Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೋಚನ ಮಗ ಯೆಶಾಯನಿಗೆ ಬಾಬಿಲೋನಿನ ವಿಷಯವಾಗಿ ಬಂದ ಪ್ರವಾದನೆ:
2ಶತ್ರುಗಳು ಬಂದು ಶ್ರೇಷ್ಠರ ದ್ವಾರಗಳೊಳಗೆ ಹೋಗುವಂತೆ ಎತ್ತರವಾದ ಪರ್ವತದ ಮೇಲೆ ನೀವು ಧ್ವಜವನ್ನೆತ್ತಿ ಅವರಿಗೆ ನಿಮ್ಮ ಶಬ್ದವನ್ನು ಕೇಳಿಸುವಂತೆ ಜೋರಾಗಿ ಕೂಗಿ ಕರೆಯಿರಿ.
3ನಾನು ನನ್ನ ಪರಿಶುದ್ಧರಿಗೆ ಆಜ್ಞಾಪಿಸಿ, ನನ್ನ ಜಯದಲ್ಲಿ ಉಲ್ಲಾಸಿಸುವವರನ್ನೂ, ನನ್ನ ಶೂರರನ್ನೂ ಸಹ ನನ್ನ ಕೋಪವನ್ನು ತೆಗೆದುಕೊಂಡು ಹೋಗಲು ಕರೆದಿದ್ದೇನೆ.
4ಬಹು ಸಮೂಹವು ಇದ್ದಂತೆ ಗದ್ದಲವು ಬೆಟ್ಟಗಳಲ್ಲಿ ಕೇಳಿಬರುತ್ತದೆ. ಒಟ್ಟಿಗೆ ಕೂಡಿಕೊಂಡ ರಾಜ್ಯಗಳ ಜನಾಂಗಗಳ ಆರ್ಭಟ, ಸೇನಾಧೀಶ್ವರ ಯೆಹೋವ ದೇವರು ಯುದ್ಧಕ್ಕೆ ಸೈನ್ಯವನ್ನು ಸಿದ್ಧಮಾಡುತ್ತಾರೆ.
5ಯೆಹೋವ ದೇವರು ಮತ್ತು ಅವರ ರೋಷಕ್ಕೆ ಆಯುಧಗಳಾದವರು ದೂರದೇಶದಿಂದ ಎಂದರೆ, ಆಕಾಶಮಂಡಲದ ಕಟ್ಟಕಡೆಯಿಂದ ದೇಶವನ್ನೆಲ್ಲಾ ಹಾಳುಮಾಡುವುದಕ್ಕಾಗಿ ಬರುತ್ತಾರೆ.
6ನೀವು ಗೋಳಾಡಿರಿ. ಏಕೆಂದರೆ, ಯೆಹೋವ ದೇವರ ದಿನವು ಸಮೀಪವಾಯಿತು. ಅದು ಸರ್ವಶಕ್ತರಿಂದ ನಾಶರೂಪವಾಗಿ ಬರುವುದು.
7ಆದಕಾರಣ ಎಲ್ಲಾ ಕೈಗಳು ಜೋಲು ಬೀಳುವುವು ಮತ್ತು ಪ್ರತಿಯೊಬ್ಬನ ಹೃದಯವು ಕರಗುವುದು.
8ಅವರು ಭಯಪಡುವರು. ನೋವು ಮತ್ತು ಬೇನೆಗಳು ಅವರನ್ನು ಆವರಿಸಿಕೊಳ್ಳುವುವು. ಪ್ರಸವವೇದನೆಯಲ್ಲಿರುವ ಸ್ತ್ರೀಯರಂತೆ ಸಂಕಟಪಡುವರು. ಅವರು ಒಬ್ಬರಿಗೊಬ್ಬರು ಭ್ರಮೆ ಪಡುವರು. ಅವರ ಮುಖಗಳು ಜ್ವಾಲೆಯಂತಿರುವುವು.
9ಇಗೋ, ಯೆಹೋವ ದೇವರ ದಿನವು ಬರುತ್ತದೆ. ಅದು ಭೂಮಿಯನ್ನು ಹಾಳು ಮಾಡುವುದಕ್ಕೂ, ಅಲ್ಲಿಂದ ಪಾಪಿಗಳನ್ನು ನಿರ್ಮೂಲ ಮಾಡುವುದಕ್ಕೂ, ಕಡುಕೋಪದಿಂದಲೂ, ತೀಕ್ಷ್ಣರೋಷದಿಂದಲೂ ಕ್ರೂರವಾಗಿರುವುದು.
10ಏಕೆಂದರೆ, ಆಕಾಶದ ನಕ್ಷತ್ರಗಳು ಮತ್ತು ಅದರ ರಾಶಿಗಳು ತಮ್ಮ ಬೆಳಕನ್ನು ಕೊಡುವುದಿಲ್ಲ. ಸೂರ್ಯನು ಮೂಡುತ್ತಲೇ ಕತ್ತಲಾಗುವನು. ಚಂದ್ರನು ತನ್ನ ಬೆಳಕನ್ನು ಕೊಡುವುದಿಲ್ಲ.
11ಅವರ ಕೆಟ್ಟ ಕಾರ್ಯಗಳಿಗೋಸ್ಕರವೂ, ದುಷ್ಟರ ಅಪರಾಧಗಳಿಗೋಸ್ಕರವೂ ನಾನು ಲೋಕವನ್ನು ಶಿಕ್ಷಿಸುವೆನು, ಗರ್ವಿಷ್ಠರ ಅಹಂಕಾರವನ್ನು ನಿಲ್ಲಿಸಿಬಿಡುವೆನು. ಭಯಂಕರವಾದವರ ಹೆಮ್ಮೆಯನ್ನು ತಗ್ಗಿಸುವೆನು.
12ಮನುಷ್ಯರನ್ನು ಚೊಕ್ಕ ಬಂಗಾರಕ್ಕಿಂತಲೂ, ಓಫೀರ್ ಬಂಗಾರಕ್ಕಿಂತಲೂ ಜನರು ವಿರಳವಾಗಿರುವಂತೆ ಮಾಡುವೆನು.
13ಆದ್ದರಿಂದ ಸೇನಾಧೀಶ್ವರ ಯೆಹೋವ ದೇವರ ಕೋಪವೂ, ಅವರ ತೀಕ್ಷ್ಣರೋಷವೂ ಪ್ರಕಟವಾಗುವ ಆ ದಿನದಂದು, ಆಕಾಶಮಂಡಲ ನಡುಗುವುದು. ಭೂಮಂಡಲ ಅದರ ಸ್ಥಳದಿಂದ ಕದಲುವುದು.
14ಅದು ಅಟ್ಟಿದ ಜಿಂಕೆಯಂತೆಯೂ, ಕುರುಬರಿಲ್ಲದ ಕುರಿಗಳಂತೆಯೂ ಇರುವುದು. ಅವರಲ್ಲಿ ಪ್ರತಿಯೊಬ್ಬನೂ ತನ್ನ ಜನರ ಕಡೆಗೆ ತಿರುಗಿಕೊಳ್ಳುವನು; ಪ್ರತಿಯೊಬ್ಬನು ತನ್ನ ಸ್ವದೇಶಕ್ಕೆ ಓಡಿಹೋಗುವನು.
15ಸಿಕ್ಕಿದ ಪ್ರತಿಯೊಬ್ಬನೂ ಇರಿತಕ್ಕೆ ಗುರಿಯಾಗುವನು. ಅಟ್ಟಿಹಿಡಿಯಲಾದ ಪ್ರತಿಯೊಬ್ಬನೂ ಖಡ್ಗಕ್ಕೆ ತುತ್ತಾಗುವನು.
16ಅವರ ಮಕ್ಕಳೂ ಸಹ ಅವರ ಕಣ್ಣೆದುರಿಗೆ ಹತರಾಗುವರು. ಅವರ ಮನೆಗಳು ಸೂರೆಮಾಡಲಾಗುವುದು. ಅವರ ಹೆಂಡತಿಯರು ಅತ್ಯಾಚಾರಕ್ಕೆ ಈಡಾಗುವರು.
17ಇಗೋ, ಬೆಳ್ಳಿಯನ್ನು ಲಕ್ಷಿಸದೆ, ಬಂಗಾರದಲ್ಲಿ ಆನಂದಿಸದೆ ಇರುವ ಮೇದ್ಯರನ್ನು ಅವರಿಗೆ ವಿರೋಧವಾಗಿ ನಾನು ಎಬ್ಬಿಸುವೆನು.
18ಅವರ ಬಿಲ್ಲುಗಳು ಸಹ ಯುವಕರನ್ನು ಸಂಹರಿಸುವುವು. ಇವರು ಹಸುಳೆಗಳನ್ನು ಕರುಣಿಸರು. ಇವರು ಮಕ್ಕಳನ್ನು ಕನಿಕರಿಸುವುದಿಲ್ಲ.
19ರಾಜ್ಯಗಳ ಘನತೆಯೂ, ಕಸ್ದೀಯರ ಶ್ರೇಷ್ಠವಾದ ಸೌಂದರ್ಯವೂ ಆದ ಬಾಬಿಲೋನನ್ನು ದೇವರು ಸೊದೋಮ್ ಗೊಮೋರಗಳನ್ನು ಕೆಡವಿಬಿಟ್ಟಂತೆ ಕೆಡವಿಬಿಡುವನು.
20ಅದು ಎಂದಿಗೂ ನಿವಾಸ ಸ್ಥಳವಾಗದು. ತಲತಲಾಂತರಕ್ಕೂ ಅಲ್ಲಿ ಯಾರೂ ವಾಸಿಸರು; ಯಾವ ಅರಬಿಯನೂ ಗುಡಾರಹಾಕನು. ಕುರುಬರು ಅಲ್ಲಿ ಮಂದೆಗಳನ್ನು ತಂಗಿಸರು.
21ಆದರೆ ಕಾಡುಮೃಗಗಳು ಅಲ್ಲಿ ಮಲಗುವುವು. ಅವರ ಮನೆಗಳು ನರಿಗಳಿಂದ ತುಂಬಿರುವುವು, ಅಲ್ಲಿ ಗೂಬೆಗಳು ವಾಸಿಸುವುವು ಮತ್ತು ಕಾಡುಮೇಕೆಗಳು ಅಲ್ಲಿ ಕುಣಿದಾಡುವುವು.
22ಅವರ ಕೋಣೆಗಳಲ್ಲಿ ತೋಳಗಳು ಕೂಗುವುವು, ಅವರ ಮೆಚ್ಚಿಕೆಯಾದ ಅರಮನೆಗಳಲ್ಲಿ ನರಿಗಳು ವಾಸಿಸುವುವು. ಬಾಬಿಲೋನಿಗೆ ಕಾಲವು ಸಮೀಪಿಸಿತು. ಇನ್ನು ಅದರ ದಿನಗಳು ಮುಂದುವರಿಯುವುದಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.