Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 53

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಮ್ಮ ಸುದ್ದಿಯನ್ನು ಯಾರು ನಂಬಿದ್ದಾರೆ? ಯೆಹೋವ ದೇವರ ಬಾಹುವು ಯಾರಿಗೆ ಪ್ರಕಟವಾಯಿತು?
2ಅವನು ಚಿಗುರಿನಂತೆಯೂ, ಒಣ ನೆಲದಿಂದ ಹುಟ್ಟಿಬರುವ ಬೇರಿನಂತೆಯೂ ಯೆಹೋವ ದೇವರ ಮುಂದೆ ಬೆಳೆಯುವನು. ಅವನಿಗೆ ಯಾವ ಸೌಂದರ್ಯವಾಗಲಿ ಇಲ್ಲವೆ ಘನತೆಯಾಗಲಿ ಇರಲಿಲ್ಲ. ನಾವು ಅವನನ್ನು ನೋಡಿದಾಗ, ಅವನಲ್ಲಿ ಆಕರ್ಷಿಸತಕ್ಕ ಯಾವ ಚಂದವು ಇರಲಿಲ್ಲ.
3ಆತನು ತಿರಸ್ಕೃತನೂ ಮಾನವಕುಲದಿಂದ ನಿರಾಕರಿಸಲಾದವನೂ, ದುಃಖಿತ ಮನುಷ್ಯನೂ, ನೋವನ್ನು ಅನುಭವಿಸಿದವನೂ ಆಗಿದ್ದನು. ನಾವು ನಮ್ಮ ಮುಖಗಳನ್ನು ಆತನಿಂದ ಮರೆಮಾಡಿಕೊಂಡೆವು. ಆತನು ಧಿಕ್ಕಾರಕ್ಕೆ ಒಳಗಾದವನೂ ಆಗಿದ್ದನು. ನಾವು ಆತನನ್ನು ಅತ್ಯಲ್ಪವಾಗಿ ಎಣಿಸಿದೆವು.
4ನಿಶ್ಚಯವಾಗಿಯೂ ಆತನು ನಮ್ಮ ನೋವನ್ನು ತೆಗೆದುಕೊಂಡನು; ಹೌದು, ನಮ್ಮ ದುಃಖಗಳನ್ನು ಸಹ ಹೊತ್ತುಕೊಂಡನು. ಆದರೂ ನಾವು ಆತನನ್ನು ಪೆಟ್ಟು ತಿಂದವನು, ದೇವರಿಂದ ಶಿಕ್ಷೆಹೊಂದಿದವನು, ಬಾಧೆಪಟ್ಟವನು ಎಂದು ಭಾವಿಸಿಕೊಂಡೆವು.
5ನಮ್ಮ ಉಲ್ಲಂಘನೆಗಳಿಗಾಗಿ ಆತನು ತಿವಿತಕ್ಕೆ ಒಳಗಾದನು. ನಮ್ಮ ದುಷ್ಕೃತ್ಯಗಳ ನಿಮಿತ್ತ ಆತನು ಜಜ್ಜಿಹೋದನು. ನಮಗೆ ಸಮಾಧಾನವನ್ನು ತಂದ ದಂಡನೆಯು ಆತನ ಮೇಲಿತ್ತು. ಆತನ ಗಾಯಗಳಿಂದ ನಮಗೆ ಗುಣವಾಯಿತು.
6ನಾವೆಲ್ಲರೂ ದಾರಿತಪ್ಪಿದ ಕುರಿಗಳಂತೆ ಇದ್ದೆವು. ನಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಸ್ವಂತ ಮಾರ್ಗಕ್ಕೆ ತಿರುಗಿಕೊಂಡಿದ್ದನು. ಯೆಹೋವ ದೇವರು ನಮ್ಮ ಎಲ್ಲಾ ದುಷ್ಕೃತ್ಯಗಳನ್ನು ಆತನ ಮೇಲೆ ಹಾಕಿದರು.
7ಆತನು ದಬ್ಬಾಳಿಕೆಗೆ ಗುರಿಯಾಗಿ ಬಾಧೆಪಟ್ಟನು. ಆದರೂ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ. ಬಲಿಗೆ ಎಳೆದುಕೊಂಡು ಹೋಗುವ ಕುರಿಯಂತೆಯೂ, ಉಣ್ಣೆ ಕತ್ತರಿಸುವವರ ಮುಂದೆ ಇದ್ದ ಕುರಿಯ ಹಾಗೆಯೂ ಆತನು ಮೌನವಾಗಿದ್ದನು. ಹೀಗೆ ಆತನು ತನ್ನ ಬಾಯನ್ನು ತೆರೆಯಲೇ ಇಲ್ಲ.
8ಆತನನ್ನು ದಬ್ಬಾಳಿಕೆಯಿಂದಲೂ, ನ್ಯಾಯತೀರ್ಪಿನಿಂದಲೂ ಎಳೆದುಕೊಂಡು ಹೋದರು. ಆತನ ಕಾಲದವರಲ್ಲಿ ಯಾರು ಮರುಗಿದರು? ಏಕೆಂದರೆ ಆತನನ್ನು ಜೀವಿತರ ಲೋಕದಿಂದ ತೆಗೆದುಹಾಕಿದರು. ನನ್ನ ಪ್ರಜೆಯ ದ್ರೋಹಕ್ಕಾಗಿ ಆತನು ಶಿಕ್ಷೆಯನ್ನು ಹೊಂದಿದನು.
9ಅವನು ಯಾವ ಅನ್ಯಾಯವನ್ನು ಮಾಡದಿದ್ದರೂ, ಅವನ ಬಾಯಲ್ಲಿ ಯಾವ ವಂಚನೆಯು ಇಲ್ಲದಿದ್ದರೂ, ಅವನು ಸತ್ತಾಗ ದುಷ್ಟರ ಮಧ್ಯೆ ಪುಷ್ಟರ ನಡುವೆ ಅವನನ್ನು ಹೂಣಿಟ್ಟರು.
10ಆದರೂ ಆತನನ್ನು ಜಜ್ಜುವುದು ಯೆಹೋವ ದೇವರ ಚಿತ್ತವಾಗಿತ್ತು. ಯೆಹೋವ ದೇವರು ಆತನನ್ನು ಸಂಕಟಕ್ಕೆ ಒಳಪಡಿಸಿದನು. ಯೆಹೋವ ದೇವರು ಆತನ ಪ್ರಾಣವನ್ನು ದೋಷಪರಿಹಾರದ ಬಲಿಯನ್ನಾಗಿ ಮಾಡುವಾಗ, ಆತನು ತನ್ನ ಸಂತಾನವನ್ನು ಕಾಣುವನು. ಆತನು ತನ್ನ ದಿವಸಗಳನ್ನು ಉದ್ದ ಮಾಡಿದ ಮೇಲೆ ಮತ್ತು ಯೆಹೋವ ದೇವರ ಚಿತ್ತವು ಆತನ ಕೈಯಲ್ಲಿ ಸಫಲವಾಗುವುದು.
11ಆತನು ತನ್ನ ಪ್ರಾಣದ ವೇದನೆಯನ್ನು ಸಹಿಸಿದ ತರುವಾಯ, ಜೀವದ ಬೆಳಕನ್ನು ಕಂಡು ತೃಪ್ತನಾಗುವನು. ತನ್ನ ತಿಳುವಳಿಕೆಯಿಂದ ನೀತಿವಂತನಾದ ನನ್ನ ಸೇವಕನು ಅನೇಕರಿಗೆ ನೀತಿವಂತನಾಗಿ ನಿರ್ಣಯಿಸುವನು. ಏಕೆಂದರೆ ಆತನೇ ಅವರ ಅಪರಾಧಗಳನ್ನು ಹೊತ್ತುಕೊಳ್ಳುವನು.
12ಆದ್ದರಿಂದ ನಾನು ಆತನಿಗೋಸ್ಕರ ದೊಡ್ಡವರೊಂದಿಗೆ ಪಾಲನ್ನು ಕೊಡುವೆನು ಮತ್ತು ಆತನು ಬಲಿಷ್ಠರ ಸಂಗಡ ಕೊಳ್ಳೆಯಲ್ಲಿ ಪಾಲು ಹಂಚಿಕೊಳ್ಳುವನು. ಏಕೆಂದರೆ ಆತನು ತನ್ನ ಪ್ರಾಣವನ್ನು ಮರಣದವರೆಗೂ ಹೊಯ್ದುಬಿಟ್ಟು, ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡನು. ಅನೇಕರ ಪಾಪವನ್ನು ಹೊತ್ತುಕೊಂಡು ದ್ರೋಹಿಗಳಿಗೋಸ್ಕರ ವಿಜ್ಞಾಪನೆ ಮಾಡಿದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.