Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 28

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಕುಡುಕರಿಂದ ಕೂಡಿದ ಎಫ್ರಾಯೀಮಿನ ಕಿರೀಟದಂತಿರುವ ನಗರಕ್ಕೆ ಕಷ್ಟ! ಒಮ್ಮೆ ಕುಡಿತಕ್ಕೆ ಸೋತು ಫಲವತ್ತಾದ ಕಣಿವೆಗೆ ಶ್ರೇಷ್ಠ ಶಿರೋಭೂಷಣವಾಗಿದ್ದು, ಈಗ ಬಾಡಿಹೋಗುತ್ತಿರುವ ಆ ಹೂವಿಗೆ ಕಷ್ಟ!
2ಇಗೋ, ಕರ್ತರಿಗೆ ಒಬ್ಬ ಮಹಾ ಬಲಿಷ್ಠನು ಇದ್ದಾನೆ. ಅವನು ರಭಸವಾಗಿ ಸುರಿಯುವ ಕಲ್ಮಳೆಯಂತೆಯೂ, ಹೊಡೆದು ಬಿಡುವ ಬಿರುಗಾಳಿಯಂತೆಯೂ, ಪ್ರಳಯ ಮಾಡುವ ದೊಡ್ಡ ನೀರನ್ನು ತರುವ ಬಿರುಗಾಳಿಯಂತೆಯೂ ಅದನ್ನು ಕೈಯಿಂದ ಬೀಳಿಸುವನು.
3ಕುಡುಕರಾದ ಎಫ್ರಾಯೀಮ್ಯರ ಗರ್ವದ ಕಿರೀಟವು ಕಾಲಿನ ತುಳಿತಕ್ಕೆ ಈಡಾಗುವುದು.
4ಫಲವತ್ತಾದ ಕಣಿವೆಗೆ ತಲೆಯ ಮೇಲಿರುವ ಅಲಂಕಾರದ ಶೃಂಗಾರವಾಗಿದ್ದು, ಬೇಸಿಗೆ ಮುಂಚೆ ಮಾಗಿದ ಅಂಜೂರದ ಹಣ್ಣಿನ ಹಾಗೆ ಇರುವುದು. ಜನರು ಅವರನ್ನು ನೋಡಿ ಕೈಗೆ ತೆಗೆದುಕೊಂಡ ತಕ್ಷಣ ಅವರು ನುಂಗುತ್ತಾರೆ.
5ಆ ದಿನದಲ್ಲಿ ಸೇನಾಧೀಶ್ವರ ಯೆಹೋವ ದೇವರು ತನ್ನ ಜನರಲ್ಲಿ ಉಳಿದವರಿಗೆ ಮಹಿಮೆಯ ಕಿರೀಟವೂ ಮತ್ತು ಸುಂದರವಾದ ಮಕುಟವೂ ಆಗಿರುವರು.
6ನ್ಯಾಯಕ್ಕೋಸ್ಕರ ಕೂತುಕೊಂಡವನಿಗೆ ನ್ಯಾಯದ ಆತ್ಮವೂ, ಬಾಗಿಲಿನ ಕಡೆಗೆ ಯುದ್ಧವನ್ನು ತಿರುಗಿಸುವವನಿಗೆ ಪರಾಕ್ರಮವೂ ಆಗಿರುವನು.
7ಇವರು ಸಹ ದ್ರಾಕ್ಷಾರಸದಿಂದ ಮತ್ತರಾಗಿದ್ದಾರೆ. ಮದ್ಯದಿಂದಲೂ ಓಲಾಡುತ್ತಿದ್ದಾರೆ. ಯಾಜಕನೂ ಪ್ರವಾದಿಯೂ ಮದ್ಯದಿಂದ ಮತ್ತರಾಗಿದ್ದಾರೆ. ದ್ರಾಕ್ಷಾರಸದಿಂದ ತೂರಾಡುತ್ತಿದ್ದಾರೆ. ಮದ್ಯದಿಂದ ಓಲಾಡುತ್ತಿದ್ದಾರೆ. ದರ್ಶನವಾಗುತ್ತಿರುವಾಗಲೂ ಅವರು ತಪ್ಪುತ್ತಾರೆ. ನ್ಯಾಯತೀರ್ವಿಕೆಯಲ್ಲಿ ತತ್ತರಿಸುತ್ತಾರೆ.
8ಮೇಜುಗಳೆಲ್ಲಾ ಸ್ಥಳ ಉಳಿಯದ ಹಾಗೆ ಅಸಹ್ಯವಾದ ಕಕ್ಕುವಿಕೆಯಿಂದ ತುಂಬಿವೆ.
9ಈತನು ಯಾರಿಗೆ ಜ್ಞಾನವನ್ನು ಬೋಧಿಸುತ್ತಾನೆ? ಮತ್ತು ಯಾರಿಗೆ ಬೋಧನೆಯನ್ನು ತಿಳಿದುಕೊಳ್ಳುವ ಹಾಗೆ ಮಾಡುತ್ತಾನೆ? ಆಗತಾನೇ ಹಾಲು ಬಿಟ್ಟ ಕೂಸುಗಳಿಗೋ, ಎಳೆಯ ಮಕ್ಕಳಿಗೋ?
10ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಅಲ್ಲಿ ಸ್ವಲ್ಪ, ಇಲ್ಲಿ ಸ್ವಲ್ಪ.
11ತೊದಲು ಮಾತಿನವರು, ಅನ್ಯಭಾಷಿಗಳು ಇವರ ಮೂಲಕವಾಗಿಯೇ ಆತನು ಈ ಜನರೊಡನೆ ಮಾತನಾಡುತ್ತಾನೆ.
12ಆತನು ಮೊದಲು, “ಇದೇ ನಿಮಗೆ ಅವಶ್ಯಕವಾದ ವಿಶ್ರಾಂತಿ, ಬಳಲಿದವರನ್ನು ವಿಶ್ರಮಗೊಳಿಸಿರಿ. ನಿಮಗೆ ಅನುಕೂಲವಾದ ಉಪಶಮನ ಇದೇ,” ಎಂದು ಹೇಳಿದಾಗಲೂ ಅವರು ಕೇಳಲಿಲ್ಲ.
13ಆಗ ಯೆಹೋವ ದೇವರು ಅವರಿಗೆ ಹೀಗೆ ಹೇಳಿದರು: ಆಜ್ಞೆಯ ಮೇಲೆ ಆಜ್ಞೆ, ಆಜ್ಞೆಯ ಮೇಲೆ ಆಜ್ಞೆ, ಸೂತ್ರದ ಮೇಲೆ ಸೂತ್ರ, ಸೂತ್ರದ ಮೇಲೆ ಸೂತ್ರ, ಇಲ್ಲಿ ಸ್ವಲ್ಪ, ಅಲ್ಲಿ ಸ್ವಲ್ಪ ಇದರಿಂದ ಅವರು ಎಡವಿಬಿದ್ದು ಗಾಯಗೊಳ್ಳಬಹುದು. ಮತ್ತು ಬಲೆಯಲ್ಲಿ ಸಿಕ್ಕಿ ಬೀಳುವರು.
14ಆದಕಾರಣ ಯೆರೂಸಲೇಮಿನಲ್ಲಿರುವ ಈ ಜನರನ್ನು ಆಳುವ ಹಾಸ್ಯದ ಜನರಾದ ನೀವು ಯೆಹೋವ ದೇವರ ಮಾತನ್ನು ಕೇಳಿರಿ.
15“ಮರಣದ ಸಂಗಡ ಒಡಂಬಡಿಕೆಯನ್ನು ಮಾಡಿದ್ದೇವೆ. ಪಾತಾಳದ ಸಂಗಡ ಒಪ್ಪಂದ ಮಾಡಿಕೊಂಡಿದ್ದೇವೆ. ವಿಪರೀತವಾದ ಶಿಕ್ಷೆಯು ಹಾದುಹೋಗುವಾಗ, ಅದು ನಮ್ಮನ್ನು ಮುಟ್ಟದು; ನಮ್ಮ ಅಸತ್ಯವನ್ನು ಆಶ್ರಯವಾಗಿ ಮಾಡಿಕೊಂಡು, ಮೋಸದಲ್ಲಿ ಅಡಗಿಕೊಂಡಿದ್ದೇವೆ,” ಎನ್ನುತ್ತೀರಲ್ಲಾ?
16ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಗೋ, ಪರೀಕ್ಷಿತವಾಗಿಯೂ, ಅಮೂಲ್ಯವಾಗಿಯೂ ಇರುವ ಮೂಲೆಗಲ್ಲನ್ನು ಚೀಯೋನಿನಲ್ಲಿ ಸ್ಥಿರವಾದ ಅಸ್ತಿವಾರವನ್ನಾಗಿ ಇಡುತ್ತೇನೆ. ಭರವಸೆ ಇಡುವವನು ಆತುರಪಡನು.
17ನಾನು ನ್ಯಾಯವನ್ನು ಅಳತೆಗೋಲನ್ನಾಗಿಯೂ ಮತ್ತು ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು. ಕಲ್ಮಳೆಯು ಸುಳ್ಳಿನ ಆಶ್ರಯವನ್ನು ಬಡಿದುಕೊಂಡು ಹೋಗುವುದು. ಅಡಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿ ಬಿಡುವುದು.
18ಮರಣದೊಂದಿಗೆ ನೀವು ಮಾಡಿಕೊಂಡ ಒಡಂಬಡಿಕೆ ರದ್ದಾಗುವುದು. ಪಾತಾಳದ ಸಂಗಡ ನೀವು ಮಾಡಿಕೊಂಡ ಒಪ್ಪಂದವು ನಿಲ್ಲುವುದಿಲ್ಲ. ವಿಪರೀತ ಬಾಧೆಯು ಹಾದುಹೋಗುವಾಗ ನಿಮ್ಮನ್ನು ತುಳಿದುಹಾಕುವುದು.
19ಅದು ಹಾದುಹೋಗುವಾಗೆಲ್ಲಾ ನಿಮ್ಮನ್ನು ಹಿಡಿಯುವುದು. ಏಕೆಂದರೆ ಅದು ಹೊತ್ತಾರೆಯಿಂದ ಹೊತ್ತಾರೆಗೆ, ಹಗಲು ರಾತ್ರಿಯೂ ಹಾದುಹೋಗುವುದು.” ಆಗ ದೇವರ ಈ ಸಂದೇಶವನ್ನು ಅರ್ಥಮಾಡಿಕೊಳ್ಳುವವರಿಗೆ ಭಯಭ್ರಾಂತಿ ಉಂಟಾಗುವುದು.
20ಮೈ ಚಾಚುವುದಕ್ಕೆ ಹಾಸಿಗೆ ಚಿಕ್ಕದಾಗಿರುವುದು. ಮುದುರಿಕೊಂಡು ಮಲಗುವುದಕ್ಕೆ, ಹೊದಿಕೆಯ ಅಗಲ ಸಾಲದು.
21ಯೆಹೋವ ದೇವರು ಪೆರಾಚೀಮ್ ಪರ್ವತದಲ್ಲಿ ಎದ್ದಂತೆ ಏಳುವರು. ಹಾಗೆ ಎದ್ದು ಗಿಬ್ಯೋನ್ ತಗ್ಗಿನಲ್ಲಿ ಆದ ಹಾಗೆ ಕೋಪಿಸಿ, ಅಪರೂಪವಾದ ತಮ್ಮ ಕೆಲಸವನ್ನು ನಡಿಸಿ, ಅಪೂರ್ವವಾದ ತಮ್ಮ ಕಾರ್ಯವನ್ನು ನೆರವೇರಿಸುವನು.
22ಹೀಗಿರುವುದರಿಂದ ನಿಮ್ಮ ಬಂಧನಗಳು ಬಿಗಿಯಾಗದಂತೆ ಹಾಸ್ಯಗಾರರಾಗಬೇಡಿರಿ. ಸರ್ವಶಕ್ತ ಆಗಿರುವ ಕರ್ತ ಯೆಹೋವ ದೇವರ ಕಡೆಯಿಂದ ಭೂಮಂಡಲದಲ್ಲೆಲ್ಲಾ ಸಂಹಾರ ತರಲು ನಿರ್ಣಯಿಸಿದೆ, ಎಂಬ ತೀರ್ಪನ್ನು ನಾನು ಕೇಳಿದ್ದೇನೆ.
23ನನ್ನ ಧ್ವನಿಗೆ ಕಿವಿಗೊಟ್ಟು ಕೇಳಿರಿ, ನನ್ನ ಮಾತಿಗೆ ಗಮನವಿಟ್ಟು ಆಲಿಸಿರಿ.
24ಬಿತ್ತನೆಗಾಗಿ ಉಳುವವನು ಹಗಲೆಲ್ಲಾ ಉಳುತ್ತಿರುವನೋ? ತನ್ನ ಭೂಮಿಯ ಮಣ್ಣುಹೆಂಟೆಯನ್ನು ತೆಗೆದು, ದಿನವೆಲ್ಲಾ ಹೊಡೆಯುವನೋ?
25ಅದರ ಮೇಲ್ಭಾಗವನ್ನು ಹಸನು ಮಾಡಿದ ಮೇಲೆ ಅಗಸೆಯನ್ನು ಚೆಲ್ಲಿ, ಜೀರಿಗೆಯನ್ನು ಚದರಿಸಿ ಮತ್ತು ಗೋಧಿಯನ್ನು ಸಾಲುಸಾಲಾಗಿಯೂ, ಜವೆಗೋಧಿಯನ್ನು ನೇಮಕವಾದ ಸ್ಥಳದಲ್ಲಿಯೂ, ಕಡಲೆಯನ್ನು ಅಂಚಿನಲ್ಲಿಯೂ ಹಾಕುವನಲ್ಲವೇ.
26ಏಕೆಂದರೆ ಅವನ ದೇವರು ಅವನಿಗೆ ಸೂಚಿಸುತ್ತಾರೆ. ಮತ್ತು ಸರಿಯಾದ ಮಾರ್ಗವನ್ನು ಕಲಿಸುತ್ತಾರೆ.
27ಅಗಸೆಯನ್ನು ತುಳಿಯುವ ಯಂತ್ರದಿಂದ ತುಳಿಯುವುದಿಲ್ಲ. ಜೀರಿಗೆಯನ್ನು ಒಕ್ಕುವುದು ಬಂಡಿಯ ಚಕ್ರ ತಿರುಗಿಸುವುದರಿಂದ ಅಲ್ಲ. ಅಗಸೆಯು ಕೋಲಿನಿಂದಲೂ, ಜೀರಿಗೆಯನ್ನು ಒಕ್ಕುವುದು ದೊಣ್ಣೆಯಿಂದ ಆಗಿರುತ್ತದೆ.
28ರೊಟ್ಟಿಗಾಗಿ ಗೋಧಿಯ ಕಾಳನ್ನು ಪುಡಿಮಾಡಬೇಕು; ಯಾವಾಗಲೂ ಅದನ್ನು ಒಕ್ಕುತ್ತಿರುವುದಿಲ್ಲ. ಅವನ ಬಂಡಿಯ ಚಕ್ರದಿಂದ ಅದರ ಮೇಲೆ ಒಡೆಯುವುದಿಲ್ಲ ಅವನ ಕುದುರೆ ಸವಾರದಿಂದ ಒಕ್ಕುತ್ತಿರುವುದಿಲ್ಲ.
29ಈ ವಿವೇಕವು ಸಹ ಅತಿಶಯ ಆಲೋಚನಾಪರರೂ, ಕಾರ್ಯಸಾಧಕ ಜ್ಞಾನ ಶ್ರೇಷ್ಠರೂ ಆಗಿರುವ ಸೇನಾಧೀಶ್ವರ ಯೆಹೋವ ದೇವರಿಂದಲೇ ಹೊರಡುತ್ತದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.