Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 42

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಇಗೋ, ನನ್ನ ಸೇವಕನು. ಇವನಿಗೆ ನಾನೇ ಆಧಾರ, ನಾನು ಆಯ್ದುಕೊಂಡವನಲ್ಲಿ ನನ್ನ ಆತ್ಮವು ಆನಂದಿಸುವುದು; ನನ್ನ ಆತ್ಮವನ್ನು ಅವನ ಮೇಲೆ ಇರಿಸಿದ್ದೇನೆ, ಅವನು ಇತರ ಜನಾಂಗಗಳಿಗೆ ನ್ಯಾಯತೀರ್ಪನ್ನು ತರುವನು.
2ಅವನು ಕೂಗುವುದಿಲ್ಲ, ಶಬ್ದವನ್ನು ಎತ್ತುವುದಿಲ್ಲ, ಬೀದಿಗಳಲ್ಲಿ ತನ್ನ ಧ್ವನಿಯನ್ನು ಕೇಳಗೊಡಿಸುವುದಿಲ್ಲ.
3ಜಜ್ಜಿದ ದಂಟನ್ನು ಮುರಿದು ಹಾಕದೆ, ಕಳೆಗುಂದಿದ ದೀಪವನ್ನು ನಂದಿಸದೆ, ನಂಬಿಕೆಯಿಂದ ನ್ಯಾಯವನ್ನು ಹೊರತರುತ್ತಾನೆ.
4ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುವ ತನಕ ಈತನು ಬಿಟ್ಟುಕೊಡುವುದಿಲ್ಲ, ಮನಗುಂದುವುದಿಲ್ಲ, ದ್ವೀಪಗಳು ಈತನ ಬೋಧನೆಗೆ ಎದುರುನೋಡುವುವು.”
5ಆಕಾಶವನ್ನು ನಿರ್ಮಿಸಿ ಹಾಸಿದವನು ಭೂಮಿಯನ್ನೂ, ಅದರಿಂದ ಉತ್ಪತ್ತಿಯನ್ನೂ ವಿಸ್ತರಿಸಿ, ಅದರ ಮೇಲಿರುವ ಜನರಿಗೆ ಶ್ವಾಸವನ್ನೂ, ಅದರಲ್ಲಿ ಸಂಚರಿಸುವವರಿಗೆ ಆತ್ಮವನ್ನೂ ಕೊಡುತ್ತೇನೆಂದು ದೇವರಾದ ಯೆಹೋವ ದೇವರು ಹೇಳುತ್ತಾರೆ.
6–7“ನೀನು ಕುರುಡರಿಗೆ ಕಣ್ಣುಗಳನ್ನು ತೆರೆದು, ಸೆರೆಯವರನ್ನು ಸೆರೆಯಿಂದಲೂ, ಕತ್ತಲೆಯಲ್ಲಿ ವಾಸಿಸುವವರನ್ನು ಕಾರಾಗೃಹದಿಂದಲೂ ಹೊರತರಬೇಕು,” ಎಂದು ಯೆಹೋವ ದೇವರಾಗಿರುವ ನಾನೇ ನಿನ್ನನ್ನು ನೀತಿಯಿಂದ ಕರೆದು, ನಿನ್ನ ಕೈಯನ್ನು ಹಿಡಿದು ಕಾಪಾಡಿ, ನಿನ್ನನ್ನು ಜನಗಳಿಗೆ ಒಡಂಬಡಿಕೆಯ ಆಧಾರವನ್ನಾಗಿಯೂ, ಇತರ ಜನಗಳಿಗೆ ಬೆಳಕನ್ನಾಗಿಯೂ ನೇಮಿಸಿದ್ದೇನೆ.
8ನಾನೇ ಯೆಹೋವ ದೇವರು, ಅದೇ ನನ್ನ ಹೆಸರು. ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಇಲ್ಲವೆ ನನ್ನ ಸ್ತುತಿಯನ್ನು ಎರಕದ ವಿಗ್ರಹಗಳಿಗೂ ಕೊಡೆನು.
9ಇಗೋ, ಹಿಂದಿನವುಗಳು ನೆರವೇರಿವೆ. ಹೊಸ ಸಂಗತಿಗಳನ್ನು ಪ್ರಕಟಿಸುತ್ತೇನೆ. ಅವು ಹುಟ್ಟುವುದಕ್ಕಿಂತ ಮುಂಚೆಯೇ ನಾನು ಅವುಗಳನ್ನು ನಿಮಗೆ ತಿಳಿಸುತ್ತೇನೆ. ಯೆಹೋವ ದೇವರಿಗೆ ಸ್ತೋತ್ರಗೀತೆ
10ಸಮುದ್ರ ಪ್ರಯಾಣಿಕರೇ, ಸಕಲ ಜಲಚರಗಳೇ, ದ್ವೀಪಗಳೇ, ಅದರ ನಿವಾಸಿಗಳೇ, ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ. ಭೂಮಿಯ ಕಟ್ಟಕಡೆಯಿಂದ ಆತನಿಗೆ ಸ್ತೋತ್ರಮಾಡಿರಿ.
11ಮರುಭೂಮಿಯು, ಅದರ ಪಟ್ಟಣಗಳು ಘೋಷಿಸಲಿ. ಕೇದಾರ್ ಊರಿನ ನಿವಾಸಿಗಳು ಬಂಡೆಯ ಪ್ರದೇಶದ ನಿವಾಸಿಗಳು ಹಾಡಲಿ. ಸೆಲ ಪಟ್ಟಣದವರೂ ಹರ್ಷಧ್ವನಿಗೈಯಲಿ; ಅವರು ಪರ್ವತದ ತುದಿಯಲ್ಲಿ ಆರ್ಭಟಿಸಲಿ.
12ಅವರು ಯೆಹೋವ ದೇವರಿಗೆ ಮಹಿಮೆಯನ್ನು ಸಲ್ಲಿಸಲಿ! ಆತನ ಸ್ತೋತ್ರವನ್ನು ದ್ವೀಪಗಳಲ್ಲಿ ಪ್ರಕಟಿಸಲಿ.
13ಯೆಹೋವ ದೇವರು ಪರಾಕ್ರಮಶಾಲಿಯಾಗಿ ಮುಂದೆ ಹೋಗುವರು; ಯುದ್ಧವೀರನ ಹಾಗೆ ತಮ್ಮ ರೌದ್ರವನ್ನು ಎಬ್ಬಿಸುವರು. ಆರ್ಭಟಿಸಿ ಗರ್ಜಿಸಿ ತಮ್ಮ ಶತ್ರುಗಳಿಗೆ ವಿರೋಧವಾಗಿ ಜಯಶಾಲಿಯಾಗುವರು.
14“ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನು ಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು. ನಾನು ನಾಶಮಾಡಿ, ಒಂದೇ ಸಾರಿ ನುಂಗಿಬಿಡುವೆನು.
15ನಾನು ಬೆಟ್ಟಗುಡ್ಡಗಳನ್ನು ನಾಶಮಾಡಿ, ಅಲ್ಲಿಯ ಮೇವನ್ನು ಒಣಗಿಸಿ; ನದಿಗಳನ್ನು ದ್ವೀಪಗಳನ್ನಾಗಿಯೂ, ಕೆರೆಗಳನ್ನು ಬತ್ತಿಹೋಗುವಂತೆಯೂ ಮಾಡುವೆನು.
16ಕುರುಡರನ್ನು ಅವರು ತಿಳಿಯದ ಮಾರ್ಗದಲ್ಲಿ ಬರಮಾಡುವೆನು. ಅವರನ್ನು ತಿಳಿಯದ ಹಾದಿಗಳಲ್ಲಿ ನಡೆಸುವೆನು. ಕತ್ತಲೆಯನ್ನು ಅವರ ಮುಂದೆ ಬೆಳಕಾಗಿಯೂ, ಸೊಟ್ಟಾದವುಗಳನ್ನು ನೆಟ್ಟಗಾಗಿಯೂ ಮಾಡುವೆನು. ಇವುಗಳನ್ನು ನಾನು ಅವರಿಗೋಸ್ಕರ ಮಾಡುವೆನು. ನಾನು ಅವರನ್ನು ಕೈಬಿಡುವುದಿಲ್ಲ.
17ಕೆತ್ತಿದ ವಿಗ್ರಹಗಳಲ್ಲಿ ಭರವಸವಿಟ್ಟು, ‘ನೀವೇ ನಮ್ಮ ದೇವರುಗಳು,’ ಎಂದು ಹೇಳುವವರು ಹಿಂದೆ ಬಿದ್ದು, ನಾಚಿಕೆಗೆ ಈಡಾಗುವರು. ಇಸ್ರಾಯೇಲರು ಕಿವುಡರು ಮತ್ತು ಕುರುಡರು
18“ಕಿವುಡರೇ, ಕೇಳಿರಿ; ಕುರುಡರೇ, ನೀವು ದೃಷ್ಟಿಸಿ ನೋಡಿರಿ.
19ನನ್ನ ಸೇವಕನಲ್ಲದೆ ಕುರುಡನು ಯಾರು? ನಾನು ಕಳುಹಿಸಿದ ಸೇವಕನಲ್ಲದೆ ಕಿವುಡನು ಯಾರು? ಸಂಪೂರ್ಣನಂತೆ ಕುರುಡನು ಯಾರು? ಯೆಹೋವ ದೇವರ ಸೇವಕನಂತೆ ಕುರುಡನು ಯಾರು?
20ನೀನು ಅನೇಕ ಸಂಗತಿಗಳನ್ನು ಕಂಡಿದ್ದರೂ, ನಿನಗೆ ಗಮನವಿಲ್ಲ. ಅವನ ಕಿವಿಗಳು ತೆರೆದಿದ್ದರೂ, ಕೇಳನು.”
21ಯೆಹೋವ ದೇವರು ಆತನ ನೀತಿಗೋಸ್ಕರ ಬಹಳವಾಗಿ ಮೆಚ್ಚುವನು. ಆತನು ನಿಯಮವನ್ನು ಹೆಚ್ಚಿಸಿ, ಘನಪಡಿಸುವನು.
22ಆದರೆ ಈ ಜನರೇ ಕೊಳ್ಳೆಗೆ ಈಡಾಗಿ ಸೂರೆ ಹೋಗಿದ್ದಾರೆ. ಅವರೆಲ್ಲರೂ ಹಳ್ಳಕೊಳ್ಳಗಳಲ್ಲಿ ಸಿಕ್ಕಿಬಿದ್ದಿದ್ದಾರೆ. ಸೆರೆಮನೆಗಳಲ್ಲಿ ಬಂಧಿಗಳಾಗಿದ್ದಾರೆ. ಅವರು ಸೂರೆಯಾದರೂ, ತಪ್ಪಿಸುವವನು ಒಬ್ಬನೂ ಇಲ್ಲ. ಕೊಳ್ಳೆಯಾದದ್ದನ್ನು, “ತಿರುಗಿ ಹಿಂದಕ್ಕೆ ಕೊಡು,” ಎಂದು ಹೇಳುವ ಒಬ್ಬನೂ ಇಲ್ಲ.
23ನಿಮ್ಮಲ್ಲಿ ಯಾರು ಇವುಗಳಿಗೆ ಕಿವಿಗೊಡುವರು? ಯಾರು ಇನ್ನು ಮುಂದೆ ಆಲಿಸಿ ಕೇಳುವರು?
24ಯಾಕೋಬನ್ನು ಸುಲಿಗೆಗೂ, ಇಸ್ರಾಯೇಲನ್ನು ಕೊಳ್ಳೆಗೂ ಗುರಿಮಾಡಿದವನು ಯಾರು? ನಾವು ಯಾರಿಗೆ ವಿರೋಧವಾಗಿ ಪಾಪಮಾಡಿದೆವು? ಅದು ಯೆಹೋವ ದೇವರಿಗೆ ವಿರೋಧವಾಗಿಯಲ್ಲವೇ. ಏಕೆಂದರೆ ಅವರು ಆತನ ಮಾರ್ಗದಲ್ಲಿ ನಡೆಯಲಿಲ್ಲ. ಆತನ ನಿಯಮಕ್ಕೆ ಅವಿಧೇಯರಾದರು.
25ಆದ್ದರಿಂದ ಆತನು ತನ್ನ ಯುದ್ಧದ ರೌದ್ರವನ್ನು ಮತ್ತು ರೋಷಾಗ್ನಿಯನ್ನು ಅವನ ಮೇಲೆ ಸುರಿಸಿದನು. ಅದು ಅವನ ಸುತ್ತಲೂ ಉರಿಯು ಹತ್ತಿದರೂ, ಅವನಿಗೆ ತಿಳಿಯಲಿಲ್ಲ. ಅದು ಅವನನ್ನು ಸುಟ್ಟರೂ, ಅವನು ಮನಸ್ಸಿಗೆ ತಂದುಕೊಳ್ಳಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.