Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆದಿಕಾಂಡ 35

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರು ಯಾಕೋಬನಿಗೆ, “ನೀನು ಇಲ್ಲಿಂದ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು, ನಿನ್ನ ಸಹೋದರ ಏಸಾವನ ಎದುರಿನಿಂದ ಓಡಿ ಹೋಗುತ್ತಿದ್ದಾಗ, ನಿನಗೆ ಕಾಣಿಸಿಕೊಂಡ ದೇವರಿಗೆ ಅಲ್ಲಿ ಬಲಿಪೀಠವನ್ನು ಕಟ್ಟು,” ಎಂದರು.
2ಆಗ ಯಾಕೋಬನು ತನ್ನ ಮನೆಯವರಿಗೂ, ತನ್ನ ಸಂಗಡ ಇದ್ದವರೆಲ್ಲರಿಗೂ, “ನಿಮ್ಮ ಮಧ್ಯದಲ್ಲಿರುವ ಅನ್ಯದೇವರುಗಳನ್ನು ತೆಗೆದುಹಾಕಿ ಶುದ್ಧರಾಗಿರಿ, ನೀವು ನಿಮ್ಮ ಬಟ್ಟೆಗಳನ್ನು ಬದಲಾಯಿಸಿರಿ.
3ನಾವು ಇಲ್ಲಿಂದ ಹೊರಟು ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಆಲಿಸಿ, ನಾನು ಹೋದ ದಾರಿಯಲ್ಲಿ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ನಾನು ಬಲಿಪೀಠವನ್ನು ಕಟ್ಟುವೆನು,” ಎಂದನು.
4ಆಗ ಅವರು ತಮ್ಮ ಬಳಿಯಲ್ಲಿದ್ದ ಎಲ್ಲಾ ಅನ್ಯದೇವರುಗಳನ್ನೂ, ತಮ್ಮ ಕಿವಿಗಳಲ್ಲಿದ್ದ ಮುರುವುಗಳನ್ನೂ ತೆಗೆದು, ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಊರಿಗೆ ಸಮೀಪವಾಗಿದ್ದ ಏಲಾ ಮರದ ಕೆಳಗೆ ಹೂಳಿಟ್ಟರು.
5ತರುವಾಯ ಅವರು ಮುಂದೆ ಪ್ರಯಾಣಮಾಡಿದರು. ಆಗ ಸುತ್ತಲಿರುವ ಪಟ್ಟಣಗಳವರ ಮೇಲೆ ದೇವರ ಭಯವು ಇದ್ದುದರಿಂದ, ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.
6ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನರಸಹಿತವಾಗಿ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದನು.
7ಅಲ್ಲಿ ಅವನು ಬಲಿಪೀಠವನ್ನು ಕಟ್ಟಿ, ತಾನು ತನ್ನ ಸಹೋದರನ ಬಳಿಯಿಂದ ಓಡಿಹೋದಾಗ, ಅಲ್ಲಿ ದೇವರು ತನಗೆ ಪ್ರತ್ಯಕ್ಷನಾದದ್ದರಿಂದ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.
8ಆಗ ರೆಬೆಕ್ಕಳ ದಾದಿಯಾಗಿದ್ದ ದೆಬೋರಳು ಮರಣಹೊಂದಿದಳು. ಬೇತೇಲಿನ ಕೆಳಗಿದ್ದ ಏಲಾ ಮರದ ಬುಡದಲ್ಲಿ ಆಕೆಯನ್ನು ಹೂಳಿಟ್ಟರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಾಯಿತು.
9ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ, ದೇವರು ಅವನಿಗೆ ಇನ್ನೊಂದು ಸಾರಿ ಪ್ರತ್ಯಕ್ಷನಾಗಿ, ಅವನನ್ನು ಆಶೀರ್ವದಿಸಿದರು.
10ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಆದರೆ ಇನ್ನು ಮೇಲೆ ನೀನು ಯಾಕೋಬನೆಂದು ಕರೆಸಿಕೊಳ್ಳದೆ, ‘ಇಸ್ರಾಯೇಲ್,’ ಎಂದು ಕರೆಸಿಕೊಳ್ಳುವೆ,” ಎಂದು ಹೇಳಿ, ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟರು.
11ದೇವರು ಅವನಿಗೆ, “ಸರ್ವಶಕ್ತ ದೇವರು ನಾನೇ. ನೀನು ಅಭಿವೃದ್ಧಿಯಾಗಿ, ನಿನ್ನ ಸಂತಾನವು ಹೆಚ್ಚಲಿ. ಜನಾಂಗವೂ ಜನಾಂಗಗಳ ಗುಂಪೂ ನಿನ್ನಿಂದ ಉಂಟಾಗುವುವು. ಅರಸರು ನಿನ್ನಿಂದ ಹುಟ್ಟುವರು.
12ಇದಲ್ಲದೆ ಅಬ್ರಹಾಮನಿಗೂ, ಇಸಾಕನಿಗೂ ನಾನು ಕೊಟ್ಟ ದೇಶವನ್ನು ನಿನಗೆ ಕೊಡುವೆನು. ನಿನ್ನ ತರುವಾಯ ನಿನ್ನ ಸಂತತಿಗೂ ಈ ದೇಶವನ್ನು ಕೊಡುವೆನು,” ಎಂದರು.
13ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದರು.
14ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ, ಆ ಸ್ಥಳದಲ್ಲಿ ಸ್ತಂಭವನ್ನು ಅಂದರೆ ಕಲ್ಲಿನ ಸ್ತಂಭವನ್ನು ನಿಲ್ಲಿಸಿ, ಪಾನಾರ್ಪಣೆ ಮಾಡಿ, ಅದರ ಮೇಲೆ ಎಣ್ಣೆಯನ್ನು ಹೊಯ್ದನು.
15ದೇವರು ತನ್ನ ಸಂಗಡ ಮಾತನಾಡಿದ ಸ್ಥಳಕ್ಕೆ ಯಾಕೋಬನು ಬೇತೇಲ್ ಎಂದು ಹೆಸರಿಟ್ಟನು. ರಾಹೇಲ ಮತ್ತು ಯಾಕೋಬರ ನಿಧನ
16ಬೇತೇಲಿನಿಂದ ಅವರು ಪ್ರಯಾಣಮಾಡಿ, ಎಫ್ರಾತೂರಿಗೆ ಇನ್ನೂ ಸ್ವಲ್ಪ ದೂರ ಇರುವಾಗ, ರಾಹೇಲಳು ಪ್ರಸವವೇದನೆಯಿಂದ ಕಷ್ಟಪಟ್ಟಳು.
17ಹೆರುವುದರಲ್ಲಿ ಆಕೆಯು ಕಷ್ಟಪಡುತ್ತಿದ್ದಾಗ, ಸೂಲಗಿತ್ತಿಯು ಅವಳಿಗೆ, “ನೀನು ಭಯಪಡಬೇಡ, ಈ ಮಗನನ್ನು ಸಹ ನೀನು ಪಡೆಯುವೆ,” ಎಂದಳು.
18ಆದರೆ ರಾಹೇಲಳು ಸತ್ತುಹೋದಳು. ಅವಳು ಪ್ರಾಣಬಿಡುವಾಗ, ಮಗನಿಗೆ ಬೆನೋನಿ ಎಂದು ಹೆಸರಿಟ್ಟಳು, ಆದರೆ ಅವನ ತಂದೆ ಅವನಿಗೆ ಬೆನ್ಯಾಮೀನ್ ಎಂದು ಹೆಸರಿಟ್ಟನು.
19ಸತ್ತು ಹೋದ ರಾಹೇಲಳನ್ನು ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ಮಾರ್ಗದಲ್ಲಿ ಹೂಳಿಟ್ಟರು.
20ಯಾಕೋಬನು ಅವಳ ಸಮಾಧಿಯ ಮೇಲೆ ಒಂದು ಸ್ತಂಭವನ್ನು ನೆಟ್ಟನು. ಅದೇ ಇಂದಿನವರೆಗೂ ರಾಹೇಲಳ ಸಮಾಧಿಯ ಸ್ತಂಭವಾಗಿದೆ.
21ಇಸ್ರಾಯೇಲನು ಪ್ರಯಾಣಮಾಡಿ ಮಿಗ್ದಲ್ ಏದರಿನ ಆಚೆ ತನ್ನ ಗುಡಾರವನ್ನು ಹಾಕಿದನು.
22ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ, ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿ ಬಿಲ್ಹಳ ಸಂಗಡ ಮಲಗಿದನು. ಈ ವಿಷಯ ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಪುತ್ರರು ಇದ್ದರು.
23ಅವರಲ್ಲಿ ಲೇಯಳ ಪುತ್ರರು: ಯಾಕೋಬನ ಚೊಚ್ಚಲ ಮಗ ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್ ಮತ್ತು ಜೆಬುಲೂನ್.
24ರಾಹೇಲಳ ಪುತ್ರರು: ಯೋಸೇಫ್ ಮತ್ತು ಬೆನ್ಯಾಮೀನ್.
25ರಾಹೇಲಳ ದಾಸಿ ಬಿಲ್ಹಳ ಪುತ್ರರು: ದಾನ್, ನಫ್ತಾಲಿ.
26ಲೇಯಳ ದಾಸಿ ಜಿಲ್ಪಳ ಪುತ್ರರು: ಗಾದ್ ಮತ್ತು ಆಶೇರ್. ಇವರೇ ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು.
27ಯಾಕೋಬನು ಮಮ್ರೆಯಲ್ಲಿದ್ದ ತನ್ನ ತಂದೆ ಇಸಾಕನ ಬಳಿಗೆ ಅಬ್ರಹಾಮನೂ, ಇಸಾಕನೂ ಪ್ರವಾಸಿಗರಾಗಿ ವಾಸವಾಗಿದ್ದ ಹೆಬ್ರೋನ್ ಎಂಬ ಕಿರ್ಯತ್ ಅರ್ಬ ಪಟ್ಟಣಕ್ಕೆ ಬಂದನು.
28ಆಗ ಇಸಾಕನು ನೂರ ಎಂಬತ್ತು ವರ್ಷದವನಾಗಿದ್ದನು.
29ಇಸಾಕನು ಮುದುಕನಾಗಿಯೂ, ತುಂಬಾ ಆಯುಷ್ಯವುಳ್ಳವನಾಗಿಯೂ ಮರಣಹೊಂದಿ ತನ್ನ ಪಿತೃಗಳೊಂದಿಗೆ ಸೇರಿದನು. ಅವನ ಮಕ್ಕಳಾದ ಏಸಾವನೂ, ಯಾಕೋಬನೂ ಅವನನ್ನು ಸಮಾಧಿಮಾಡಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.