ನು ಕೊಡುವುದಕ್ಕೂ ನನ್ನನ್ನು ನೇಮಿಸಿದ್ದಾರೆ. ಆಗ ಅವರಿಗೆ ನೀತಿವೃಕ್ಷಗಳೆಂದೂ, ಯೆಹೋವ ದೇವರು ತಾನು ಮಹಿಮೆ ಹೊಂದುವುದಕ್ಕೋಸ್ಕರ ನೆಟ್ಟ ಗಿಡಗಳೆಂದೂ ಹೆಸರಾಗುವುದು.
4ಆಗ ಅವರು ಪೂರ್ವಕಾಲದ ಹಾಳು ಸ್ಥಳಗಳನ್ನು ಕಟ್ಟಿ, ಮುಂಚೆ ಹಾಳುಬಿದ್ದವುಗಳನ್ನು ಎಬ್ಬಿಸುವರು. ಅನೇಕ ತಲಾಂತರಗಳಿಂದ ಹಾಳಾದ ಪಟ್ಟಣಗಳನ್ನೂ, ನೂತನ ಪಡಿಸುವರು.
5ಪರನಾಡಿನವರು ನಿಂತು ನಿಮ್ಮ ಮಂದೆಗಳನ್ನು ಮೇಯಿಸುವರು. ಇತರರು ನಿಮಗೆ ನೇಗಿಲು ಹೂಡುವವರೂ, ದ್ರಾಕ್ಷಿತೋಟ ಕಾಯುವವರೂ ಆಗಿರುವರು.
6ಆದರೆ ನೀವು ಯೆಹೋವ ದೇವರ ಯಾಜಕರೆಂಬ ಬಿರುದನ್ನು ಹೊಂದುವಿರಿ. ನಮ್ಮ ದೇವರ ಸೇವಕರೆಂದು ನಿಮಗೆ ಹೆಸರಾಗುವುದು, ಜನಾಂಗಗಳ ಆಸ್ತಿಯನ್ನು ಅನುಭವಿಸುವಿರಿ. ಅವರ ವೈಭವವನ್ನು ಪಡೆದು ಹೊಗಳಿಕೊಳ್ಳುವಿರಿ.
7ನಿಮ್ಮ ನಾಚಿಕೆಗೆ ಬದಲಾಗಿ ಮಾನವು ಎರಡರಷ್ಟಾಗುವುದು. ಅವಮಾನಕ್ಕೆ ಬದಲಾಗಿ ತಮ್ಮ ಪಾಲಿನಲ್ಲಿ ಹರ್ಷಿಸುವರು. ಆದ್ದರಿಂದ ತಮ್ಮ ದೇಶದಲ್ಲಿ ಎರಡರಷ್ಟು ಸ್ವಾಧೀನಮಾಡಿಕೊಳ್ಳುವರು. ನಿತ್ಯವಾದ ಸಂತೋಷವು ನಿಮಗೆ ಆಗುವುದು.
8ಏಕೆಂದರೆ ಯೆಹೋವನಾದ ನಾನು ನ್ಯಾಯವನ್ನು ಪ್ರೀತಿಮಾಡುತ್ತೇನೆ. ಸುಲಿಗೆಯನ್ನೂ ಅನ್ಯಾಯವನ್ನೂ ಹಗೆಮಾಡುತ್ತೇನೆ. ನನ್ನ ನಿಷ್ಠೆಯಲ್ಲಿ ನಾನು ನನ್ನ ಜನರಿಗೆ ಪ್ರತಿಫಲ ನೀಡುತ್ತೇನೆ ಮತ್ತು ಅವರೊಂದಿಗೆ ಶಾಶ್ವತವಾದ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
9ಆಗ ಅವರ ಸಂತಾನವು ಇತರ ಜನಾಂಗಗಳಲ್ಲಿ ಪ್ರಸಿದ್ಧವಾಗುವುದು. ಅವರಿಂದಾದ ಉತ್ಪತ್ತಿ ಜನರ ಮಧ್ಯದಲ್ಲಿ ತಿಳಿಸಲಾಗುವುದು. ಅವರನ್ನು ನೋಡುವವರೆಲ್ಲರೂ, ಅವರೇ ಯೆಹೋವ ದೇವರು ಆಶೀರ್ವದಿಸಿದ ಸಂತಾನ ಎಂದು ಒಪ್ಪಿಕೊಳ್ಳುವರು.
10ನಾನು ಯೆಹೋವ ದೇವರಲ್ಲಿ ಬಹಳವಾಗಿ ಸಂತೋಷಿಸುವೆನು. ನನ್ನ ಪ್ರಾಣವು ನನ್ನ ದೇವರಲ್ಲಿ ಉಲ್ಲಾಸಪಡುವುದು. ವರನು ಸೌಂದರ್ಯವಾಗಿ ತನ್ನನ್ನು ಶೃಂಗರಿಸುವ ಹಾಗೆಯೂ, ವಧುವು ಆಭರಣಗಳಿಂದ ತನ್ನನ್ನು ಅಲಂಕರಿಸುವ ಹಾಗೆಯೂ, ಅವನು ರಕ್ಷಣೆಯ ವಸ್ತ್ರಗಳನ್ನು ನನಗೆ ತೊಡಿಸಿದ್ದಾನೆ. ನೀತಿಯ ನಿಲುವಂಗಿಯನ್ನು ನನಗೆ ಧರಿಸುವಂತೆ ಮಾಡಿದ್ದಾನೆ.
11ಏಕೆಂದರೆ ಭೂಮಿಯು ತನ್ನ ಮೊಳಕೆಯನ್ನು ಹೇಗೆ ಹೊರಡಿಸುವುದೋ, ತೋಟವು ತನ್ನಲ್ಲಿ ಬಿತ್ತಿದ್ದನ್ನು ಹೇಗೆ ಮೊಳೆಯಿಸುವುದೋ, ಹಾಗೆಯೇ ಸಾರ್ವಭೌಮ ಯೆಹೋವ ದೇವರು ನೀತಿಯನ್ನೂ, ಸ್ತೋತ್ರವನ್ನೂ ಎಲ್ಲಾ ಜನಾಂಗಗಳ ಮುಂದೆ ಮೊಳೆಯಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.