Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 33

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಗೆ, “ನೀನು ಈಜಿಪ್ಟ್ ದೇಶದೊಳಗಿಂದ ಬರಮಾಡಿದ ಜನರ ಸಂಗಡ ಈ ಸ್ಥಳವನ್ನು ಬಿಟ್ಟು ನಾನು ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ, ‘ನಿಮ್ಮ ಸಂತತಿಯವರಿಗೆ ಅದನ್ನು ಕೊಡುವೆನು,’ ಎಂದು ಹೇಳಿ ಪ್ರಮಾಣ ಮಾಡಿದ ದೇಶಕ್ಕೆ ಹೋಗು.
2ನಾನು ನಿನ್ನ ಮುಂದೆ ದೂತನನ್ನು ಕಳುಹಿಸಿ ಕಾನಾನ್ಯರನ್ನೂ, ಅಮೋರಿಯರನ್ನೂ, ಹಿತ್ತಿಯರನ್ನೂ, ಪೆರಿಜೀಯರನ್ನೂ, ಹಿವ್ವಿಯರನ್ನೂ, ಯೆಬೂಸಿಯರನ್ನೂ ಹೊರದೂಡುವೆನು.
3ಹಾಲೂ ಜೇನೂ ಹರಿಯುವ ದೇಶಕ್ಕೆ ಹೋಗು. ನಾನು ನಿಮ್ಮ ಸಂಗಡ ಹೋಗುವುದಿಲ್ಲ ಏಕೆಂದರೆ ನೀವು ಮಾತು ಕೇಳದ ಹಟಮಾರಿ ಜನರಾಗಿದ್ದೀರಿ ಮತ್ತು ಮಾರ್ಗದಲ್ಲಿ ನಾನು ನಿಮ್ಮನ್ನು ಸಂಹರಿಸಬೇಕಾಗಬಹುದು,” ಎಂದರು.
4ಜನರು ಈ ಕಠಿಣವಾದ ಮಾತುಗಳನ್ನು ಕೇಳಿದಾಗ ದುಃಖಪಟ್ಟರು. ಯಾರೂ ತಮ್ಮ ಆಭರಣಗಳನ್ನು ಧರಿಸಿಕೊಳ್ಳಲಿಲ್ಲ.
5ಏಕೆಂದರೆ ಯೆಹೋವ ದೇವರು ಮೋಶೆಗೆ, “ಇಸ್ರಾಯೇಲರಿಗೆ ಹೀಗೆ ಹೇಳು: ‘ನೀವು ಆಜ್ಞೆಗಳನ್ನು ಪಾಲಿಸದ ಹಟಮಾರಿ ಜನರು. ನಾನು ಕ್ಷಣಮಾತ್ರವೂ ನಿಮ್ಮೊಡನೆ ಬಂದರೆ ನೀವು ನಿರ್ಮೂಲವಾಗಿಬಿಡುವಿರಿ. ಹೀಗಿರುವುದರಿಂದ ಈಗ ನಿಮ್ಮ ಆಭರಣಗಳನ್ನು ನಿಮ್ಮಿಂದ ತೆಗೆದುಬಿಡಿರಿ, ನಾನು ನಿಮಗೆ ಏನು ಮಾಡಬೇಕೆಂಬುದನ್ನು ತೀರ್ಮಾನಿಸುವೆನು’ ಎಂದು ಹೇಳು,” ಎಂದು ತಿಳಿಸಿದರು.
6ಅದರಂತೆಯೇ ಇಸ್ರಾಯೇಲರು ಹೋರೇಬ್ ಬೆಟ್ಟದ ಬಳಿಯಲ್ಲಿ ತಮ್ಮ ಆಭರಣಗಳನ್ನು ತೆಗೆದುಬಿಟ್ಟರು. ದೇವದರ್ಶನದ ಗುಡಾರ
7ಮೋಶೆಯು ಗುಡಾರವನ್ನು ತೆಗೆದು ಪಾಳೆಯದ ಹೊರಗೆ ಪಾಳೆಯಕ್ಕೆ ದೂರವಾಗಿ ಹಾಕಿ, ಅದಕ್ಕೆ “ದೇವದರ್ಶನದ ಗುಡಾರ” ಎಂದು ಹೆಸರಿಟ್ಟನು. ತರುವಾಯ ಯೆಹೋವ ದೇವರನ್ನು ಹುಡುಕುವವರೆಲ್ಲಾ ಪಾಳೆಯದ ಹೊರಗೆ ಇರುವ ದೇವದರ್ಶನದ ಗುಡಾರಕ್ಕೆ ಹೋದರು.
8ಇದಾದ ಮೇಲೆ ಮೋಶೆಯು ಗುಡಾರದ ಬಳಿಗೆ ಹೊರಗೆ ಹೋಗುತ್ತಿರುವಾಗ ಜನರೆಲ್ಲರೂ ಎದ್ದು, ತಮ್ಮ ತಮ್ಮ ಗುಡಾರಗಳ ಬಾಗಿಲುಗಳಲ್ಲಿ ನಿಂತುಕೊಂಡು ಮೋಶೆಯು ಗುಡಾರದಲ್ಲಿ ಪ್ರವೇಶಿಸುವವರೆಗೆ ಅವನ ಹಿಂದೆ ನೋಡುತ್ತಿದ್ದರು.
9ಮೋಶೆ ಗುಡಾರದೊಳಗೆ ಹೋಗುವಾಗ, ಮೇಘಸ್ತಂಭವು ಪ್ರವೇಶದ್ವಾರದ ಬಳಿಯಲ್ಲಿ ನಿಲ್ಲುತ್ತಿತ್ತು. ಆಗ ಯೆಹೋವ ದೇವರು ಮೋಶೆಯೊಂದಿಗೆ ಮಾತನಾಡುತ್ತಿದ್ದರು.
10ಜನರೆಲ್ಲರೂ ಗುಡಾರದ ಬಾಗಿಲಲ್ಲಿ ನಿಂತ ಮೇಘಸ್ತಂಭವನ್ನು ನೋಡುವಾಗ ತಮ್ಮ ತಮ್ಮ ಡೇರೆಗಳ ಬಾಗಿಲುಗಳಲ್ಲಿ ಎದ್ದು ನಿಂತು ಯೆಹೋವ ದೇವರನ್ನು ಆರಾಧಿಸುತ್ತಿದ್ದರು.
11ಒಬ್ಬ ಮನುಷ್ಯನು ತನ್ನ ಸ್ನೇಹಿತನ ಸಂಗಡ ಮಾತನಾಡುವಂತೆ ಯೆಹೋವ ದೇವರು ಮೋಶೆಯ ಸಂಗಡ ಮುಖಾಮುಖಿಯಾಗಿ ಮಾತನಾಡುತ್ತಿದ್ದರು. ತರುವಾಯ ಅವನು ಪಾಳೆಯಕ್ಕೆ ಹಿಂದಿರುಗಿ ಹೋಗುತ್ತಿದ್ದನು. ಆದರೆ ಅವನ ಸೇವಕನೂ ನೂನನ ಮಗನೂ ಆದ ಯೆಹೋಶುವನೆಂಬ ಯೌವನಸ್ಥನು ಗುಡಾರವನ್ನು ಬಿಟ್ಟುಹೋಗಲಿಲ್ಲ. ಮೋಶೆ ಮತ್ತು ಯೆಹೋವ ದೇವರ ಮಹಿಮೆ
12ಮೋಶೆಯು ಯೆಹೋವ ದೇವರಿಗೆ, “ ‘ಈ ಜನರನ್ನು ನಡೆಸಿಕೊಂಡು ಹೋಗು,’ ಎಂದು ನನಗೆ ಹೇಳುತ್ತಿರುವಿರಿ. ಯಾರನ್ನು ನನ್ನ ಸಂಗಡ ಕಳುಹಿಸುವಿರಿ, ಎಂದು ನೀವು ನನಗೆ ತಿಳಿಸಲಿಲ್ಲ. ಆದರೂ ನೀವು ನನಗೆ, ‘ನಾನು ನಿನ್ನನ್ನು ನಿನ್ನ ಹೆಸರಿನ ಮೂಲಕ ತಿಳಿದಿದ್ದೇನೆ, ನನ್ನ ದೃಷ್ಟಿಯಲ್ಲಿ ನಿನಗೆ ಕೃಪೆ ದೊರೆಯಿತು,’ ಎಂದೂ ಹೇಳಿದ್ದೀರಲ್ಲಾ.
13ಹಾಗಾದರೆ ಈಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರೆಕಿದ್ದೇ ಆದರೆ ನಾನು ನಿಮ್ಮನ್ನು ತಿಳಿಯುವ ಹಾಗೆ, ನಿಮ್ಮ ಮಾರ್ಗವನ್ನು ನನಗೆ ತೋರಿಸಿ. ಆಗ ನಿಮ್ಮ ದೃಷ್ಟಿಯಲ್ಲಿ ನನಗೆ ದಯೆ ದೊರಕಿರುವುದು. ಈ ಜನಾಂಗವು ನಿಮ್ಮ ಜನರೇ, ಎಂದು ಜ್ಞಾಪಿಸಿಕೊಳ್ಳುವೆನು,” ಎಂದು ಹೇಳಿದನು.
14ಆಗ ಯೆಹೋವ ದೇವರು, “ನನ್ನ ಪ್ರಸನ್ನತೆಯು ನಿನ್ನ ಸಂಗಡ ಹೋಗುವುದು. ನಾನು ನಿನಗೆ ವಿಶ್ರಾಂತಿಯನ್ನು ಕೊಡುವೆನು,” ಎಂದರು.
15ಮೋಶೆಯು ಅವರಿಗೆ, “ನಿಮ್ಮ ಪ್ರಸನ್ನತೆಯು ನಮ್ಮೊಂದಿಗೆ ಹೋಗದಿದ್ದರೆ ನಮ್ಮನ್ನು ಇಲ್ಲಿಂದ ಕರೆದುಕೊಂಡು ಹೋಗಬೇಡಿ.
16ಏಕೆಂದರೆ ನನಗೂ ನಿಮ್ಮ ಜನರಿಗೂ ನಿಮ್ಮ ದೃಷ್ಟಿಯಲ್ಲಿ ದಯೆ ದೊರಕಿತೆಂದು ಯಾವುದರಿಂದ ತಿಳಿದುಬರುವುದು? ನೀವು ನನ್ನೊಂದಿಗೆ ಹೋಗುವುದರಿಂದಲ್ಲವೋ? ಹೀಗೆ ನಾನೂ ನಿಮ್ಮ ಜನರೂ ಭೂಮಿಯ ಮೇಲಿರುವ ಎಲ್ಲಾ ಜನರಿಂದ ಪ್ರತ್ಯೇಕವಾಗಿರುವೆವು,” ಎಂದನು.
17ಅದಕ್ಕೆ ಯೆಹೋವ ದೇವರು ಮೋಶೆಗೆ, “ನೀನು ಆಡಿದ ಈ ಮಾತಿನಂತೆಯೇ ನಾನು ಇದನ್ನು ಮಾಡುತ್ತೇನೆ. ಏಕೆಂದರೆ ನನ್ನ ದೃಷ್ಟಿಯಲ್ಲಿ ನಿನಗೆ ದಯೆ ದೊರಕಿತು. ನಾನು ನಿನ್ನನ್ನು ನಿನ್ನ ಹೆಸರಿನಿಂದ ತಿಳಿದಿದ್ದೇನೆ,” ಎಂದರು.
18ಆಗ ಮೋಶೆ, “ನಿಮ್ಮ ಮಹಿಮೆಯನ್ನು ನನಗೆ ತೋರಿಸಿ ಎಂದು ನಾನು ನಿಮ್ಮನ್ನು ಬೇಡಿಕೊಳ್ಳುತ್ತೇನೆ,” ಎಂದನು.
19ಅದಕ್ಕೆ ಅವರು, “ನಾನು ನನ್ನ ಒಳ್ಳೆಯತನವನ್ನೆಲ್ಲಾ ನಿನ್ನ ಎದುರಿಗೆ ಹಾದು ಹೋಗ ಮಾಡಿ, ಯೆಹೋವ ದೇವರ ಹೆಸರನ್ನು ನಿನ್ನ ಮುಂದೆ ಪ್ರಕಟಮಾಡಿ, ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು. ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು,” ಎಂದರು.
20ಮತ್ತೆ ದೇವರು ಮೋಶೆಗೆ, “ನೀನು ನನ್ನ ಮುಖವನ್ನು ನೋಡಲಾರಿ. ಏಕೆಂದರೆ ಯಾವ ಮನುಷ್ಯನೂ ನನ್ನನ್ನು ನೋಡಿ ಬದುಕಿರಲಾರನು,” ಎಂದರು.
21ಇದಲ್ಲದೆ ಯೆಹೋವ ದೇವರು, “ನನ್ನ ಬಳಿಯಲ್ಲಿ ಒಂದು ಸ್ಥಳವಿದೆ. ನೀನು ಬಂಡೆಯ ಮೇಲೆ ನಿಂತುಕೋ.
22ಆಗ ನನ್ನ ಮಹಿಮೆಯು ಹಾದುಹೋಗುವಾಗ, ನಿನ್ನನ್ನು ಬಂಡೆಯ ಬಿರುಕಿನಲ್ಲಿ ನಿಲ್ಲಿಸಿ, ನಿನ್ನ ಮೇಲೆ ನನ್ನ ಕೈ ಮುಚ್ಚುವೆನು.
23ತರುವಾಯ ನನ್ನ ಕೈಯನ್ನು ತೆಗೆದುಬಿಡುವೆನು. ಆಗ ನೀನು ನನ್ನ ಬೆನ್ನನ್ನು ನೋಡುವೆ, ಆದರೆ ನನ್ನ ಮುಖವು ನಿನಗೆ ಕಾಣಿಸುವುದಿಲ್ಲ,” ಎಂದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.