Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಹೋಶೇಯ 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲರೇ, ಯೆಹೋವ ದೇವರ ವಾಕ್ಯವನ್ನು ಕೇಳಿರಿ: ದೇಶದ ನಿವಾಸಿಗಳಾದ ನಿಮ್ಮ ಮೇಲೆ ಯೆಹೋವ ದೇವರು ಆಪಾದನೆ ಹೊರಿಸಿದ್ದಾರೆ. “ಏಕೆಂದರೆ ದೇಶದಲ್ಲಿ ಸತ್ಯವೂ ಇಲ್ಲ, ದಯೆಯೂ ಇಲ್ಲ, ದೇವರ ತಿಳುವಳಿಕೆಯೂ ಇಲ್ಲ.
2ಶಪಿಸುವದೂ, ಸುಳ್ಳು ಹೇಳುವುದೂ, ಕೊಲ್ಲುವುದು, ಕದಿಯುವುದೂ, ವ್ಯಭಿಚಾರ ಮಾಡುವುದೂ ಹೆಚ್ಚಾಗಿ ಬಿಟ್ಟಿವೆ. ಅವರು ಎಲ್ಲಾ ಮಿತಿಗಳನ್ನು ಮೀರಿದ್ದಾರೆ. ದೇಶವೆಲ್ಲಾ ರಕ್ತಮಯವಾಗಿದೆ.
3ಆದ್ದರಿಂದ ದೇಶವು ದುಃಖಪಡುತ್ತಿದೆ. ಅದರಲ್ಲಿ ವಾಸಿಸುವ ಪ್ರತಿಯೊಬ್ಬನು ಕುಗ್ಗಿಹೋಗಿದ್ದಾನೆ. ಅಡವಿಯ ಮೃಗಗಳೂ ಆಕಾಶದ ಪಕ್ಷಿಗಳೂ, ಸಮುದ್ರ ಮೀನುಗಳು ನಶಿಸಿ ಹೋಗುತ್ತಿವೆ.
4“ಆದರೂ ಯಾವನಾದರೂ ವಾದಿಸದಿರಲಿ ಇಲ್ಲವೆ ಬೇರೆಯವರನ್ನು ಖಂಡಿಸದಿರಲಿ. ಏಕೆಂದರೆ ನಿಮ್ಮ ಜನರೆಲ್ಲರೂ ಯಾಜಕನೊಂದಿಗೆ ವಾದಿಸುವವರಾಗಿದ್ದಾರೆ.
5ನೀನು ಹಗಲಿನಲ್ಲಿಯೂ, ರಾತ್ರಿಯಲ್ಲಿಯೂ ಬೀಳುವೆ. ಪ್ರವಾದಿಗಳು ನಿನ್ನ ಸಂಗಡ ಮುಗ್ಗರಿಸಿಬೀಳುವರು. ಆದ್ದರಿಂದ ನಾನು ನಿನ್ನ ತಾಯಿಯನ್ನು ನಾಶಮಾಡುವೆನು.
6ನನ್ನ ಜನರು ಜ್ಞಾನಹೀನರಾಗಿ ಅಳಿದು ಹೋಗುತ್ತಿದ್ದಾರೆ. “ಏಕೆಂದರೆ ನೀವು ದೈವಜ್ಞಾನವನ್ನು ತಿರಸ್ಕರಿಸಿದ್ದೀರಿ. ನಾನು ಸಹ ಯಾಜಕ ವರ್ಗದಿಂದ ನಿಮ್ಮನ್ನು ವರ್ಜಿಸಿ ಬಿಡುತ್ತೇನೆ. ಏಕೆಂದರೆ ನೀವು ದೇವರ ನಿಯಮವನ್ನು ಮರೆತುಬಿಟ್ಟಿದ್ದೀರಿ, ನಾನು ನಿಮ್ಮ ಮಕ್ಕಳನ್ನು ಮರೆತುಬಿಡುತ್ತೇನೆ.
7ಯಾಜಕರು ಹೆಚ್ಚಿದ ಹಾಗೆಲ್ಲಾ ಅವರು ನನಗೆ ವಿರೋಧವಾಗಿ ಪಾಪಮಾಡಿದ್ದಾರೆ. ಆದ್ದರಿಂದ ನಾನು ಅವರ ಮಾನವನ್ನು ಅವಮಾನವನ್ನಾಗಿ ಮಾರ್ಪಡಿಸುವೆನು.
8ಅವರು ನನ್ನ ಜನರ ಪಾಪವನ್ನು ತಿನ್ನುತ್ತಾರೆ. ಅವರು ದುಷ್ಟತನದ ಮೇಲೆ ಅವರ ಮನಸ್ಸನ್ನು ಇಡುತ್ತಾರೆ.
9ಯಾಜಕನು ಹೇಗೋ ಹಾಗೆಯೇ ಜನರು ಇರುವರು. ನಾನು ಅವರ ಮಾರ್ಗಗಳಿಗೋಸ್ಕರ ಅವರನ್ನು ಶಿಕ್ಷಿಸಿ, ಅವರ ಕೃತ್ಯಗಳಿಗೆ ತಕ್ಕಂತೆ ಪ್ರತಿಫಲ ಕೊಡುವೆನು.
10“ಏಕೆಂದರೆ ಅವರು ತಿಂದರೂ ಸಾಕಾಗುವುದಿಲ್ಲ. ಅವರು ವ್ಯಭಿಚಾರ ಮಾಡಿದರೂ ಅಭಿವೃದ್ಧಿ ಆಗುವುದಿಲ್ಲ. ಏಕೆಂದರೆ ಅವರು ಯೆಹೋವ ದೇವರನ್ನೇ ಬಿಟ್ಟುಬಿಟ್ಟಿದ್ದಾರೆ.
11ಮದ್ಯಪಾನ, ದ್ರಾಕ್ಷಾರಸ ಇವು ಜನರನ್ನು ಜ್ಞಾನಹೀನರನ್ನಾಗಿ ಮಾಡುತ್ತವೆ.
12ನನ್ನ ಜನರು ಮರದ ತುಂಡುಗಳಿಂದ ಕಣಿ ಕೇಳುತ್ತಾರೆ. ಹಿಡಿದ ಕೋಲಿನಿಂದ ಉತ್ತರ ಪಡೆಯಲು ಯತ್ನಿಸುತ್ತಾರೆ. ಏಕೆಂದರೆ ವ್ಯಭಿಚಾರದ ಆತ್ಮವು ಅವರನ್ನು ತಪ್ಪಿಸಿಬಿಟ್ಟಿದೆ. ಅವರು ತಮ್ಮ ದೇವರಿಗೆ ಅಪನಂಬಿಗಸ್ತರಾಗಿ ದ್ರೋಹ ಮಾಡಿದ್ದಾರೆ.
13ಅವರು ಬೆಟ್ಟಗಳ ತುದಿಯಲ್ಲಿ ಬಲಿಗಳನ್ನು ಅರ್ಪಿಸುತ್ತಾರೆ. ಗುಡ್ಡಗಳ ಮೇಲೆ ಏಲಾ, ಲಿಬ್ನೆ, ಏಲಾ ಮರಗಳ ಕೆಳಗೆ ಅವುಗಳ ನೆರಳು ದಟ್ಟವಾಗಿರುವುದರಿಂದ ಧೂಪವನ್ನು ಸುಡುತ್ತಾರೆ. ಆದ್ದರಿಂದ ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವರು. ನಿಮ್ಮ ಸೊಸೆಯಂದಿರು ವ್ಯಭಿಚಾರಿಣಿಗಳಾಗುವರು.
14“ನಿಮ್ಮ ಪುತ್ರಿಯರು ವ್ಯಭಿಚಾರ ಮಾಡುವಾಗಲೂ, ನಿಮ್ಮ ಸೊಸೆಯಂದಿರು ವ್ಯಭಿಚಾರ ಮಾಡುವಾಗಲೂ ನಾನು ಅವರನ್ನು ಶಿಕ್ಷಿಸುವುದಿಲ್ಲ. ಏಕೆಂದರೆ ಪುರುಷರು ಸ್ವತಃ ವೇಶ್ಯೆಯರೊಂದಿಗೆ ವಾಸಿಸುತ್ತಾರೆ ಮತ್ತು ದೇವಾಲಯದ ವೇಶ್ಯೆಯರೊಂದಿಗೆ ಬಲಿ ಅರ್ಪಿಸುತ್ತಾರೆ. ಆದ್ದರಿಂದ ವಿವೇಕವಿಲ್ಲದ ಜನರು ನಾಶವಾಗುತ್ತಾರೆ.
15“ಇಸ್ರಾಯೇಲೇ, ನೀನು ವ್ಯಭಿಚಾರ ಮಾಡಿದರೂ, ಯೆಹೂದವು ಆ ದೋಷಕ್ಕೆ ಒಳಗಾಗದಿರಲಿ. “ಗಿಲ್ಗಾಲಿಗೆ ಹೋಗದೆ, ಇಲ್ಲವೆ ಬೇತಾವೆನಿಗೆ ಏರದೇ, ‘ಯೆಹೋವ ದೇವರ ಜೀವದಾಣೆ,’ ಎಂದು ಪ್ರಮಾಣ ಮಾಡದೆ ಇರಲಿ.
16ಹಠಮಾರಿ ಹಸುವಿನ ಹಾಗೆ ಇಸ್ರಾಯೇಲು ಹಟಮಾರಿಯಾಗಿದೆ. ಈಗ ಯೆಹೋವ ದೇವರು ಹುಲ್ಲುಗಾವಲಲ್ಲಿರುವ ಕುರಿಮರಿಯ ಹಾಗೆ ಅವರನ್ನು ಹೇಗೆ ಮೇಯಿಸುವರು?
17ಎಫ್ರಾಯೀಮನು ವಿಗ್ರಹಗಳಿಗೆ ಸೇರಿಕೊಂಡಿದ್ದಾನೆ. ಅವನನ್ನು ಅವನಷ್ಟಕ್ಕೆ ಬಿಟ್ಟುಬಿಡು.
18ಅವರು ಮಿತಿಮೀರಿ ಕುಡಿಯುತ್ತಾರೆ. ಅವರು ಯಾವಾಗಲೂ ವ್ಯಭಿಚಾರ ಮಾಡುವವರಾಗಿದ್ದಾರೆ. ಅವರನ್ನು ಆಳುವವರು ಅವಮಾನ ಕಾರ್ಯಗಳಲ್ಲಿ ಇಷ್ಟಪಡುತ್ತಾರೆ.
19ಗಾಳಿಯು ಅವರನ್ನು ತನ್ನ ರೆಕ್ಕೆಗಳಿಂದ ಬಂಧಿಸಿದೆ. ಅವರು ತಮ್ಮ ಬಲಿಗಳಿಂದ ನಾಚಿಕೆಪಡುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.