Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆದಿಕಾಂಡ 42

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ಯಾಕೋಬನು ತಿಳಿದಾಗ, ಅವನು ತನ್ನ ಪುತ್ರರಿಗೆ, “ನೀವು ಒಬ್ಬರನ್ನೊಬ್ಬರು ನೋಡಿಕೊಂಡು ಸುಮ್ಮನಿರುವುದೇನು?” ಎಂದನು.
2ಅವನು ಮುಂದುವರಿಸಿ, “ಈಜಿಪ್ಟಿನಲ್ಲಿ ಧಾನ್ಯ ಉಂಟೆಂದು ನಾನು ಕೇಳಿದ್ದೇನೆ. ನಾವು ಸಾಯದೆ ಬದುಕುವಂತೆ ನೀವು ಅಲ್ಲಿಗೆ ಇಳಿದು ಹೋಗಿ, ನಮಗಾಗಿ ಅಲ್ಲಿಂದ ಧಾನ್ಯವನ್ನು ಕೊಂಡುಕೊಳ್ಳಿರಿ,” ಎಂದನು.
3ಆಗ ಯೋಸೇಫನ ಹತ್ತು ಮಂದಿ ಸಹೋದರರು ಈಜಿಪ್ಟಿನಲ್ಲಿ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಹೋದರು.
4ಆದರೆ ಯೋಸೇಫನ ಸಹೋದರನಾದ ಬೆನ್ಯಾಮೀನನನ್ನು ಕಳುಹಿಸಲಿಲ್ಲ. ಏಕೆಂದರೆ ಅವನಿಗೆ ಕೇಡು ಬಂದೀತೆಂದು ಹೇಳಿ, ಯಾಕೋಬನು ಅವನನ್ನು ಅವನ ಸಹೋದರರ ಸಂಗಡ ಕಳುಹಿಸಲಿಲ್ಲ.
5ಕಾನಾನ್ ದೇಶದಲ್ಲಿ ಬರವಿದ್ದುದರಿಂದ ಧಾನ್ಯವನ್ನು ಕೊಂಡುಕೊಳ್ಳುವುದಕ್ಕೆ ಬರುವವರೊಂದಿಗೆ ಇಸ್ರಾಯೇಲನ ಪುತ್ರರೂ ಬಂದರು.
6ಆಗ ಯೋಸೇಫನು ದೇಶದ ಮೇಲೆಲ್ಲಾ ಅಧಿಪತಿಯಾಗಿದ್ದನು. ದೇಶದ ಜನರಿಗೆಲ್ಲಾ ಧಾನ್ಯವನ್ನು ಮಾರುವವನು ಅವನೇ ಆಗಿದ್ದನು. ಹೀಗಿರಲಾಗಿ ಯೋಸೇಫನ ಸಹೋದರರು ಬಂದು, ತಮ್ಮ ಮುಖಗಳನ್ನು ನೆಲದ ಮಟ್ಟಿಗೂ ತಗ್ಗಿಸಿ ಅವನಿಗೆ ಅಡ್ಡಬಿದ್ದರು.
7ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ, ತಿಳಿಯದವನ ಹಾಗೆ ಅನ್ಯನಂತೆ ಕಠಿಣವಾದ ಮಾತುಗಳನ್ನಾಡಿ, ಅವರಿಗೆ, “ಎಲ್ಲಿಂದ ಬಂದಿರಿ?” ಎಂದನು. ಅದಕ್ಕೆ ಅವರು, “ಆಹಾರ ಕೊಂಡುಕೊಳ್ಳುವುದಕ್ಕೆ ಕಾನಾನ್ ದೇಶದಿಂದ ಬಂದೆವು,” ಎಂದರು.
8ಯೋಸೇಫನು ತನ್ನ ಸಹೋದರರನ್ನು ಗುರುತಿಸಿದರೂ, ಅವರು ಅವನನ್ನು ಗುರುತಿಸಲಿಲ್ಲ.
9ಆಗ ಯೋಸೇಫನು ತನ್ನ ಸಹೋದರರನ್ನು ನೋಡಿ ಅವರನ್ನು ಗುರುತಿಸಿದರೂ ಆಗ ಯೋಸೇಫನು ತಾನು ಅವರ ವಿಷಯದಲ್ಲಿ ಕಂಡ ಕನಸುಗಳನ್ನು ಜ್ಞಾಪಕಮಾಡಿಕೊಂಡು ಅವರಿಗೆ, “ನೀವು ಗೂಢಚಾರರು, ದೇಶದ ಒಳಗುಟ್ಟನ್ನು ನೋಡುವುದಕ್ಕೆ ಬಂದಿದ್ದೀರಿ,” ಎಂದನು.
10ಅದಕ್ಕವರು, “ಅಲ್ಲ, ನಮ್ಮ ಒಡೆಯಾ, ನಿನ್ನ ದಾಸರಾದ ನಾವು ಆಹಾರವನ್ನು ಕೊಂಡುಕೊಳ್ಳುವದಕ್ಕೆ ಬಂದಿದ್ದೇವೆ.
11ನಾವೆಲ್ಲರೂ ಒಬ್ಬ ಮನುಷ್ಯನ ಪುತ್ರರಾಗಿದ್ದು ಸತ್ಯವಂತರಾಗಿದ್ದೇವೆ. ಆದ್ದರಿಂದ ನಿನ್ನ ದಾಸರು ಗೂಢಚಾರರಲ್ಲ,” ಎಂದರು.
12ಆದರೆ ಅವನು ಅವರಿಗೆ, “ಇಲ್ಲ, ದೇಶದ ಒಳಗುಟ್ಟನ್ನು ನೀವು ತಿಳಿದುಕೊಳ್ಳುವುದಕ್ಕೋಸ್ಕರವೇ ಬಂದಿದ್ದೀರಿ,” ಎಂದನು.
13ಅದಕ್ಕವರು, “ನಿನ್ನ ದಾಸರಾದ ನಾವು ಹನ್ನೆರಡು ಸಹೋದರರು. ನಾವು ಕಾನಾನ್ ದೇಶದಲ್ಲಿರುವ ಒಬ್ಬ ಮನುಷ್ಯನ ಮಕ್ಕಳು. ಈಗ ಚಿಕ್ಕವನು ನನ್ನ ತಂದೆಯೊಂದಿಗೆ ಇದ್ದಾನೆ, ಮತ್ತೊಬ್ಬನು ಇಲ್ಲ,” ಎಂದು ಹೇಳಿದರು.
14ಆಗ ಯೋಸೇಫನು ಅವರಿಗೆ, “ನೀವು ಗೂಢಚಾರರೆಂದು ನಾನು ನಿಮಗೆ ಹೇಳಿದ ಮಾತು ನಿಜವೇ!
15ಈಗ ನಿಮ್ಮನ್ನು ನಾನು ಪರೀಕ್ಷಿಸುತ್ತೇನೆ. ಹೇಗೆಂದರೆ, ನಿಮ್ಮ ಚಿಕ್ಕ ಸಹೋದರನು ಇಲ್ಲಿಗೆ ಬಂದ ಹೊರತು, ಫರೋಹನ ಜೀವದಾಣೆ ನೀವು ಇಲ್ಲಿಂದ ಹೋಗಬಾರದು.
16ನಿಮ್ಮಲ್ಲಿಂದ ಒಬ್ಬನನ್ನು ಕಳುಹಿಸಿರಿ, ಅವನು ನಿಮ್ಮ ಸಹೋದರನನ್ನು ಕರೆದುಕೊಂಡು ಬರಲಿ. ಆದರೆ ನೀವು ಸೆರೆಮನೆಯಲ್ಲಿರಬೇಕು. ಹೀಗೆ ನಿಮ್ಮಲ್ಲಿ ಸತ್ಯವು ಉಂಟೋ, ಇಲ್ಲವೋ ಎಂದು ನಿಮ್ಮ ಮಾತುಗಳನ್ನು ಪರೀಕ್ಷಿಸುತ್ತೇನೆ. ಇಲ್ಲದಿದ್ದರೆ, ಫರೋಹನ ಜೀವದಾಣೆ ನಿಶ್ಚಯವಾಗಿ ನೀವು ಗೂಢಚಾರರು,” ಎಂದು ಹೇಳಿದನು.
17ಯೋಸೇಫನು ಎಲ್ಲರನ್ನು ಒಟ್ಟಿಗೆ ಮೂರು ದಿನಗಳು ಸೆರೆಯಲ್ಲಿಟ್ಟನು.
18ಮೂರನೆಯ ದಿನದಲ್ಲಿ ಯೋಸೇಫನು ಅವರಿಗೆ, “ನಾನು ದೇವರಿಗೆ ಭಯಪಡುವವನಾಗಿದ್ದೇನೆ.
19ನೀವು ಸತ್ಯವಂತರಾಗಿದ್ದರೆ, ನಿಮ್ಮ ಸಹೋದರರಲ್ಲಿ ಒಬ್ಬನು ನೀವು ಇದ್ದ ಸೆರೆಮನೆಯಲ್ಲಿ ಬಂಧಿತನಾಗಿರಲಿ. ಆದರೆ ನೀವು ಎಲ್ಲರೂ ನಿಮ್ಮ ಮನೆಗಳ ಕ್ಷಾಮಕ್ಕೆ ಧಾನ್ಯಗಳನ್ನು ತೆಗೆದುಕೊಂಡು ಹೋಗಿರಿ.
20ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ಕರೆತನ್ನಿರಿ. ಆಗ ನಿಮ್ಮ ಮಾತುಗಳು ಸತ್ಯವೆಂದು ದೃಢವಾಗುವವು. ನೀವು ಸಾಯದೆ ಉಳಿಯುವಿರಿ,” ಎಂದನು. ಅವರು ಹಾಗೆಯೇ ಮಾಡಿದರು.
21ಆಗ ಅವರು, “ನಿಶ್ಚಯವಾಗಿ ನಮ್ಮ ಸಹೋದರನ ಅಪರಾಧವು ನಮ್ಮ ಮೇಲೆ ಇದೆ. ಅವನು ನಮ್ಮನ್ನು ಬೇಡಿಕೊಂಡಾಗ, ಅವನ ಪ್ರಾಣಸಂಕಟವನ್ನು ಕಂಡರೂ ಕೇಳದೆ ಹೋದೆವು. ಆದಕಾರಣ ಈ ಸಂಕಟವು ನಮ್ಮ ಮೇಲೆ ಬಂದಿತು,” ಎಂದು ಮಾತಾಡಿಕೊಂಡರು.
22ಆಗ ರೂಬೇನನು ಅವರಿಗೆ ಉತ್ತರವಾಗಿ, “ಹುಡುಗನಿಗೆ ಏನೂ ಕೇಡು ಮಾಡಬೇಡಿರಿ, ಎಂದು ನಾನು ನಿಮಗೆ ಹೇಳಿದರೂ ನೀವು ಕೇಳಲಿಲ್ಲ. ಆದ್ದರಿಂದ ಅವನಿಗಾದ ಪ್ರಾಣಹಾನಿಯ ವಿಷಯದಲ್ಲಿ ಈಗ ನಾವು ಲೆಕ್ಕ ಒಪ್ಪಿಸುತ್ತಿದ್ದೇವೆ,” ಎಂದನು.
23ಆದರೆ ಯೋಸೇಫನು ಅವರು ಆಡಿದ್ದನ್ನು ತಿಳಿದುಕೊಳ್ಳುತ್ತಿದ್ದನು ಎಂಬುದು ಅವರಿಗೆ ಗೊತ್ತಾಗಲಿಲ್ಲ. ಏಕೆಂದರೆ ಯೋಸೇಫನು ಅನುವಾದಕನ ಮುಖಾಂತರ ಅವರ ಸಂಗಡ ಮಾತಾಡುತ್ತಿದ್ದನು.
24ಅನಂತರ ಯೋಸೇಫನು ಅವರ ಬಳಿಯಿಂದ ಹೊರಟುಹೋಗಿ ಅತ್ತನು. ಮತ್ತೆ ಅವರ ಬಳಿಗೆ ಬಂದು, ಅವರ ಸಂಗಡ ಮಾತನಾಡಿ ಅವರೊಂದಿಗೆ ಸಿಮೆಯೋನನನ್ನು ತಂದು, ಅವರ ಕಣ್ಣೆದುರಿನಲ್ಲಿ ಬಂಧಿಸಿ ಸೆರೆಯಲ್ಲಿ ಹಾಕಿದನು.
25ತರುವಾಯ ಯೋಸೇಫನು ಧಾನ್ಯವನ್ನು ತುಂಬಿಸಬೇಕೆಂದೂ, ಒಬ್ಬೊಬ್ಬನ ಚೀಲದಲ್ಲಿ ಅವನವನ ಹಣವನ್ನು ತಿರುಗಿ ಇಡಬೇಕೆಂದೂ, ಪ್ರಯಾಣಕ್ಕಾಗಿ ಅವರಿಗೆ ಆಹಾರ ಸರಬರಾಜು ಮಾಡಬೇಕೆಂದೂ ಆಜ್ಞಾಪಿಸಿದನು.
26ಆಗ ಅವರು ತಮ್ಮ ಧಾನ್ಯವನ್ನು ಕತ್ತೆಗಳ ಮೇಲೆ ಹೇರಿಕೊಂಡು, ಅಲ್ಲಿಂದ ಹೊರಟು ಹೋದರು.
27ಆಗ ಒಬ್ಬನು ತನ್ನ ಕತ್ತೆಗೆ ಆಹಾರವನ್ನು ಕೊಡುವುದಕ್ಕೆ ವಸತಿಗೃಹದಲ್ಲಿ ತನ್ನ ಚೀಲವನ್ನು ಬಿಚ್ಚಿದಾಗ, ಚೀಲದ ಬಾಯಲ್ಲಿಟ್ಟಿದ್ದ ತನ್ನ ಹಣವನ್ನು ಕಂಡನು.
28ಅವನು ತನ್ನ ಸಹೋದರರಿಗೆ, “ನನ್ನ ಹಣವನ್ನು ಹಿಂದಕ್ಕೆ ಕೊಟ್ಟಿದ್ದಾರೆ, ಅದು ನನ್ನ ಚೀಲದಲ್ಲಿದೆ,” ಎಂದು ಹೇಳಿದ. ಅವರಿಗೆ ಹೃದಯ ಕಂಪನವಾದಂತಾಗಿ ಹೆದರಿ ಒಬ್ಬರಿಗೊಬ್ಬರು, “ದೇವರು ನಮಗೆ ಮಾಡಿದ್ದೇನು?” ಎಂದರು.
29ಅವರು ಕಾನಾನ್ ದೇಶದಲ್ಲಿದ್ದ ತಮ್ಮ ತಂದೆ ಯಾಕೋಬನ ಬಳಿಗೆ ಬಂದಾಗ, ತಮಗೆ ಸಂಭವಿಸಿದ್ದೆಲ್ಲವನ್ನೂ ಅವನಿಗೆ ತಿಳಿಸಿದರು.
30ದೇಶದ ಅಧಿಪತಿಯಾಗಿರುವ ಮನುಷ್ಯನು ನಮ್ಮ ಸಂಗಡ ಕಠಿಣವಾಗಿ ಮಾತನಾಡಿ, ದೇಶದ ಗೂಢಚಾರರನ್ನಾಗಿ ನಮ್ಮನ್ನು ಎಣಿಸಿದನು.
31ನಾವು ಅವನಿಗೆ, “ನಾವು ಗೂಢಚಾರರಲ್ಲ, ಸತ್ಯವಂತರೇ.
32ನಾವು ಹನ್ನೆರಡು ಮಂದಿ ಸಹೋದರರಾಗಿದ್ದು, ಒಂದೇ ತಂದೆಯ ಪುತ್ರರಾಗಿದ್ದೇವೆ, ಒಬ್ಬನು ಇಲ್ಲ, ಚಿಕ್ಕವನು ಇಂದು ನಮ್ಮ ತಂದೆಯ ಸಂಗಡ ಕಾನಾನ್ ದೇಶದಲ್ಲಿ ಇದ್ದಾನೆ,” ಎಂದೆವು.
33“ಆಗ ದೇಶದ ಪ್ರಭುವಾಗಿರುವ ಆ ಮನುಷ್ಯನು, ‘ನೀವು ಯಥಾರ್ಥರೆಂದು ನಾನು ಇದರಲ್ಲಿ ತಿಳಿದುಕೊಳ್ಳುವೆನು. ನೀವು ನಿಮ್ಮ ಸಹೋದರರಲ್ಲಿ ಒಬ್ಬನನ್ನು ನನ್ನ ಬಳಿಯಲ್ಲಿಟ್ಟು, ನಿಮ್ಮ ಮನೆಯ ಕ್ಷಾಮಕ್ಕೆ ಅವಶ್ಯವಾದದ್ದನ್ನು ತೆಗೆದುಕೊಂಡು ಹೋಗಿರಿ.
34ನಿಮ್ಮ ಚಿಕ್ಕ ತಮ್ಮನನ್ನು ನನ್ನ ಬಳಿಗೆ ತನ್ನಿರಿ. ಆಗ ನೀವು ಗೂಢಚಾರರಲ್ಲವೆಂದೂ, ಯಥಾರ್ಥರೆಂದೂ ತಿಳಿದುಕೊಂಡು, ನಿಮ್ಮ ಸಹೋದರರನ್ನು ನಿಮಗೆ ಒಪ್ಪಿಸುವೆನು. ಆಗ ನೀವು ದೇಶದಲ್ಲಿ ವ್ಯಾಪಾರ ಮಾಡಬಹುದು,’ ಎಂದು ಹೇಳಿದನು,” ಎಂದರು.
35ಇದಲ್ಲದೆ ಅವರು ತಮ್ಮ ಚೀಲಗಳನ್ನು ಬರಿದು ಮಾಡುತ್ತಿದ್ದಾಗ, ಅವನವನ ಹಣದ ಗಂಟು, ಅವನವನ ಚೀಲದಲ್ಲಿ ಇತ್ತು. ಅವರೂ, ಅವರ ತಂದೆಯೂ ಆ ಹಣದ ಗಂಟುಗಳನ್ನು ನೋಡಿ ಭಯಪಟ್ಟರು.
36ಆಗ ಅವರ ತಂದೆ ಯಾಕೋಬನು ಅವರಿಗೆ, “ನನ್ನನ್ನು ಮಕ್ಕಳಿಲ್ಲದವನನ್ನಾಗಿ ಮಾಡಿದ್ದೀರಿ. ಯೋಸೇಫನೂ ಇಲ್ಲ, ಸಿಮೆಯೋನನೂ ಇಲ್ಲ, ಬೆನ್ಯಾಮೀನನನ್ನೂ ಕರೆದುಕೊಂಡು ಹೋಗುವುದರಲ್ಲಿದ್ದೀರಿ. ಇವುಗಳೆಲ್ಲಾ ನನಗೆ ವಿರೋಧವಾಗಿವೆ,” ಎಂದನು.
37ರೂಬೇನನು ತನ್ನ ತಂದೆಗೆ, “ನಾನು ಅವನನ್ನು ನಿನ್ನ ಬಳಿಗೆ ತಾರದೆ ಹೋದರೆ, ನನ್ನ ಇಬ್ಬರು ಪುತ್ರರನ್ನು ಕೊಂದುಬಿಡು. ನೀನು ಬೆನ್ಯಾಮೀನನನ್ನು ನನ್ನ ಕೈಯಲ್ಲಿ ಒಪ್ಪಿಸು. ನಾನು ಅವನನ್ನು ನಿನ್ನ ಬಳಿಗೆ ತಿರುಗಿ ತರುವೆನು,” ಎಂದನು.
38ಆದರೆ ಯಾಕೋಬನು, “ನನ್ನ ಮಗನು ನಿಮ್ಮ ಸಂಗಡ ಹೋಗಬಾರದು, ಅವನ ಅಣ್ಣ ಸತ್ತು ಹೋಗಿ, ಇವನೊಬ್ಬನೇ ಉಳಿದಿದ್ದಾನೆ. ನೀವು ಹೋಗುವ ಮಾರ್ಗದಲ್ಲಿ ಇವನಿಗೆ ಕೇಡು ಬಂದರೆ, ನನ್ನ ಮುದಿ ತಲೆಯನ್ನು ದುಃಖದಿಂದ ಸಮಾಧಿಗೆ ಇಳಿಸುವಿರಿ,” ಎಂದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.