Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಯೆಹೆಜ್ಕೇಲನು 18

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರ ವಾಕ್ಯವು ನನಗೆ ಬಂದಿತು:
2“ನೀವು ಇಸ್ರಾಯೇಲ್ ದೇಶದ ವಿಷಯವಾಗಿ ಈ ಗಾದೆಯನ್ನು ಉಲ್ಲೇಖಿಸುವುದರ ಅರ್ಥವೇನು: “ ‘ಪಿತೃಗಳು ಹುಳಿದ್ರಾಕ್ಷಿಗಳನ್ನು ತಿಂದರು, ಮಕ್ಕಳ ಹಲ್ಲು ಚಳಿತು ಹೋಯಿತು.’
3“ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ: ನನ್ನ ಜೀವದಾಣೆ, ನೀವು ಈ ಗಾದೆಯನ್ನು ಇಸ್ರಾಯೇಲಿನಲ್ಲಿ ಇನ್ನು ಹೇಳುವ ಸಂದರ್ಭವು ಇರುವುದಿಲ್ಲ.
4ಎಲ್ಲಾ ಪ್ರಾಣಗಳು ನನ್ನವೇ, ತಂದೆಯ ಪ್ರಾಣವು ಹೇಗೋ ಹಾಗೆಯೇ ಮಗನ ಪ್ರಾಣವು ನನ್ನದೇ. ಪಾಪ ಮಾಡುವವನೇ ಸಾಯುವನು.
5“ಆದರೆ ಒಬ್ಬ ಮನುಷ್ಯನು ನೀತಿವಂತನಾಗಿದ್ದು, ನೀತಿಯನ್ನೂ ನ್ಯಾಯವನ್ನೂ ನಡೆಸಿ,
6ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ, ಮುಟ್ಟಾಗಿರುವ ಸ್ತ್ರೀಯನ್ನು ಸಮೀಪಿಸದೆ,
7ಯಾರನ್ನೂ ಉಪದ್ರವಪಡಿಸದೆ, ಸಾಲ ಮಾಡಿದವನ ಒತ್ತೆಯನ್ನು ಹಿಂದಕ್ಕೆ ಕೊಟ್ಟು, ಹಿಂಸೆ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಿರುವವನಿಗೆ ಬಟ್ಟೆಯನ್ನು ಹೊದಿಸಿ,
8ಬಡ್ಡಿಗೆ ಸಾಲ ಕೊಡದೆ, ಲಾಭವನ್ನು ತೆಗೆದುಕೊಳ್ಳದೆ, ಅನ್ಯಾಯದಿಂದ ತನ್ನ ಕೈಯನ್ನು ಹಿಂತೆಗೆದು ವಾದಿ ಪ್ರತಿವಾದಿಗಳಿಗೆ ಸರಿಯಾಗಿ ನ್ಯಾಯತೀರಿಸಿ,
9ಸತ್ಯವನ್ನು ನಡೆಸುವುದಕ್ಕಾಗಿ ನನ್ನ ನಿಯಮಗಳಲ್ಲಿ ನಡೆದು, ನನ್ನ ನ್ಯಾಯಗಳನ್ನು ಕೈಗೊಂಡು ಸತ್ಯಪರನಾಗಿ ನಡೆದರೆ, ಅವನು ನೀತಿವಂತನು ಮತ್ತು ನಿಶ್ಚಯವಾಗಿ ಬದುಕುವನು,” ಎಂದು ಸಾರ್ವಭೌಮ ಯೆಹೋವ ದೇವರು ಹೇಳಿದ್ದಾರೆ.
10“ಒಂದು ವೇಳೆ ಇಂಥವನು ಪಡೆದ ಮಗನು, ಈಗ ಹೇಳಿದ ದುಷ್ಕೃತ್ಯಗಳಲ್ಲಿ ಯಾವುದನ್ನಾದರೂ ನಡೆಸಿ,
11ಸುಕೃತ್ಯಗಳಲ್ಲಿ ಯಾವುದನ್ನೂ ನಡೆಸದೆ, “ಪರ್ವತಗಳ ಪೂಜಾಸ್ಥಳಗಳಲ್ಲಿ ತಿಂದು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿ,
12ಬಡವರನ್ನೂ, ದರಿದ್ರರನ್ನೂ ಉಪದ್ರವಗೊಳಿಸಿ, ಹಿಂಸಿಸಿ, ಸುಲಿಗೆ ಮಾಡಿ, ಒತ್ತೆಗಳನ್ನು ಹಿಂದೆ ಕೊಡದೆ, ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತಿ ಅಸಹ್ಯವಾದವುಗಳನ್ನು ಮಾಡಿ,
13ಸಾಲಕ್ಕೆ ಬಡ್ಡಿ ತೆಗೆದುಕೊಂಡು, ಲಾಭ ಪಡೆಯುವವನು ಆಗಿದ್ದರೆ, ಅವನು ಬದುಕುವನೋ? ಅವನು ಬದುಕುವುದಿಲ್ಲ, ಅವನು ಈ ಅಸಹ್ಯಗಳನ್ನೆಲ್ಲಾ ಮಾಡಿದ್ದರಿಂದ ಅವನು ಸಾಯುವುದು ನಿಶ್ಚಯ; ತನ್ನ ಮರಣಕ್ಕೆ ತಾನೇ ಕಾರಣ.
14“ಒಂದು ವೇಳೆ ಇವನು ಪಡೆದ ಮಗನು ತನ್ನ ತಂದೆ ಮಾಡಿದ ಪಾಪಗಳನ್ನೆಲ್ಲಾ ಕಂಡು ಆಲೋಚಿಸಿ, ಇಂಥಾ ಕಾರ್ಯಗಳನ್ನು ನಡೆಸದೆ,
15“ಪರ್ವತಗಳ ಪೂಜಾಸ್ಥಳಗಳಲ್ಲಿ ತಿನ್ನದೆ, ಇಸ್ರಾಯೇಲಿನ ಮನೆತನದವರ ವಿಗ್ರಹಗಳ ಕಡೆಗೆ ತನ್ನ ಕಣ್ಣುಗಳನ್ನು ಎತ್ತದೆ, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸದೆ,
16ಯಾರನ್ನೂ ಹಿಂಸಿಸದೆ, ಒತ್ತೆಯನ್ನು ಕೇಳದೆ, ಹಿಂಸೆಯಿಂದ ಸುಲಿಗೆ ಮಾಡದೆ, ಹಸಿದವನಿಗೆ ತನ್ನ ರೊಟ್ಟಿಯನ್ನು ಕೊಟ್ಟು ಮತ್ತು ಬೆತ್ತಲೆಯಾದವನಿಗೆ ವಸ್ತ್ರವನ್ನು ಹೊದಿಸಿ,
17ತನ್ನ ಕೈಯನ್ನು ಪಾಪ ಮಾಡುವುದರಿಂದ ಹಿಂತೆಗೆದು ಬಡ್ಡಿಯನ್ನೂ, ಲಾಭವನ್ನೂ ತೆಗೆದುಕೊಳ್ಳದೆ, ನನ್ನ ವಿಧಿಗಳನ್ನು ಪಾಲಿಸಿ, ನನ್ನ ನಿಯಮಗಳಲ್ಲಿ ನಡೆದರೆ, ಅವನು ತನ್ನ ತಂದೆಯ ಅಕ್ರಮಗಳ ನಿಮಿತ್ತ ಸಾಯುವುದಿಲ್ಲ, ಅವನು ನಿಶ್ಚಯವಾಗಿ ಬದುಕುವನು.
18ಇವನ ತಂದೆಯಾದರೊ ಸ್ವಜನರನ್ನು ಬಲಾತ್ಕಾರ ಮಾಡಿದ್ದರಿಂದಲೂ, ತನ್ನ ಸಹೋದರನನ್ನು ಹಿಂಸಿಸಿ ಸುಲಿಗೆ ಮಾಡಿದ್ದರಿಂದಲೂ, ತನ್ನ ಜನರ ಮಧ್ಯದಲ್ಲಿ ಕೆಟ್ಟದ್ದನ್ನು ಮಾಡಿದ್ದರಿಂದಲೂ ಅವನು ತನ್ನ ಅಕ್ರಮದಲ್ಲಿ ಸಾಯುವನು.
19“ಆದರೂ ಇನ್ನೂ ನೀವು ಹೇಳುವುದೇನು? ‘ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲವೇ?’ ಎಂದು ಹೇಳುವಿರಿ. ಮಗನು ನ್ಯಾಯವನ್ನೂ, ನೀತಿಯನ್ನೂ ಮಾಡಿ, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು ನಡೆದರೆ ಅವನು ನಿಶ್ಚಯವಾಗಿ ಬದುಕುವನು.
20ಪಾಪ ಮಾಡುವವನೇ ಸಾಯುವನು. ಮಗನು ತಂದೆಯ ಅಕ್ರಮವನ್ನು ಹೊರುವುದಿಲ್ಲ; ನೀತಿವಂತನ ನೀತಿಯು ಅವನ ಮೇಲೆಯೇ ಇರುವುದು; ದುಷ್ಟನ ದುಷ್ಟತನವು ಅವನ ಮೇಲೆಯೇ ಇರುವುದು.
21“ದುಷ್ಟನು ತಾನು ಮಾಡಿದ ಪಾಪಗಳನ್ನೆಲ್ಲಾ ಬಿಟ್ಟು ತಿರುಗಿಕೊಂಡು, ನನ್ನ ನಿಯಮಗಳನ್ನೆಲ್ಲಾ ಕೈಗೊಂಡು, ನ್ಯಾಯವನ್ನೂ, ನೀತಿಯನ್ನೂ ನಡೆಸಿದರೆ, ಅವನು ಸಾಯದೆ ಖಂಡಿತವಾಗಿ ಬದುಕುವನು.
22ಅವನು ಮಾಡಿದ ಪಾಪಗಳಲ್ಲಿ ಒಂದಾದರೂ ಅವನ ಲೆಕ್ಕಕ್ಕೆ ಸೇರಿಸಲಾಗುವುದಿಲ್ಲ. ಅವನು ಮಾಡಿದ ನೀತಿಯಿಂದಲೇ ಅವನು ಬದುಕುವನು.
23ದುಷ್ಟನು ಸಾಯುವುದರಲ್ಲಿ ನನಗೆ ಸ್ವಲ್ಪ ಸಂತೋಷವಿರುವುದೋ?” ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾನೆ. “ಅವನು ತನ್ನ ದುರ್ಮಾರ್ಗಗಳನ್ನು ಬಿಟ್ಟು ಬದುಕಿದರೆ ನನಗೆ ಸಂತೋಷವಲ್ಲವೇ?
24“ಆದರೆ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಅನ್ಯಾಯ ಮಾಡಿ, ದುಷ್ಟನು ಮಾಡುವ ಎಲ್ಲಾ ಅಸಹ್ಯವಾದವುಗಳ ಹಾಗೆ ಮಾಡಿದರೆ ಅವನು ಬದುಕುವನೇ? ಅವನು ಮಾಡಿರುವ ಎಲ್ಲಾ ಸುಕೃತ್ಯಗಳು ಅವನ ಲೆಕ್ಕಕ್ಕೆ ಸೇರುವುದಿಲ್ಲ. ಅವನು ಮಾಡಿರುವ ಅಪರಾಧದಿಂದಲೂ, ಪಾಪದಿಂದಲೂ ಅವುಗಳಲ್ಲಿಯೇ ಅವನು ಸಾಯುವನು.
25“ಆದರೆ ನೀವು, ‘ಯೆಹೋವ ದೇವರ ಮಾರ್ಗವು ಸರಿಯಲ್ಲ’ ಎಂದು ಹೇಳುತ್ತೀರಿ. ಇಸ್ರಾಯೇಲ್ ಜನರೇ, ಈಗ ಕೇಳಿರಿ, ನನ್ನ ಮಾರ್ಗವು ಸರಿಯಲ್ಲವೇ? ನಿಜಕ್ಕೂ ನಿಮ್ಮ ಮಾರ್ಗಗಳೇ ಸರಿಯಲ್ಲ.
26ಒಬ್ಬ ನೀತಿವಂತನು ತನ್ನ ನೀತಿಯನ್ನು ಬಿಟ್ಟು ಪಾಪವನ್ನು ಮಾಡಿದರೆ, ಅವನು ಅದಕ್ಕಾಗಿ ಸಾಯಬೇಕು; ಹೌದು, ಅವನು ಮಾಡಿದ ಪಾಪದಿಂದಲೇ ಅವನು ಸಾಯಬೇಕು.
27ಒಬ್ಬ ದುಷ್ಟನು ತನ್ನ ದುಷ್ಟತನವನ್ನು ಬಿಟ್ಟು, ನೀತಿನ್ಯಾಯವನ್ನು ಅನುಸರಿಸಿದರೆ, ಅವನು ತನ್ನ ಪ್ರಾಣವನ್ನು ಉಳಿಸಿಕೊಳ್ಳುವನು.
28ಏಕೆಂದರೆ ಅವನು ತಾನು ಮಾಡಿದ ದುಷ್ಕೃತ್ಯಗಳನ್ನು ಯೋಚಿಸಿ, ಅವುಗಳನ್ನು ಬಿಟ್ಟು ತಿರುಗಿಕೊಳ್ಳುವುದರಿಂದ ಸಾಯದೆ ನಿಶ್ಚಯವಾಗಿ ಬದುಕುವನು.
29ಆದರೆ ಇಸ್ರಾಯೇಲ್ ಜನರು, ‘ಯೆಹೋವ ದೇವರ ಮಾರ್ಗ ನೀತಿಯುಕ್ತವಲ್ಲ,’ ಎನ್ನುತ್ತಾರೆ. ಇಸ್ರಾಯೇಲ್ ಜನರೇ, ನನ್ನ ಮಾರ್ಗ ಸರಿಯಲ್ಲವೇ? ನಿಮ್ಮ ಮಾರ್ಗಗಳು ಅನೀತಿಯ ಮಾರ್ಗಗಳಲ್ಲವೇ?
30“ಆದ್ದರಿಂದ ಇಸ್ರಾಯೇಲ್ ಜನರೇ, ನಿಮ್ಮ ನಿಮ್ಮ ಮಾರ್ಗಗಳ ಪ್ರಕಾರ ಪ್ರತಿಯೊಬ್ಬನಿಗೆ ನ್ಯಾಯತೀರಿಸುವೆನು, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ನಿಮ್ಮ ದುಷ್ಟತನಗಳನ್ನೆಲ್ಲಾ ಬಿಟ್ಟು ತಿರುಗಿಕೊಳ್ಳಿರಿ. ಆಗ ಪಾಪವು ನಿಮ್ಮ ಪತನಕ್ಕೆ ಕಾರಣವಾಗುವುದಿಲ್ಲ.
31ನೀವು ಮಾಡುವ ದುಷ್ಕೃತ್ಯಗಳನ್ನೆಲ್ಲಾ ನಿಮ್ಮಿಂದ ಎಸೆದುಬಿಡಿರಿ. ಹೊಸ ಹೃದಯವನ್ನೂ, ಹೊಸ ಆತ್ಮವನ್ನೂ ನೀವು ಪಡೆದುಕೊಳ್ಳಿರಿ. ಇಸ್ರಾಯೇಲಿನ ಮನೆತನದವರೇ, ನೀವು ಸಾಯುವುದೇಕೆ?
32ಏಕೆಂದರೆ ಯಾವುದೇ ವ್ಯಕ್ತಿಯ ಸಾವಿನಲ್ಲಿ ನನಗೆ ಸಂತೋಷವಿಲ್ಲ, ಎಂದು ಸಾರ್ವಭೌಮ ಯೆಹೋವ ದೇವರು ಹೇಳುತ್ತಾರೆ. ಆದಕಾರಣ ಮಾನಸಾಂತರಪಟ್ಟು ಬಾಳಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.