Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 16

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇಶವನ್ನು ಆಳುವವನಿಗೆ ಕಪ್ಪವಾಗಿ ಕೊಡತಕ್ಕ ಕುರಿಮರಿಯನ್ನು ಸೆಲ ಬಂಡೆಯಿಂದ ಮರುಭೂಮಿಯ ಕಡೆಗೆ, ಚೀಯೋನ್ ಪುತ್ರಿಯರ ಪರ್ವತಕ್ಕೆ ಕಳುಹಿಸಿರಿ.
2ಗೂಡಿನಿಂದ ಹೊರಗೆ ಬಂದ ಹಕ್ಕಿಗಳ ಮರಿಗಳಂತೆ ಅಲೆದಾಡುವ ಹಾಗೆ, ಮೋವಾಬಿನ ಪುತ್ರಿಯರು ಅರ್ನೋನ್ ನದಿಯ ಹಾಯ್ಗಡಗಳಲ್ಲಿ ಇರುವರು.
3ಆಲೋಚಿಸಿ, ತೀರ್ಮಾನಿಸಿರಿ. ಮಟ್ಟ ಮಧ್ಯಾಹ್ನದಲ್ಲಿ ನಿಮ್ಮ ನೆರಳನ್ನು ರಾತ್ರಿಯಂತೆ ಮಾಡಿರಿ. ವಲಸಿಗರನ್ನು ಅಡಗಿಸಿರಿ. ಅಲೆಯುವವರನ್ನು ಬಯಲಿಗೆ ತರಬೇಡ.
4ಮೋವಾಬ್ ದೇಶದಿಂದ ವಲಸೆಹೋದವರು ನಿಮ್ಮಲ್ಲಿ ವಾಸಿಸಲಿ. ವಿನಾಶಕರಿಗೆ ವಶವಾಗದಂತೆ ಅವರಿಗೆ ಆಶ್ರಯ ನೀಡಿರಿ. ದಬ್ಬಾಳಿಕೆ ಮುಗಿಯುತ್ತಾ ಬಂತು. ಸೂರೆಮಾಡುವುದು ನಿಲ್ಲುವುದು, ಪೀಡಿಸುವವರು ದೇಶದಿಂದ ಅಳಿದುಹೋಗುವರು.
5ಪ್ರೀತಿಯಲ್ಲಿ ಸಿಂಹಾಸನವು ಸ್ಥಾಪಿತವಾಗುವುದು. ನ್ಯಾಯತೀರಿಸುವವನೂ, ನ್ಯಾಯವನ್ನು ಹುಡುಕುವವನೂ, ನೀತಿಗೋಸ್ಕರ ತ್ವರೆಪಡುವವನೂ, ದಾವೀದನ ಗುಡಾರದಲ್ಲಿ ಅದರ ಮೇಲೆ ನಂಬಿಗಸ್ತಿಕೆಯಲ್ಲಿ ಕೂತುಕೊಳ್ಳುವನು.
6ಮೋವಾಬಿನ ಗರ್ವವನ್ನು ನಾವು ಕೇಳಿದ್ದೇವೆ. ಆಕೆಗೆ ಬಹಳ ಗರ್ವ. ಆಕೆಯ ಅಹಂಕಾರವು, ಆಕೆಯ ಗರ್ವವು ಮತ್ತು ಆಕೆಗೆ ಕೋಪವು ಸಹ ಉಂಟು. ಆದರೆ ಆಕೆಯ ಕೊಚ್ಚಿಕೊಳ್ಳುವಿಕೆ ಬರಿದಾದದ್ದು.
7ಆದ್ದರಿಂದ ಮೋವಾಬಿನ ನಿಮಿತ್ತ ಮೋವಾಬ್ಯರು ಗೋಳಾಡುವರು, ಒಟ್ಟಾಗಿ ಗೋಳಾಡುವರು. ಏಕೆಂದರೆ ಕೀರ್ ಹರೆಷೆಥಿನ ದ್ರಾಕ್ಷಿಯ ಕಡುಬುಗಳಿಗೋಸ್ಕರ ನೀವು ದುಃಖಿಸುವಿರಿ. ನಿಜವಾಗಿಯೂ ಅವರು ನೊಂದು ಹೋಗಿದ್ದಾರೆ.
8ಹೆಷ್ಬೋನ್ ಊರಿನ ಹೊಲ ಮತ್ತು ಸಿಬ್ಮ ಊರಿನ ದ್ರಾಕ್ಷಿ ಸಹ ನಿಸ್ಸಾರವಾಗಿವೆ. ಇತರ ಜನರ ಪ್ರಭುಗಳು ವಿಶಾಲವಾದ ದ್ರಾಕ್ಷಿಗಿಡಗಳನ್ನು ತುಳಿದು ಹಾಕಿದ್ದಾರೆ, ಆ ದ್ರಾಕ್ಷಿಗಿಡಗಳು ಯಜ್ಜೇರ್ ಊರಿನವರೆಗೂ ವ್ಯಾಪಿಸಿ, ಮರುಭೂಮಿಯಲ್ಲಿ ಹರಡಿತ್ತು. ಅದರ ಕೊಂಬೆಗಳು ಹಬ್ಬಿ, ಸಮುದ್ರದವರೆಗೆ ವಿಶಾಲವಾಗಿತ್ತು.
9ಆದಕಾರಣ ಸಿಬ್ಮದ ದ್ರಾಕ್ಷಾಲತೆಯ ನಿಮಿತ್ತ ಯಜ್ಜೇರ್ ಪಟ್ಟಣದೊಂದಿಗೆ ಅಳುವೆನು. ಓ ಹೆಷ್ಬೋನ್ ಮತ್ತು ಎಲೆಯಾಲೆ ಪಟ್ಟಣಗಳೇ, ನಿಮ್ಮನ್ನು ನನ್ನ ಕಣ್ಣೀರಿನಿಂದ ತೋಯಿಸುವೆನು! ಏಕೆಂದರೆ ಶತ್ರುಗಳು ಬಿದ್ದುಹೋದ ನಿಮ್ಮ ಬೇಸಿಗೆಯ ಫಲಗಳಿಗೂ, ಬೆಳೆಗಳಿಗೂ ಆರ್ಭಟಿಸುತ್ತಾರೆ.
10ಸಮೃದ್ಧಿಯಾದ ಹೊಲಗಳಿಂದ ಸಂತೋಷವು ಮತ್ತು ಆನಂದವು ತೊಲಗಿವೆ. ದ್ರಾಕ್ಷಿತೋಟಗಳಲ್ಲಿ ಕೀರ್ತನೆಗಳಾಗಲೀ, ಆರ್ಭಟವಾಗಲೀ ಇರುವದಿಲ್ಲ. ದ್ರಾಕ್ಷಿ ತೊಟ್ಟಿಗಳಲ್ಲಿ ಇನ್ನು ದ್ರಾಕ್ಷಾರಸವನ್ನು ತುಳಿದು ತೆಗೆಯುವುದಿಲ್ಲ. ಅವರ ಕೂಗಾಟವನ್ನು ನಿಲ್ಲಿಸಿಬಿಟ್ಟಿದ್ದೇನೆ.
11ಆದ್ದರಿಂದ ಮೋವಾಬಿನ ನಿಮಿತ್ತ ನನ್ನ ಹೃದಯವೂ, ಕೀರ್ ಹೆರೆಸೆಥ್ ನಿಮಿತ್ತ ನನ್ನ ಅಂತರಂಗವೂ ಕಿನ್ನರಿಯಂತೆ ಮಿಡಿಯುತ್ತಾ ದುಃಖಿಸುತ್ತಿದೆ.
12ಹೀಗಿರುವಲ್ಲಿ ಮೋವಾಬು ಉನ್ನತ ಸ್ಥಳದಲ್ಲಿ ಆಯಾಸಗೊಂಡಂತೆ ಕಾಣಿಸಿಕೊಂಡು, ಅವಳ ದೇವಾಲಯಕ್ಕೆ ಪ್ರಾರ್ಥಿಸುವುದಕ್ಕೆ ಬಂದರೂ ಅದಕ್ಕೆ ಸಫಲವಾಗದು.
13ಯೆಹೋವ ದೇವರು ಮೋವಾಬಿನ ವಿಷಯವಾಗಿ ಹಿಂದೆ ನುಡಿದ ಮಾತು ಇದೇ:
14ಆದರೆ ಈಗ ಯೆಹೋವ ದೇವರು ಮಾತನಾಡಿ, “ಗುಲಾಮಗಿರಿಯ ಕಟ್ಟುನಿಟ್ಟಿನ ಲೆಕ್ಕಾಚಾರದಂತೆ, ಮೂರು ವರುಷದೊಳಗೆ ಮೋವಾಬಿನ ವೈಭವವು ಹೀನಾಯಕ್ಕೆ ಈಡಾಗುವುದು. ಅಲ್ಲಿನವರ ದೊಡ್ಡ ಜನಸಂಖ್ಯೆಯಲ್ಲಿ ಅಳಿದುಉಳಿಯುವವರು ಬಲಹೀನರಾದ ಕೆಲವು ಜನರಾಗಿರುವರು,” ಎಂದು ಹೇಳಿದ್ದಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.