Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಶಾಯ 11

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಷಯನ ಬುಡದಿಂದ ಒಂದು ಚಿಗುರು ಒಡೆಯುವುದು ಮತ್ತು ಅದರ ಬೇರಿನಿಂದ ಕೊಂಬೆಯು ಫಲಕೊಡುವುದು.
2ಅವನ ಮೇಲೆ ಯೆಹೋವ ದೇವರ ಆತ್ಮ, ಜ್ಞಾನ ಮತ್ತು ವಿವೇಕದಾಯಕ ಆತ್ಮ, ಸಮಾಲೋಚನೆ ಮತ್ತು ಪರಾಕ್ರಮಗಳನ್ನು ಹುಟ್ಟಿಸುವ ಆತ್ಮ, ತಿಳುವಳಿಕೆ ಮತ್ತು ಯೆಹೋವ ದೇವರ ಭಯದ ಆತ್ಮ,
3ಅವರು ಯೆಹೋವ ದೇವರ ಭಯದಲ್ಲಿ ಆನಂದಿಸುವರು. ಅವರು ಕಣ್ಣಿಗೆ ಕಂಡಂತೆ ತೀರ್ಪು ಮಾಡುವುದಿಲ್ಲ, ತಮ್ಮ ಕಿವಿಗಳ ಕೇಳ್ವಿಕೆಯ ಪ್ರಕಾರವೂ ತೀರ್ಪು ಮಾಡುವುದಿಲ್ಲ.
4ಆದರೆ ಭೂಮಿಯ ಬಡವರಿಗೆ ನೀತಿಯಿಂದ ನ್ಯಾಯತೀರಿಸುವರು. ಭೂಲೋಕದ ದೀನರಿಗೆ ನ್ಯಾಯವಾಗಿ ತೀರ್ಪುಮಾಡುವರು, ಭೂಮಿಯನ್ನು ತಮ್ಮ ಬಾಯಿಯ ಕೋಲಿನಿಂದ ಹೊಡೆಯುವರು. ತಮ್ಮ ತುಟಿಗಳ ಉಸಿರಿನಿಂದ ದುಷ್ಟರನ್ನು ಹತಮಾಡುವರು.
5ನೀತಿಯೇ ಅವರಿಗೆ ನಡುಕಟ್ಟು, ನಂಬಿಗಸ್ತಿಕೆಯೇ ಅವರ ಸೊಂಟದ ಪಟ್ಟಿ.
6ತೋಳವು ಕುರಿಯ ಸಂಗಡ ವಾಸಿಸುವುದು; ಚಿರತೆಯು ಮೇಕೆ ಮರಿಯೊಂದಿಗೆ ಮಲಗುವುದು; ಕರುವೂ, ಪ್ರಾಯದ ಸಿಂಹವೂ, ಪುಷ್ಟಪಶುವೂ ಒಟ್ಟಿಗಿರುವುವು; ಇವುಗಳನ್ನು ಒಂದು ಪುಟ್ಟ ಮಗುವು ನಡೆಸುವುದು.
7ಹಸುವು ಕರಡಿಯ ಸಂಗಡ ಮೇಯುವುವು; ಅವುಗಳ ಮರಿಗಳು ಜೊತೆಯಾಗಿ ಮಲಗುವುವು; ಸಿಂಹವು ಎತ್ತಿನಂತೆ ಹುಲ್ಲನ್ನು ಮೇಯುವುದು.
8ಹಸುಳೆಯು ನಾಗರ ಹಾವಿನ ಹುತ್ತದ ಮೇಲೆ ಆಡುವುದು ಮತ್ತು ಪುಟ್ಟ ಮಗುವು ಹಾವಿನ ಬಿಲದ ಒಳಗೆ ಕೈ ಹಾಕುವುದು.
9ನನ್ನ ಪರಿಶುದ್ಧ ಪರ್ವತದಲ್ಲಿ ಯಾರೂ ಕೇಡುಮಾಡುವುದಿಲ್ಲ, ಯಾರೂ ಹಾಳುಮಾಡುವುದಿಲ್ಲ. ಏಕೆಂದರೆ ಸಮುದ್ರವು ನೀರಿನಿಂದ ತುಂಬಿಕೊಂಡಿರುವಂತೆ, ಯೆಹೋವ ದೇವರ ತಿಳುವಳಿಕೆಯು ಭೂಮಿಯಲ್ಲಿ ತುಂಬಿಕೊಂಡಿರುವುದು.
10ಆ ದಿನದಲ್ಲಿ ಇಷಯನ ವಂಶದಿಂದ ಜನರಿಗೆ ಒಂದು ಬೇರು ಗುರುತಿನ ಧ್ವಜವಾಗಿ ನಿಲ್ಲುವುದು. ಅವರ ವಿಶ್ರಾಂತಿ ಸ್ಥಳವು ಮಹಿಮೆಯುಳ್ಳದ್ದಾಗಿರುವುದು.
11ಆ ದಿನದಲ್ಲಿ ಯೆಹೋವ ದೇವರು ಉಳಿದ ತಮ್ಮ ಜನರನ್ನು ಬಿಡಿಸಿಕೊಳ್ಳುವುದಕ್ಕೆ ಎರಡನೇ ಸಾರಿ ಕೈಹಾಕಿ ಅಸ್ಸೀರಿಯ, ಈಜಿಪ್ಟ್, ಪತ್ರೋಸ್, ಕೂಷ್, ಏಲಾಮ್, ಶಿನಾರ್, ಹಮಾತ್ ಮತ್ತು ಮೆಡಿಟರೇನಿಯನ್ ಸಮುದ್ರದ ದ್ವೀಪಗಳಿಂದಲೂ ಉಳಿದವರನ್ನು ಬರಮಾಡಿಕೊಳ್ಳುವರು.
12ಜನಾಂಗಗಳಿಗೆ ಗುರುತಾಗಿ ಧ್ವಜವನ್ನೆತ್ತಿ ಇಸ್ರಾಯೇಲಿನಿಂದ ತಳ್ಳಿಬಿಟ್ಟವರನ್ನು ಕೂಡಿಸುವನು. ಯೆಹೂದದಿಂದ ಚದರಿದವರನ್ನು ಭೂಮಿಯ ನಾಲ್ಕು ಕಡೆಗಳಿಂದ ಒಟ್ಟುಗೂಡಿಸುವನು.
13ಎಫ್ರಾಯೀಮಿನ ಹೊಟ್ಟೆಕಿಚ್ಚು ತೊಲಗಿ, ಯೆಹೂದದ ವಿರೋಧಿಗಳು ಇಲ್ಲದಂತಾಗುವರು. ಹೀಗೆ ಎಫ್ರಾಯೀಮು ಯೆಹೂದದ ಮೇಲೆ ಹೊಟ್ಟೆಕಿಚ್ಚು ಪಡುವುದಿಲ್ಲ; ಯೆಹೂದವು ಎಫ್ರಾಯೀಮಿಗೆ ವಿರೋಧವಾಗಿರುವುದಿಲ್ಲ.
14ಆದರೆ ಅವರು ಪಶ್ಚಿಮ ದಿಕ್ಕಿಗೆ ಫಿಲಿಷ್ಟಿಯರ ಇಳಿಜಾರು ಪ್ರದೇಶದ ಮೇಲೆ ಎರಗುವರು. ಅವರು ಜೊತೆಯಾಗಿ ಪೂರ್ವದವರನ್ನು ಸೂರೆ ಮಾಡುವರು, ಅವರು ಎದೋಮಿನ ಮತ್ತು ಮೋವಾಬಿನ ಮೇಲೆ ತಮ್ಮ ಕೈಯನ್ನು ದಾಳಿಮಾಡುವರು ಮತ್ತು ಅಮ್ಮೋನಿಯರು ಅವರಿಗೆ ಅಧೀನರಾಗುವರು.
15ಯೆಹೋವ ದೇವರು ಈಜಿಪ್ಟಿನ ಸಮುದ್ರದ ಕೊಲ್ಲಿಯನ್ನು ಸಂಪೂರ್ಣವಾಗಿ ತೆಗೆದುಹಾಕುವರು, ಅವರು ತಮ್ಮ ಉಷ್ಣಗಾಳಿಯಿಂದ ಯೂಫ್ರೇಟೀಸ್ ನದಿಯ ಮೇಲೆ ಕೈಯನ್ನು ಝಾಡಿಸಿ, ಅದನ್ನು ಏಳು ಹೊಳೆಗಳಾಗಿ ಒಡೆದು, ಮನುಷ್ಯರ ಕೆರಗಳು ನೆನೆಯದಂತೆ ದಾಟಿಸುವರು.
16ಇದಲ್ಲದೆ ಇಸ್ರಾಯೇಲರು ಈಜಿಪ್ಟ್ ದೇಶದಿಂದ ಹೊರಟು ಬಂದ ಕಾಲದಲ್ಲಿ ಅವರಿಗೆ ಹೇಗೆ ಮಾರ್ಗವು ಇತ್ತೋ ಹಾಗೆಯೇ ಅಸ್ಸೀರಿಯದಿಂದ ತಪ್ಪಿಸಿಕೊಂಡು ಬರುವ ತಮ್ಮ ಉಳಿದ ಜನರಿಗೆ ವಿಶಾಲವಾದ ಮಾರ್ಗವು ಇರುವುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.