Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 4

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮೋಶೆಯು ಉತ್ತರವಾಗಿ, “ಅವರು ನನ್ನನ್ನು ನಂಬದೆ, ನನ್ನ ಮಾತಿಗೆ ಕಿವಿಗೊಡದೆ, ‘ಯೆಹೋವ ದೇವರು ನಿನಗೆ ಕಾಣಿಸಿಕೊಂಡೇ ಇಲ್ಲ,’ ಎಂದು ಹೇಳಬಹುದು,” ಎಂದನು.
2ಯೆಹೋವ ದೇವರು ಅವನಿಗೆ, “ನಿನ್ನ ಕೈಯಲ್ಲಿರುವುದೇನು?” ಎಂದು ಕೇಳಿದರು. ಅವನು, “ಕೋಲು,” ಎಂದನು.
3ಯೆಹೋವ ದೇವರು ಅವನಿಗೆ, “ಅದನ್ನು ನೆಲದ ಮೇಲೆ ಬಿಸಾಡು,” ಎಂದರು. ಅವನು ಅದನ್ನು ನೆಲದ ಮೇಲೆ ಬಿಸಾಡಿದನು. ಆಗ ಅದು ಸರ್ಪವಾಯಿತು. ಮೋಶೆ ಅಲ್ಲಿಂದ ಓಡಿಹೋದನು.
4ಯೆಹೋವ ದೇವರು ಮೋಶೆಗೆ, “ನಿನ್ನ ಕೈಚಾಚಿ, ಅದರ ಬಾಲವನ್ನು ಹಿಡಿ,” ಎಂದಾಗ, ಅವನು ಕೈಚಾಚಿ ಅದನ್ನು ಹಿಡಿದ ಕೂಡಲೇ, ಅದು ಅವನ ಕೈಯಲ್ಲಿ ಕೋಲಾಯಿತು.
5ಆಗ ಯೆಹೋವ ದೇವರು ಅವನಿಗೆ, “ಇದರಿಂದ ಆ ಜನರು ತಮ್ಮ ಪೂರ್ವಜರಾದ ಅಬ್ರಹಾಮ, ಇಸಾಕ ಹಾಗೂ ಯಾಕೋಬರ ದೇವರಾಗಿರುವ ಯೆಹೋವ ದೇವರು ನಿನಗೆ ಪ್ರಕಟವಾಗಿದ್ದು ನಿಜ ಎಂಬುದನ್ನು ನಂಬುವರು,” ಎಂದರು.
6ಇದಲ್ಲದೆ ಯೆಹೋವ ದೇವರು ಅವನ ಸಂಗಡ ಇನ್ನೂ ಮಾತನಾಡಿ, “ನಿನ್ನ ಕೈಯನ್ನು ನಿನ್ನ ಉಡಿಯಲ್ಲಿ ಇಟ್ಟುಕೋ,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ ಹೊರಗೆ ತೆಗೆದನು. ಇಗೋ, ಅವನ ಕೈ ಕುಷ್ಠದಿಂದ ಹಿಮದಂತೆ ಆಗಿತ್ತು.
7ದೇವರು ಅವನಿಗೆ, “ನಿನ್ನ ಕೈಯನ್ನು ಉಡಿಯಲ್ಲಿ ಹಾಕು,” ಎಂದಾಗ, ಅವನು ತನ್ನ ಕೈಯನ್ನು ಉಡಿಯಲ್ಲಿ ಹಾಕಿ, ಉಡಿಯಿಂದ ಹೊರಗೆ ತೆಗೆದಾಗ, ಅದು ಅವನ ಉಳಿದ ಮೈಯಂತೆ ಆಗಿತ್ತು.
8ಆಗ ಯೆಹೋವ ದೇವರು, “ಜನರು ನಿನ್ನನ್ನು ನಂಬದೆ ಮೊದಲನೆಯ ಸೂಚಕಕಾರ್ಯವನ್ನು ಗಮನಿಸದೆ ಹೋದರೂ, ಎರಡನೆಯ ಸೂಚಕಕಾರ್ಯವನ್ನು ನೋಡಿ ನಂಬುವರು.
9ಆ ಎರಡೂ ಸೂಚಕಕಾರ್ಯಗಳನ್ನು ಅವರು ನಂಬದೆ, ನಿನ್ನ ಮಾತನ್ನು ಕೇಳದೆ ಹೋದರೆ, ನೀನು ನೈಲ್ ನದಿಯ ನೀರನ್ನು ತೆಗೆದು, ಒಣಗಿದ ನೆಲದ ಮೇಲೆ ಸುರಿಯಬೇಕು. ಆಗ ನೀನು ತೆಗೆದ ನದಿಯ ನೀರು ಒಣಗಿದ ನೆಲದ ಮೇಲೆ ರಕ್ತವಾಗುವುದು,” ಎಂದರು.
10ಮೋಶೆಯು ಯೆಹೋವ ದೇವರಿಗೆ, “ಸ್ವಾಮಿ, ನನ್ನನ್ನು ಕ್ಷಮಿಸಿರಿ, ನಾನು ಮೊದಲಿನಿಂದಲೂ ನೀವು ನಿಮ್ಮ ದಾಸನ ಸಂಗಡ ಮಾತನಾಡಿದಂದಿನಿಂದಲೂ ವಾಕ್ಚಾತುರ್ಯವಿಲ್ಲದವನು. ನನ್ನ ಮಾತೂ ನಾಲಿಗೆಯೂ ಮಂದವಾಗಿವೆ,” ಎಂದನು.
11ಅದಕ್ಕೆ ಯೆಹೋವ ದೇವರು ಅವನಿಗೆ, “ಮನುಷ್ಯರಿಗೆ ಬಾಯಿ ಕೊಟ್ಟಾತನೂ ಯಾರು? ಮೂಕರನ್ನೂ ಕಿವುಡರನ್ನೂ ಮಾಡಿದಾತನೂ ಯಾರು? ದೃಷ್ಟಿಯುಳ್ಳವರನ್ನೂ ದೃಷ್ಟಿಯಿಲ್ಲದವರನ್ನೂ ಮಾಡಿದಾತನೂ ಯಾರು? ಯೆಹೋವ ದೇವರಾದ ನಾನೇ ಅಲ್ಲವೋ?
12ಹಾಗಾದರೆ ಈಗ ಹೋಗು, ನಾನೇ ನಿನ್ನ ಸಂಗಡವಿದ್ದು, ನೀನು ಮಾತನಾಡತಕ್ಕದ್ದನ್ನು ನಿನಗೆ ಬೋಧಿಸುವೆನು,” ಎಂದರು.
13ಅದಕ್ಕೆ ಮೋಶೆಯು, “ಸ್ವಾಮಿ, ನೀವು ಬೇರೊಬ್ಬನನ್ನು ಕಳುಹಿಸಿರಿ, ಎಂದು ಬೇಡುತ್ತೇನೆ,” ಎಂದನು.
14ಯೆಹೋವ ದೇವರು ಮೋಶೆಯ ಮೇಲೆ ಬೇಸರಗೊಂಡು, “ಲೇವಿಯನಾದ ಆರೋನನು ನಿನ್ನ ಸಹೋದರನಲ್ಲವೇ? ಅವನು ಚೆನ್ನಾಗಿ ಮಾತನಾಡಬಲ್ಲನೆಂದು ನನಗೆ ಗೊತ್ತಿದೆ. ಅವನು ನಿನ್ನನ್ನು ಎದುರುಗೊಳ್ಳುವುದಕ್ಕೆ ಬರುತ್ತಾನೆ. ಅವನು ನಿನ್ನನ್ನು ಕಂಡು, ತನ್ನ ಹೃದಯದಲ್ಲಿ ಆನಂದಿಸುವನು.
15ಅವನ ಸಂಗಡ ನೀನು ಮಾತನಾಡಿ, ಹೇಳಬೇಕಾದ ಮಾತುಗಳನ್ನು ಅವನಿಗೆ ತಿಳಿಸಬೇಕು. ನಿನ್ನ ಬಾಯಿಂದಲೂ ಅವನ ಬಾಯಿಂದಲೂ ನಾನೇ ಮಾತನಾಡಿ ನೀವು ಮಾಡಬೇಕಾದುದನ್ನು ಕಲಿಸುವೆನು.
16ಅವನು ನಿನ್ನ ಪರವಾಗಿ ಜನರ ಸಂಗಡ ಮಾತನಾಡುವನು. ಅವನು ನಿನಗೆ ಬಾಯಿಯಾಗಿರುವನು, ನೀನು ಅವನಿಗೆ ದೇವರಂತಿರುವಿ.
17ಆದರೆ ಈ ಕೋಲನ್ನು ನಿನ್ನ ಕೈಯಲ್ಲಿ ತೆಗೆದುಕೊಳ್ಳಬೇಕು. ಇದರಿಂದಲೇ ನೀನು ಸೂಚಕಕಾರ್ಯಗಳನ್ನು ಮಾಡುವೆ,” ಎಂದರು. ಮೋಶೆ ಈಜಿಪ್ಟ್ ದೇಶಕ್ಕೆ ಇಸ್ರಾಯೇಲರ ಬಳಿಗೆ ಬಂದದ್ದು
18ಇದಾದ ಮೇಲೆ ಮೋಶೆಯು ತನ್ನ ಮಾವನಾದ ಇತ್ರೋವನ ಬಳಿಗೆ ಬಂದು ಅವನಿಗೆ, “ಈಜಿಪ್ಟಿನಲ್ಲಿರುವ ನನ್ನ ಸಹೋದರರ ಬಳಿಗೆ ಹಿಂದಿರುಗಿ ಹೋಗಿ, ಅವರು ಇನ್ನೂ ಜೀವದಿಂದ ಇದ್ದಾರೋ ಎಂಬುದನ್ನು ನೋಡುವೆನು,” ಎಂದನು. ಇತ್ರೋವನು ಮೋಶೆಗೆ, “ಸಮಾಧಾನದಿಂದ ಹೋಗು,” ಎಂದನು.
19ಯೆಹೋವ ದೇವರು ಮಿದ್ಯಾನಿನಲ್ಲಿ ಮೋಶೆಗೆ, “ಈಜಿಪ್ಟಿಗೆ ಹಿಂದಿರುಗಿ ಹೋಗು. ಏಕೆಂದರೆ ನಿನ್ನನ್ನು ಕೊಲ್ಲಬೇಕೆಂದಿದ್ದ ಜನರೆಲ್ಲಾ ಸತ್ತಿದ್ದಾರೆ,” ಎಂದರು.
20ಆಗ ಮೋಶೆಯು ತನ್ನ ಹೆಂಡತಿಯನ್ನೂ ಮಕ್ಕಳನ್ನೂ ಕರೆದುಕೊಂಡು ಅವರನ್ನು ಕತ್ತೆಯ ಮೇಲೆ ಕುಳ್ಳಿರಿಸಿ, ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಬಂದನು. ಇದಲ್ಲದೆ ದೇವರ ಕೋಲನ್ನು ಕೈಯಲ್ಲಿ ತೆಗೆದುಕೊಂಡನು.
21ಆಗ ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶಕ್ಕೆ ಹಿಂದಿರುಗಿ ಹೋಗುವಾಗ, ನಾನು ನಿನ್ನ ಕೈಯಲ್ಲಿ ಮಾಡಿಸಿದ ಎಲ್ಲಾ ಸೂಚಕಕಾರ್ಯಗಳನ್ನು ಫರೋಹನ ಮುಂದೆ ಮಾಡು. ಆದರೆ ನಾನು ಅವನ ಹೃದಯವನ್ನು ಕಠಿಣಪಡಿಸುವೆನು. ಅವನು ಜನರನ್ನು ಹೋಗಗೊಡಿಸುವುದಿಲ್ಲ.
22ಆಗ ನೀನು ಫರೋಹನಿಗೆ, ‘ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲ ನನ್ನ ಮಗನು, ನನ್ನ ಜೇಷ್ಠಪುತ್ರನು.
23ಫರೋಹನೇ, ನಾನು ನಿನಗೆ ಹೇಳುವುದೇನೆಂದರೆ: “ನನ್ನ ಸೇವೆಮಾಡುವಂತೆ ನನ್ನ ಮಗನನ್ನು ಕಳುಹಿಸು.” ನೀನು ಅವನನ್ನು ಕಳುಹಿಸುವುದನ್ನು ನಿರಾಕರಿಸಿದರೆ, ನಾನು ನಿನ್ನ ಮಗನನ್ನು ಅಂದರೆ, ನಿನ್ನ ಜೇಷ್ಠಪುತ್ರನನ್ನು ಕೊಲ್ಲುವೆನು,’ ಎಂದು ತಿಳಿಸಬೇಕು,” ಎಂದರು.
24ಇದಲ್ಲದೆ ಮೋಶೆಯು ಹೋಗುವ ದಾರಿಯಲ್ಲಿ ವಸತಿಗೃಹದಲ್ಲಿದ್ದಾಗ, ಯೆಹೋವ ದೇವರು ಮೋಶೆಯ ಎದುರಿಗೆ ಬಂದು ಅವನನ್ನು ಕೊಲ್ಲುವುದಕ್ಕಿದ್ದಾಗ,
25ಚಿಪ್ಪೋರಳು ಕಲ್ಲಿನ ಚೂರಿ ತೆಗೆದುಕೊಂಡು ತನ್ನ ಮಗನಿಗೆ ಸುನ್ನತಿ ಮಾಡಿ, ಅದನ್ನು ಮೋಶೆಯ ಪಾದಗಳಿಗೆ ಮುಟ್ಟಿಸಿ ಅವನಿಗೆ, “ಖಂಡಿತವಾಗಿ ನೀನು ನನಗೆ ರಕ್ತಧಾರೆಯಿಂದಾದ ಗಂಡನು,” ಎಂದಳು.
26ಆಗ ಯೆಹೋವ ದೇವರು ಅವನನ್ನು ಉಳಿಸಿದರು. ಆಗ ಅವಳು, “ಸುನ್ನತಿಯ ನಿಮಿತ್ತ ನೀನು ನನಗೆ ರಕ್ತಧಾರೆಯಿಂದ ಗಂಡನಾಗಿದ್ದೀ,” ಎಂದಳು.
27ಇದಲ್ಲದೆ ಯೆಹೋವ ದೇವರು ಆರೋನನಿಗೆ, “ಮೋಶೆಯನ್ನು ಎದುರುಗೊಳ್ಳುವದಕ್ಕೆ ಮರುಭೂಮಿಗೆ ಹೋಗು,” ಎಂದರು. ಆಗ ಅವನು ಹೋಗಿ ದೇವರ ಬೆಟ್ಟದಲ್ಲಿ ಮೋಶೆಯನ್ನು ಎದುರುಗೊಂಡು ಮುದ್ದಿಟ್ಟನು.
28ಆಗ ಮೋಶೆಯು ಆರೋನನಿಗೆ ತನ್ನನ್ನು ಕಳುಹಿಸಿದ ಯೆಹೋವ ದೇವರ ಎಲ್ಲಾ ಮಾತುಗಳನ್ನೂ ತನಗೆ ಆಜ್ಞಾಪಿಸಿದ ಎಲ್ಲಾ ಸೂಚಕಕಾರ್ಯಗಳನ್ನೂ ತಿಳಿಸಿದನು.
29ತರುವಾಯ ಮೋಶೆಯೂ ಆರೋನನೂ ಹೋಗಿ ಇಸ್ರಾಯೇಲಿನ ಹಿರಿಯರನ್ನೆಲ್ಲಾ ಒಟ್ಟುಗೂಡಿಸಿದರು.
30ಯೆಹೋವ ದೇವರು ಮೋಶೆಗೆ ಹೇಳಿದ ಮಾತುಗಳನ್ನೆಲ್ಲಾ ಆರೋನನು ಅವರಿಗೆ ಹೇಳಿ, ಜನರ ಮುಂದೆ ಸೂಚಕಕಾರ್ಯಗಳನ್ನು ಮಾಡಿದನು.
31ಜನರು ನಂಬಿದರು. ಯೆಹೋವ ದೇವರು ಇಸ್ರಾಯೇಲರನ್ನು ದರ್ಶಿಸಿ, ಅವರ ವ್ಯಥೆಯನ್ನು ನೋಡಿದ್ದಾರೆ ಎಂದು ಅವರು ಕೇಳಿದಾಗ, ತಲೆಬಾಗಿಸಿ ಆರಾಧಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.