Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 36

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ತರುವಾಯ ಬೆಚಲಯೇಲ್ ಮತ್ತು ಒಹೋಲಿಯಾಬನೂ ಯೆಹೋವ ದೇವರು ಆಜ್ಞಾಪಿಸಿದಂತೆಯೇ ಎಲ್ಲವುಗಳನ್ನು ಮಾಡುವರು. ಅವರು ಪರಿಶುದ್ಧಸ್ಥಳದ ಸೇವೆಗೋಸ್ಕರ ಎಲ್ಲಾ ವಿಧವಾದ ಕೆಲಸವನ್ನು ಯೆಹೋವ ದೇವರಿಂದ ಜ್ಞಾನ ವಿವೇಕಗಳನ್ನು ಹೊಂದಿದ ಇತರರೊಂದಿಗೆ ಕೆಲಸಮಾಡುವರು,” ಎಂದು ಹೇಳಿದನು.
2ಬೆಚಲಯೇಲನನ್ನು, ಒಹೋಲಿಯಾಬನನ್ನು ಮತ್ತು ಯೆಹೋವ ದೇವರು ಜ್ಞಾನಕೊಟ್ಟಿದ್ದ ಪ್ರತಿಯೊಬ್ಬ ಶಿಲ್ಪಿಯನ್ನೂ ಆ ಕೆಲಸ ಮಾಡುವುದಕ್ಕೆ ಸಿದ್ಧ ಮನಸ್ಸಿದ್ದ ಪ್ರತಿಯೊಬ್ಬನನ್ನೂ ಮೋಶೆಯು ಕರೆದನು.
3ಅವರು ಪರಿಶುದ್ಧ ಆಲಯದ ನಿರ್ಮಾಣಕ್ಕೋಸ್ಕರ ಇಸ್ರಾಯೇಲರು ತಂದ ಕಾಣಿಕೆಗಳನ್ನೆಲ್ಲಾ ಮೋಶೆಯ ಬಳಿಯಿಂದ ತೆಗೆದುಕೊಂಡರು. ಇದಲ್ಲದೆ ಅವರು ಪ್ರತಿದಿನ ಬೆಳಿಗ್ಗೆ ಉಚಿತವಾದ ಕಾಣಿಕೆಗಳನ್ನು ತರುತ್ತಿದ್ದರು.
4ಆಗ ಪರಿಶುದ್ಧಸ್ಥಳದ ಕೆಲಸವನ್ನು ಮಾಡುವ ಜ್ಞಾನಿಗಳೆಲ್ಲರೂ ತಮ್ಮ ತಮ್ಮ ಕೆಲಸವನ್ನು ಬಿಟ್ಟು ಬಂದು,
5ಮೋಶೆಯ ಸಂಗಡ ಮಾತನಾಡಿ, “ಯೆಹೋವ ದೇವರು ಮಾಡಬೇಕೆಂದು ಆಜ್ಞಾಪಿಸಿದ ಸೇವೆಯ ಕೆಲಸಕ್ಕೆ ಬೇಕಾಗಿರುವುದಕ್ಕಿಂತ ಹೆಚ್ಚಾಗಿ ಕಾಣಿಕೆಗಳನ್ನು ಈ ಜನರು ತರುತ್ತಿದ್ದಾರೆ,” ಎಂದು ಹೇಳಿದರು.
6ಆಗ ಮೋಶೆಯು, “ಇನ್ನು ಮೇಲೆ ಪರಿಶುದ್ಧಸ್ಥಳದ ಕಾಣಿಕೆಗೋಸ್ಕರ ಯಾವ ಪುರುಷನಾಗಲಿ, ಸ್ತ್ರೀಯಾಗಲಿ ಕೆಲಸ ಮಾಡಬಾರದೆಂದು ಪಾಳೆಯದಲ್ಲೆಲ್ಲಾ ಪ್ರಕಟಿಸಬೇಕು,” ಎಂದು ಆಜ್ಞಾಪಿಸಿದನು. ಹೀಗೆ ಜನರು ಕಾಣಿಕೆಗಳನ್ನು ತರುವುದನ್ನು ನಿಲ್ಲಿಸಿಬಿಟ್ಟರು.
7ಏಕೆಂದರೆ ಎಲ್ಲಾ ಕೆಲಸವನ್ನು ಮಾಡುವುದಕ್ಕೆ ಸಾಕಾಗಿ ಮಿಕ್ಕುವಷ್ಟು ಸಾಮಗ್ರಿಗಳು ದೊರೆತವು. ದೇವದರ್ಶನದ ಗುಡಾರವು
8ಕೆಲಸದವರಲ್ಲಿದ್ದ ಶಿಲ್ಪಿಗಳೆಲ್ಲರೂ ಗುಡಾರವನ್ನು ಹತ್ತು ಪರದೆಗಳಿಂದ ಮಾಡಿ, ನಯವಾಗಿ ಹೊಸೆದ ನಾರಿನಿಂದಲೂ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ಕೌಶಲ್ಯದ ಕೆಲಸದಿಂದಲೂ ಕೆರೂಬಿಗಳನ್ನು ಮಾಡಿದರು.
9ಎಲ್ಲಾ ಪರದೆಗಳೂ ಒಂದೇ ಅಳತೆಯವುಗಳಾಗಿದ್ದವು. ಪ್ರತಿಯೊಂದು ಪರದೆಯು ಸುಮಾರು ಹದಿಮೂರು ಮೀಟರ್ ಉದ್ದ ಮತ್ತು ಎರಡು ಮೀಟರ್ ಅಗಲವಿದ್ದವು.
10ಅವರು ಐದು ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು ಮತ್ತು ಇನ್ನುಳಿದ ಐದು ಪರದೆಗಳನ್ನೂ ಒಂದಕ್ಕೊಂದು ಜೋಡಿಸಿದರು.
11ಕೊನೆಯ ಪರದೆಯ ಅಂಚಿನ ಒಂದು ಜೋಡಣೆಯ ಸ್ಥಳದಲ್ಲಿ ನೀಲಿ ದಾರಿನ ಕುಣಿಕೆಗಳನ್ನು ಮಾಡಿದ್ದಲ್ಲದೆ, ಎರಡನೆಯ ಜೋಡಣೆಯ ಕಟ್ಟಕಡೆಯ ಪರದೆಯ ಅಂಚಿನಲ್ಲಿಯೂ ಅದೇ ಪ್ರಕಾರ ಮಾಡಿದರು.
12ಒಂದು ಪರದೆಯಲ್ಲಿ ಐವತ್ತು ಕುಣಿಕೆಗಳನ್ನು ಮಾಡಿ, ಇನ್ನೊಂದು ಪರದೆಯ ಅಂಚನ್ನು ಜೋಡಿಸುವ ಸ್ಥಳದಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು. ಆ ಕುಣಿಕೆಗಳು ಒಂದು ಪರದೆಯನ್ನು ಮತ್ತೊಂದು ಪರದೆಯು ಹಿಡಿದುಕೊಳ್ಳುವಂತೆ ಮಾಡಿದರು.
13ಅವರು ಬಂಗಾರದ ಐವತ್ತು ಕೊಂಡಿಗಳನ್ನು ಮಾಡಿ, ಅವುಗಳಿಂದ ಎರಡು ಜೋಡಣೆ ಪರದೆಗಳನ್ನು ಒಂದಕ್ಕೊಂದು ಜೋಡಿಸಿದರು. ಹೀಗೆ ಅದು ಒಂದೇ ಗುಡಾರವಾಯಿತು.
14ಈ ಗುಡಾರದ ಮೇಲೆ ಹೊದಿಸುವುದಕ್ಕಾಗಿ ಅವರು ಮೇಕೆಯ ಕೂದಲಿನಿಂದ ಹನ್ನೊಂದು ಪರದೆಗಳನ್ನು ಮಾಡಿದರು.
15ಒಂದೊಂದು ಪರದೆಯು ಸುಮಾರು ಹದಿಮೂರುವರೆ ಮೀಟರ್ ಉದ್ದ ಮತ್ತು ಒಂದುವರೆ ಮೀಟರ್ ಅಗಲ ಇರಬೇಕು. ಹನ್ನೊಂದು ಪರದೆಗಳೂ ಒಂದೇ ಅಳತೆಯಾಗಿದ್ದವು.
16ಅವರು ಐದು ಪರದೆಗಳನ್ನು ಒಂದಾಗಿ ಜೋಡಿಸಿ ಇನ್ನುಳಿದ ಆರು ಪರದೆಗಳನ್ನು ಒಂದಾಗಿ ಜೋಡಿಸಿದರು.
17ಅವರು ಕೊನೆಯ ಒಂದು ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು, ಜೋಡಣೆಯಲ್ಲಿರುವ ಕೊನೆಯ ಎರಡನೆಯ ಪರದೆಯ ಅಂಚಿನಲ್ಲಿ ಐವತ್ತು ಕುಣಿಕೆಗಳನ್ನು ಮಾಡಿದರು.
18ಅದು ಒಂದೇ ಡೇರೆ ಆಗುವಂತೆ ಅವುಗಳ ಜೋಡಣೆಗೆ ಅವರು ಕಂಚಿನ ಐವತ್ತು ಕೊಂಡಿಗಳನ್ನು ಮಾಡಿದರು.
19ಅದಲ್ಲದೆ ಗುಡಾರದ ಮೇಲ್ಹೊದಿಕೆಯನ್ನು ಕೆಂಪು ಬಣ್ಣದಲ್ಲಿ ಅದ್ದಿ ತೆಗೆದ ಟಗರುಗಳ ಚರ್ಮದಿಂದ ಮಾಡಿದರು. ಅದರ ಮೇಲೆ ಕಡಲುಹಂದಿಯ ಚರ್ಮದ ಮೇಲ್ಹೊದಿಕೆಯನ್ನು ಮಾಡಿದರು.
20ಗುಡಾರವು ನಿಂತುಕೊಂಡಿರುವುದಕ್ಕೆ ಅವರು ಜಾಲಿ ಮರದಿಂದ ಚೌಕಟ್ಟುಗಳನ್ನು ಮಾಡಿದರು.
21ಒಂದೊಂದು ಚೌಕಟ್ಟಿನ ಉದ್ದವು ಸುಮಾರು ನಾಲ್ಕುವರೆ ಮೀಟರ್ ಮತ್ತು ಅಗಲ ಅರವತ್ತೆಂಟು ಸೆಂಟಿಮೀಟರ್ ಇತ್ತು.
22ಒಂದು ಚೌಕಟ್ಟಿಗೆ ಒಂದಕ್ಕೊಂದು ಸರಿಯಾದ ಅಂತರದಲ್ಲಿ ಎರಡು ಕೈಗಳನ್ನು ಮಾಡಿದರು. ಅದೇ ಪ್ರಕಾರ ಅವರು ಗುಡಾರದ ಎಲ್ಲಾ ಚೌಕಟ್ಟುಗಳಿಗೆ ಮಾಡಿದರು.
23ಅವರು ಗುಡಾರದ ದಕ್ಷಿಣ ಭಾಗದಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
24ಅವರು ಇಪ್ಪತ್ತು ಚೌಕಟ್ಟುಗಳ ಕೆಳಗೆ ನಾಲ್ವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು ಮತ್ತು ಒಂದೊಂದು ಚೌಕಟ್ಟಿನ ಕೆಳಗೆ ಅದರ ಎರಡು ಪಟ್ಟಿಗಳಿಗಾಗಿ ಎರಡೆರಡು ಕುಳಿಗಳನ್ನು ಮಾಡಿದರು.
25ಇನ್ನೊಂದು ಭಾಗಕ್ಕೆ ಅಂದರೆ ಗುಡಾರದ ಉತ್ತರ ದಿಕ್ಕಿನಲ್ಲಿ ಇಪ್ಪತ್ತು ಚೌಕಟ್ಟುಗಳನ್ನು ಮಾಡಿದರು.
26ಒಂದೊಂದು ಚೌಕಟ್ಟಿನ ಕೆಳಗೆ ಎರಡೆರಡು ಗದ್ದಿಗೇ ಕಲ್ಲುಗಳಂತೆ ನಲವತ್ತು ಬೆಳ್ಳಿಯ ಗದ್ದಿಗೇ ಕಲ್ಲುಗಳನ್ನು ಮಾಡಿದರು.
27ಗುಡಾರದ ಹಿಂಭಾಗಕ್ಕೆ ಅಂದರೆ ಪಶ್ಚಿಮದ ಕಡೆಗೆ ಆರು ಚೌಕಟ್ಟುಗಳನ್ನು ಮಾಡಿದರು.
28ಅವರು ಗುಡಾರದ ಹಿಂಭಾಗದ ಎರಡು ಮೂಲೆಗಳಿಗೆ ಬೇರೆ ಎರಡು ಚೌಕಟ್ಟುಗಳನ್ನು ಮಾಡಿದರು.
29ಈ ಮೂಲೆಗಳನ್ನು ಅಡಿಯಲ್ಲಿ ಜೋಡಿಸಿರಬೇಕು. ಮೇಲ್ಭಾಗದಲ್ಲಿಯೂ ಒಂದೇ ಬಳೆಗೆ ಜೋಡಿಸಿದರು. ಇದೇ ರೀತಿಯಲ್ಲಿ ಅವರು ಎರಡು ಮೂಲೆಗಳಲ್ಲಿ ಎರಡಕ್ಕೂ ಮಾಡಿದರು.
30ಇಂಥ ಎಂಟು ಚೌಕಟ್ಟುಗಳಿದ್ದವು. ಪ್ರತಿಯೊಂದು ಚೌಕಟ್ಟಿನ ಕೆಳಗೆ ಎರಡೆರಡು ಕೂರುಗದ್ದಿಗೇ ಕಲ್ಲುಗಳಂತೆ ಅವುಗಳಿಗೆ ಹದಿನಾರು ಬೆಳ್ಳಿಯ ಕೂರುಗದ್ದಿಗೇ ಕಲ್ಲುಗಳಿದ್ದವು.
31ಅವರು ಜಾಲಿ ಮರದಿಂದ ಅಗುಳಿಗಳನ್ನು ಮಾಡಿದರು, ಗುಡಾರದ ಒಂದು ಕಡೆಯ ಚೌಕಟ್ಟುಗಳಿಗೆ ಐದು ಅಗುಳಿಗಳು,
32ಗುಡಾರದ ಇನ್ನೊಂದು ಭಾಗದ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು, ಅದರ ಹಿಂದುಗಡೆಯ ಅಂದರೆ ಪಶ್ಚಿಮ ಭಾಗದಲ್ಲಿರುವ ಚೌಕಟ್ಟುಗಳಿಗೆ ಐದು ಅಗುಳಿಗಳನ್ನು ಮಾಡಿದರು.
33ಮಧ್ಯದ ಅಗುಳಿಯು ಚೌಕಟ್ಟುಗಳ ನಡುವೆ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ಹಾದು ಹೋಗುವಹಾಗೆ ಮಾಡಿದರು.
34ಆ ಚೌಕಟ್ಟುಗಳನ್ನು ಬಂಗಾರದಿಂದ ಹೊದಿಸಿ, ಆ ಅಗುಳಿಗಳಿಗಾಗಿ ಬಂಗಾರದಿಂದ ಬಳೆಗಳನ್ನು ಮಾಡಿ, ಮಾಡಿದ ಅಗುಳಿಗಳನ್ನು ಬಂಗಾರದಿಂದ ಹೊದಿಸಿದರು.
35ಪರದೆಯನ್ನು ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರಿನಿಂದ ಹೊಸೆದು ಮಾಡಿದರು. ಅದರ ಮೇಲೆ ಕೌಶಲ್ಯದಿಂದ ಕಸೂತಿಹಾಕಿ ಮಾಡಿದ ಕೆರೂಬಿಗಳುಳ್ಳದ್ದನ್ನಾಗಿ ಅದನ್ನು ಮಾಡಿದರು.
36ಅದಕ್ಕೆ ಜಾಲಿ ಮರದ ನಾಲ್ಕು ಸ್ತಂಭಗಳನ್ನು ಮಾಡಿ, ಬಂಗಾರ ತಗಡುಗಳಿಂದ ಅವುಗಳನ್ನು ಹೊದಿಸಿದರು. ಅವುಗಳಿಗೆ ಬಂಗಾರದ ಕೊಂಡಿಗಳನ್ನು ಮಾಡಿ, ಅವುಗಳಿಗೆ ಬೆಳ್ಳಿಯ ನಾಲ್ಕು ಗದ್ದಿಗೇ ಕಲ್ಲುಗಳನ್ನು ಎರಕ ಹೊಯ್ದರು.
37ಗುಡಾರದ ಬಾಗಿಲಿಗೆ ನೀಲಿ, ಧೂಮ್ರ, ರಕ್ತವರ್ಣದ ದಾರದಿಂದ ಮತ್ತು ನಯವಾದ ನಾರುಗಳಿಂದ ಹೊಸೆದು ಕಸೂತಿ ಕೆಲಸಮಾಡಿದ ಪರದೆಯನ್ನು ಮಾಡಿದರು.
38ಕೊಂಡಿಯಿರುವ ಐದು ಕಂಬಗಳನ್ನು ಮಾಡಿ, ಅವುಗಳ ತಲೆಗಳನ್ನೂ ಕಂಬಗಳನ್ನೂ ಬಂಗಾರದಿಂದ ಹೊದಿಸಿದರು. ಆದರೆ ಅವುಗಳ ಐದು ಗದ್ದಿಗೇ ಕಲ್ಲುಗಳನ್ನು ಕಂಚಿನಿಂದ ಮಾಡಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.