Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 45

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಯೆಹೋವ ದೇವರು ತಾವೇ ಅಭಿಷೇಕಿಸಿದ ಕೋರೆಷನಿಗೆ ಹೇಳುವುದೇನೆಂದರೆ: ರಾಷ್ಟ್ರಗಳನ್ನು ನೀನು ತುಳಿದು, ರಾಜರ ನಡುಕಟ್ಟನ್ನು ಬಿಚ್ಚಿ, ಮುಚ್ಚಲಾಗದ ಹಾಗೆ ಬಾಗಿಲು ಹೆಬ್ಬಾಗಿಲುಗಳನ್ನು ತೆರೆಯಲು ನಾನು ನಿನ್ನ ಬಲಗೈಯನ್ನು ಹಿಡಿದು ನಡೆಸುವೆನು.
2ನಾನು ನಿನ್ನ ಮುಂದೆ ಹೋಗಿ ಬೆಟ್ಟಗುಡ್ಡಗಳನ್ನು ಸಮಮಾಡಿ, ಕಂಚಿನ ಕದಗಳನ್ನು ಒಡೆದು, ಕಬ್ಬಿಣದ ಅಗುಳಿಗಳನ್ನು ಮುರಿದುಬಿಡುವೆನು.
3ನಿನ್ನನ್ನು ಹೆಸರು ಹಿಡಿದು ಕರೆಯುವ ಯೆಹೋವ ದೇವರು ನಾನೇ! ಇಸ್ರಾಯೇಲಿನ ದೇವರು ಎಂದು ನೀನು ತಿಳಿದುಕೊಳ್ಳುವ ಹಾಗೆ ಕತ್ತಲಲ್ಲಿ ಬಚ್ಚಿಟ್ಟಿರುವ ಬಂಡಾರವನ್ನೂ, ಗುಪ್ತಸ್ಥಳಗಳಲ್ಲಿ ಮರೆಮಾಡಿದ ನಿಧಿನಿಕ್ಷೇಪಗಳನ್ನೂ ನಿನಗೆ ಕೊಡುವೆನು.
4ಏಕೆಂದರೆ ನನ್ನ ಸೇವಕನಾದ ಯಾಕೋಬನಿಗಾಗಿ, ನಾನು ಆಯ್ದುಕೊಂಡ ಇಸ್ರಾಯೇಲಿಗಾಗಿ ಹೆಸರು ಹಿಡಿದು ನಿನ್ನನ್ನು ಕರೆದಿದ್ದೇನೆ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನಗೆ ಹೆಸರನ್ನು ಇಟ್ಟಿದ್ದೇನೆ.
5ನಾನೇ ಯೆಹೋವ ದೇವರು, ಮತ್ತೊಬ್ಬನಿಲ್ಲ. ನನ್ನ ಹೊರತು ಯಾವ ದೇವರೂ ಇಲ್ಲ. ನೀನು ನನ್ನನ್ನು ಅರಿಯದವನಾಗಿದ್ದರೂ ನಿನ್ನನ್ನು ಬಲಪಡಿಸುವೆನು.
6ಪೂರ್ವದಿಂದ ಪಶ್ಚಿಮದವರೆಗೆ ಇರುವವರೆಲ್ಲರೂ ನನ್ನ ಹೊರತು ಮತ್ತೊಬ್ಬನು ಇಲ್ಲ, ನಾನೇ ಯೆಹೋವ ದೇವರು ಮತ್ತೊಬ್ಬ ದೇವರು ಇಲ್ಲ ಎಂದು ನನ್ನನ್ನು ತಿಳಿದುಕೊಳ್ಳುವರು.
7ಬೆಳಕನ್ನು ರೂಪಿಸುವವನೂ, ಕತ್ತಲನ್ನು ನಿರ್ಮಿಸುವವನೂ, ಸಮಾಧಾನವನ್ನು ಉಂಟುಮಾಡುವವನೂ, ವಿಪತ್ತನ್ನು ಬರಮಾಡುವವನೂ ನಾನೇ. ಯೆಹೋವನಾದ ನಾನೇ ಇವುಗಳನ್ನೆಲ್ಲಾ ಮಾಡುತ್ತೇನೆ.
8“ಆಕಾಶಗಳೇ, ಮೇಲಿನಿಂದ ಹನಿಯನ್ನು ಬೀಳಿಸಿರಿ. ಗಗನವು ನೀತಿಯನ್ನು ಸುರಿಸಲಿ. ಭೂಮಿಯು ತೆರೆದು ರಕ್ಷಣೆಯನ್ನು ತರಲಿ. ನೀತಿಯು ಅದರೊಟ್ಟಿಗೆ ಮೊಳೆಯಲಿ. ಇದನ್ನು ಸೃಷ್ಟಿಸಿದ ಯೆಹೋವ ದೇವರು ನಾನೇ!
9“ತನ್ನನ್ನು ರೂಪಿಸಿದವನ ಸಂಗಡ ವಾದಮಾಡುವವನಿಗೆ ಕಷ್ಟ! ಅವನು ಸಹ ಮಣ್ಣುಮಡಕೆಗಳಲ್ಲಿ ಒಂದು ಮಡಕೆ ಅಲ್ಲವೇ? ಮಣ್ಣು ಕುಂಬಾರನಿಗೆ, ‘ನೀನು ಏನು ಮಾಡುತ್ತೀ?’ ಎಂದೂ, ‘ನಾನು ನಿನ್ನ ಕೈ ಕೆಲಸವು ಅಲ್ಲ,’ ಎಂದೂ ಆ ಮಡಕೆ ಹೇಳುವುದುಂಟೇ?
10ನೀನು ಹುಟ್ಟಿಸಿದ್ದು ಏಕೆ? ಎಂದು ತನ್ನ ತಂದೆಯನ್ನು ಕೇಳುವವನಿಗೂ, ‘ನೀನು ಹಡೆದದ್ದು ಏಕೆ?’ ಎಂದು ತಾಯಿಗೆ ಕೇಳುವವನಿಗೂ ಶಾಪ!
11“ಇಸ್ರಾಯೇಲಿನ ಪರಿಶುದ್ಧನೂ, ಅದನ್ನು ರೂಪಿಸಿದವನೂ ಆಗಿರುವ ಯೆಹೋವ ದೇವರು, ಮುಂದೆ ಸಂಭವಿಸುವ ನನ್ನ ಮಕ್ಕಳ ವಿಷಯವಾಗಿಯೂ, ನನ್ನ ಕೈಕೆಲಸದ ವಿಷಯವಾಗಿಯೂ ನೀವು ನನಗೆ ಆಜ್ಞಾಪಿಸುವುದೇನು?
12ನಾನು ಭೂಮಿಯನ್ನು ಉಂಟುಮಾಡಿ, ಅದರ ಮೇಲೆ ಮನುಷ್ಯನನ್ನು ಸೃಷ್ಟಿಸಿದೆನು. ನಾನೇ, ನನ್ನ ಕೈಗಳೇ ಆಕಾಶಗಳನ್ನು ವಿಸ್ತರಿಸಿದವು. ನಾನು ಅದರ ನಕ್ಷತ್ರಸೈನ್ಯಕ್ಕೆಲ್ಲಾ ಅಪ್ಪಣೆಕೊಟ್ಟೆನು.
13ನಾನೇ, ಅವನನ್ನು ನೀತಿಯಲ್ಲಿ ಎಬ್ಬಿಸಿದ್ದೇನೆ. ಅವನ ಮಾರ್ಗಗಳನ್ನು ಸರಾಗ ಮಾಡುತ್ತೇನೆ. ಅವನು ನನ್ನ ಪಟ್ಟಣವನ್ನು ಕಟ್ಟಿ, ಕ್ರಯವನ್ನಾಗಲೀ, ಬಹುಮಾನವನ್ನಾಗಲೀ ಕೇಳಿಕೊಳ್ಳದೆ, ನನ್ನ ಸೆರೆಯವರನ್ನು ಕಳುಹಿಸಿಬಿಡುವನು,” ಎಂದು ಸೇನಾಧೀಶ್ವರ ಯೆಹೋವ ದೇವರು ಹೇಳುತ್ತಾನೆ.
14ಯೆಹೋವ ದೇವರು ಹೇಳುವುದೇನೆಂದರೆ: “ಈಜಿಪ್ಟಿನ ಆದಾಯವೂ, ಇಥಿಯೋಪಿಯದ ವ್ಯಾಪಾರವೂ, ಎತ್ತರದ ಮನುಷ್ಯರಾದ ಶೆಬದವರೂ ನಿಮ್ಮಲ್ಲಿಗೆ ಸೇರಿ, ನಿಮ್ಮವರಾಗಿ ನಿಮ್ಮನ್ನು ಅನುಸರಿಸುವರು. ಸಂಕೋಲೆಗಳನ್ನು ಕಟ್ಟಿಕೊಂಡು ಬಂದು, ನಿಮ್ಮ ಮುಂದೆ ಅಡ್ಡಬಿದ್ದು, ‘ನಿಶ್ಚಯವಾಗಿ ದೇವರು ನಿಮ್ಮಲ್ಲಿಯೇ ಇದ್ದಾನೆ, ಮತ್ತೊಬ್ಬನಿಲ್ಲ; ಬೇರೆ ದೇವರು ಇಲ್ಲವೇ ಇಲ್ಲ.’ ”
15ಇಸ್ರಾಯೇಲರ ದೇವರೇ, ರಕ್ಷಕನೇ, ನಿಶ್ಚಯವಾಗಿಯೂ ನೀನು ಮರೆಮಾಡಿಕೊಳ್ಳುವ ದೇವರಾಗಿದ್ದೀ.
16ಅವರೆಲ್ಲರೂ ನಾಚಿಕೆಪಟ್ಟು ನಿಂದಿತರಾಗುವರು. ವಿಗ್ರಹಗಳನ್ನು ಮಾಡುವವರು ಒಟ್ಟಾಗಿ ಗಲಿಬಿಲಿಗೆ ಒಳಗಾಗುವರು.
17ಆದರೆ ಇಸ್ರಾಯೇಲರು ಶಾಶ್ವತವಾದ ರಕ್ಷಣೆಯೊಂದಿಗೆ ಯೆಹೋವ ದೇವರಲ್ಲಿ ಸಂರಕ್ಷಣೆ ಹೊಂದುವರು. ನೀವು ಯುಗಯುಗಾಂತರಕ್ಕೂ ಎಂದಿಗೂ ನಾಚಿಕೆಪಡುವುದಿಲ್ಲ, ಅವಮಾನ ಹೊಂದುವುದಿಲ್ಲ.
18ಆಕಾಶಗಳನ್ನು ನಿರ್ಮಿಸಿದ ಯೆಹೋವ ದೇವರು ಇಂತೆನ್ನುತ್ತಾನೆ, “ದೇವರು ತಾನೇ ಭೂಮಿಯನ್ನು ನಿರ್ಮಿಸಿ, ಅದನ್ನು ಉಂಟುಮಾಡಿದನು. ಆತನೇ ಅದನ್ನು ಸ್ಥಾಪಿಸಿದನು. ಅದನ್ನು ವ್ಯರ್ಥವಾಗಿ ಸೃಷ್ಟಿಸದೆ, ಜನನಿವಾಸಕ್ಕಾಗಿಯೇ ರೂಪಿಸಿದನು. ನಾನೇ ಯೆಹೋವ ದೇವರು, ನಾನಲ್ಲದೆ ಇನ್ನಾರೂ ಇಲ್ಲ.
19ಭೂಮಿಯ ಕತ್ತಲಾದ ಸ್ಥಳದಲ್ಲಿ ರಹಸ್ಯವಾಗಿ ನಾನು ಮಾತನಾಡಲಿಲ್ಲ. ‘ವ್ಯರ್ಥವಾಗಿ ನನ್ನನ್ನು ಹುಡುಕಿರಿ’ ಎಂದು ಯಾಕೋಬನ ವಂಶದವರಿಗೆ ನಾನು ಹೇಳಲಿಲ್ಲ. ಯೆಹೋವನಾದ ನಾನೇ ನೀತಿಯನ್ನು ಮಾತನಾಡಿ, ಯಥಾರ್ಥವಾದವುಗಳನ್ನೇ ತಿಳಿಸುತ್ತೇನೆ.
20“ಜನಾಂಗಗಳಲ್ಲಿ ತಪ್ಪಿಸಿಕೊಂಡವರಾದ ನೀವು ಒಟ್ಟಾಗಿ ಕೂಡಿಕೊಂಡು ಸಮೀಪಕ್ಕೆ ಬನ್ನಿರಿ. ಮರದಿಂದ ಕೆತ್ತಿದ ತಮ್ಮ ವಿಗ್ರಹವನ್ನು ಹೊತ್ತುಕೊಂಡು, ರಕ್ಷಿಸಲಾರದ ಆ ದೇವರಿಗೆ ಬಿನ್ನವಿಸುವವರು ಏನೂ ತಿಳಿಯದವರಾಗಿದ್ದಾರೆ.
21ನೀವು ಏನು ಸಾರಬೇಕೋ ಅದನ್ನು ಈಗ ತನ್ನಿರಿ ಹೌದು, ಒಟ್ಟಿಗೆ ಅವರು ಆಲೋಚಿಸಲಿ ಈ ಸಂಗತಿಗಳನ್ನು ಪುರಾತನ ಕಾಲದಿಂದಲೂ ಪ್ರಕಟಿಸಿದವರು ಯಾರು? ಪ್ರಾರಂಭದಿಂದ ಇದನ್ನು ತಿಳಿಸಿದವರು ಯಾರು? ಯೆಹೋವನಾದ ನಾನೇ ಅಲ್ಲವೇ? ನನ್ನ ಹೊರತು ಬೇರೆ ದೇವರು ಇಲ್ಲ. ನನ್ನ ಹೊರತಾಗಿ ನೀತಿಯುಳ್ಳ ದೇವರೂ, ರಕ್ಷಕನೂ ಇಲ್ಲವೇ ಇಲ್ಲ.
22“ಎಲ್ಲಾ ದಿಗಂತಗಳವರೇ, ನನ್ನ ಕಡೆಗೆ ನೋಡಿರಿ, ರಕ್ಷಣೆಯನ್ನು ಪಡೆಯಿರಿ. ಏಕೆಂದರೆ ನಾನೇ ದೇವರು, ನನ್ನ ಹೊರತು ಯಾರೂ ಇಲ್ಲ.
23ನನ್ನಷ್ಟಕ್ಕೆ ನಾನೇ ಆಣೆಯನ್ನು ಇಟ್ಟಿದ್ದೇನೆ. ನೀತಿಯುಳ್ಳ ವಾಕ್ಯವು ನನ್ನ ಬಾಯಿಂದ ಹೊರಟಿದೆ. ಅದು ಹಿಂದಿರುಗದು. ಪ್ರತಿಯೊಬ್ಬರು ನನ್ನ ಮುಂದೆ ಮೊಣಕಾಲೂರುವರು. ಪ್ರತಿಯೊಂದು ನಾಲಿಗೆಯೂ ಪ್ರತಿಜ್ಞೆ ಮಾಡುವುದು.
24ಯೆಹೋವ ದೇವರಲ್ಲಿ ಮಾತ್ರ ನೀತಿಯೂ ಬಲವೂ ಉಂಟೆಂದು ಮನುಷ್ಯರೂ ಸಹ ಅವರ ಬಳಿಗೆ ಬರುವರು.” ಆತನ ಮೇಲೆ ಉರಿಗೊಂಡವರೆಲ್ಲರೂ ನಾಚಿಕೆಗೆ ಈಡಾಗುವರು, ಎಂದು ಒಬ್ಬನು ನಿಶ್ಚಯವಾಗಿ ಹೇಳುತ್ತಾನೆ.
25ಇಸ್ರಾಯೇಲಿನ ಸಂತಾನದವರೆಲ್ಲರೂ ಯೆಹೋವ ದೇವರಲ್ಲಿ ನೀತಿವಂತರಾಗಿ ಹೆಚ್ಚಳಪಡುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.