Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 39

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಕಳುಹಿಸಿದನು.
2ಹಿಜ್ಕೀಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
3ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು. ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ನನ್ನ ಬಳಿಗೆ ಬಂದವರು,” ಎಂದು ಹೇಳಿದನು.
4ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು. ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು.
5ಆಗ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರ ಯೆಹೋವ ದೇವರ ವಾಕ್ಯವನ್ನು ಕೇಳು.
6ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವ ದೇವರು ಹೇಳಿದರು.
7ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.
8ಆಗ ಹಿಜ್ಕೀಯನು, “ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು,” ಎಂದುಕೊಂಡು ಯೆಶಾಯನಿಗೆ, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ!” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.