Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಹೋಶೇಯ 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ಪೂರ್ವದಲ್ಲಿ ಎಫ್ರಾಯೀಮು ಮಾತನಾಡುವಾಗ, ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು. ಆದರೆ ಬಾಳನ ಆರಾಧನೆಯಲ್ಲಿ ಅವನು ಅಪರಾಧಿಯಾಗಿ ಸತ್ತನು.
2ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ. ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ, ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ. ಅದೆಲ್ಲವೂ ಕಮ್ಮಾರರ ಕೈಕೆಲಸವೇ. ಅವರು ನರಬಲಿಯನ್ನು ಅರ್ಪಿಸುತ್ತಾರೆ, ಬಸವನ ವಿಗ್ರಹಕ್ಕೆ ಮುದ್ದಿಡುತ್ತಾರೆ,” ಎಂದು ಜನರು ಅವರ ಬಗ್ಗೆ ಹೇಳುತ್ತಾರೆ.
3ಆದ್ದರಿಂದ ಅವರು ಪ್ರಾತಃಕಾಲದ ಮಂಜಿನ ಹಾಗೆಯೂ, ಬೇಗನೆ ಮಾಯವಾಗುವ ಇಬ್ಬನಿಯ ಹಾಗೆಯೂ, ಸುಳಿಗಾಳಿಯು ಕಣದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ, ಚಿಮಿಣಿಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
4ಆದರೂ ನಾನು ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದ, ನಾನೇ ನಿನ್ನ ದೇವರಾಗಿರುವ ಯೆಹೋವನಾಗಿದ್ದೇನೆ. ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು. ಏಕೆಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
5ನಾನು ನಿನ್ನನ್ನು ಮರುಭೂಮಿಯಲ್ಲಿಯೂ, ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
6ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು. ಅವರು ತೃಪ್ತರಾದಾಗ, ಅಹಂಕಾರಿಗಳಾದರು, ಅನಂತರ ಅವರು ನನ್ನನ್ನು ಮರೆತುಬಿಟ್ಟರು.
7ಆದ್ದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು. ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚುಹಾಕುವೆನು.
8ನಾನು ಮರಿಯನ್ನು ಕಳೆದುಕೊಂಡ ಕರಡಿಯಂತೆ ಅವರನ್ನು ಎದುರುಗೊಳ್ಳುವೆನು. ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು. ನಾನು ಸಿಂಹದ ಹಾಗೆ ಅವರನ್ನು ನುಂಗುವೆನು. ಕಾಡುಮೃಗವು ಅವರನ್ನು ಸೀಳಿ ಹಾಕುವುದು.
9“ಇಸ್ರಾಯೇಲೇ, ನೀನು ನಿನ್ನ ಬೆಂಬಲವಾದ ನನಗೆ ತಿರುಗಿಬಿದ್ದದರಿಂದ ನಾಶವಾಗಿದ್ದೀ.
10ಈಗ ನಿನ್ನ ಅರಸನು ಎಲ್ಲಿ? ನಿನ್ನ ಪಟ್ಟಣಗಳೆಲ್ಲಾ ನಿನ್ನವರನ್ನು ಉದ್ಧರಿಸುವನೋ? ನನಗೆ ರಾಜ್ಯವನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು ಎಂದು ನನ್ನನ್ನು ಕೇಳಿಕೊಂಡಿಯಷ್ಟೆ. ಆ ನ್ಯಾಯಾಧಿಪತಿಗಳು ಎಲ್ಲಿ?
11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು ಮತ್ತು ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
12ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ. ಅವನ ಪಾಪವು ದಾಖಲೆಯಾಗಿದೆ.
13ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ. ಅಷ್ಟೇ ಅಲ್ಲ. ಅದೊಂದು ಮಂಕು ಮಗುವಿನಂತಿದೆ. ಹುಟ್ಟಿ, ಹೊರಗೆ ಬರಬಹುದಾದರೂ, ಅವನು ಬಾರದೆ ಇದ್ದಾನೆ.
14“ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು. ಮರಣದಿಂದ ಅವರನ್ನು ಬಿಡಿಸುವೆನು. ಮರಣವೇ ನಿನ್ನ ಉಪದ್ರವ ಎಲ್ಲಿ? ಪಾತಾಳವೇ ನಿನ್ನ ವಿನಾಶವೆಲ್ಲಿ? “ಅನುಕಂಪವು ನನ್ನಿಂದ ದೂರವಾಗಿದೆ.
15ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ, ಕಾಡಿನಿಂದ ಯೆಹೋವ ದೇವರು ಬೀಸಮಾಡುವ ಪೂರ್ವ ಗಾಳಿಯು ಬರಲು, ಅವನ ಬುಗ್ಗೆಯು ಬತ್ತುವುದು. ಅವನ ಒರತೆಯು ಒಣಗುವುದು. ಅವನ ಬೊಕ್ಕಸಗಳ ನಿಧಿಯನ್ನು ಶತ್ರುಗಳು ಸೂರೆಮಾಡುವರು.
16ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ, ತನ್ನ ದೋಷಫಲವನ್ನು ಅನುಭವಿಸಲೇಬೇಕು. ಅದರ ಜನರು ಖಡ್ಗದಿಂದ ಹತರಾಗುವರು, ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು. ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.