Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 41

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆಮೇಲೆ, ಆ ಮನುಷ್ಯನು ನನ್ನನ್ನು ದೇವಾಲಯಕ್ಕೆ ಕರೆತಂದು ಕಂಬಗಳನ್ನು ಎರಡೂ ಕಡೆಯಲ್ಲಿ ಸುಮಾರು 3.2 ಮೀಟರ್ ಎಂದು ಅಳೆದನು. ಇದೇ ಆ ಗುಡಾರದ ಉದ್ದಗಲವಾಗಿತ್ತು.
2ಬಾಗಿಲಿನ ಅಗಲವು ಸುಮಾರು ಐದು ಮೀಟರ್ ಮತ್ತು ಅದರ ಎರಡೂ ಬದಿಗಳಲ್ಲಿ ಗೋಡೆಗಳ ಅಗಲ ಸುಮಾರು ಎರಡೂವರೆ ಮೀಟರ್. ಅವನು ಮುಖ್ಯಸಭಾಂಗಣವನ್ನೂ ಅಳೆದನು. ಅದು ಸುಮಾರು ಇಪ್ಪತ್ತೊಂದು ಮೀಟರ್ ಉದ್ದ ಮತ್ತು ಸುಮಾರು ಹನ್ನೊಂದು ಮೀಟರ್ ಅಗಲವಿತ್ತು.
3ಅನಂತರ ಅವನು ಒಳಗೆ ಹೋಗಿ ಪರಿಶುದ್ಧಸ್ಥಳದ ಪ್ರವೇಶದ್ವಾರದ ಕಂಬಗಳನ್ನು ಅಳೆದನು; ಒಂದೊಂದು ಕಂಬವು ಸುಮಾರು ಒಂದು ಮೀಟರ್ ಅಗಲವಿತ್ತು. ಪ್ರವೇಶದ್ವಾರವು ಸುಮಾರು ಮೂರು ಮೀಟರ್ ಅಗಲವಾಗಿತ್ತು ಮತ್ತು ಅದರ ಎರಡೂ ಬದಿಯ ಗೋಡೆಯು ಸುಮಾರು ನಾಲ್ಕು ಮೀಟರ್ ಅಗಲವಾಗಿತ್ತು.
4ಅವನು ಒಳಗಿನ ಪರಿಶುದ್ಧಸ್ಥಳದ ಉದ್ದವನ್ನು ಅಳೆದನು; ಅದು ಸುಮಾರು ಹತ್ತು ಮೀಟರ್ ಆಗಿತ್ತು; ಅದರ ಅಗಲವು ಮುಖ್ಯ ಸಭಾಂಗಣದ ಕೊನೆಯವರೆಗೂ ಸುಮಾರು ಹತ್ತು ಮೀಟರ್ ಆಗಿತ್ತು. ಅವನು ನನಗೆ, “ಇದು ಅತ್ಯಂತ ಪವಿತ್ರ ಸ್ಥಳವಾಗಿದೆ” ಎಂದು ಹೇಳಿದನು.
5ಅನಂತರ ಅವನು ಆಲಯದ ಗೋಡೆಯನ್ನು ಅಳೆದನು; ಅದು ಸುಮಾರು ಮೂರು ಮೀಟರ್ ದಪ್ಪವಾಗಿತ್ತು, ಮತ್ತು ಆಲಯದ ಸುತ್ತಲಿನ ಕೋಣೆಗಳ ಅಗಲವು ಪ್ರತಿ ಬದಿಯಲ್ಲಿ ಸುಮಾರು ಎರಡು ಮೀಟರ್ ಆಗಿತ್ತು.
6ಆ ಕೊಠಡಿಗಳು ಒಂದರ ಮೇಲೊಂದು ಮೂರು ಅಂತಸ್ತಾಗಿದ್ದವು; ಒಂದೊಂದು ಅಂತಸ್ತಿನಲ್ಲಿ ಮೂವತ್ತು ಮೂವತ್ತು ಕೊಠಡಿಗಳಿದ್ದವು. ಪಕ್ಕದ ಕೋಣೆಗಳಿಗೆ ಆಧಾರವಾಗಿ ದೇವಾಲಯದ ಗೋಡೆಯ ಸುತ್ತಲೂ ಮುಂಚಾಚಿರುವಿಕೆಗಳು ಇದ್ದವು. ಇದರಿಂದಾಗಿ ಪೋಷಕ ಭಾಗಗಳನ್ನು ದೇವಾಲಯದ ಗೋಡೆಯೊಳಗೆ ಸೇರಿಸಲಾಗಿಲ್ಲ.
7ಸುತ್ತಣ ಅಂತಸ್ತುಗಳು ಮೇಲೆ ಮೇಲೆ ಹೋದ ಹಾಗೆ ಆಯಾ ಕೊಠಡಿಗಳ ಅಗಲವು ಹೆಚ್ಚುತ್ತಾ ಬಂದಿತು. ಅವು ಮನೆಯನ್ನು ಸುತ್ತಿಕೊಂಡು ಮೇಲೆ ಮೇಲೆ ಹೋದ ಹಾಗೆಲ್ಲಾ ಅದನ್ನು ಬಿಗಿಯಾಗಿ ಹಿಡಿದುಕೊಂಡಂತೆ ಇದ್ದವು; ಹೀಗೆ ಮೇಲಿನ ಅಂತಸ್ತುಗಳು ಮನೆಯ ಕಡೆಗೆ ಅಗಲವಾಗುತ್ತಾ ಬಂದವು; ಕೆಳಗಿನ ಅಂತಸ್ತಿನಿಂದ ಮಧ್ಯದ ಅಂತಸ್ತಿನ ಮಾರ್ಗವಾಗಿ ಮೇಲಿನ ಅಂತಸ್ತಿಗೆ ಹತ್ತುತ್ತಿದ್ದವು.
8ಆಲಯದ ಸುತ್ತಮುತ್ತಲೂ ಒಂದು ಜಗಲಿಯನ್ನು ನಾನು ನೋಡಿದೆನು. ಅದು ಪಕ್ಕದ ಕೊಠಡಿಗಳಿಗೆ ತಳಹದಿಯಾಗಿ ನೆಲಮಟ್ಟದಿಂದ ಸುಮಾರು ಆರು ಮೊಳದ ಅಳತೆಯ ಕೋಲಿನಷ್ಟು ಎತ್ತರವಾಗಿತ್ತು.
9ಹೊರಗಡೆಯಲ್ಲಿ ಪಕ್ಕದ ಕೊಠಡಿಗಳಿಗಾದ ಗೋಡೆಯ ದಪ್ಪವು ಐದು ಮೊಳ ಮತ್ತು ಉಳಿದದ್ದು ಒಳಗಿನ ಕಡೆಯ ಕೊಠಡಿಗಳ ಸ್ಥಳವಾಗಿತ್ತು.
10ಕೊಠಡಿಗಳ ನಡುವೆ ಆಲಯದ ಸುತ್ತಲೂ ಪ್ರತಿಯೊಂದು ಕಡೆಗೂ ಇಪ್ಪತ್ತು ಮೊಳ ಅಗಲವಿತ್ತು;
11ಪಕ್ಕದ ಕೊಠಡಿಗಳ ಬಾಗಿಲುಗಳು ತೆರೆದ ಸ್ಥಳದ ಕಡೆಗೆ ಇದ್ದವು. ಉತ್ತರದ ಕಡೆಗೆ ಒಂದು ಬಾಗಿಲೂ ದಕ್ಷಿಣದ ಕಡೆಗೆ ಮತ್ತೊಂದು ಬಾಗಿಲೂ ಇತ್ತು; ತೆರೆದ ಸ್ಥಳದ ಅಗಲವು ಸುತ್ತಲೂ ಐದು ಮೊಳವಾಗಿತ್ತು.
12ಈಗ ಪ್ರತ್ಯೇಕಿಸಿದ ಸ್ಥಳಕ್ಕೆ ಎದುರಾಗಿ ಪಶ್ಚಿಮದ ಕಡೆಗಿದ್ದ ಕಟ್ಟಡವು ಎಪ್ಪತ್ತು ಮೊಳ ಅಗಲವಾಗಿತ್ತು; ಕಟ್ಟಡದ ಗೋಡೆಯು ಸುತ್ತಲೂ ಐದು ಮೊಳ ದಪ್ಪವಾಗಿತ್ತು. ಅದರ ಉದ್ದವು ತೊಂಬತ್ತು ಮೊಳವಾಗಿತ್ತು.
13ಹೀಗೆ ಅವನು ಆಲಯವನ್ನು ನೂರು ಮೊಳ ಉದ್ದವೆಂದೂ; ಪ್ರತ್ಯೇಕಿಸಿದ ಸ್ಥಳವನ್ನೂ ಮತ್ತು ಕಟ್ಟಡವನ್ನೂ ಗೋಡೆಗಳ ಸಹಿತವಾಗಿ ನೂರು ಮೊಳ ಉದ್ದವೆಂದೂ ಅಳೆದನು;
14ಇದಲ್ಲದೆ ಆಲಯದ ಮುಂಭಾಗವು ಪೂರ್ವದ ಕಡೆಗೆ ಇದ್ದ ಪ್ರತ್ಯೇಕ ಸ್ಥಳಗಳು ನೂರು ಮೊಳ ಅಗಲವಾಗಿದ್ದವು.
15ಪ್ರತ್ಯೇಕ ಸ್ಥಳಕ್ಕೆ ಎದುರಾಗಿಯೂ ಹಿಂದೆಯೂ ಇದ್ದಂಥ ಕಟ್ಟಡವನ್ನು ಅಂದರೆ ಶಾಲೆಗಳನ್ನೂ ಆ ಕಡೆ ಮತ್ತು ಈ ಕಡೆ ನೂರು ಮೊಳವೆಂದೂ ಅಳೆದನು. ಮುಖ್ಯ ಸಭಾಂಗಣ, ಗರ್ಭಗೃಹ ಮತ್ತು ಅಂಗಳದ ಮುಂಭಾಗದಲ್ಲಿ ದ್ವಾರಮಂಟಪ,
16ಹಾಗೆಯೇ ಗರ್ಭಗೃಹ, ಪ್ರಾಕಾರದಲ್ಲಿನ ದ್ವಾರಮಂಟಪಗಳು, ಹೊಸ್ತಿಲುಗಳು ಮತ್ತು ಇಕ್ಕಟ್ಟಾದ ಕಿಟಕಿಗಳನ್ನೂ ಮತ್ತು ಅದರ ಸುತ್ತಲೂ ಇದ್ದಂತಹ ಮೂರು ಅಂತಸ್ತುಗಳಲ್ಲಿ ಬಾಗಿಲಿಗೆ ಎದುರಾಗಿ ಸುತ್ತಲೂ ಮರದಿಂದ ಹೊದಿಕೆಯಾಗಿದ್ದವು. ನೆಲ, ಕಿಟಕಿಯವರೆಗಿನ ಗೋಡೆ ಮತ್ತು ಕಿಟಕಿಗಳನ್ನು ಮುಚ್ಚಲಾಯಿತು.
17ಬಾಗಿಲಿನ ಮೇಲಕ್ಕೂ ಒಳಗಿನ ಆಲಯದವರೆಗೂ ಮತ್ತು ಹೊರಗೂ ಸುತ್ತಲೂ ಇದ್ದ ಗೋಡೆ, ಹೀಗೆ ಒಳಗೂ ಹೊರಗೂ ಎಲ್ಲವನ್ನೂ ಅಳೆದನು.
18ಅದು ಕೆರೂಬಿಗಳು ಮತ್ತು ಖರ್ಜೂರದ ಮರಗಳ ಚಿತ್ರಗಳಿಂದ ಕೂಡಿತ್ತು. ಕೆರೂಬಿ ಮತ್ತು ಕೆರೂಬಿಗಳ ಮಧ್ಯೆ ಖರ್ಜೂರದ ಮರವಿತ್ತು ಮತ್ತು ಪ್ರತಿಯೊಂದು ಕೆರೂಬಿಗೂ ಎರಡೆರಡು ಮುಖಗಳು ಇದ್ದವು.
19ಹೀಗೆ ಈ ಕಡೆ ಖರ್ಜೂರದ ಮರದ ಎದುರಿಗೆ ಮನುಷ್ಯನ ಮುಖವು, ಆ ಕಡೆ ಖರ್ಜೂರದ ಮರದ ಎದುರಿಗೆ ಪ್ರಾಯದ ಸಿಂಹದ ಮುಖವೂ ಇತ್ತು; ಹೀಗೆ ಆಲಯದ ತುಂಬಾ ಮತ್ತು ಸುತ್ತಮುತ್ತಲೂ ಚಿತ್ರಮಯವಾಗಿತ್ತು.
20ನೆಲವು ಮೊದಲುಗೊಂಡು ಬಾಗಿಲಿನ ಮೇಲಿನವರೆಗೂ ದೇವಾಲಯದ ಗೋಡೆಯಲ್ಲಿಯೂ ಕೆರೂಬಿಗಳು ಮತ್ತು ಖರ್ಜೂರದ ಮರಗಳು ಚಿತ್ರಮಯವಾಗಿದ್ದವು.
21ಮುಖ್ಯ ಸಭಾಂಗಣದ ಕಂಬಗಳು ಚಚ್ಚೌಕವಾಗಿದ್ದವು. ಮಹಾಪರಿಶುದ್ಧ ಸ್ಥಳವೂ ಸಹ ಹಾಗೆಯೇ ಇತ್ತು.
22ಸುಮಾರು ಒಂದೂವರೆ ಮೀಟರ್ ಎತ್ತರ ಮತ್ತು ಸುಮಾರು ಒಂದು ಮೀಟರ್ ಉದ್ದ ಮತ್ತು ಅಗಲವಿರುವ ಮರದ ಬಲಿಪೀಠವಿತ್ತು. ಅದರ ಮೂಲೆಗಳು, ಅದರ ತಳ ಮತ್ತು ಅದರ ಬದಿಗಳು ಮರದಿಂದ ಆಗಿದ್ದವು. ಆ ಮನುಷ್ಯನು ನನಗೆ, “ಇದು ಯೆಹೋವ ದೇವರ ಮುಂದೆ ಇರುವ ಮೇಜು” ಎಂದು ಹೇಳಿದನು.
23ದೇವಾಲಯಕ್ಕೂ ಮಹಾಪರಿಶುದ್ಧ ಸ್ಥಳಕ್ಕೂ ಎರಡು ಬಾಗಿಲುಗಳಿದ್ದವು.
24ಆ ಎರಡು ಬಾಗಿಲುಗಳಿಗೆ ಎರಡು ಕದಗಳಿದ್ದವು, ಆ ಸುತ್ತಿಕೊಳ್ಳುವ ಕದಗಳು ಒಂದು ಬಾಗಿಲಿಗೆ ಎರಡು, ಇನ್ನೊಂದು ಬಾಗಿಲಿಗೆ ಎರಡು ಇದ್ದವು.
25ಆಲಯದ ಬಾಗಿಲುಗಳ ಮೇಲೆ ಕೆರೂಬಿಗಳೂ ಖರ್ಜೂರದ ಮರಗಳೂ ಗೋಡೆಗಳ ಮೇಲೆ ಚಿತ್ರಿತವಾಗುವ ಹಾಗೆಯೇ ಚಿತ್ರಿತವಾಗಿದ್ದವು. ದ್ವಾರಾಂಗಣದ ಮುಂದೆ ಹೊರಗಡೆಯಲ್ಲಿ ದಪ್ಪವಾದ ಹಲಗೆಗಳಿದ್ದವು.
26ಇದಲ್ಲದೆ, ಈ ಕಡೆಯೂ ಆ ಕಡೆಯೂ ದ್ವಾರಾಂಗಣದ ಪಕ್ಕಕ್ಕೂ ಆಲಯದ ಪಕ್ಕದ ಕೊಠಡಿಗಳಿಗೂ ಇಕ್ಕಟ್ಟಾದ ಕಿಟಕಿಗಳೂ ಇದ್ದವು; ದಪ್ಪದ ಹಲಗೆಗಳೂ ಸಹ ಇದ್ದವು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.