Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 36

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಅರಸನಾದ ಹಿಜ್ಕೀಯನ ಆಳಿಕೆಯ ಹದಿನಾಲ್ಕನೆಯ ವರ್ಷದಲ್ಲಿ ಅಸ್ಸೀರಿಯದ ಅರಸನಾದ ಸನ್ಹೇರೀಬನು ಬಂದು, ಯೆಹೂದದ ಎಲ್ಲಾ ಕೋಟೆಯ ಪಟ್ಟಣಗಳನ್ನು ಸ್ವಾಧೀನಮಾಡಿಕೊಂಡನು.
2ಆಗ ಅಸ್ಸೀರಿಯದ ಅರಸನು ಲಾಕೀಷಿನಿಂದ ದೊಡ್ಡ ಸೈನ್ಯದೊಂದಿಗೆ ರಬ್ಷಾಕೆ ಎಂಬವನನ್ನು ಯೆರೂಸಲೇಮಿನಲ್ಲಿದ್ದ ಹಿಜ್ಕೀಯನ ಬಳಿಗೆ ಕಳುಹಿಸಿದನು. ಅವನು ಅಗಸರ ಹೊಲದ ಮಾರ್ಗದಲ್ಲಿ ಮೇಲಿನ ಕೆರೆಯ ಕಾಲುವೆಯ ಸಮೀಪದಲ್ಲಿ ನಿಂತುಕೊಂಡನು.
3ಆಗ ಅರಮನೆಯ ಕಾರ್ಯನಿರ್ವಾಹಕನಾದ ಹಿಲ್ಕೀಯನ ಮಗ ಎಲ್ಯಾಕೀಮ್, ಕಾರ್ಯದರ್ಶಿಯಾದ ಶೆಬ್ನ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬುವರು ಅವನ ಬಳಿಗೆ ಬಂದರು.
4ರಬ್ಷಾಕೆಯು ಅವರಿಗೆ, “ನೀವು ಹಿಜ್ಕೀಯನಿಗೆ ಹೀಗೆ ಹೇಳಬೇಕು: “ ‘ಮಹಾರಾಜನಾದ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ಈ ನಿನ್ನ ಭರವಸೆಗೆ ಆಧಾರ ಏನು?
5ಯುದ್ಧಕ್ಕೆ ಬೇಕಾದ ಆಲೋಚನೆಯೂ, ಪರಾಕ್ರಮವೂ ಉಂಟೆಂದು ಹೇಳುವ ನಿನ್ನ ಮಾತು ಬರೀ ವ್ಯರ್ಥವಾದ ಮಾತುಗಳೇ, ನೀನು ಯಾರನ್ನು ನಂಬಿಕೊಂಡು ನನಗೆ ವಿರೋಧವಾಗಿ ತಿರುಗಿ ಬಿದ್ದಿದ್ದೀಯೆ?
6ಇಗೋ! ನೀನು ಜಜ್ಜಿದ ದಂಟಿಗೆ ಸಮಾನವಾಗಿರುವ ಈಜಿಪ್ಟಿನ ಮೇಲೆ ಭರವಸೆ ಇಟ್ಟಿರುವಿಯಷ್ಟೆ, ಅದರ ಮೇಲೆ ಮನುಷ್ಯನು ಊರಿಕೊಂಡರೆ ಅದು ಅವನ ಕೈಯನ್ನೇ ಚುಚ್ಚಿ ಗಾಯ ಮಾಡುವುದು. ಈಜಿಪ್ಟಿನ ಅರಸನಾದ ಫರೋಹನಲ್ಲಿ ಭರವಸೆ ಇಟ್ಟವರೆಲ್ಲರಿಗೂ ಇದೇ ಗತಿಯಾಗುವದು.
7ಬಹುಶಃ ನೀವು, “ನಮ್ಮ ದೇವರಾದ ಯೆಹೋವ ದೇವರನ್ನೇ ನಂಬಿಕೊಂಡಿದ್ದೇವೆ,” ಎಂದು ಹೇಳಬಹುದು. “ಯೆರೂಸಲೇಮಿನ ಬಲಿಪೀಠದ ಮುಂದೆಯೇ ಆರಾಧನೆ ಮಾಡಬೇಕು” ಎಂದು ಯೆಹೂದ್ಯರಿಗೆ ಮತ್ತು ಯೆರೂಸಲೇಮಿನವರಿಗೆ ಹಿಜ್ಕೀಯನು ಆಜ್ಞಾಪಿಸಿ, ಆ ಯೆಹೋವ ದೇವರ ಪೂಜಾಸ್ಥಳಗಳನ್ನೂ, ಬೇರೆ ಎಲ್ಲಾ ಬಲಿಪೀಠಗಳನ್ನೂ ಹಾಳುಮಾಡಿದನಲ್ಲವೇ?
8“ ‘ಹಾಗಾದರೆ, ಈಗ ನೀನು ಅಸ್ಸೀರಿಯದ ಅರಸನಾದ ನನ್ನ ಯಜಮಾನನೊಂದಿಗೆ ಒಪ್ಪಂದ ಮಾಡಿಕೋ, ಆಗ ನಿನಗೆ ಎರಡು ಸಾವಿರ ಕುದುರೆಸವಾರರನ್ನು ಬಳಸಲು ಸಾಮರ್ಥ್ಯವಿದ್ದರೆ ನಾನು ಎರಡು ಸಾವಿರ ಕುದುರೆಗಳನ್ನು ಕೊಡುತ್ತೇನೆ.
9ಇದಾಗದಿದ್ದರೆ ನನ್ನ ಯಜಮಾನನ ಸೇವಕರಲ್ಲಿ ಚಿಕ್ಕವನಾದ ಒಬ್ಬ ಸೈನ್ಯಾಧಿಪತಿಯನ್ನು ಹೇಗೆ ಎದುರಿಸುತ್ತೀ? ನೀನು ರಥಗಳಿಗೋಸ್ಕರವೂ, ರಾಹುತರಿಗೋಸ್ಕರವೂ ಈಜಿಪ್ಟಿನ ಮೇಲೆ ಭರವಸೆ ಇಟ್ಟಿದ್ದೀಯೋ?
10ಈ ಸ್ಥಳವನ್ನು ನಾಶಮಾಡುವುದಕ್ಕೆ ಯೆಹೋವ ದೇವರ ಅಪ್ಪಣೆ ಇಲ್ಲದೆ ಬಂದಿದ್ದೇನೋ? ಈ ದೇಶದ ಮೇಲೆ ಹೋಗಿ ಅದನ್ನು ನಾಶಮಾಡೆಂದು ಯೆಹೋವ ದೇವರೇ ನನಗೆ ಹೇಳಿದರು,’ ” ಎಂದನು.
11ಆಗ ಎಲ್ಯಾಕೀಮ್, ಶೆಬ್ನ, ಯೋವ ಎಂಬುವರು ರಬ್ಷಾಕೆಗೆ, “ನೀನು ಮಾತನಾಡುವುದು ಗೋಡೆಯ ಮೇಲಿರುವವರಿಗೆ ಕೇಳಿಸುತ್ತದೆ ಆದ್ದರಿಂದ ದಯವಿಟ್ಟು ನಿನ್ನ ಸೇವಕರಾದ ನಮ್ಮೊಡನೆ ಅರಾಮ್ಯ ಭಾಷೆಯಲ್ಲಿ ಮಾತನಾಡು: ಅದು ನಮಗೆ ತಿಳಿಯುತ್ತದೆ ಆದರೆ ಹಿಬ್ರಿಯ ಭಾಷೆಯಲ್ಲಿ ಮಾತನಾಡಬೇಡ,” ಎಂದು ಹೇಳಿದರು.
12ಆದರೆ ರಬ್ಷಾಕೆಯು ಅವರಿಗೆ, “ನನ್ನ ಯಜಮಾನನು ನಿಮ್ಮ ಸಂಗಡವಾಗಲಿ, ನಿಮ್ಮ ಯಜಮಾನನ ಸಂಗಡವಾಗಲಿ ಮಾತ್ರ ಈ ಮಾತುಗಳನ್ನು ಹೇಳುವುದಕ್ಕೆ ಕಳುಹಿಸಲಿಲ್ಲ. ಈ ಗೋಡೆಯ ಮೇಲೆ ಕುಳಿತ ಜನರ ಸಂಗಡವೂ ಮಾತನಾಡುವುದಕ್ಕಾಗಿ ಕಳುಹಿಸಿದ್ದಾರೆ. ಈ ಜನರು ನಿಮ್ಮ ಸಂಗಡ ಇದ್ದರೆ ನಿಮ್ಮ ಹಾಗೆ ಇವರೂ ಸಹ ತಮ್ಮ ಸ್ವಂತ ಮಲಮೂತ್ರವನ್ನು ತಿಂದು ಕುಡಿಯಬೇಕಾಗುತ್ತದೆ,” ಎಂದು ಹೇಳಿದನು.
13ಆಗ ರಬ್ಷಾಕೆ ನಿಂತುಕೊಂಡು ಯೆಹೂದ್ಯರ ಭಾಷೆಯಾದ ಹಿಬ್ರಿಯದಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನೆಂದರೆ, “ನೀವು ಅಸ್ಸೀರಿಯದ ಮಹಾರಾಜನ ಮಾತನ್ನು ಕೇಳಿರಿ.
14ಅರಸನು ಹೇಳುವುದೇನೆಂದರೆ: ಹಿಜ್ಕೀಯನ ಮಾತನ್ನು ಕೇಳಿ ಮೋಸಹೋಗಬೇಡಿರಿ ಏಕೆಂದರೆ ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ.
15ಇದಲ್ಲದೆ, ‘ಯೆಹೋವ ದೇವರು ನಮ್ಮನ್ನು ನಿಶ್ಚಯವಾಗಿ ರಕ್ಷಿಸುವರೆಂದೂ, ಈ ಪಟ್ಟಣವು ಅಸ್ಸೀರಿಯದ ಅರಸನ ಕೈಯಲ್ಲಿ ಒಪ್ಪಿಸುವುದಿಲ್ಲವೆಂದೂ ಹಿಜ್ಕೀಯನು ನಿಮಗೆ ಯೆಹೋವ ದೇವರಲ್ಲಿ ಭರವಸೆ ಇಡುವಂತೆ ಮಾಡುವರು.’
16“ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ. ಏಕೆಂದರೆ ಅಸ್ಸೀರಿಯದ ಅರಸನು ಹೇಳುವುದೇನೆಂದರೆ, ನನ್ನ ಸಂಗಡ ಒಡಂಬಡಿಕೆ ಮಾಡಿಕೊಂಡು, ನನ್ನ ಬಳಿಗೆ ಹೊರಟುಬನ್ನಿರಿ, ಆಗ ನಿಮ್ಮಲ್ಲಿ ಪ್ರತಿ ಮನುಷ್ಯನು ತನ್ನ ತನ್ನ ದ್ರಾಕ್ಷಾಫಲವನ್ನೂ, ಅಂಜೂರದ ಫಲವನ್ನೂ ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವನು.
17ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷಿತೋಟ, ಇವು ಸಮೃದ್ಧಿಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರೆದುಕೊಂಡು ಹೋಗುವೆನು.
18“ ‘ಯೆಹೋವ ದೇವರು ನಮ್ಮನ್ನು ರಕ್ಷಿಸುವರು,’ ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆಯಾಗಿರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಸ್ಸೀರಿಯದ ಅರಸನ ಕೈಯಿಂದ ಬಿಡಿಸಿದ್ದು ಉಂಟೋ?
19ಹಮಾತ್, ಅರ್ಪಾದ್, ಸೆಫರ್ವಯಿಮಿನ ದೇವರುಗಳು ಎಲ್ಲಿ? ಅವರು ಸಮಾರ್ಯವನ್ನು ನನ್ನ ಕೈಯಿಂದ ಬಿಡಿಸಿಕೊಂಡರೋ?
20ಈ ದೇಶಗಳ ಸಮಸ್ತ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ, ಯೆಹೋವ ದೇವರು ಯೆರೂಸಲೇಮನ್ನು ನನ್ನ ಕೈಗೆ ಸಿಗದಂತೆ ತಪ್ಪಿಸಿ ಕಾಪಾಡುವನೋ?” ಎಂದು ಹೇಳಿದನು.
21ಆದರೆ ಜನರು ಅವನಿಗೆ ಪ್ರತ್ಯುತ್ತರ ಕೊಡದೆ ಸುಮ್ಮನಿದ್ದರು. ಏಕೆಂದರೆ ಅವನಿಗೆ ಉತ್ತರ ಕೊಡಬೇಡಿರೆಂದು ಅರಸನ ಆಜ್ಞೆಯಾಗಿತ್ತು.
22ಆಗ ಅರಮನೆಯ ಮೇಲ್ವಿಚಾರಕನಾದ ಹಿಲ್ಕೀಯನ ಮಗ ಎಲ್ಯಾಕೀಮನೂ ಕಾರ್ಯದರ್ಶಿಯಾದ ಶೆಬ್ನನೂ, ದಾಖಲೆಗಾರನಾದ ಆಸಾಫನ ಮಗ ಯೋವ ಎಂಬವನೂ ತಮ್ಮ ಬಟ್ಟೆಗಳನ್ನು ಹರಿದುಕೊಂಡು ಹಿಜ್ಕೀಯನ ಬಳಿಗೆ ಬಂದು ಸೈನ್ಯಾಧಿಕಾರಿಯಾದ ರಬ್ಷಾಕೆ ಹೇಳಿದ ಮಾತುಗಳನ್ನು ಅವನಿಗೆ ತಿಳಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.