Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 36

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ನರಪುತ್ರನೇ, ಇಸ್ರಾಯೇಲ್ ಪರ್ವತಗಳ ಕಡೆಗೆ ಪ್ರವಾದಿಸು. ಹೇಳು, ‘ಇಸ್ರಾಯೇಲ್ ಪರ್ವತಗಳೇ, ನೀವು ಯೆಹೋವ ದೇವರ ವಾಕ್ಯವನ್ನು ಕೇಳಿರಿ.
2ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಏಕೆಂದರೆ ನಿನ್ನ ಶತ್ರುವು ನಿನಗೆ ವಿರೋಧವಾಗಿ, “ಆಹಾ, ಪೂರ್ವದ ಉತ್ತಮ ಸ್ಥಳಗಳು ನಮ್ಮ ಸೊತ್ತಾದವು,” ಎಂದು ಹೇಳುವರು. ’
3ಆದ್ದರಿಂದ ನೀನು ಪ್ರವಾದಿಸಿ ಹೀಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ಅವರು ನಿನ್ನನ್ನು ಹಾಳು ಮಾಡಿ ಎಲ್ಲಾ ಕಡೆಗಳಿಂದಲೂ ನಿನ್ನನ್ನು ತುಳಿದುಬಿಟ್ಟರು. ನೀವು ಇತರ ಜನಾಂಗಗಳಲ್ಲಿ ಉಳಿದವರ ವಶವಾಗಿದ್ದು ಹರಟೆಗಾರರ ಬಾಯಿಗೆ ಬಿದ್ದು ಜನರ ನಿಂದೆಗೆ ಗುರಿಯಾಗಿದ್ದೀರಿ.
4ಆದ್ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ಸಾರ್ವಭೌಮ ಯೆಹೋವ ದೇವರ ವಾಕ್ಯವನ್ನು ಕೇಳಿರಿ, ಪರ್ವತಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಜನಾಂಗಗಳಲ್ಲಿ ಉಳಿದವರು ಕೊಳ್ಳೆಹೊಡೆದು ಅಣಕಿಸುವ ಹಾಳು ಪಟ್ಟಣಗಳಿಗೂ
5ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಿಶ್ಚಯವಾಗಿ ನನ್ನ ರೋಷದ ಬೆಂಕಿಯಿಂದ ಇತರ ಜನಾಂಗಗಳಲ್ಲಿ ಉಳಿದವರಿಗೂ ಎದೋಮಿನವರೆಲ್ಲರಿಗೂ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶವನ್ನು ತಮ್ಮ ಸೊತ್ತಾಗಿ ಮಾಡಿಕೊಂಡಿದ್ದಾರೆ. ಅವರು ಅದರ ಹುಲ್ಲುಗಾವಲನ್ನು ಸಹ ಸೂರೆಮಾಡಬೇಕೆಂದಿದ್ದಾರೆ.’
6ಆದ್ದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು. ಪರ್ವತಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾದದ್ದೇನೆಂದರೆ: ‘ಸಾರ್ವಭೌಮ ಯೆಹೋವ ದೇವರು ಇಂತೆನ್ನುತ್ತಾರೆ: ಇತರ ಜನಾಂಗಗಳ ಅವಮಾನವನ್ನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರದಿಂದಲೂ ಮಾತನಾಡಿದ್ದೇನೆ.
7ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನನ್ನ ಕೈಯೆತ್ತಿ ಪ್ರಮಾಣ ಮಾಡಿದ್ದೇನೆ, ನಿಶ್ಚಯವಾಗಿ ನಿನ್ನ ಮೇಲಿರುವ ಆ ಜನಾಂಗಗಳು ತಮ್ಮ ನಿಂದೆಯನ್ನು ಹೊರುವರು.
8“ ‘ಆದರೆ ಓ ಇಸ್ರಾಯೇಲ್ ಪರ್ವತಗಳೇ, ನೀವು ನಿಮ್ಮ ಕೊಂಬೆಗಳನ್ನು ಹರಡಿಸಿ ನನ್ನ ಜನರಾದ ಇಸ್ರಾಯೇಲರಿಗೆ ಫಲಕೊಡುವಿರಿ. ಏಕೆಂದರೆ ಅವರ ಬರುವಿಕೆಯು ಸಮೀಪವಾಗಿದೆ.
9ನಾನು ನಿಮ್ಮವನಾಗಿದ್ದೇನೆ ನಾನು ನಿಮ್ಮ ಕಡೆಗೆ ತಿರುಗಿಕೊಳ್ಳುತ್ತೇನೆ ಮತ್ತು ನಿಮ್ಮಲ್ಲಿ ಉಳುಮೆ ಮಾಡಿ ಬಿತ್ತಲಾಗುತ್ತದೆ.
10ನಾನು ಮನುಷ್ಯರನ್ನೂ ಎಲ್ಲಾ ಇಸ್ರಾಯೇಲ್ ಮನೆತನದವರನ್ನೂ ಎಂದರೆ ಎಲ್ಲರನ್ನೂ ನಿನ್ನ ಮೇಲೆ ವೃದ್ಧಿಸುತ್ತೇನೆ. ಪಟ್ಟಣಗಳು ಜನಭರಿತವಾಗುವುವು. ಹಾಳು ನಿವೇಶನಗಳಲ್ಲಿ ಕಟ್ಟಡಗಳು ಏಳುವುವು.
11ನಾನು ನಿಮ್ಮ ಮೇಲೆ ಮನುಷ್ಯರನ್ನೂ ಮೃಗಗಳನ್ನೂ ವೃದ್ಧಿಮಾಡುವೆನು. ಅವು ಹೆಚ್ಚಾಗಿ ನಿಮಗೆ ಫಲವನ್ನು ತರುವುವು. ನಾನು ನಿಮ್ಮನ್ನು ಮೊದಲಿನ ಸ್ಥಿತಿಗಿಂತ ಉತ್ತಮ ಸ್ಥಿತಿಗೆ ತರುವೆನು; ಆಗ ನಾನೇ ಯೆಹೋವ ದೇವರೆಂದು ನೀವು ತಿಳಿಯುವಿರಿ.
12ನನ್ನ ಜನರಾದ ಇಸ್ರಾಯೇಲ್ಯರನ್ನು ನಿಮ್ಮಲ್ಲಿ ವಾಸಿಸುವಂತೆ ಮಾಡುವೆನು. ಅವರು ನಿನ್ನನ್ನು ಸ್ವಾಧೀನಪಡಿಸಿಕೊಳ್ಳುವರು ಮತ್ತು ನೀವು ಅವರ ಸೊತ್ತಾಗಿರುವಿರಿ; ನೀವು ಎಂದಿಗೂ ಅವರ ಮಕ್ಕಳಿಂದ ವಂಚಿತರಾಗುವುದಿಲ್ಲ.
13“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ನೀನು ಮನುಷ್ಯರನ್ನು ನುಂಗುವಂಥ ದೇಶ ಮತ್ತು ನಿನ್ನ ಜನಗಳನ್ನು ಮಕ್ಕಳಿಲ್ಲದಂಥ ಜನಾಂಗಗಳನ್ನಾಗಿ ಮಾಡುವಂಥದ್ದು ಆಗಿರುವೆ,” ಎಂದು ಅವರು ನಿನಗೆ ಹೇಳುವರು.
14ಆದ್ದರಿಂದ ಇನ್ನು ಮೇಲೆ ನೀನು ಮನುಷ್ಯರನ್ನು ನುಂಗುವುದಿಲ್ಲ. ಇನ್ನು ಮೇಲೆ ನಿನ್ನ ಜನಾಂಗದವರನ್ನೂ ಮಕ್ಕಳಿಲ್ಲದವರನ್ನಾಗಿ ಮಾಡುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
15ಅಲ್ಲದೆ ಇನ್ನು ಮೇಲೆ ನೀನು ಇತರ ಜನಾಂಗಗಳ ನಿಂದೆಯನ್ನು ಕೇಳಿಸಿಕೊಳ್ಳದಂತೆ ನಾನು ಮಾಡುವೆನು; ನೀನು ಇನ್ನು ಮೇಲೆ ಜನಾಂಗಗಳಿಂದ ಅವಮಾನ ಅನುಭವಿಸುವುದಿಲ್ಲ. ನೀನು ನಿನ್ನ ಜನಾಂಗವನ್ನು ಇನ್ನೆಂದಿಗೂ ಬೀಳಿಸುವುದಿಲ್ಲ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.’ ” ಇಸ್ರಾಯೇಲಿನ ಪುನಃಸ್ಥಾಪನೆ ಮತ್ತು ಭರವಸೆ
16ಯೆಹೋವ ದೇವರ ವಾಕ್ಯವು ನನಗೆ ಬಂದಿತು,
17“ಮನುಷ್ಯಪುತ್ರನೇ, ಯಾವಾಗ ಇಸ್ರಾಯೇಲರ ಮನೆತನದವರು ಸ್ವಂತ ದೇಶದಲ್ಲಿ ವಾಸಿಸಿದರೋ, ಆಗ ಅವರು ಅದನ್ನು ತಮ್ಮ ಸ್ವಂತ ಮಾರ್ಗಗಳಿಂದಲೂ ದುಷ್ಕಾರ್ಯಗಳಿಂದಲೂ ಅಶುದ್ಧಗೊಳಿಸಿದರು. ಅವರ ಆ ದುಷ್ಕಾರ್ಯಗಳು ನನ್ನ ಮುಂದೆ ಮುಟ್ಟಾಗಿರುವವಳ ಅಶುದ್ಧತ್ವದ ಹಾಗಿತ್ತು.
18ಆದ್ದರಿಂದ ಅವರು ದೇಶದಲ್ಲಿ ಚೆಲ್ಲಿದ ರಕ್ತದ ನಿಮಿತ್ತವಾಗಿಯೂ ಅವರು ಅದನ್ನು ಅಶುದ್ಧಪಡಿಸಿದ ಅವರ ವಿಗ್ರಹಗಳ ನಿಮಿತ್ತವಾಗಿಯೂ ನನ್ನ ರೋಷವನ್ನು ಅವರ ಮೇಲೆ ಸುರಿಸಿದೆನು.
19ನಾನು ಅವರನ್ನು ಜನಾಂಗಗಳಲ್ಲಿ ಚದರಿಸಿದೆನು. ಅವರು ಆ ದೇಶಗಳಲ್ಲಿ ಚದರಿಹೋದರು. ಅವರ ದುರ್ಮಾರ್ಗ ದುರಾಚಾರಗಳಿಗೆ ಅನುಸಾರವಾಗಿ ಅವರನ್ನು ನ್ಯಾಯತೀರಿಸಿದೆನು.
20ಅವರು ಆ ಜನಾಂಗಗಳೊಳಗೆ ಸೇರಿಕೊಂಡ ಮೇಲೆ ಇವರೇ, ‘ಯೆಹೋವ ದೇವರ ಜನರು ಮತ್ತು ಇವರು ಆತನ ದೇಶದಿಂದ ಹೊರಟು ಹೋದರು,’ ಎಂದು ಅವರಿಗೆ ಹೇಳಿ ನನ್ನ ಪರಿಶುದ್ಧ ಹೆಸರನ್ನು ಅಪವಿತ್ರ ಮಾಡಿದರು.
21ಆದರೆ ಇಸ್ರಾಯೇಲಿನ ಮನೆತನದವರು ತಾವು ಹೋದ ಜನಾಂಗಗಳಲ್ಲಿ ಅಪವಿತ್ರಮಾಡಿದ ನನ್ನ ಪರಿಶುದ್ಧವಾದ ಹೆಸರನ್ನು ಕುರಿತು ಮನಮರುಗಿದೆನು.
22“ಆದ್ದರಿಂದ ನೀನು ಇಸ್ರಾಯೇಲರ ಮನೆತನದವರಿಗೆ ಹೇಳು, ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ; ಇಸ್ರಾಯೇಲಿನ ಮನೆತನದವರೇ, ನಾನು ಇದನ್ನು ನಿಮಗಾಗಿ ಮಾಡುತ್ತಿಲ್ಲ. ಆದರೆ ನೀವು ಇತರ ಜನಾಂಗಗಳ ನಡುವೆ ಅಪವಿತ್ರಪಡಿಸಿದ ನನ್ನ ಪರಿಶುದ್ಧ ನಾಮಕ್ಕಾಗಿ ಮಾಡುತ್ತೇನೆ.
23ನೀನು ನನ್ನ ಮಹತ್ವದ ನಾಮವನ್ನು ಅಪವಿತ್ರತೆಗೆ ಗುರಿಮಾಡಿದ ಇತರ ಜನಾಂಗಗಳಲ್ಲಿ ನನ್ನ ಪವಿತ್ರ ನಾಮವನ್ನು ತೋರಿಸುವೆನು. ಜನಾಂಗಗಳ ಕಣ್ಣುಗಳ ಮುಂದೆ ನಿನ್ನ ಮೂಲಕವಾಗಿ ನನ್ನನ್ನು ಪವಿತ್ರನೆಂದು ತೋರಿಸುವಾಗ ಅವರು ನಾನು ಯೆಹೋವ ದೇವರೆಂಬುದನ್ನು ತಿಳಿದುಕೊಳ್ಳುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
24“ ‘ನಾನು ನಿಮ್ಮನ್ನು ಇತರ ಜನಾಂಗಗಳ ಮಧ್ಯದಿಂದ ತೆಗೆದು ಎಲ್ಲಾ ದೇಶಗಳೊಳಗಿಂದ ಕೂಡಿಸಿ ನಿಮ್ಮ ನಿಮ್ಮ ಸ್ವಂತ ದೇಶಗಳಲ್ಲಿ ಸೇರಿಸುವೆನು.
25ಆಮೇಲೆ ನಾನು ನಿಮ್ಮ ಮೇಲೆ ಶುದ್ಧವಾದ ನೀರನ್ನು ಚಿಮುಕಿಸುತ್ತೇನೆ ಮತ್ತು ನೀವು ಶುದ್ಧರಾಗುವಿರಿ, ನಿಮ್ಮ ಎಲ್ಲಾ ಅಶುದ್ಧತ್ವಗಳಿಂದಲೂ ನಿಮ್ಮ ಎಲ್ಲಾ ವಿಗ್ರಹಗಳಿಂದಲೂ ನಿಮ್ಮನ್ನು ಶುದ್ಧೀಕರಿಸುವೆನು.
26ನಿಮಗೆ ಹೊಸ ಹೃದಯವನ್ನು ಕೊಟ್ಟು ಹೊಸ ಆತ್ಮವನ್ನು ನಿಮ್ಮೊಳಗೆ ಇಡುವೆನು. ನಿಮ್ಮೊಳಗಿಂದ ಕಲ್ಲಿನ ಹೃದಯವನ್ನು ಹೊರಗೆ ತೆಗೆದು ನಿಮಗೆ ಮಾಂಸದ ಹೃದಯವನ್ನು ಕೊಡುತ್ತೇನೆ.
27ನನ್ನ ಆತ್ಮವನ್ನು ನಿಮ್ಮೊಳಗೆ ಇಡುವೆನು. ನೀವು ನನ್ನ ನಿಯಮಗಳಲ್ಲಿ ನಡೆಯುವ ಹಾಗೆ ಮಾಡುವೆನು ಮತ್ತು ನೀವು ನನ್ನ ನ್ಯಾಯವಿಧಿಗಳನ್ನು ಜಾಗರೂಕತೆಯಿಂದ ಅನುಸರಿಸಿ ನಡೆಯುವಿರಿ.
28ನಾನು ನಿಮ್ಮ ತಂದೆಗಳಿಗೆ ಕೊಟ್ಟ ದೇಶದಲ್ಲಿ ವಾಸಿಸುವಿರಿ; ನೀವು ನನ್ನ ಜನರಾಗಿರುವಿರಿ. ನಾನು ನಿಮ್ಮ ದೇವರಾಗಿರುವೆನು.
29ಅಲ್ಲದೆ ನಾನು ನಿಮ್ಮನ್ನು ನಿಮ್ಮ ಅಶುದ್ಧತ್ವಗಳಿಂದಲೂ ಸಹ ರಕ್ಷಿಸುವೆನು. ಬೆಳೆ ಬೆಳೆಯಲೆಂದು ಹೇಳಿ ಅದನ್ನು ಹೆಚ್ಚಿಸುವೆನು, ಕ್ಷಾಮವನ್ನು ನಿಮ್ಮ ಮೇಲೆ ಬರಮಾಡುವುದಿಲ್ಲ.
30ಜನಾಂಗಗಳಲ್ಲಿ ನಿಮಗೆ ಬರಗಾಲದ ನಿಂದೆಯು ಇನ್ನು ಮೇಲೆ ಬಾರದ ಹಾಗೆ ನಾನು ಮರಗಳ ಫಲವನ್ನೂ ಹೊಲದ ಆದಾಯವನ್ನೂ ಹೆಚ್ಚಿಸುವೆನು.
31ಆಮೇಲೆ ನೀವು ನಿಮ್ಮ ನಿಮ್ಮ ದುರ್ಮಾರ್ಗಗಳನ್ನೂ ದುರಾಚಾರಗಳನ್ನೂ ಜ್ಞಾಪಕಕ್ಕೆ ತಂದುಕೊಂಡು ನಿಮ್ಮ ಅಪರಾಧಗಳ ಮತ್ತು ಅಸಹ್ಯಕಾರ್ಯಗಳ ನಿಮಿತ್ತ ನಿಮಗೆ ನೀವೇ ಹೇಸಿಕೊಳ್ಳುವಿರಿ.
32ಇದು ನಿಮಗಾಗಿ ಮಾಡಲಿಲ್ಲವೆಂದು ನಿಮಗೆ ತಿಳಿದಿರಲಿ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಇಸ್ರಾಯೇಲಿನ ಮನೆತನದವರೇ, ನಿಮ್ಮ ದುರ್ಮಾರ್ಗಗಳಿಗೆ ನಾಚಿಕೆಪಟ್ಟು ಲಜ್ಜೆಹೊಂದಿರಿ.
33“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ನಿಮ್ಮ ಎಲ್ಲಾ ಅಕ್ರಮಗಳಿಂದ ನಿಮ್ಮನ್ನು ಶುದ್ಧಮಾಡುವ ಆ ದಿನದಲ್ಲಿ ಪಟ್ಟಣಗಳನ್ನು ನಿವಾಸಿಗಳಿಂದ ತುಂಬಿಸುವೆನು. ಹಾಳಾಗಿರುವ ಸ್ಥಳಗಳಲ್ಲಿಯೂ ಕಟ್ಟಡಗಳು ಪುನಃ ಏಳುವುವು.
34ದೇಶವು ಅಲ್ಲಿ ಹಾದುಹೋಗುವ ಜನರೆಲ್ಲರ ಮುಂದೆ ಹಾಳುಬಿದ್ದ ಹಾಗೆ ಕಾಣದೆ ಉಳುಮೆಗೊಂಡಿರುವುದು.
35“ಹಾಳಾಗಿದ್ದ ಈ ದೇಶವು ಏದೆನಿನ ಉದ್ಯಾನವನದ ಹಾಗಾಯಿತೆಂದು ಮತ್ತು ಹಾಳಾಗಿ ಬಿದ್ದುಹೋಗಿ ಬೀಡಾಗಿ ನಶಿಸಿಹೋಗಿರುವ ಪಟ್ಟಣಗಳು ನಾಡಾಗಿ ಕೋಟೆಗಳಿಂದಲೂ ನಿವಾಸಿಗಳಿಂದಲೂ ತುಂಬಿವೆ,” ಎಂದು ಹೇಳುವರು.
36ಯೆಹೋವ ದೇವರಾದ ನಾನೇ ಬಿದ್ದುಹೋದದ್ದನ್ನು ಕಟ್ಟಿ, ಹಾಳಾದದ್ದನ್ನು ಬೆಳೆಯಿಸಿದ್ದೇನೆ ಎಂಬುದು ನಿಮ್ಮ ಸುತ್ತಲು ಉಳಿದ ಜನಾಂಗಗಳಿಗೆ ಗೊತ್ತಾಗುವುದು. ಯೆಹೋವ ದೇವರಾದ ನಾನೇ ಇದನ್ನು ಹೇಳಿದ್ದೇನೆ ಮತ್ತು ನಾನೇ ಇದನ್ನು ಮಾಡುತ್ತೇನೆ.’
37“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಇನ್ನೊಂದು ವಿಷಯದಲ್ಲಿ, ಇಸ್ರಾಯೇಲರ ಮತ್ತೊಂದು ಕೋರಿಕೆಯನ್ನು ಆಲಿಸಿ ನೆರವೇರಿಸುವೆನು. ನಾನು ಅವರನ್ನು ಮನುಷ್ಯರಲ್ಲಿ ಮಂದೆಯಂತೆ ಹೆಚ್ಚಿಸುವೆನು.
38ಮೀಸಲಾದ ಮಂದೆಯ ಹಾಗೆಯೂ ಯೆರೂಸಲೇಮಿನ ಪರಿಶುದ್ಧ ಹಬ್ಬಗಳ ಮಂದೆಯ ಹಾಗೆಯೂ ಇರುವರು. ಆದಕಾರಣ ಬೀಡಾದ ಪಟ್ಟಣಗಳು ಮನುಷ್ಯರ ಮಂದೆಗಳಿಂದ ತುಂಬುವುವು. ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.