Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೋಚನ ಮಗ ಯೆಶಾಯನಿಗೆ ಯೆಹೂದದ ಮತ್ತು ಯೆರೂಸಲೇಮಿನ ವಿಷಯವಾಗಿ ಕಂಡು ಬಂದ ದೈವೋಕ್ತಿ:
2ಆ ಅಂತ್ಯಕಾಲದಲ್ಲಿ, ಯೆಹೋವ ದೇವರ ಮಂದಿರದ ಪರ್ವತವು ಎಲ್ಲಾ ಗುಡ್ಡಬೆಟ್ಟಗಳಿಗಿಂತ ಉನ್ನತೋನ್ನತವಾಗಿ ಬೆಳೆದು ನೆಲೆಗೊಳ್ಳುವುದು. ಆಗ ಎಲ್ಲಾ ಜನಾಂಗಗಳು ಅದರ ಬಳಿಗೆ ಪ್ರವಾಹದಂತೆ ಬರುವವು.
3ಅನೇಕ ಪ್ರಜೆಗಳು ಬಂದು ಹೀಗೆ ಹೇಳುವರು, “ಬನ್ನಿರಿ, ಯೆಹೋವ ದೇವರ ಪರ್ವತಕ್ಕೂ, ಯಾಕೋಬನ ದೇವರ ಆಲಯಕ್ಕೂ ಏರಿಹೋಗೋಣ. ದೇವರು ತಮ್ಮ ಮಾರ್ಗಗಳನ್ನು ನಮಗೆ ಬೋಧಿಸುವರು, ನಾವು ಅವರ ದಾರಿಗಳಲ್ಲಿ ನಡೆಯುವೆವು.” ಏಕೆಂದರೆ ಚೀಯೋನಿನಿಂದ ದೇವರ ನಿಯಮವೂ, ಯೆರೂಸಲೇಮಿನಿಂದ ಯೆಹೋವ ದೇವರ ವಾಕ್ಯವೂ ಹೊರಡುವುವು.
4ಅವರು ಅನೇಕ ಜನಾಂಗಗಳ ಮಧ್ಯದಲ್ಲಿ ನ್ಯಾಯತೀರಿಸಿ, ಅನೇಕ ಪ್ರಜೆಗಳನ್ನು ಗದರಿಸುವರು. ಅವರು ತಮ್ಮ ಖಡ್ಗಗಳನ್ನು ನೇಗಿಲಿನ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು. ಜನಾಂಗಕ್ಕೆ ವಿರೋಧವಾಗಿ ಜನಾಂಗವು ಖಡ್ಗವನ್ನು ಪ್ರಯೋಗಿಸುವುದಿಲ್ಲ, ಇನ್ನು ಮೇಲೆ ಯುದ್ಧಾಭ್ಯಾಸದ ಅಗತ್ಯ ಇರುವುದೇ ಇಲ್ಲ.
5ಯಾಕೋಬಿನ ಮನೆತನದವರೇ ಬನ್ನಿರಿ, ಯೆಹೋವ ದೇವರ ಬೆಳಕಿನಲ್ಲಿ ನಡೆಯೋಣ. ಯೆಹೋವ ದೇವರ ದಿನ
6ಯಾಕೋಬಿನ ಮನೆತನದವರು ಪೂರ್ವದೇಶಗಳ ಮಂತ್ರತಂತ್ರಗಳಲ್ಲಿ ಮಗ್ನರಾಗಿ, ಫಿಲಿಷ್ಟಿಯರಂತೆ ಕಣಿ ಹೇಳುವವರಾಗಿಯೂ, ಬೇರೆ ದೇಶಗಳವರ ಮಧ್ಯದಲ್ಲಿ ಮೆಚ್ಚಿಕೆಯುಳ್ಳವರಾಗಿಯೂ ಇರುವುದರಿಂದ ಈ ನಿನ್ನ ಜನರನ್ನು ತಳ್ಳಿಬಿಟ್ಟಿದ್ದೀರಿ.
7ಅವರ ದೇಶವು ಬೆಳ್ಳಿ ಬಂಗಾರಗಳಿಂದ ತುಂಬಿದೆ. ಅವರ ಬೊಕ್ಕಸಗಳಿಗೆ ಮಿತಿಯಿಲ್ಲ. ಅವರ ದೇಶವು ಕುದುರೆಗಳಿಂದ ತುಂಬಿದೆ, ಅವರ ರಥಗಳಿಗೆ ಮಿತಿಯೇ ಇಲ್ಲ.
8ಅವರ ದೇಶವು ವಿಗ್ರಹಗಳಿಂದ ತುಂಬಿದೆ. ತಮ್ಮ ಬೆರಳುಗಳಿಂದ ಮಾಡಿದ ತಮ್ಮ ಕೈಕೆಲಸವನ್ನು ಆರಾಧಿಸುವರು.
9ಆದ್ದರಿಂದ ಮನುಷ್ಯರು ನಮ್ರರಾಗುತ್ತಾರೆ; ಎಲ್ಲರೂ ತಲೆಬಾಗುತ್ತಾರೆ; ಅವರನ್ನು ಕ್ಷಮಿಸಬೇಡಿ.
10ಯೆಹೋವ ದೇವರ ಭಯಕ್ಕೂ, ಅವರ ಮಹಿಮೆಯ ಘನತೆಗೂ ಬಂಡೆಗಳಲ್ಲಿ ಸೇರಿಕೋ. ಧೂಳಿನಲ್ಲಿ ನೀನು ಅಡಗಿಕೋ.
11ಮನುಷ್ಯನ ಅಹಂಭಾವದ ದೃಷ್ಟಿಯು ಕುಗ್ಗುವುದು. ಮನುಷ್ಯರ ಗರ್ವವು ತಗ್ಗುವುದು. ಆಗ ಯೆಹೋವ ದೇವರೊಬ್ಬರೇ ಆ ದಿನದಲ್ಲಿ ಉನ್ನತವಾಗಿರುವರು.
12ಸೇನಾಧೀಶ್ವರ ಯೆಹೋವ ದೇವರ ದಿನವು ಗರ್ವ ಹಾಗೂ ಅಹಂಭಾವದಿಂದ ತುಂಬಿರುವವರ ಮೇಲೆಯೂ, ತನ್ನನ್ನು ಹೆಚ್ಚಿಸಿಕೊಂಡಿರುವ ಪ್ರತಿಯೊಬ್ಬನ ಮೇಲೆಯೂ ಬರುವುದು, ದೇವರು ಅವರನ್ನು ತಗ್ಗಿಸುವರು.
13ಎತ್ತರವಾಗಿ ಬೆಳೆದಿರುವ ಲೆಬನೋನಿನ ಎಲ್ಲಾ ದೇವದಾರು ವೃಕ್ಷಗಳೂ ಹಾಗೂ ಬಾಷಾನಿನ ಎಲ್ಲಾ ಏಲಾ ಮರಗಳ ಮೇಲೆಯೂ
14ಎಲ್ಲಾ ಉನ್ನತವಾಗಿರುವ ಪರ್ವತಗಳು, ಎತ್ತರವಾದ ಗುಡ್ಡಗಳು,
15ಎಲ್ಲಾ ಎತ್ತರವಾದ ಗೋಪುರಗಳು, ಭದ್ರವಾದ ಎಲ್ಲಾ ಗೋಡೆಗಳ ಮೇಲೆಯೂ,
16ಎಲ್ಲಾ ತಾರ್ಷೀಷಿನ ಹಡಗುಗಳು ನೋಡತಕ್ಕ ಮನೋಹರವಾದ ಪ್ರತಿಯೊಂದು ನೌಕೆಗಳ ಮೇಲೆಯೂ ಆ ದಿನವು ತಪ್ಪದೇ ಬರುವುದು.
17ಜನರ ಅಟ್ಟಹಾಸವು ತಗ್ಗಿಹೋಗುವುದು. ಆ ದಿನದಲ್ಲಿ ಯೆಹೋವ ದೇವರೊಬ್ಬರೇ ಉನ್ನತವಾಗಿರುವರು.
18ವಿಗ್ರಹಗಳು ಸಂಪೂರ್ಣವಾಗಿ ಹೋಗಿಬಿಡುವುವು.
19ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ, ಯೆಹೋವ ದೇವರಿಗೂ ಅವರ ಮಹಿಮೆಗೂ, ಅವರ ಘನಕ್ಕೂ ಹೆದರಿ, ಬಂಡೆಗಳ ಸಂದುಗಳಿಗೂ, ಭೂಮಿಯ ಗವಿಗಳಿಗೂ ಜನರು ಸೇರಿಕೊಳ್ಳುವರು.
20ಆ ದಿನದಲ್ಲಿ ಮನುಷ್ಯರು ಪೂಜಿಸುವುದಕ್ಕೋಸ್ಕರ ಮಾಡಿಕೊಂಡ ಬೆಳ್ಳಿಯ ಬೊಂಬೆಗಳನ್ನೂ ಚಿನ್ನದ ವಿಗ್ರಹಗಳನ್ನೂ ಇಲಿ ಬಾವಲಿಗಳಿಗಾಗಿ ಬಿಸಾಡಿಬಿಡುವರು.
21ಯೆಹೋವ ದೇವರು ಭೂಮಿಯನ್ನು ನಡುಗಿಸಲು ಎದ್ದಾಗ, ಯೆಹೋವ ದೇವರ ಭಯಕ್ಕೂ, ಅವರ ಮಹಿಮೆಯ ಘನಕ್ಕೂ ಹೆದರಿ ಬಂಡೆಗಳ ಸಂದುಗಳಿಗೂ, ಎತ್ತರವಾಗಿರುವ ಬಂಡೆಗಳ ಕಡಿದಾದ ಸ್ಥಳಗಳಿಗೂ ಜನರು ನುಗ್ಗುವರು.
22ಉಸಿರು ಇರುವವರೆಗೆ ಬದುಕುವ ನರಮಾನವನ ಮೇಲಿನ ಭರವಸೆಯನ್ನು ಬಿಟ್ಟುಬಿಡಿರಿ. ಏಕೆಂದರೆ ಅವನ ಗಣನೆ ಎಷ್ಟರವರೆಗೆ?
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.