Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಎಜ್ರ 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಈಗ ಪ್ರವಾದಿಗಳಾದ ಹಗ್ಗಾಯನೂ, ಇದ್ದೋನನ ಮಗ ಜೆಕರ್ಯನೂ ಯೆಹೂದ ಮತ್ತು ಯೆರೂಸಲೇಮಿನಲ್ಲಿ ಇರುವ ಯೆಹೂದ್ಯರಿಗೆ, ಇಸ್ರಾಯೇಲ್ ದೇವರ ನಾಮದಲ್ಲಿ ಅವರಿಗೆ ಪ್ರವಾದಿಸಿದರು.
2ಆಗ ಶೆಯಲ್ತಿಯೇಲನ ಮಗ ಜೆರುಬ್ಬಾಬೆಲನೂ, ಯೋಚಾದಾಕನ ಮಗ ಯೇಷೂವನೂ ಎದ್ದು ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಿಸಲು ಪ್ರಾರಂಭಿಸಿದರು. ಅವರಿಗೆ ಸಹಾಯಕರಾಗಿ ದೇವರ ಪ್ರವಾದಿಗಳು ಅವರ ಸಂಗಡ ಇದ್ದರು.
3ಆ ವೇಳೆಯಲ್ಲಿ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಪ್ರದೇಶಗಳ ಅಧಿಪತಿಯಾಗಿದ್ದ ತತ್ತೆನೈಯೂ, ಶೆತರ್ ಬೋಜೆನೈಯೂ, ಅವರ ಜೊತೆಗಾರರೂ ಅವರ ಬಳಿಗೆ ಬಂದು, “ಈ ಆಲಯವನ್ನು ಪುನಃ ಕಟ್ಟಿ ತೀರಿಸುವುದಕ್ಕೆ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ಕೇಳಿದರು.
4ಇದಲ್ಲದೆ ಅವರು, “ಈ ಕಟ್ಟಡವನ್ನು ಕಟ್ಟಿಸುವವರ ಹೆಸರುಗಳೇನು?” ಎಂದು ವಿಚಾರಿಸಿದರು.
5ಆದರೆ ಈ ಕಾರ್ಯವು ದಾರ್ಯಾವೆಷನ ಬಳಿಗೆ ಬರುವವರೆಗೂ, ಅವರು ಇವರನ್ನು ನಿಲ್ಲಿಸದ ಹಾಗೆ ಇವರ ದೇವರ ಕಣ್ಣು ಯೆಹೂದ್ಯರ ಹಿರಿಯರ ಮೇಲೆ ಇತ್ತು. ಆಗ ಇದನ್ನು ಕುರಿತು ಅವರು ಉತ್ತರವನ್ನು ಪತ್ರದಲ್ಲಿ ಕಳುಹಿಸಿದರು.
6ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅಧಿಪತಿಯಾದ ತತ್ತೆನೈನೂ, ಶೆತರ್ ಬೋಜೆನೈಯೂ ಯೂಫ್ರೇಟೀಸ್ ನದಿಯ ಈಚೆಯಲ್ಲಿರುವ ಅವನ ಜೊತೆಗಾರರೂ, ಅರಸನಾದ ದಾರ್ಯಾವೆಷನಿಗೆ ಪತ್ರ ಬರೆದು ಕಳುಹಿಸಿದರು.
7ಅವರು ಅವನ ಬಳಿಗೆ ಕಳುಹಿಸಿದ ಪತ್ರದ ಪ್ರತಿಯಲ್ಲಿ: ಅರಸನಾದ ದಾರ್ಯಾವೆಷನಿಗೆ: ಸರ್ವತಾ ಕ್ಷೇಮ.
8ಅರಸನಿಗೆ ತಿಳಿಯಬೇಕಾದದ್ದೇನೆಂದರೆ, ನಾವು ಯೆಹೂದರ ದೇಶದಲ್ಲಿರುವ ಮಹಾ ದೇವರ ಆಲಯಕ್ಕೆ ಹೋದೆವು. ಅದನ್ನು ದೊಡ್ಡ ಕಲ್ಲುಗಳಿಂದ ಕಟ್ಟುತ್ತಿದ್ದಾರೆ. ಗೋಡೆಗಳ ಮೇಲೆ ತೊಲೆಗಳನ್ನು ಇಡುತ್ತಿದ್ದಾರೆ. ಆ ಕೆಲಸವು ತೀವ್ರವಾಗಿ ನಡೆಯುತ್ತಾ ಅವರ ಕೈಗಳಿಂದ ವೇಗವಾಗಿ ವೃದ್ಧಿಯಾಗುತ್ತದೆ.
9“ಆಗ ಈ ಆಲಯವನ್ನು ಕಟ್ಟುವುದಕ್ಕೂ ನಿಮಗೆ ಅಪ್ಪಣೆ ಕೊಟ್ಟವರು ಯಾರು?” ಎಂದು ನಾವು ಆ ಹಿರಿಯರನ್ನು ಕೇಳಿದೆವು.
10ಇದಲ್ಲದೆ ಅವರಲ್ಲಿರುವ ಮುಖ್ಯಸ್ಥರ ಹೆಸರುಗಳನ್ನು ನಿಮಗೆ ಬರೆದು ತಿಳಿಸುವಂತೆ ಅವರ ಹೆಸರುಗಳನ್ನು ಕೇಳಿದೆವು.
11ಅವರು ನಮಗೆ ಕೊಟ್ಟ ಉತ್ತರವೇನೆಂದರೆ: “ನಾವು ಪರಲೋಕ ಮತ್ತು ಭೂಲೋಕಗಳ ದೇವರ ಸೇವಕರಾಗಿದ್ದೇವೆ. ಅನೇಕ ವರ್ಷಗಳ ಹಿಂದೆ ಇಸ್ರಾಯೇಲಿನಲ್ಲಿದ್ದ ಒಬ್ಬ ಮಹಾ ಅರಸನು ಕಟ್ಟಿದ್ದ ಆಲಯವನ್ನು ನಾವು ಪುನಃ ಕಟ್ಟುತ್ತಿದ್ದೇವೆ.
12ಆದರೆ ನಮ್ಮ ಪಿತೃಗಳು ಪರಲೋಕದ ದೇವರಿಗೆ ಕೋಪವನ್ನು ಎಬ್ಬಿಸಿದ ಕಾರಣ, ದೇವರು ಅವರನ್ನು ಬಾಬಿಲೋನಿನ ಅರಸನಾಗಿದ್ದ ಕಸ್ದೀಯರ ದೇಶದವನಾದ ನೆಬೂಕದ್ನೆಚ್ಚರನ ಕೈಯಲ್ಲಿ ಒಪ್ಪಿಸಿಕೊಟ್ಟರು. ಆ ಅರಸನು ಆ ಆಲಯವನ್ನು ಹಾಳು ಮಾಡಿ, ಜನರನ್ನು ಬಾಬಿಲೋನಿಗೆ ಸೆರೆಹಿಡಿದುಕೊಂಡು ಹೋದನು.
13“ಆದರೆ ಬಾಬಿಲೋನಿನ ಅರಸನಾದ ಕೋರೆಷನ ಮೊದಲನೆಯ ವರ್ಷದಲ್ಲಿ ಅರಸನಾದ ಕೋರೆಷನು ದೇವರ ಈ ಆಲಯವನ್ನು ಪುನಃ ಕಟ್ಟಲು ಆಜ್ಞೆಯನ್ನು ಕೊಟ್ಟನು.
14ಇದಲ್ಲದೆ ನೆಬೂಕದ್ನೆಚ್ಚರನು ಯೆರೂಸಲೇಮಿನಲ್ಲಿರುವ ದೇವಾಲಯದಿಂದ ತೆಗೆದುಕೊಂಡು, ಬಾಬಿಲೋನಿನ ಮಂದಿರಕ್ಕೆ ತಂದ ದೇವಸ್ಥಾನದ ಬೆಳ್ಳಿಬಂಗಾರದ ಸಾಮಗ್ರಿಗಳನ್ನು ಅರಸನಾದ ಕೋರೆಷನು ಬಾಬಿಲೋನಿನ ಮಂದಿರದಿಂದ ತೆಗೆದುಕೊಂಡು, ತಾನು ನೇಮಿಸಿದ ಅಧಿಪತಿಯಾದ ಶೆಷ್ಬಚ್ಚರನಿಗೆ ಒಪ್ಪಿಸಿಕೊಟ್ಟನು.
15ಅವನಿಗೆ, ‘ಈ ಸಾಮಗ್ರಿಗಳನ್ನು ತೆಗೆದುಕೊಂಡು ಯೆರೂಸಲೇಮಿನಲ್ಲಿರುವ ದೇವಾಲಯಕ್ಕೆ ತೆಗೆದುಕೊಂಡು ಹೋಗು. ದೇವಾಲಯವನ್ನು ಪುನಃ ಅದರ ಸ್ಥಳದಲ್ಲಿ ಕಟ್ಟು,’ ಎಂದು ಆಜ್ಞಾಪಿಸಿದನು.
16“ಆಗ ಶೆಷ್ಬಚ್ಚರನು ಬಂದು, ಯೆರೂಸಲೇಮಿನಲ್ಲಿರುವ ದೇವರ ಆಲಯಕ್ಕೆ ಅಸ್ತಿವಾರವನ್ನು ಹಾಕಿದನು. ಅಂದಿನಿಂದ ಇಂದಿನವರೆಗೂ ಕಟ್ಟುವ ಕೆಲಸ ನಡೆಯುತ್ತಾ ಇದೆ, ಇನ್ನೂ ಮುಗಿಯಲಿಲ್ಲ,” ಎಂದರು.
17“ಆದ್ದರಿಂದ ಅರಸನಿಗೆ ಸರಿ ತೋರುವುದಾದರೆ, ಯೆರೂಸಲೇಮಿನಲ್ಲಿರುವ ದೇವರ ಆಲಯವನ್ನು ಪುನಃ ಕಟ್ಟಲು ಅರಸನಾದ ಕೋರೆಷನು ಅಪ್ಪಣೆ ಮಾಡಿದ್ದು ಉಂಟೋ, ಇಲ್ಲವೋ ಎಂಬುದನ್ನು ಬಾಬಿಲೋನಿನಲ್ಲಿರುವ ಅರಸನ ಬೊಕ್ಕಸದ ಮನೆಯಲ್ಲಿ ವಿಚಾರಿಸಲಿ. ತರುವಾಯ ಅರಸನು ಈ ಕಾರ್ಯಕ್ಕೋಸ್ಕರ ತನ್ನ ಚಿತ್ತವೇನೆಂದು ನಮಗೆ ತಿಳಿಸೋಣವಾಗಲಿ,” ಎಂಬುದಾಗಿ ಉತ್ತರಕೊಟ್ಟರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.