Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನನ್ನ ಪ್ರಿಯನ ದ್ರಾಕ್ಷಿತೋಟದ ವಿಷಯವಾದ ಹಾಡನ್ನು ನನ್ನ ಪ್ರಾಣ ಪ್ರಿಯನಿಗೆ ನಾನು ಹಾಡುವೆನು. ಫಲವತ್ತಾದ ಗುಡ್ಡದ ಬಳಿಯಲ್ಲಿ ನನ್ನ ಅತಿ ಪ್ರಿಯನಿಗೆ ದ್ರಾಕ್ಷಿ ತೋಟವಿದೆ.
2ಅವನು ಅದಕ್ಕೆ ಬೇಲಿಹಾಕಿ, ಅದರೊಳಗಿಂದ ಕಲ್ಲುಗಳನ್ನು ಆರಿಸಿ ತೆಗೆದುಹಾಕಿ, ಒಳ್ಳೆಯ ದ್ರಾಕ್ಷಿ ಸಸಿಯನ್ನು ನೆಟ್ಟು, ಅದರ ಮಧ್ಯದಲ್ಲಿ ಒಂದು ಬುರುಜನ್ನು ಕಟ್ಟಿ, ದ್ರಾಕ್ಷಿ ತೊಟ್ಟಿಯನ್ನು ಕೊರೆಯಿಸಿ, ತೋಟವು ಒಳ್ಳೆಯ ದ್ರಾಕ್ಷಿಹಣ್ಣನ್ನು ಕೊಡುವುದೆಂದು ಎದುರುನೋಡುತ್ತಿರಲು, ಅದು ಹುಳಿ ಹಣ್ಣನ್ನು ಬಿಟ್ಟಿತು.
3“ಯೆರೂಸಲೇಮಿನ ನಿವಾಸಿಗಳೇ, ಯೆಹೂದದ ಮನುಷ್ಯರೇ, ನನಗೂ ನನ್ನ ದ್ರಾಕ್ಷಿ ತೋಟಕ್ಕೂ ನ್ಯಾಯತೀರಿಸಿರಿ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
4ನನ್ನ ದ್ರಾಕ್ಷಿತೋಟದಲ್ಲಿ ನಾನು ಮಾಡಿದ್ದಕ್ಕಿಂತ ಇನ್ನೂ ಹೆಚ್ಚಾಗಿ ಅದಕ್ಕೆ ಏನು ಮಾಡಬೇಕಾಗಿತ್ತು? ಅದು ಒಳ್ಳೆಯ ದ್ರಾಕ್ಷಿ ಫಲವನ್ನು ಫಲಿಸುವುದೆಂದು ನಾನು ನಿರೀಕ್ಷಿಸುತ್ತಿರಲು, ಅದು ಹುಳಿ ಹಣ್ಣನ್ನು ಕೊಟ್ಟಿದ್ದು ಏಕೆ?
5ನನ್ನ ದ್ರಾಕ್ಷಿ ತೋಟಕ್ಕೆ ನಾನು ಮಾಡುವುದು ಏನೆಂದು ನಾನು ನಿಮಗೆ ತಿಳಿಸುತ್ತೇನೆ. ನಾನು ಅದರ ಬೇಲಿಯನ್ನು ತೆಗೆದುಹಾಕುವೆನು. ಆಗ ದನಕರುಗಳು ಅದನ್ನು ಮೇಯ್ದುಬಿಡುವುದು. ಅದರ ಗೋಡೆಯನ್ನು ಕೆಡವಿಬಿಡುವೆನು, ಆಗ ಅದು ತುಳಿದಾಟಕ್ಕೆ ಈಡಾಗುವುದು.
6ಅದನ್ನು ನಾನು ಹಾಳಾಗಲು ಬಿಡುವೆನು. ಅದರ ಕುಡಿ ಯಾರೂ ಕತ್ತರಿಸುವುದಿಲ್ಲ, ಅಗೆಯುವುದೂ ಇಲ್ಲ, ಅದರಲ್ಲಿ ಮುಳ್ಳು ಕಳೆ ಬೆಳೆಯುವುದು. ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾಪಿಸುವೆನು.”
7ಸೇನಾಧೀಶ್ವರ ಯೆಹೋವ ದೇವರ ದ್ರಾಕ್ಷಿತೋಟವು ಇಸ್ರಾಯೇಲಿನ ಮನೆತನವು. ಯೆಹೂದದ ಜನವೋ ದೇವರ ಇಷ್ಟದ ಗಿಡವು. ಅವರು ನ್ಯಾಯವನ್ನು ನಿರೀಕ್ಷಿಸಲು, ಹಿಂಸೆಯೂ, ನೀತಿಯನ್ನು ನಿರೀಕ್ಷಿಸಲು ಗೋಳಾಟವು ಸಿಕ್ಕಿತು. ಶಾಪಗಳೂ, ತೀರ್ಪುಗಳೂ
8ಅಯ್ಯೋ, ಭೂಮಿಯ ಮಧ್ಯದಲ್ಲಿ ಒಂಟಿಯಾಗಿ ವಾಸಿಸುವಂತೆ ಮನೆಗೆ ಮನೆ ಕೂಡಿಸಿ, ಹೊಲಕ್ಕೆ ಹೊಲ ಸೇರಿಸುವ ನಿಮಗೆ ಕಷ್ಟ!
9ಸೇನಾಧೀಶ್ವರ ಯೆಹೋವ ದೇವರು ನನ್ನ ಕಿವಿಗಳಲ್ಲಿ ಹೇಳುವುದೇನೆಂದರೆ: “ನಿಜವಾಗಿಯೂ ದೊಡ್ಡ ಮನೆಗಳು ಬರಿದಾಗುವುವು ಸುಂದರ ಭವನಗಳು ನಿವಾಸಿಗಳಿಲ್ಲದೆ ಹಾಳಾಗುವುವು.
10ಹತ್ತು ಎಕರೆ ದ್ರಾಕ್ಷಿತೋಟ ಕೇವಲ ಇಪ್ಪತ್ತೆರಡು ಲೀಟರ್ ದ್ರಾಕ್ಷಾರಸವನ್ನು ಕೊಡುವುದು. ಸುಮಾರು ನೂರಾ ಅರವತ್ತು ಕಿಲೋಗ್ರಾಂ ಬೀಜಬಿತ್ತಿದರೆ, ಕೇವಲ ಹದಿನಾರು ಕಿಲೋಗ್ರಾಂ ಧಾನ್ಯ ಮಾತ್ರ ಸಿಗುವುದು.”
11ಮದ್ಯಪಾನವನ್ನು ಅತಿಯಾಗಿ ಕುಡಿಯಲು ಬೆಳಗಿನ ಜಾವದಲ್ಲಿ ಎದ್ದು ರಾತ್ರಿವರೆಗೂ ದ್ರಾಕ್ಷಾರಸದಿಂದ ಅಮಲೇರಿದವರಾಗಿ ಕಾಲಕಳೆಯುವವರಿಗೆ ಕಷ್ಟ!
12ಅವರ ಹಬ್ಬಗಳಲ್ಲಿ ಕಿನ್ನರಿ, ವೀಣೆ, ದಮ್ಮಡಿ, ಕೊಳಲು ಮತ್ತು ಮದ್ಯಪಾನ ಇರುವುವು. ಆದರೆ ಯೆಹೋವ ದೇವರ ಕೆಲಸವನ್ನು ಅವರು ಲಕ್ಷಿಸರು ಇಲ್ಲವೆ ಅವರ ಕೈಗೆಲಸವನ್ನು ಲಕ್ಷಿಸುವುದಿಲ್ಲ.
13ಆದಕಾರಣ ನನ್ನ ಜನರು ಜ್ಞಾನಹೀನರಾಗಿ ಸೆರೆಗೆ ಹೋದರು; ಅವರ ಘನವಂತರು ಹಸಿವಿನಿಂದ ಸಾಯುವರು, ಹಾಗೆ ಜನಸಮೂಹವು ಬಾಯಾರಿಕೆಯಿಂದ ಒಣಗುವುದು.
14ಹೀಗಿರುವುದರಿಂದ ಪಾತಾಳವು ತನಗೆ ತಾನೇ ದೊಡ್ಡದಾಗಿ ಮಿತಿಯಿಲ್ಲದಷ್ಟು ತನ್ನ ಬಾಯಿಯನ್ನು ತೆರೆಯಲು ಅವರ ವೈಭವ, ಸಮೂಹ, ಕೋಲಾಹಲ, ಉಲ್ಲಾಸಪಡುವುದು ಇವೆಲ್ಲವೂ ಅದರಲ್ಲಿ ಬೀಳುವುವು.
15ನರಮಾನವರು ತಗ್ಗಿಹೋಗುವರು. ಅಹಂಭಾವದ ಕಣ್ಣುಗಳು ಕಂಗೆಡುವುವು.
16ಆದರೆ ಸೇನಾಧೀಶ್ವರ ಯೆಹೋವ ದೇವರು ನ್ಯಾಯತೀರ್ಪಿನಲ್ಲಿ ಉನ್ನತವಾಗಿರುವರು. ಪರಿಶುದ್ಧ ದೇವರು ತಮ್ಮ ನ್ಯಾಯದಲ್ಲಿ ಪರಿಶುದ್ಧರೆಂದು ಕಾಣಿಸಿಕೊಳ್ಳುವರು.
17ಪಟ್ಟಣ ಪ್ರದೇಶಗಳು ಹಾಳಾಗಿ ಮೇಕೆಮರಿಗಳಿಗೆ ಹುಲ್ಲುಗಾವಲುಗಳಾಗುವುವು. ಕುರಿಮರಿಗಳು ಅಲ್ಲಿ ಮೇಯುವುವು.
18ಅಯ್ಯೋ, ವ್ಯರ್ಥವಾದ ಹಗ್ಗಗಳಿಂದ ಅಪರಾಧವನ್ನೂ, ಬಂಡಿಹಗ್ಗದಿಂದಲೋ ಎಂಬಂತೆ ಪಾಪವನ್ನೂ ಎಳೆದು,
19ನಾವು ಅವರ ಕೆಲಸವನ್ನು ನೋಡುವಂತೆ, “ದೇವರು ತ್ವರೆಯಾಗಿ ಅದನ್ನು ಬೇಗನೆ ಮಾಡಲಿ. ನಾವು ಇಸ್ರಾಯೇಲಿನ ಪರಿಶುದ್ಧರ ಆಲೋಚನೆಯನ್ನು ತಿಳಿದುಕೊಳ್ಳುವ ಹಾಗೆ ಅದು ಸಮೀಪಿಸಿ ಬರಲಿ ಎಂದು ಹೇಳುವವರಿಗೆ ಕಷ್ಟ!”
20ಕೇಡಿಗೆ ಮೇಲೆಂದೂ, ಮೇಲಿಗೆ ಕೇಡೆಂದೂ ಕರೆದು, ಕತ್ತಲೆಯನ್ನು ಬೆಳಕೆಂದೂ, ಬೆಳಕನ್ನು ಕತ್ತಲೆಯೆಂದೂ; ಕಹಿಯನ್ನು ಸಿಹಿ ಎಂದೂ, ಸಿಹಿಯನ್ನು ಕಹಿ ಎಂದೂ ಎಣಿಸುವವರಿಗೆ ಕಷ್ಟ!
21ತಮ್ಮ ಸ್ವಂತ ಕಣ್ಣುಗಳಲ್ಲಿ ಜ್ಞಾನಿಗಳು ತಮ್ಮ ಸ್ವಂತ ದೃಷ್ಟಿಯಲ್ಲಿ ವಿವೇಕಿಗಳು ಆಗಿರುವವರಿಗೆ ಕಷ್ಟ!
22ಅಯ್ಯೋ, ದ್ರಾಕ್ಷಾರಸ ಕುಡಿಯುವುದರಲ್ಲಿ ಶೂರರೂ, ಮದ್ಯ ಸಾಹಸಿಗಳೂ,
23ಲಂಚಕ್ಕೋಸ್ಕರ ದುಷ್ಟನನ್ನು ನೀತಿವಂತನೆಂದು ನಿರ್ಣಯಿಸಿ, ನೀತಿಯನ್ನು ನೀತಿವಂತನಿಂದ ತೆಗೆದು ಹಾಕುವವರಿಗೂ ಕಷ್ಟ!
24ಏಕೆಂದರೆ ಅವರು ಸೇನಾಧೀಶ್ವರ ಯೆಹೋವ ದೇವರ ನಿಯಮವನ್ನು ನಿರಾಕರಿಸಿದ್ದರಿಂದಲೂ, ಇಸ್ರಾಯೇಲಿನ ಪರಿಶುದ್ಧರ ವಾಕ್ಯವನ್ನು ಅಸಡ್ಡೆ ಮಾಡಿದ್ದರಿಂದಲೂ ಬೆಂಕಿಯು ಕೊಳ್ಳಿಯನ್ನು ನುಂಗಿ ಬಿಡುವ ಹಾಗೆಯೂ, ಜ್ವಾಲೆಯು ಒಣಹುಲ್ಲನ್ನು ಸುಟ್ಟುಬಿಡುವಂತೆಯೂ, ಅದರ ಬೇರು ಕೊಳೆಯುವಂತೆಯೂ, ಚಿಗುರು ಅದರ ಧೂಳಿನಂತೆಯೂ ಏರಿ ಹೋಗುವುವು.
25ಆದಕಾರಣ ಯೆಹೋವ ದೇವರು ಕೋಪಗೊಂಡು ಜನರಿಗೆ ವಿರೋಧವಾಗಿ ಉರಿಗೊಂಡು ಅವರ ಮೇಲೆ ತಮ್ಮ ಕೈಚಾಚಿ, ಅವರನ್ನು ಹೊಡೆದಿದ್ದಾರೆ, ಬೆಟ್ಟಗುಡ್ಡಗಳು ಕಂಪಿಸಿದವು. ಅವರ ಹೆಣಗಳು ಹರಿದು ಬೀದಿಗಳ ಮಧ್ಯದಲ್ಲಿ ಬಿದ್ದಿರುವುವು. ಇಷ್ಟೆಲ್ಲಾ ಆದರೂ ದೇವರ ಕೋಪವು ತೀರದೆ, ಅವರ ಕೈ ಇನ್ನೂ ಚಾಚಿಯೇ ಇರುವುದು.
26ಅವರು ದೂರದ ಜನಾಂಗದವರಿಗೆ ಗುರುತಿಗಾಗಿ ಧ್ವಜವನ್ನೆತ್ತಿ, ಭೂಮಿಯ ಕಟ್ಟಕಡೆಯಿಂದ ಅವರಿಗೆ ಸೀಟಿ ಹಾಕುವರು. ಇಗೋ, ಅವರು ತ್ವರೆಯಾಗಿ ಫಕ್ಕನೆ ಬರುವರು,
27ಅವರಲ್ಲಿ ಯಾರೂ ದಣಿದು ಮುಗ್ಗರಿಸರು, ಅವರು ತೂಕಡಿಸುವುದಿಲ್ಲ, ನಿದ್ರಿಸುವುದಿಲ್ಲ, ಅವರ ನಡುಕಟ್ಟು ಬಿಚ್ಚಿಕೊಳ್ಳುವುದಿಲ್ಲ. ಕೆರದ ಬಾರು ಹರಿಯುವುದಿಲ್ಲ.
28ಅವರ ಬಾಣಗಳು ಹದವಾಗಿವೆ. ಅವರ ಬಿಲ್ಲುಗಳು ಬಿಗಿದಿವೆ, ಅವರ ಕುದುರೆಗಳ ಗೊರಸುಗಳು ಕಲ್ಲಿನಂತೆಯೂ, ಅವರ ರಥಗಳ ಚಕ್ರಗಳು ಬಿರುಗಾಳಿಯಂತೆಯೂ ರಭಸವಾಗಿವೆ.
29ಅವರ ಗರ್ಜನೆಯು ಸಿಂಹ ಆರ್ಭಟಿಸಿದಂತಿದೆ. ಪ್ರಾಯದ ಸಿಂಹ ಆರ್ಭಟಿಸಿದಂತಿದೆ. ಹೌದು, ಗರ್ಜಿಸುತ್ತಾ ಬೇಟೆಹಿಡಿದು ಭದ್ರವಾಗಿ ಹೊತ್ತುಕೊಂಡು ಹೋಗುತ್ತಾರೆ, ಅದನ್ನು ಬಿಡಿಸುವವನು ಒಬ್ಬನೂ ಇಲ್ಲ.
30ಆ ದಿನದಲ್ಲಿ ಅವರು ಸಮುದ್ರವು ಭೋರ್ಗರೆಯುವಂತೆ ಅದರ ಮೇಲೆ ಗರ್ಜಿಸುವರು. ಭೂಮಿಯನ್ನು ದೃಷ್ಟಿಸಿದರೆ ಅಂಧಕಾರವನ್ನೂ, ದುಃಖವನ್ನೂ ನೋಡುವೆ. ಸೂರ್ಯ ಕೂಡ ಮೋಡಗಳಿಂದ ಕಪ್ಪಾಗುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.