Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 30

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ವಾಕ್ಯವು ನನಗೆ ಬಂದಿತು,
2“ಮನುಷ್ಯಪುತ್ರನೇ, ಪ್ರವಾದಿಸು ಮತ್ತು ಹೇಳು: ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ “ಅಯ್ಯೋ ಆ ದಿನ!” ಎಂದು, ಅಳುತ್ತಾ ಹೇಳಿರಿ.
3ಏಕೆಂದರೆ ಆ ದಿನವು ಸಮೀಪವಾಯಿತು, ಯೆಹೋವ ದೇವರ ದಿನವು, ಆ ಕಾರ್ಮುಗಿಲಿನ ದಿನವು ಸಮೀಪವಾಯಿತು. ಅದೇ ಜನಾಂಗಗಳಿಗೆ ನ್ಯಾಯತೀರಿಸುವ ಕಾಲವಾಗಿರುವದು.
4ಖಡ್ಗವು ಈಜಿಪ್ಟಿಗೆ ವಿರುದ್ಧವಾಗಿ ಬರುವುದು. ಕೂಷ್ ಪಟ್ಟಣವು ಸಂಕಟಪಡುವುದು. ಈಜಿಪ್ಟಿನಲ್ಲಿ ಕೊಲ್ಲಲಾದವರು ಬಿದ್ದಾಗ, ಅವಳ ಸಂಪತ್ತು ಸೂರೆಯಾಗುವುದು. ಅವಳ ಅಡಿಪಾಯಗಳು ಕಿತ್ತುಹೋಗುವವು.
5ಕೂಷ್ಯರು, ಪೂಟ್ಯರು, ಲೂದ್ಯರು, ಎಲ್ಲಾ ಅರಬ್ಬಿಯರೂ ಕೂಬ್ಯರೂ ಒಡಂಬಡಿಕೆ ಮಾಡಿಕೊಂಡ ಮಿತ್ರ ರಾಜ್ಯದವರೂ ಅವರ ಸಂಗಡ ಖಡ್ಗದಿಂದ ಹತರಾಗುವರು.
6“ ‘ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ಈಜಿಪ್ಟಿನ ಸಹಾಯಕರು ಬೀಳುವರು. ಅದರ ಶಕ್ತಿಯ ಮದವು ಇಳಿದುಹೋಗುವುದು. ಅಲ್ಲಿಯ ಜನರು ಮಿಗ್ದೋಲಿನಿಂದ ಸೆವೇನೆಯ ಗೋಪುರದವರೆಗೆ ಖಡ್ಗದಿಂದ ಹತರಾಗುವರು ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ.
7ಆಗ ಅವರು ಹಾಳಾಗಿರುವ ದೇಶಗಳೊಳಗೆ ತಾವೂ ಹಾಳಾಗುವರು. ಹಾಳಾದ ಪಟ್ಟಣಗಳ ಮಧ್ಯದಲ್ಲಿ ಅದರ ಪಟ್ಟಣಗಳು ಹಾಳಾಗಿ ಇರುವುವು.
8ನಾನು ಈಜಿಪ್ಟಿನಲ್ಲಿ ಬೆಂಕಿಯಿಟ್ಟ ಮೇಲೆ ಅದಕ್ಕೆ ಸಹಾಯ ಮಾಡುವವರೆಲ್ಲರೂ ನಾಶವಾದ ಮೇಲೆ ಅವರಿಗೆ ನಾನೇ ಯೆಹೋವ ದೇವರೆಂದು ತಿಳಿಯುವುದು.
9“ ‘ಆ ದಿನದಲ್ಲಿ ದೂತರು ನನ್ನ ಸನ್ನಿಧಾನದಿಂದ ಹೊರಟು ಹಡಗುಗಳಲ್ಲಿ ಪ್ರಯಾಣಮಾಡಿ ನಿಶ್ಚಿಂತರಾದ ಕೂಷ್ಯರನ್ನು ಹೆದರಿಸುವರು. ಈಜಿಪ್ಟಿನ ದಿನದಲ್ಲಿ ಆದ ಹಾಗೆ ಅವರ ಮೇಲೆ ದೊಡ್ಡ ದುಃಖ ಉಂಟಾಗುವುದು, ಏಕೆಂದರೆ ಇಗೋ, ಆ ದಿನ ಬರುವುದು ನಿಶ್ಚಯ.
10“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ : “ ‘ನಾನು ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಿಂದ ಈಜಿಪ್ಟಿನ ಜನಸಮೂಹವನ್ನು ಕೊನೆಗಾಣಿಸುವೆನು.
11ಆ ದೇಶವನ್ನು ನಾಶಪಡಿಸುವುದಕ್ಕೆ ಅವನನ್ನು ಅತಿಭಯಂಕರ ಜನಾಂಗದವರಾದ ಅವನ ಸೈನಿಕರೊಡನೆ ಬರಮಾಡುವೆನು. ಅವರು ಈಜಿಪ್ಟಿಗೆ ವಿರೋಧವಾಗಿ ಖಡ್ಗ ಹಿರಿದು ದೇಶವನ್ನು ಹತರಾದವರಿಂದ ತುಂಬಿಸುವರು.
12ಇದಲ್ಲದೆ ನಾನು ನದಿಗಳನ್ನು ಒಣಗಿಸಿ ದೇಶವನ್ನು ದುಷ್ಟರ ಕೈಗೆ ಮಾರಿಬಿಡುವೆನು. ದೇಶವನ್ನೂ ಅದರಲ್ಲಿನ ಸಮಸ್ತವನ್ನೂ ವಿದೇಶಿಯರ ಕೈಯಿಂದ ನಾಶಮಾಡಿಸುವೆನು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.
13“ ‘ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: “ ‘ನಾನು ಮೂರ್ತಿಗಳನ್ನು ನಾಶಮಾಡುವೆನು. ಮತ್ತು ನೋಫಿನ ವಿಗ್ರಹಗಳನ್ನು ಕೊನೆಗೊಳಿಸುವೆನು. ಈಜಿಪ್ಟ್ ದೇಶದ ರಾಜಕುಮಾರ ಇನ್ನು ಮುಂದೆ ಇರುವುದಿಲ್ಲ, ನಾನು ಈಜಿಪ್ಟ್ ದೇಶದಲ್ಲಿ ಭಯವನ್ನು ಉಂಟುಮಾಡುವೆನು.
14ನಾನು ಪತ್ರೋಸನ್ನು ನಾಶಮಾಡಿ, ಚೋವನ್ ಪಟ್ಟಣಕ್ಕೆ ಬೆಂಕಿಯಿಡುವೆನು. ತೆಬೆಸ್ ಪಟ್ಟಣವನ್ನು ದಂಡಿಸುವೆನು.
15ಈಜಿಪ್ಟಿಗೆ ರಕ್ಷಣೆಯ ಕೋಟೆಯಾದ ಪೆಲೂಸಿಯಮ್ ಪಟ್ಟಣದ ಮೇಲೆ ನನ್ನ ರೋಷಾಗ್ನಿಯನ್ನು ಸುರಿಸಿ, ತೆಬೆಸಿನ ನಿವಾಸಿಗಳನ್ನೆಲ್ಲಾ ಕಡಿದುಬಿಡುವೆನು.
16ನಾನು ಈಜಿಪ್ಟಿಗೆ ಕಿಚ್ಚನ್ನು ಹಚ್ಚಿಸಲು ಪೆಲೂಸಿಯಮ್ ಪ್ರಾಣಸಂಕಟ ಪಡುವುದು. ತೆಬೆಸವು ಬಿರುಗಾಳಿಯಿಂದ ತೆಗೆದುಕೊಳ್ಳಲಾಗುವುದು, ನೋಫಿನ ಮೇಲೆ ನಿರಂತರವಾಗಿ ಇಕ್ಕಟ್ಟು ಇರುವುದು.
17ಓನಿನ ಮತ್ತು ಪಿಬೇಸೆತಿನ ಯೌವನಸ್ಥರು ಖಡ್ಗದಿಂದ ಸಾಯುವರು. ಈ ಪಟ್ಟಣಗಳ ನಿವಾಸಿಗಳು ತಾವಾಗಿಯೇ ಸೆರೆಯಾಗಿ ಹೋಗುವುವು.
18ನಾನು ಈಜಿಪ್ಟಿನ ನೊಗಗಳನ್ನು ಮುರಿಯುವಾಗ ತಹಪನೇಸಿನಲ್ಲಿ ಹಗಲು ಕತ್ತಲಾಗುವುದು. ಅದರ ಶಕ್ತಿಯ ಮದವು ಅಡಗಿಹೋಗುವುದು. ಅದನ್ನು ಮೇಘವು ಮುಚ್ಚುವುದು. ಅದರ ಪುತ್ರಿಯರು ಸೆರೆಗೆ ಹೋಗುವರು.
19ಹೀಗೆ ನಾನು ಈಜಿಪ್ಟನ್ನು ದಂಡಿಸುವೆನು. ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.’ ” ಫರೋಹನ ತೋಳುಗಳು ಮುರಿದದ್ದು
20ಇದಲ್ಲದೆ ಹನ್ನೊಂದನೆಯ ವರ್ಷದ ಮೊದಲನೆಯ ತಿಂಗಳಿನ, ಏಳನೆಯ ದಿನದಲ್ಲಿ, ಯೆಹೋವ ದೇವರ ವಾಕ್ಯವು ನನಗೆ ಬಂದು ಹೇಳಿದ್ದೇನೆಂದರೆ,
21“ಮನುಷ್ಯಪುತ್ರನೇ, ನಾನು ಈಜಿಪ್ಟಿನ ಅರಸನಾದ ಫರೋಹನ ತೋಳನ್ನು ಮುರಿದು ಹಾಕಿದ್ದೇನೆ. ಇಗೋ, ಆ ದೇಶವನ್ನು ಯಾರೂ ಕಟ್ಟಲಿಲ್ಲ, ಔಷಧ ಹಚ್ಚಲಿಲ್ಲ. ಅದು ಖಡ್ಗ ಹಿಡಿಯುವಷ್ಟು ಬಲಗೊಳ್ಳುವಂತೆ ಯಾರೂ ಬಟ್ಟೆ ಸುತ್ತಿ ಅದನ್ನು ಬಿಗಿಸಲಿಲ್ಲ.
22ಆದ್ದರಿಂದ ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಈಜಿಪ್ಟ್ ದೇಶದ ಅರಸನಾದ ಫರೋಹನಿಗೆ ವಿರುದ್ಧವಾಗಿದ್ದೇನೆ. ಬಲವುಳ್ಳದ್ದೂ ಮುರಿದದ್ದೂ ಆಗಿರುವ ಅವನ ತೋಳುಗಳನ್ನು ಮುರಿಯುತ್ತೇನೆ. ಅವನ ಕೈಯಿಂದ ಖಡ್ಗವನ್ನು ಬೀಳಿಸುತ್ತೇನೆ.
23ಈಜಿಪ್ಟಿನವರನ್ನು ಜನಾಂಗಗಳಲ್ಲಿ ಚದರಿಸಿ ದೇಶಗಳ ಮೇಲೆ ಹರಡುವೆನು.
24ಬಾಬಿಲೋನಿನ ಅರಸನ ತೋಳುಗಳನ್ನು ನಾನು ಬಲಪಡಿಸುವೆನು, ಅವನ ಕೈಯಲ್ಲಿ ನನ್ನ ಖಡ್ಗವನ್ನಿಡುವೆನು. ಫರೋಹನ ತೋಳುಗಳು ಬಿದ್ದು ಹೋಗುವುವು. ಇವನು ಅವನ ಮುಂದೆ ಗಾಯ ಹೊಂದಿದವನಂತೆ ನರಳಾಡುವನು.
25ನಾನು ಬಾಬಿಲೋನಿನ ಅರಸನ ಕೈಗಳನ್ನು ಬಲಪಡಿಸುತ್ತೇನೆ, ಆದರೆ ಫರೋಹನ ಕೈಗಳು ಬಲಹೀನವಾಗುವುವು. ನಾನು ನನ್ನ ಖಡ್ಗವನ್ನು ಬಾಬಿಲೋನಿನ ಅರಸನ ಕೈಗೆ ಕೊಡುವೆನು. ಅವನು ಅದನ್ನು ಈಜಿಪ್ಟಿನ ವಿರೋಧವಾಗಿ ಪ್ರಯೋಗಿಸುವನು. ಆಗ ಅವರು ನಾನೇ ಯೆಹೋವ ದೇವರು ಎಂದು ತಿಳಿದುಕೊಳ್ಳುವರು.
26ನಾನು ಈಜಿಪ್ಟಿನವರನ್ನು ಜನಾಂಗಗಳೊಗೆ ಚದುರಿಸಿ ದೇಶಗಳಲ್ಲಿ ಹರಡಿಸುತ್ತೇನೆ; ಆಗ ನಾನೇ ಯೆಹೋವ ದೇವರೆಂದು ಅವರಿಗೆ ತಿಳಿಯುವುದು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.