Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆದಿಕಾಂಡ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಭೂಮಿಯ ಮೇಲೆ ಜನರ ಸಂಖ್ಯೆ ಹೆಚ್ಚಾಗತೊಡಗಿದಾಗ ಅವರಿಗೆ ಪುತ್ರಿಯರು ಹುಟ್ಟಿದರು.
2ಆಗ ದೇವಪುತ್ರರು, ಮನುಷ್ಯ ಪುತ್ರಿಯರ ಸೌಂದರ್ಯವನ್ನು ಕಂಡು ಅವರನ್ನು ಆರಿಸಿಕೊಂಡು, ತಮಗೆ ಹೆಂಡತಿಯರನ್ನಾಗಿ ಮಾಡಿಕೊಂಡರು.
3ಆಗ ಯೆಹೋವ ದೇವರು, “ನನ್ನ ಆತ್ಮವು ಮನುಷ್ಯರಲ್ಲಿ ನಿತ್ಯವಾಗಿ ಇರುವುದಿಲ್ಲ. ಏಕೆಂದರೆ ಅವರು ಮರ್ತ್ಯರೇ. ಆದರೂ ಅವರ ಆಯುಷ್ಯವು ನೂರ ಇಪ್ಪತ್ತು ವರ್ಷಗಳಾಗಿರುವುದು,” ಎಂದರು.
4ಆ ದಿನಗಳಲ್ಲಿ ಭೂಮಿಯ ಮೇಲೆ ನೆಫೀಲಿಯೆಂಬ ರಾಕ್ಷಸ ವಂಶದವರು ಇದ್ದರು. ನಂತರದಲ್ಲಿಯೂ ಇದ್ದರು. ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಕೂಡಿದಾಗ, ಮಕ್ಕಳು ಹುಟ್ಟಿದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಿಗಳು.
5ಮನುಷ್ಯನ ದುಷ್ಟತನವು ಭೂಮಿಯಲ್ಲಿ ಹೆಚ್ಚಿದ್ದನ್ನೂ ಅವನ ಹೃದಯದ ಆಲೋಚನೆಗಳೆಲ್ಲವೂ ಯಾವಾಗಲೂ ಬರೀ ಕೆಟ್ಟದ್ದೆಂದೂ ಯೆಹೋವ ದೇವರು ಕಂಡರು.
6ಯೆಹೋವ ದೇವರು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ನಿಟ್ಟುಸಿರುಬಿಟ್ಟು, ತಮ್ಮ ಹೃದಯದಲ್ಲಿ ನೊಂದುಕೊಂಡರು.
7ಇದಲ್ಲದೆ ಯೆಹೋವ ದೇವರು, “ನಾನು ಸೃಷ್ಟಿಸಿದ ಮನುಷ್ಯನಿಂದ ಹಿಡಿದು, ಸಕಲ ಪ್ರಾಣಿ, ಆಕಾಶದ ಪಕ್ಷಿಗಳನ್ನೂ ನೆಲದ ಮೇಲೆ ಹರಿದಾಡುವ ಜೀವಿಗಳನ್ನು, ಭೂಮಿಯ ಮೇಲಿನಿಂದ ಎಲ್ಲವನ್ನು ನಾಶಮಾಡುವೆನು. ನಾನು ಅವರನ್ನು ಉಂಟುಮಾಡಿದ್ದಕ್ಕೆ ದುಃಖಪಡುತ್ತೇನೆ,” ಎಂದರು.
8ಆದರೆ ನೋಹನಿಗೆ ಯೆಹೋವ ದೇವರ ದಯೆ ದೊರಕಿತು. ನೋಹ ಮತ್ತು ಜಲಪ್ರಳಯ
9ಇದು ನೋಹನ ಮತ್ತು ಅವನ ವಂಶದವರ ಚರಿತ್ರೆ: ನೋಹನು ನೀತಿವಂತನೂ ತನ್ನ ಕಾಲದವರಲ್ಲಿ ನಿರ್ದೋಷಿಯೂ ಆಗಿದ್ದನು. ಅವನು ದೇವರೊಂದಿಗೆ ವಿಶ್ವಾಸದಿಂದ ನಡೆಯುತ್ತಿದ್ದನು.
10ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳಿದ್ದರು.
11ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟು ಹೋಗಿದ್ದರು. ಹಿಂಸಾಚಾರವು ಲೋಕವನ್ನು ತುಂಬಿಕೊಂಡಿತ್ತು.
12ದೇವರು ಭೂಮಿಯನ್ನು ನೋಡಲಾಗಿ ಅದು ಕೆಟ್ಟುಹೋಗಿತ್ತು, ಮನುಷ್ಯರೆಲ್ಲರೂ ಭೂಮಿಯ ಮೇಲೆ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
13ಆಗ ದೇವರು ನೋಹನಿಗೆ, “ನಾನು ಮನುಷ್ಯರೆಲ್ಲರಿಗೂ ಅಂತ್ಯವನ್ನು ತೀರ್ಮಾನಿಸಿದ್ದೇನೆ. ಅವರಿಂದ ಭೂಮಿಯು ಹಿಂಸಾಚಾರದಿಂದ ತುಂಬಿದೆ. ನಾನು ಭೂಮಿಯೊಂದಿಗೆ ಅವರನ್ನೂ ನಾಶಮಾಡುವೆನು.
14ಆದ್ದರಿಂದ ನಿನಗೋಸ್ಕರವಾಗಿ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ಕೋಣೆಗಳನ್ನು ಮಾಡು, ಅದರ ಒಳಭಾಗಕ್ಕೂ ಹೊರಭಾಗಕ್ಕೂ ರಾಳವನ್ನು ಹಚ್ಚು.
15ನೀನು ಅದನ್ನು ಈ ರೀತಿಯಾಗಿ ಮಾಡತಕ್ಕದ್ದು: ನಾವೆಯ ಉದ್ದವು ಸುಮಾರು ಒಂದುನೂರ ಮೂವತ್ತೈದು ಮೀಟರ್, ಅದರ ಅಗಲ ಇಪ್ಪತ್ತಮೂರು ಮೀಟರ್, ಅದರ ಎತ್ತರ ಹದಿನಾಲ್ಕು ಮೀಟರ್ ಇರಬೇಕು.
16ಅದಕ್ಕೆ ಚಾವಣಿಯನ್ನು ಮಾಡು, ಅದರ ಕೆಳಗೆ ಹದಿನೆಂಟು ಇಂಚಿನ ಕಿಟಕಿಯನ್ನು ನಾವೆಯ ಸುತ್ತಲೂ ಮಾಡಬೇಕು; ಅದರ ಪಕ್ಕದಲ್ಲಿ ನಾವೆಯ ಬಾಗಿಲನ್ನು ಇಡಬೇಕು. ಕೆಳಗಿನದು, ಎರಡನೆಯದು, ಮೂರನೆಯದು ಎಂಬ ಮೂರು ಅಂತಸ್ತುಗಳನ್ನು ಮಾಡಬೇಕು.
17ನಾನು ಆಕಾಶದ ಕೆಳಗಿರುವ ಜೀವಶ್ವಾಸವುಳ್ಳ ಸಕಲ ಪ್ರಾಣಿಗಳನ್ನು ನಾಶಮಾಡುವುದಕ್ಕೆ ಜಲಪ್ರಳಯವನ್ನು ಭೂಮಿಯ ಮೇಲೆ ಬರಮಾಡುತ್ತೇನೆ. ಆಗ ಭೂಮಿಯಲ್ಲಿರುವುದೆಲ್ಲವೂ ನಾಶವಾಗುವುದು.
18ಆದರೆ ನಾನು ನಿನ್ನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸುವೆನು. ನೀನು, ನಿನ್ನ ಸಂಗಡ ನಿನ್ನ ಮಕ್ಕಳು, ನಿನ್ನ ಹೆಂಡತಿ ಹಾಗೂ ಸೊಸೆಯರು ನಾವೆಯೊಳಗೆ ಸೇರಬೇಕು.
19ಜೀವಿಗಳ ಪ್ರತಿಜಾತಿಯಲ್ಲೂ ಒಂದು ಗಂಡು, ಒಂದು ಹೆಣ್ಣು; ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ ನಿನ್ನೊಂದಿಗೆ ಜೀವಂತವಾಗಿ ಉಳಿಸಿಕೊಳ್ಳಬೇಕು.
20ಪಕ್ಷಿಗಳಲ್ಲಿ ಅವುಗಳ ಜಾತಿಗನುಸಾರವಾಗಿ, ಪ್ರಾಣಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಮತ್ತು ನೆಲದ ಮೇಲೆ ಹರಿದಾಡುವ ಸಕಲ ಜೀವಿಗಳಲ್ಲಿ ಅವುಗಳ ಜಾತಿಗನುಸಾರವಾಗಿ ಎರಡೆರಡು ಬದುಕಿಬಾಳಲು ಅವುಗಳನ್ನು ನೀನು ಕಾಪಾಡುವಂತೆ ನಿನ್ನ ಬಳಿಗೆ ಬರುವುವು.
21ನೀನು, ಎಲ್ಲ ವಿಧವಾದ ಆಹಾರ ಪದಾರ್ಥಗಳನ್ನು ಕೂಡಿಸಿಡಬೇಕು. ಅದು ನಿಮಗೂ ಮತ್ತು ಪ್ರಾಣಿಗಳಿಗೂ ಆಹಾರವಾಗಿರಬೇಕು,” ಎಂದು ಹೇಳಿದರು.
22ದೇವರು ಆಜ್ಞಾಪಿಸಿದ ಪ್ರಕಾರವೇ ನೋಹನು ಎಲ್ಲವನ್ನು ಮಾಡಿದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.