Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಇಬ್ರಿಯರಿಗೆ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನಾವು ಈಗ ಹೇಳುವ ವಿಷಯಗಳ ಮುಖ್ಯಾಂಶ ಇದು: ಪರಲೋಕದೊಳಗೆ ಮಹೋನ್ನತ ದೇವರ ಸಿಂಹಾಸನದ ಬಲಗಡೆಯಲ್ಲಿ ಕುಳಿತುಕೊಂಡಿರುವಂಥ ಮಹಾಯಾಜಕ ಒಬ್ಬರು ನಮಗಿದ್ದಾರೆ.
2ಕ್ರಿಸ್ತ ಯೇಸು ಆಗಿರುವ ಇವರು ಪವಿತ್ರ ಸ್ಥಾನದಲ್ಲಿ ಅಂದರೆ, ಮನುಷ್ಯರಿಂದಲ್ಲ ದೇವರೇ ನಿರ್ಮಿಸಿದ ಪವಿತ್ರ ಸ್ಥಾನದ ನಿಜ ಗುಡಾರದಲ್ಲಿ ಸೇವೆಮಾಡುವವರಾಗಿದ್ದಾರೆ.
3ಪ್ರತಿಯೊಬ್ಬ ಮಹಾಯಾಜಕನು ಕಾಣಿಕೆಗಳನ್ನೂ ಯಜ್ಞಗಳನ್ನೂ ಸಮರ್ಪಿಸುವುದಕ್ಕೆ ನೇಮಕವಾಗಿರುತ್ತಾನೆ. ಆದ್ದರಿಂದ ಸಮರ್ಪಿಸುವುದಕ್ಕೆ ಯೇಸುವಿಗೆ ಸಹ ಏನಾದರೂ ಇರುವುದು ಅವಶ್ಯವಾಗಿದೆ.
4ಯೇಸು ಭೂಮಿಯ ಮೇಲೆ ಇರುವುದಾದರೆ ಯಾಜಕರೇ ಆಗುತ್ತಿರಲಿಲ್ಲ. ಏಕೆಂದರೆ ಮೋಶೆಯ ನಿಯಮದ ಪ್ರಕಾರ ಕಾಣಿಕೆಗಳನ್ನು ಸಮರ್ಪಿಸುವವರು ಇದ್ದಾರಲ್ಲಾ.
5ಅವರು ಪರಲೋಕದಲ್ಲಿರುವವುಗಳ ನಿದರ್ಶನವೂ ಛಾಯೆಯೂ ಆಗಿರುವ ಆಲಯಗಳಲ್ಲಿ ಸೇವೆಯನ್ನು ನಡೆಸುವರು. ಇದರಂತೆಯೇ ಮೋಶೆಯು ಗುಡಾರವನ್ನು ಮಾಡುವುದಕ್ಕಿದ್ದಾಗ, “ನೋಡು, ನಾನು ಬೆಟ್ಟದಲ್ಲಿ ನಿನಗೆ ತೋರಿಸಿದ ಮಾದರಿಯ ಪ್ರಕಾರವೇ ಎಲ್ಲವನ್ನೂ ಮಾಡಬೇಕು,” ಎಂದು ದೇವರಿಂದ ಎಚ್ಚರಿಕೆ ಕೊಡಲಾಗಿತ್ತಲ್ಲವೇ?
6ಯೇಸುವಾದರೋ ಈಗ ಅದಕ್ಕಿಂತ ಶ್ರೇಷ್ಠ ಸೇವೆಯನ್ನು ಹೊಂದಿದವರಾಗಿದ್ದಾರೆ. ಅಷ್ಟೇ ಅಲ್ಲದೆ ಇವರು ಉತ್ತಮ ವಾಗ್ದಾನಗಳ ಮೇಲೆ ಸ್ಥಾಪಿತವಾದ ಒಡಂಬಡಿಕೆಗೆ ಸಹ ಮಧ್ಯಸ್ಥರಾಗಿದ್ದಾರೆ.
7ಆ ಮೊದಲನೆಯ ಒಡಂಬಡಿಕೆಯು ತಪ್ಪಿಲ್ಲದ್ದಾಗಿದ್ದರೆ, ಎರಡನೆಯ ಒಡಂಬಡಿಕೆಯ ಅವಶ್ಯಕತೆಯೇ ಇರುತ್ತಿರಲಿಲ್ಲ.
8ಆದರೆ ದೇವರು ಜನರಲ್ಲಿ ತಪ್ಪನ್ನು ಕಂಡುಹಿಡಿದು ಹೀಗೆಂದರು, “ಇಗೋ, ನಾನು ಇಸ್ರಾಯೇಲ್ ವಂಶದವರೊಂದಿಗೂ ಯೂದ ವಂಶದವರೊಂದಿಗೂ ಒಂದು ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವ ದಿನಗಳು ಬರುವವು.
9ಈ ಒಡಂಬಡಿಕೆಯು ನಾನು ಇವರ ಪೂರ್ವಜರನ್ನು ಕೈಹಿಡಿದು, ಈಜಿಪ್ಟ್ ದೇಶದಿಂದ ಕರೆದುಕೊಂಡು ಬಂದ ದಿವಸದಂದು ಅವರ ಸಂಗಡ ಮಾಡಿಕೊಂಡ ಒಡಂಬಡಿಕೆಯಂಥದಲ್ಲ. ಏಕೆಂದರೆ ಅವರು ನನ್ನ ಒಡಂಬಡಿಕೆಯಲ್ಲಿ ಸ್ಥಿರವಾಗಿ ನಿಲ್ಲಲಿಲ್ಲ. ಆದ್ದರಿಂದ ನಾನು ಅವರನ್ನು ಲಕ್ಷಿಸಲಿಲ್ಲ, ಎಂದು ಕರ್ತದೇವರು ಹೇಳುತ್ತಾರೆ.
10ಆ ದಿನಗಳ ತರುವಾಯ ನಾನು ಇಸ್ರಾಯೇಲ್ ವಂಶದವರೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯು ಹೀಗಿರುವುದು: ನಾನು ನನ್ನ ನಿಯಮಗಳನ್ನು ಅವರ ಮನಸ್ಸಿನಲ್ಲಿ ಇಡುವೆನು. ನಾನು ಅವರ ಹೃದಯಗಳ ಮೇಲೆ ಅವುಗಳನ್ನು ಬರೆಯುವೆನು. ನಾನು ಅವರಿಗೆ ದೇವರಾಗಿರುವೆನು. ಅವರು ನನಗೆ ಪ್ರಜೆಯಾಗಿರುವರು.
11ಇದಲ್ಲದೆ ಪ್ರತಿಯೊಬ್ಬನು ತನ್ನ ನೆರೆಯವನಿಗೂ, ತನ್ನ ಸಹೋದರನಿಗೂ, ‘ಕರ್ತದೇವರನ್ನು ಅರಿತುಕೊಳ್ಳಿರಿ,’ ಎಂದು ಬೋಧಿಸಬೇಕಾಗಿಲ್ಲ. ಏಕೆಂದರೆ ಚಿಕ್ಕವರಿಂದ ದೊಡ್ಡವರವರೆಗೂ ಎಲ್ಲರೂ ನನ್ನನ್ನು ಅರಿತುಕೊಳ್ಳುವರು.
12ನಾನು ಅವರ ದುಷ್ಕೃತ್ಯಗಳನ್ನು ಕ್ಷಮಿಸುವೆನು ಮತ್ತು ಅವರ ಪಾಪಗಳನ್ನು ಇನ್ನೆಂದಿಗೂ ನನ್ನ ನೆನಪಿಗೆ ತಂದುಕೊಳ್ಳುವುದಿಲ್ಲ, ಎಂದು ಕರ್ತದೇವರು ನುಡಿಯುತ್ತಾರೆ.”
13ಇಲ್ಲಿ ದೇವರು “ಹೊಸ ಒಡಂಬಡಿಕೆ” ಎಂದು ಹೇಳಿರುವಾಗ ಮೊದಲಿದ್ದದ್ದನ್ನು ಹಳೆಯದಾಗಿ ಮಾಡಿದ್ದಾರೆ. ಅದು ಹಳೆಯದಾಗುತ್ತಾ ಕ್ಷೀಣವಾಗಿ ಅಳಿದು ಹೋಗಲಿದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.