Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಗೋ, ಯೆಹೋವ ದೇವರು ಭೂಮಿಯನ್ನು ಬರಿದುಮಾಡಿ, ನಿರ್ಜನ ಪ್ರದೇಶವನ್ನಾಗಿ ಮಾಡಿ, ತಲೆಕೆಳಗಾಗಿ ತಿರುಗಿಸಿ, ಅದರ ನಿವಾಸಿಗಳನ್ನು ಚದರಿಸಿಬಿಡುವವರಾಗಿದ್ದಾರೆ.
2ಜನಗಳಿಗೆ ಹೇಗೋ ಹಾಗೆಯೇ ಯಾಜಕರಿಗೆ; ದಾಸನಿಗೆ ಹೇಗೋ ಹಾಗೆಯೇ ಯಜಮಾನನಿಗೆ; ದಾಸಿಗೆ ಹೇಗೋ ಹಾಗೆಯೇ ಅವಳ ಯಜಮಾನಿಗೆ; ಕೊಳ್ಳುವವನಿಗೆ ಹೇಗೋ ಹಾಗೆಯೇ ಮಾರುವವನಿಗೆ; ಸಾಲಕೊಡುವವನಿಗೆ ಹೇಗೋ ಹಾಗೆಯೇ ಸಾಲ ಪಡೆಯುವವನಿಗೆ; ಬಡ್ಡಿ ತೆಗೆಯುವವನಿಗೆ ಹೇಗೋ ಹಾಗೆಯೇ ಬಡ್ಡಿ ತರುವವನಿಗೆ ಆಗುವುದು.
3ಭೂಮಿಯು ಬಟ್ಟಬರಿದಾಗುವುದು, ಸಂಪೂರ್ಣ ಸುಲಿಗೆಯಾಗುವುದು. ಯೆಹೋವ ದೇವರು ತಾವೇ ಈ ಮಾತನ್ನು ಹೇಳಿದ್ದಾರೆ.
4ಭೂಮಿಯು ಪ್ರಲಾಪಿಸುತ್ತಾ ಬಾಡಿಹೋಗುವುದು. ಲೋಕವು ಸೊರಗಿ ಬಾಡಿಹೋಗುವುದು. ಆಕಾಶವು ಭೂಮಿಯೊಂದಿಗೆ ಕುಗ್ಗಿಹೋಗುವುದು.
5ಭೂನಿವಾಸಿಗಳು ದೈವಾಜ್ಞೆಗಳನ್ನು ಮೀರಿ, ದೈವನಿಯಮಗಳನ್ನು ಬದಲಾಯಿಸಿ, ನಿತ್ಯವಾದ ಒಡಂಬಡಿಕೆಯನ್ನು ಭಂಗಪಡಿಸಿದ್ದರಿಂದ ಭೂಮಿಯು ಸಹ ಅದರ ನಿವಾಸಿಗಳ ಹೆಜ್ಜೆಯಿಂದ ಅಪವಿತ್ರವಾಗುವುದು.
6ಆದಕಾರಣ ಶಾಪವು ಲೋಕವನ್ನು ನುಂಗಿಬಿಟ್ಟಿದೆ. ಅದರಲ್ಲಿ ವಾಸವಾಗಿರುವವರು ದಂಡನೆಗೆ ಒಳಗಾಗಿದ್ದಾರೆ. ಆದ್ದರಿಂದ ಭೂನಿವಾಸಿಗಳು ಸುಟ್ಟು ಹೋಗಿ, ಕೆಲವರು ಮಾತ್ರ ಉಳಿದಿದ್ದಾರೆ.
7ದ್ರಾಕ್ಷಾರಸವು ಬತ್ತಿಹೋಗುವುದು, ದ್ರಾಕ್ಷಿಯು ಬಾಡುವುದು. ಹರ್ಷ ಹೃದಯರೆಲ್ಲಾ ನಿಟ್ಟುಸಿರುಬಿಡುತ್ತಾರೆ.
8ದಮ್ಮಡಿಗಳ ಉತ್ಸಾಹವು ಮುಗಿದಿದೆ. ಉಲ್ಲಾಸದ ಅವರ ಶಬ್ದವು ಕೊನೆಗೊಂಡಿತು. ಕಿನ್ನರಿಯ ಆನಂದ ಸ್ವರವು ತೀರಿತು.
9ಇನ್ನು ಗಾನದೊಡನೆ ದ್ರಾಕ್ಷಾರಸವನ್ನು ಕುಡಿಯರು, ಕುಡಿಯುವವರಿಗೆ ಮದ್ಯಪಾನವು ಕಹಿಯಾಗುವುದು.
10ಹಾಳುಪಟ್ಟಣವು ಬಿದ್ದುಹೋಗಿದೆ. ಯಾರು ಒಳಗೆ ಬಾರದಂತೆ ಪ್ರತಿಯೊಂದು ಮನೆಯು ಮುಚ್ಚಿದೆ.
11ದ್ರಾಕ್ಷಾರಸದ ಕೊರತೆಯಿಂದ ಬೀದಿಗಳಲ್ಲಿ ಅರಚುತ್ತಾರೆ. ಉಲ್ಲಾಸವೆಲ್ಲ ಅಸ್ತಮಿಸಿದೆ. ಭೂಮಿಯ ಮೇಲಿನ ಸಂತೋಷವು ತೊಲಗಿಹೋಗಿದೆ.
12ಪಟ್ಟಣದಲ್ಲಿ ಹಾಳೇ ಉಳಿದಿವೆ. ನಾಶನವು ಹೆಬ್ಬಾಗಿಲಿಗೆ ಬಡಿದಿದೆ.
13ಓಲಿವ್ ಮರವನ್ನು ಬಡಿದ ಮೇಲೆಯೂ, ದ್ರಾಕ್ಷಿ ಸುಗ್ಗಿಯು ತೀರಿದ ನಂತರವು ನಿಲ್ಲುವ ಉಳಿದ ಕಾಯಿಗಳ ಹಾಗೆ ದೇಶದಲ್ಲಿರುವುದು.
14ಅವರು ತಮ್ಮ ಸ್ವರವನ್ನೆತ್ತಿ ಯೆಹೋವ ದೇವರ ಮಹಿಮೆಯನ್ನು ಕುರಿತು ಹಾಡುವರು. ಪಶ್ಚಿಮ ದಿಕ್ಕಿನ ಕಡೆಯಿಂದ ಆರ್ಭಟಿಸುವರು.
15ಆದ್ದರಿಂದ ಪೂರ್ವದಿಕ್ಕಿನವರೇ, ಯೆಹೋವ ದೇವರನ್ನು ಮಹಿಮೆಪಡಿಸಿರಿ; ಸಮುದ್ರದ ದ್ವೀಪಗಳಲ್ಲಿ ಇಸ್ರಾಯೇಲರ ದೇವರಾದ ಯೆಹೋವ ದೇವರ ಹೆಸರನ್ನು ನೀವು ಘನಪಡಿಸಿರಿ, ಎಂದು ಕೂಗುವರು.
16ಭೂಮಂಡಲದ ಕಟ್ಟಕಡೆಯಿಂದ “ನೀತಿವಂತರಿಗೆ ಮಹಿಮೆಯಾಗಲಿ” ಎಂಬ ಗೀತೆಗಳು ನಮಗೆ ಕೇಳಿಬರುತ್ತಿವೆ. ಆದರೆ, “ನಾನಾದರೋ ಕ್ಷಯಿಸೇ ಕ್ಷಯಿಸುತ್ತೇನೆ. ನನಗೆ ಕಷ್ಟ! ಬಾಧಕರು ಬಾಧಿಸುವುದರಲ್ಲಿಯೇ ನಿರತರಾಗಿದ್ದಾರೆ. ಹೌದು, ಬಾಧಕರು ಬಹಳವಾಗಿ ಬಾಧಿಸುವುದರಲ್ಲಿ ನಿರತರಾಗಿದ್ದಾರೆ.”
17ಭೂಮಿಯ ನಿವಾಸಿಗಳೇ, ಭಯವೂ, ಕುಳಿಯೂ, ಬಲೆಯೂ ನಿಮಗೆ ಕಾದಿವೆ.
18ಆಗ ಭಯದ ಶಬ್ದಕ್ಕೆ ಓಡಿಹೋಗುವವನು ಗುಂಡಿಯೊಳಗೆ ಬೀಳುವನು. ಗುಂಡಿಯೊಳಗಿಂದ ಏರಿಬರುವವನು ಬಲೆಗೆ ಸಿಕ್ಕಿಬೀಳುವನು. ಆಕಾಶದ ದ್ವಾರಗಳು ತೆರೆದಿವೆ. ಭೂಮಿಯ ಅಸ್ತಿವಾರಗಳು ಕಂಪಿಸುತ್ತಿವೆ.
19ಭೂಮಿಯು ಬಿರುಕುಬಿಟ್ಟಿದೆ, ಬಿರಿದು ಬಿರಿದಿದೆ, ಭೂಮಿಯು ಕದಲಿಹೋಗಿದೆ.
20ಭೂಮಿಯು ಕುಡುಕನ ಹಾಗೆ ಓಲಾಡುತ್ತದೆ, ಗಾಳಿಗೆ ಸಿಕ್ಕಿದ ಗುಡಿಸಲಿನ ಹಾಗೆ ತೂಗಾಡುತ್ತದೆ, ಅದರ ಅಪರಾಧವು ಅದರ ಮೇಲೆ ಭಾರವಾಗಿರುತ್ತದೆ, ಅದು ಬಿದ್ದು ಹೋಗುತ್ತದೆ, ತಿರುಗಿ ಏಳುವುದೇ ಇಲ್ಲ.
21ಆ ದಿವಸದಲ್ಲಿ ಯೆಹೋವ ದೇವರು ಆಕಾಶದಲ್ಲಿರುವ ಆಕಾಶದವರ ಸೈನ್ಯವನ್ನೂ, ಭೂಮಿಯ ಮೇಲಿರುವ ಭೂರಾಜರನ್ನೂ ದಂಡಿಸುವರು.
22ನೆಲಮಾಳಿಗೆಯೊಳಗೆ ಒಟ್ಟುಗೂಡಿದ ಸೆರೆಯವರ ಹಾಗೆ ಅವರು ಒಟ್ಟುಗೂಡಿ ಸೆರೆಮನೆಯಲ್ಲಿ ಬಹಳ ದಿನಗಳಿದ್ದ ತರುವಾಯ ದಂಡನೆಗೆ ಗುರಿಯಾಗುವರು.
23ಆಮೇಲೆ ಸೇನಾಧೀಶ್ವರ ಯೆಹೋವ ದೇವರು ಚೀಯೋನ್ ಪರ್ವತದಲ್ಲಿಯೂ, ಯೆರೂಸಲೇಮಿನಲ್ಲಿಯೂ ಹಿರಿಯರ ಮುಂದೆ ಮಹಿಮೆಯಿಂದ ಆಳುವಾಗ, ಚಂದ್ರನಿಗೆ ಅವಮಾನವಾಗುವುದು, ಸೂರ್ಯನು ನಾಚಿಕೆ ಪಡುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.