Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆದಿಕಾಂಡ 45

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಗ ಯೋಸೇಫನು ತನ್ನ ಸುತ್ತಲೂ ನಿಂತಿದ್ದವರ ಮುಂದೆ ಮನಸ್ಸನ್ನು ಬಿಗಿಹಿಡಿದುಕೊಳ್ಳಲು ಆಗಲಿಲ್ಲ. “ಎಲ್ಲರನ್ನೂ ತನ್ನ ಬಳಿಯಿಂದ ಹೊರಗೆ ಹೋಗುವಂತೆ ಮಾಡಿರಿ,” ಎಂದು ಕೂಗಿದನು. ಯೋಸೇಫನು ತನ್ನ ಸಹೋದರರಿಗೆ ತನ್ನನ್ನು ಪರಿಚಯಿಸಿಕೊಳ್ಳಲು ಹೋದಾಗ, ಅಲ್ಲಿ ಬೇರೆ ಯಾರೂ ಇರಲಿಲ್ಲ.
2ಆಗ ಅವನು ತನ್ನ ಸ್ವರವೆತ್ತಿ ಅತ್ತಾಗ, ಹೊರಗಿದ್ದ ಈಜಿಪ್ಟಿನವರೂ, ಫರೋಹನ ಮನೆಯವರೂ ಕೇಳಿಸಿಕೊಂಡರು.
3ಯೋಸೇಫನು ತನ್ನ ಸಹೋದರರಿಗೆ, “ನಾನು ಯೋಸೇಫನು! ನನ್ನ ತಂದೆಯು ಬದುಕಿದ್ದಾನೋ?” ಎಂದನು. ಅದಕ್ಕೆ ಅವನ ಸಹೋದರರು ಅವನ ಮುಂದೆ ಕಳವಳಗೊಂಡವರಾಗಿ, ಅವನಿಗೆ ಉತ್ತರ ಕೊಡಲಾರದೆ ಹೋದರು.
4ಆಗ ಯೋಸೇಫನು ತನ್ನ ಸಹೋದರರಿಗೆ, “ನನ್ನ ಬಳಿಗೆ ಬನ್ನಿರಿ,” ಎಂದು ಕೇಳಿಕೊಂಡನು. ಅವರು ಹತ್ತಿರಕ್ಕೆ ಬಂದಾಗ ಅವನು, “ನೀವು ಈಜಿಪ್ಟಿಗೆ ಮಾರಿದ ನಿಮ್ಮ ಸಹೋದರನಾದ ಯೋಸೇಫನು ನಾನೇ!
5ಆದರೆ ನೀವು ನನ್ನನ್ನು ಇಲ್ಲಿಗೆ ಮಾರಿದ್ದಕ್ಕಾಗಿ ಈಗ ವ್ಯಸನಪಟ್ಟು ನಿಮ್ಮ ಮೇಲೆ ನೀವೇ ಸಿಟ್ಟುಮಾಡಿಕೊಳ್ಳಬೇಡಿರಿ. ಪ್ರಾಣ ಸಂರಕ್ಷಣೆಗಾಗಿ ದೇವರು ನನ್ನನ್ನು ನಿಮ್ಮ ಮುಂದೆ ಕಳುಹಿಸಿದ್ದಾರೆ.
6ಏಕೆಂದರೆ ಈ ಎರಡು ವರ್ಷಗಳವರೆಗೆ ಭೂಮಿಯಲ್ಲಿ ಕ್ಷಾಮವಿತ್ತು. ಇದಲ್ಲದೆ ಇನ್ನೂ ಐದು ವರ್ಷಗಳವರೆಗೆ ಬಿತ್ತುವುದೂ, ಕೊಯ್ಯುವುದೂ ಇರುವುದಿಲ್ಲ.
7ಆದ್ದರಿಂದ ನಿಮ್ಮ ಸಂತತಿಯನ್ನು ಭೂಮಿಯಲ್ಲಿ ಉಳಿಸುವುದಕ್ಕೂ, ದೊಡ್ಡ ಬರಗಾಲದಿಂದ ನಿಮ್ಮ ಪ್ರಾಣಗಳನ್ನು ಉಳಿಸುವುದಕ್ಕೂ ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ.
8“ಆದ್ದರಿಂದ ಈಗ ನೀವಲ್ಲ, ದೇವರು ತಾವೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ. ದೇವರು ನನ್ನನ್ನು ಫರೋಹನಿಗೆ ತಂದೆಯಾಗಿಯೂ, ಅವನ ಮನೆಗೆಲ್ಲಾ ಯಜಮಾನನನ್ನಾಗಿಯೂ ಈಜಿಪ್ಟ್ ದೇಶಕ್ಕೆಲ್ಲಾ ಅಧಿಕಾರಿಯನ್ನಾಗಿಯೂ ಮಾಡಿದ್ದಾರೆ.
9ನೀವು ಶೀಘ್ರವಾಗಿ ನನ್ನ ತಂದೆಯ ಬಳಿಗೆ ಹೊರಟುಹೋಗಿ, ‘ನಿನ್ನ ಮಗ ಯೋಸೇಫನನ್ನು ದೇವರು ಈಜಿಪ್ಟಿಗೆಲ್ಲಾ ಪ್ರಭುವನ್ನಾಗಿ ಮಾಡಿದ್ದಾರೆ, ತಡಮಾಡದೆ ನನ್ನ ಬಳಿಗೆ ಬೇಗ ಬಾ.
10ಗೋಷೆನ್ ಪ್ರದೇಶದಲ್ಲಿ ನೀನು ವಾಸವಾಗಿದ್ದು ನಿನ್ನ ಮಕ್ಕಳೂ, ಮೊಮ್ಮಕ್ಕಳೂ, ದನಕುರಿಗಳೂ, ನಿನಗಿದ್ದದ್ದೆಲ್ಲವೂ ನನ್ನ ಸಮೀಪದಲ್ಲಿರಬೇಕು.
11ಅಲ್ಲಿ ನಿನ್ನನ್ನು ಪೋಷಿಸುವೆನು. ಏಕೆಂದರೆ ಇನ್ನೂ ಕ್ಷಾಮದ ಐದು ವರ್ಷಗಳಿವೆ. ನಿನಗೂ, ನಿನ್ನ ಮನೆಗೂ, ನಿನಗಿರುವುದೆಲ್ಲದಕ್ಕೂ ಬಡತನವಾಗಬಾರದು’ ಎಂದು ಹೇಳಿರಿ.
12“ನಿಮ್ಮ ಸಂಗಡ ಮಾತನಾಡುವುದು ನನ್ನ ಬಾಯಿಯೇ ಎಂದು ನಿಮ್ಮ ಕಣ್ಣುಗಳೂ, ನನ್ನ ಸಹೋದರ ಬೆನ್ಯಾಮೀನನ ಕಣ್ಣುಗಳೂ ನೋಡಿವೆ.
13ಹೀಗಿರಲಾಗಿ ನೀವು ಈಜಿಪ್ಟ್ ದೇಶದಲ್ಲಿ ನನಗಿರುವ ಎಲ್ಲಾ ಘನತೆಯನ್ನೂ, ನೀವು ನೋಡಿದ್ದೆಲ್ಲವನ್ನೂ ನನ್ನ ತಂದೆಗೆ ತಿಳಿಸಿ, ನನ್ನ ತಂದೆಯನ್ನು ಶೀಘ್ರವಾಗಿ ಇಲ್ಲಿಗೆ ಕರೆದುಕೊಂಡು ಬನ್ನಿರಿ,” ಎಂದನು.
14ಅವನು ತನ್ನ ತಮ್ಮ ಬೆನ್ಯಾಮೀನನ ಕುತ್ತಿಗೆಯನ್ನು ಅಪ್ಪಿಕೊಂಡು ಅತ್ತನು, ಬೆನ್ಯಾಮೀನನೂ ಅತ್ತನು.
15ಇದಲ್ಲದೆ ತನ್ನ ಸಹೋದರರಿಗೆಲ್ಲಾ ಮುದ್ದಿಟ್ಟು ಅವರನ್ನು ಅಪ್ಪಿಕೊಂಡು ಅತ್ತನು. ತರುವಾಯ ಅವನ ಸಹೋದರರು ಅವನ ಸಂಗಡ ಮಾತನಾಡಿದರು.
16ಯೋಸೇಫನ ಸಹೋದರರು ಬಂದಿದ್ದಾರೆಂಬ ಸುದ್ದಿಯನ್ನು ಫರೋಹನ ಮನೆಯವರು ಕೇಳಿದಾಗ ಫರೋಹನಿಗೂ, ಅವನ ಸೇವಕರಿಗೂ ಅದು ಮೆಚ್ಚಿಗೆಯಾಗಿತ್ತು.
17ಆಗ ಫರೋಹನು ಯೋಸೇಫನಿಗೆ, “ನಿನ್ನ ಸಹೋದರರಿಗೆ ಹೀಗೆ ಮಾಡಲು ಹೇಳು: ‘ನೀವು ನಿಮ್ಮ ವಾಹಕಪಶುಗಳ ಮೇಲೆ ವಸ್ತುಗಳನ್ನು ಹೇರಿ, ಕಾನಾನ್ ದೇಶಕ್ಕೆ ಹೋಗಿ,
18ನಿಮ್ಮ ತಂದೆಯನ್ನೂ, ಕುಟುಂಬದವರನ್ನೂ ಕರೆದುಕೊಂಡು ನನ್ನ ಬಳಿಗೆ ಬನ್ನಿರಿ. ಈಜಿಪ್ಟ್ ದೇಶದ ಸುಖಸಂಪತ್ತನ್ನು ಅನುಭವಿಸಬಹುದು.’
19“ಇದನ್ನು ಸಹ ನಿನ್ನ ಸಹೋದರರು ಹೇಳುವಂತೆ ನಿನಗೆ ಅಪ್ಪಣೆಯಾಗಿದೆ: ‘ಈಜಿಪ್ಟ್ ದೇಶದೊಳಗಿಂದ ನಿಮ್ಮ ಚಿಕ್ಕವರಿಗಾಗಿಯೂ, ಹೆಂಡತಿಯರಿಗಾಗಿಯೂ ಬಂಡಿಗಳನ್ನು ತೆಗೆದುಕೊಂಡುಹೋಗಿ, ನಿಮ್ಮ ತಂದೆಯನ್ನು ಕರೆದುಕೊಂಡು ಬನ್ನಿರಿ.
20ನಿಮ್ಮ ಸಾಮಗ್ರಿಗಳಿಗಾಗಿ ಚಿಂತಿಸಬೇಡಿರಿ. ಈಜಿಪ್ಟ್ ದೇಶದಲ್ಲಿರುವ ಉತ್ತಮವಾದದ್ದೆಲ್ಲಾ ನಿಮ್ಮದೇ,’ ” ಎಂದನು.
21ಇಸ್ರಾಯೇಲನ ಮಕ್ಕಳು ಹಾಗೆಯೇ ಮಾಡಿದರು. ಫರೋಹನ ಅಪ್ಪಣೆಯ ಪ್ರಕಾರ ಯೋಸೇಫನು ಅವರಿಗೆ ಬಂಡಿಗಳನ್ನೂ, ಮಾರ್ಗಕ್ಕೋಸ್ಕರ ಆಹಾರವನ್ನೂ ಕೊಟ್ಟನು.
22ಅವರೆಲ್ಲರಿಗೆ ಬದಲು ವಸ್ತ್ರಗಳನ್ನೂ, ಬೆನ್ಯಾಮೀನನಿಗೆ ಮುನ್ನೂರು ಬೆಳ್ಳಿಯ ನಾಣ್ಯಗಳನ್ನೂ, ಐದು ಬದಲು ವಸ್ತ್ರಗಳನ್ನೂ ಕೊಟ್ಟನು.
23ಇದಲ್ಲದೆ ಅವನು ತನ್ನ ತಂದೆಗೆ ಹತ್ತು ಕತ್ತೆಗಳು ಹೊರುವಷ್ಟು ಈಜಿಪ್ಟಿನ ಶ್ರೇಷ್ಠವಾದವುಗಳನ್ನೂ, ಪ್ರಯಾಣಕ್ಕೋಸ್ಕರ ತಂದೆಗೆ ಹತ್ತು ಹೆಣ್ಣು ಕತ್ತೆಗಳು ಹೊರುವಷ್ಟು ಗೋಧಿ, ರೊಟ್ಟಿ, ಆಹಾರಗಳನ್ನೂ ಕಳುಹಿಸಿದನು.
24ಯೋಸೇಫನು ಅವರಿಗೆ, “ಮಾರ್ಗದಲ್ಲಿ ಜಗಳವಾಡಬೇಡಿರಿ,” ಎಂದು ಹೇಳಿ ಕಳುಹಿಸಿದನು.
25ಅವರು ಈಜಿಪ್ಟಿನಿಂದ ಹೊರಟುಹೋಗಿ ಕಾನಾನಿನಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದು,
26“ಯೋಸೇಫನು ಇನ್ನೂ ಜೀವದಿಂದ ಇದ್ದಾನೆ! ಅವನೇ ಈಜಿಪ್ಟ್ ದೇಶವನ್ನೆಲ್ಲಾ ಆಳುತ್ತಿದ್ದಾನೆ,” ಎಂದು ಅವನಿಗೆ ತಿಳಿಸಿದಾಗ, ಅವನು ಆಶ್ಚರ್ಯಪಟ್ಟನು, ಅವರನ್ನು ನಂಬಲಿಲ್ಲ.
27ಆದರೆ ಯೋಸೇಫನು ತಮಗೆ ಹೇಳಿದ ಎಲ್ಲಾ ಮಾತುಗಳನ್ನು ಅವರು ಯಾಕೋಬನಿಗೆ ಹೇಳಿದರು. ಅವನನ್ನು ಕರೆದುಕೊಂಡು ಹೋಗುವುದಕ್ಕೆ ಯೋಸೇಫನು ಕಳುಹಿಸಿದ ರಥಗಳನ್ನು ಅವನು ನೋಡಿದಾಗ ಯಾಕೋಬನ ಆತ್ಮವು ಉಜ್ಜೀವಿಸಿತು.
28ಕೊನೆಗೆ ಇಸ್ರಾಯೇಲನು, “ನನ್ನ ಮಗ ಯೋಸೇಫನು ಇನ್ನೂ ಜೀವಂತವಾಗಿದ್ದಾನೆ, ಅಷ್ಟೇ ಸಾಕು! ನಾನು ಸಾಯುವುದಕ್ಕಿಂತ ಮುಂಚೆ ಹೋಗಿ ಅವನನ್ನು ನೋಡುತ್ತೇನೆ,” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.