Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 32

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಹನ್ನೆರಡನೆಯ ವರ್ಷದ, ಹನ್ನೆರಡನೆಯ ತಿಂಗಳಿನ, ಮೊದಲನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2“ಮನುಷ್ಯಪುತ್ರನೇ, ಈಜಿಪ್ಟಿನ ಅರಸನಾದ ಫರೋಹನ ವಿಷಯವಾಗಿ ಪ್ರಲಾಪವನ್ನೆತ್ತಿ ಅವನಿಗೆ ಹೇಳಬೇಕಾದದ್ದೇನೆಂದರೆ: “ ‘ನೀನು ಜನಾಂಗಗಳಲ್ಲಿ ಸಿಂಹದ ಮರಿಗೆ ಸಮನಾಗಿರುವೆ, ಮತ್ತು ಸಮುದ್ರಗಳಲ್ಲಿರುವ ತಿಮಿಂಗಿಲದ ಹಾಗಿರುವೆ. ನೀನಿದ್ದ ನದಿಗಳನ್ನು ಭೇದಿಸಿಕೊಂಡು ಬಂದು ನೀರನ್ನು ನಿನ್ನ ಕಾಲುಗಳಿಂದ ಕಲಕಿ ಹೊಳೆಗಳನ್ನು ತುಳಿದು ಬದಿಮಾಡಿದೆ.
3“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಆದ್ದರಿಂದ ನಾನು ಗುಂಪಾಗಿ ಕೂಡಿದ ಬಹಳ ಜನಾಂಗಗಳ ಮೇಲೆ ಬಲೆಯನ್ನು ಬೀಸುವೆನು. ಅವರು ನಿನ್ನನ್ನು ನನ್ನ ಬಲೆಯಲ್ಲಿ ಮೇಲಕ್ಕೆಳೆಯುವರು.
4ಆಗ ನಾನು ನಿನ್ನನ್ನು ನೆಲದ ಮೇಲೆ ಹಾಕಿಬಿಡುವೆನು. ಬಯಲಿನ ಮೇಲೆ ಬಿಸಾಡುವೆನು. ಆಕಾಶದ ಪಕ್ಷಿಗಳನ್ನೆಲ್ಲಾ ನಿನ್ನ ಮೇಲೆ ಕೂರಿಸಿ, ಸಮಸ್ತ ಭೂಮಿಯ ಮೇಲಿನ ಮೃಗಗಳನ್ನು ನಿನ್ನಿಂದ ತೃಪ್ತಿಪಡಿಸುವೆನು.
5ನಿನ್ನ ಮಾಂಸವನ್ನು ಬೆಟ್ಟಗಳ ಮೇಲೆ ಹಾಕಿ, ಆ ನಿನ್ನ ರಾಶಿಯಿಂದ ಕಣಿವೆಗಳನ್ನು ತುಂಬಿಸುವೆನು.
6ನಾನು ನಿನ್ನ ರಕ್ತ ಪ್ರವಾಹದಿಂದ ದೇಶವನ್ನು ಬೆಟ್ಟಗಳ ತನಕ ತೋಯಿಸುವೆನು. ಹಳ್ಳಗಳು ನಿನ್ನ ಮಾಂಸದಿಂದ ತುಂಬುವುವು.
7ಇದಲ್ಲದೆ, ನಾನು ನಿನ್ನನ್ನು ನಂದಿಸುವಾಗ ಆಕಾಶಕ್ಕೆ ಮುಸುಕುಹಾಕಿ ಅಲ್ಲಿನ ನಕ್ಷತ್ರಗಳನ್ನು ಕತ್ತಲಾಗಿ ಮಾಡಿ, ನಾನು ಸೂರ್ಯನನ್ನು ಮೋಡದಿಂದ ಮುಚ್ಚಿ ಬಿಡುವೆನು. ಚಂದ್ರನು ತನ್ನ ಬೆಳಕನ್ನು ಕೊಡದೆ ಇರುವನು.
8ಆಕಾಶದಲ್ಲಿ ಪ್ರಕಾಶಿಸುವ ಬೆಳಕುಗಳನ್ನು ನಿನ್ನ ನಿಮಿತ್ತವಾಗಿ ನಾನು ಕತ್ತಲು ಮಾಡುವೆನು. ನಾನು ಆ ಕತ್ತಲೆಯನ್ನು ನಿನ್ನ ದೇಶದ ಮೇಲೆ ಇಡುತ್ತೇನೆ ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
9ಜನಾಂಗಗಳೊಳಗೆ ನೀನು ಅರಿಯದ ದೇಶಗಳಲ್ಲಿ, ನಿನ್ನ ವಿನಾಶದ ಸುದ್ದಿಯನ್ನು ಹರಡಿ ಅನೇಕ ಜನಗಳ ಹೃದಯದಲ್ಲಿ ಗಲಿಬಿಲಿ ಎಬ್ಬಿಸುವೆನು.
10ನಾನು ಅನೇಕ ಜನರನ್ನು ನಿನ್ನ ವಿಷಯದಲ್ಲಿ ಭಯಭೀತಿಗೊಳ್ಳುವಂತೆ ಮಾಡುವೆನು, ನಾನು ಅವರ ಮುಂದೆ ನನ್ನ ಖಡ್ಗವನ್ನು ಬೀಸುವಾಗ ಅವರ ಅರಸರು ನಿನ್ನ ವಿಷಯದಲ್ಲಿ ಭಯಭ್ರಾಂತಿಗೊಳ್ಳುವರು. ನೀನು ಬೀಳುವ ಆ ದಿನದಲ್ಲಿ ಅವರು ಕ್ಷಣಕ್ಷಣಕ್ಕೆ ತಮ್ಮ ತಮ್ಮ ಪ್ರಾಣದ ಬಗ್ಗೆ ನಡುಗುವರು.
11“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಬಾಬಿಲೋನಿನ ಅರಸನ ಖಡ್ಗವು ನಿನ್ನ ವಿರುದ್ಧ ಬರುವುದು.
12ಪರಾಕ್ರಮಶಾಲಿಗಳ ಖಡ್ಗಗಳಿಂದ ಜನಾಂಗಗಳಲ್ಲಿ ಭಯಂಕರರಾಗಿರುವ ನಿನ್ನ ಸಮೂಹವನ್ನು ನಾನು ಬೀಳುವಂತೆ ಮಾಡುವೆನು. ಅವರು ಈಜಿಪ್ಟಿನ ಮಹತ್ತನ್ನು ಕೆಡಿಸುವರು. ಅದರ ಜನಸಮೂಹವೆಲ್ಲಾ ಹಾಳಾಗುವುದು.
13ನಾನು ಆ ಬಹು ಪ್ರವಾಹಗಳ ಬಳಿಯಲ್ಲಿರುವ ಅದರ ಮೃಗಗಳನ್ನೆಲ್ಲಾ ನಾಶಮಾಡುವೆನು. ಆ ನೀರಿನಲ್ಲಿ ಇನ್ನು ಮೇಲೆ ಮನುಷ್ಯನ ಪಾದವಾಗಲಿ, ಪ್ರಾಣಿಗಳ ಗೊರಸಾಗಲಿ ಕಲಕಿಸುವುದಿಲ್ಲ.
14ಆಮೇಲೆ ನಾನು ಆ ನೀರುಗಳನ್ನು ಆಳವಾಗಿ ಮಾಡುವೆನು. ಅದರ ನದಿಗಳನ್ನು ಎಣ್ಣೆಯ ಹಾಗೆ ಹರಿಯುವಂತೆ ಮಾಡುವೆನು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
15ನಾನು ಈಜಿಪ್ಟ್ ದೇಶವನ್ನು ಹಾಳು ಮಾಡಿ ಅದರ ಸೊತ್ತನ್ನೆಲ್ಲಾ ಧ್ವಂಸಮಾಡಿ ಅದರ ನಿವಾಸಿಗಳನ್ನೆಲ್ಲಾ ಹೊಡೆಯುವಾಗ ನಾನೇ ಯೆಹೋವ ದೇವರು ಎಂದು ಅವರಿಗೆ ತಿಳಿಯುವುದು.’
16“ಇದು ಅವರು ಗೋಳಾಡುವಂತಹ ಗೋಳಾಟವಾಗಿದೆ. ಈಜಿಪ್ಟಿನ ವಿಷಯವಾಗಿಯೂ ಅದರ ಎಲ್ಲಾ ಜನಸಮೂಹದ ವಿಷಯವಾಗಿಯೂ ಜನಾಂಗಗಳ ಪುತ್ರಿಯರು ಇದನ್ನು ಕುರಿತು ಗೋಳಾಡುವರು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.” ಸತ್ತವರ ಸಾಮ್ರಾಜ್ಯಕ್ಕೆ ಈಜಿಪ್ಟಿನ ಇಳಿಯುವಿಕೆ
17ಇದಲ್ಲದೆ ಹನ್ನೆರಡನೆಯ ವರ್ಷದ, ತಿಂಗಳಿನ ಹದಿನೈದನೆಯ ದಿನದಲ್ಲಿ ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ:
18“ಮನುಷ್ಯಪುತ್ರನೇ, ಈಜಿಪ್ಟಿನ ಜನಸಮೂಹದ ವಿಷಯವಾಗಿ ಗೋಳಾಡು; ಅದನ್ನು, ಅದರ ಸಂಗಡ ಘನವುಳ್ಳ ಜನಾಂಗಗಳ ಪುತ್ರಿಯರನ್ನು ಭೂಮಿಯ ಕೆಳಗಿನ ಭಾಗಗಳಿಗೆ ಕುಣಿಕೆಯೊಳಗೆ ಇಳಿಯುವವರ ಜೊತೆ ತಳ್ಳಿಬಿಡು.
19‘ನೀನು ಸೌಂದರ್ಯದಲ್ಲಿ ಯಾರಿಗೆ ಹೋಲುವೆ? ಕೆಳಗೆ ಹೋಗು ಮತ್ತು ಸುನ್ನತಿಯಿಲ್ಲದವರ ಸಂಗಡ ಮಲಗು.’
20ಅವರು ಖಡ್ಗದಿಂದ ಹತರಾದವರ ಮಧ್ಯದಲ್ಲಿ ಬೀಳುವರು. ಖಡ್ಗವನ್ನು ಎಳೆಯಲಾಗುತ್ತದೆ. ಅವಳನ್ನು ತನ್ನ ಎಲ್ಲಾ ಗುಂಪುಗಳೊಂದಿಗೆ ಎಳೆದುಕೊಂಡು ಹೋಗಲಿ.
21ಸತ್ತವರ ಕ್ಷೇತ್ರದೊಳಗಿಂದ ಪ್ರಬಲ ನಾಯಕರು ಈಜಿಪ್ಟ್ ಮತ್ತು ಅವಳ ಮಿತ್ರರಾಷ್ಟ್ರಗಳ ಬಗ್ಗೆ ಹೇಳುವರು, ‘ಅವರು ಇಳಿದು ಹೋಗಿ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿ ಮಲಗಿದ್ದಾರೆ.’
22“ಅಲ್ಲಿ ಅಸ್ಸೀರಿಯ ಮತ್ತು ಅದರ ಎಲ್ಲಾ ಗುಂಪು ಇರುವುದು. ಅಸ್ಸೀರಿಯದ ಸುತ್ತಲೂ ಖಡ್ಗದಿಂದ ಹತರಾದವರ ಸಮಾಧಿಗಳಿರುವುವು;
23ಅವರ ಸಮಾಧಿಗಳು ಕುಳಿಯ ಕಡೆಗಳಲ್ಲಿ ಇಡಲಾಗಿವೆ. ಅವಳ ಸೇನೆಯು ಸಮಾಧಿಯ ಸುತ್ತಲೂ ಇವೆ. ಜೀವಿತರ ದೇಶದಲ್ಲಿ ಭಯವನ್ನು ಹರಡಿದವರೆಲ್ಲರೂ ಖಡ್ಗದಿಂದ ಹತರಾದರು.
24“ಅಲ್ಲಿ ಏಲಾಮು ಮತ್ತು ಅದರ ಎಲ್ಲಾ ಸಮೂಹವು ಆಕೆಯ ಸಮಾಧಿಯ ಸುತ್ತಲೂ ಇದೆ. ಅವರೆಲ್ಲರೂ ಖಡ್ಗದಿಂದ ಹತರಾದವರೇ. ಸುನ್ನತಿಯಿಲ್ಲದವರಾಗಿ ಭೂಮಿಯ ಕೆಳಗಿನ ಭಾಗಗಳಿಗೆ ಇಳಿದು ಹೋದವರೇ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡಿದ್ದಾರೆ.
25ಅವರು ಅವರ ಎಲ್ಲಾ ಸಮೂಹಕ್ಕೂ ಹತರಾದವರ ಮಧ್ಯದಲ್ಲಿ ಹಾಸಿಗೆ ಹಾಕಿದ್ದಾರೆ. ಅದರ ಸುತ್ತಲೂ ಅವರ ಸಮಾಧಿಗಳಿವೆ. ಅವರೆಲ್ಲರೂ ಸುನ್ನತಿಯಿಲ್ಲದವರಾಗಿ ಮತ್ತು ಖಡ್ಗದಿಂದ ಹತರಾಗಿದ್ದಾರೆ. ಅವರು ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಕುಳಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತುಕೊಂಡು ಹತರಾದವರ ಮಧ್ಯದಲ್ಲಿ ಇಡಲಾಗಿದೆ.
26“ಅಲ್ಲಿ ಮೆಷೆಕೂ ತೂಬಲೂ ಮತ್ತು ಅದರ ಎಲ್ಲಾ ಸಮೂಹವೂ ಅದರ ಸಮಾಧಿಗಳೂ ಅದರ ಸುತ್ತಲಾಗಿ ಇವೆ. ಇವರೆಲ್ಲರೂ ಜೀವಿತರ ದೇಶದಲ್ಲಿ ಭಯಂಕರರಾಗಿದ್ದರೂ ಸುನ್ನತಿಯಿಲ್ಲದೆ ಖಡ್ಗದಿಂದ ಹತರಾದವರು.
27ಸುನ್ನತಿಯಿಲ್ಲದವರಲ್ಲಿ ಬಿದ್ದಂತ ತಮ್ಮ ಯುದ್ಧದ ಆಯುಧಗಳ ಸಂಗಡ ಪಾತಾಳಕ್ಕೆ ಇಳಿದಂತಹ ಶೂರರ ಸಂಗಡ ಇವರು ಮಲಗಬೇಡವೇ? ಅವರು ತಮ್ಮ ಖಡ್ಗಗಳನ್ನು ತಮ್ಮ ತಲೆಗಳ ಕೆಳಗೆ ಇಟ್ಟುಕೊಂಡಿದ್ದಾರೆ. ಅವರ ಗುರಾಣಿಗಳು ಅವರ ಮೂಳೆಗಳ ಮೇಲೆ ಇಡಲಾದವು. ಅವರು ಜೀವಿತರ ದೇಶದಲ್ಲಿ ಶೂರರಿಗೆ ಭಯಂಕರರಾಗಿದ್ದರೂ ಅವರ ಅಕ್ರಮಗಳು ಅವರ ಎಲುಬುಗಳ ಮೇಲೆ ಇರುವುವು.
28“ಫರೋಹನೇ, ನೀನೂ ಸುನ್ನತಿಯಿಲ್ಲದವರ ಮಧ್ಯದಲ್ಲಿ ಮುರಿಯಲಾಗುವೆ. ಖಡ್ಗದಿಂದ ಹತರಾದವರ ಸಂಗಡ ಮಲಗುವೆ.
29“ಅಲ್ಲಿ ಎದೋಮೂ ಅದರ ಅರಸರೂ ಮತ್ತು ಎಲ್ಲಾ ಅದರ ಪ್ರಧಾನರೂ ಶೂರರಾಗಿದ್ದರೂ ಖಡ್ಗದಿಂದ ಹತರಾದವರ ಸಂಗಡ ಬಿದ್ದಿರುತ್ತಾರೆ; ಅವರು ಸುನ್ನತಿಯಿಲ್ಲದವರ ಸಂಗಡ ಮತ್ತು ಕುಣಿಗೆ ಇಳಿಯುವವರ ಸಂಗಡ ಹತರಾದವರು.
30“ಅಲ್ಲಿ ಉತ್ತರದ ರಾಜಕುಮಾರರೂ ಸೀದೋನ್ಯರೆಲ್ಲರೂ ಹತರಾದವರೊಂದಿಗೆ ಇಳಿದು ಅಲ್ಲಿದ್ದಾರೆ; ಸುನ್ನತಿಯಿಲ್ಲದವರಾಗಿದ್ದು ಖಡ್ಗದಿಂದ ಹತರಾಗಿ ಕುಣಿಗೆ ಇಳಿಯುವವರ ಸಂಗಡ ತಮ್ಮ ನಿಂದೆಯನ್ನು ಹೊತ್ತವರಾಗಿದ್ದಾರೆ.
31“ಫರೋಹನು ಹಾಗೂ ಆತನ ಸೈನ್ಯವು ಇವರೆಲ್ಲರನ್ನೂ ನೋಡಿ ತನ್ನ ಸಮಸ್ತ ಜನಸಮೂಹದ ವಿಷಯವಾಗಿ ಸಮಾಧಾನ ಹೊಂದುವನು, ಫರೋಹನು ಮತ್ತು ಖಡ್ಗದಿಂದ ಹತರಾದ ಅವನ ಸಕಲ ಸೈನಿಕರೂ ಸಮಾಧಾನ ಹೊಂದುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
32ಏಕೆಂದರೆ ನಾನು ಜೀವಿತರ ದೇಶದಲ್ಲಿ ಭಯವನ್ನು ಉಂಟುಮಾಡಿದ್ದೇ. ಆ ಫರೋಹನೂ ಅವನ ಎಲ್ಲಾ ಸಮೂಹದ ಸಹಿತವಾಗಿ ಖಡ್ಗದಿಂದ ಹತರಾದವರ ಸಂಗಡ, ಸುನ್ನತಿಯಿಲ್ಲದವರ ನಡುವೆ ಸೇರಿಹೋಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.