Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 30

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1“ನೀನು ಜಾಲಿ ಮರದ ಕಟ್ಟಿಗೆಯಿಂದ ಧೂಪವೇದಿಯನ್ನು ಮಾಡಬೇಕು.
2ಅದರ ಉದ್ದ ಮತ್ತು ಅಗಲ ಸುಮಾರು ನಲವತ್ತೈದು ಸೆಂಟಿಮೀಟರ್, ಅದರ ಎತ್ತರ ಸುಮಾರು ತೊಂಬತ್ತು ಸೆಂಟಿಮೀಟರ್ ಇದ್ದು, ಅದು ಚಚ್ಚೌಕವಾಗಿರಬೇಕು. ಅದರ ಕೊಂಬುಗಳನ್ನು ಸಹ ಜಾಲಿ ಮರದಿಂದಲೇ ಮಾಡಬೇಕು.
3ಅದರ ಮೇಲ್ಭಾಗವನ್ನೂ ಅದರ ಸುತ್ತಲಿನ ಬದಿಗಳನ್ನೂ ಕೊಂಬುಗಳನ್ನೂ ಶುದ್ಧ ಬಂಗಾರದಿಂದ ಹೊದಿಸಿ, ಅದರ ಸುತ್ತಲೂ ಬಂಗಾರದ ಗೋಟನ್ನು ಮಾಡಬೇಕು.
4ಅದರ ಗೋಟಿನ ಕೆಳಗೆ ಎರಡು ಬದಿಗಿರುವ ಎರಡು ಮೂಲೆಗಳಲ್ಲಿ ಎರಡು ಬಂಗಾರದ ಬಳೆಗಳನ್ನು ಮಾಡಬೇಕು. ಇವುಗಳನ್ನು ಹೊರುವುದಕ್ಕಾಗಿ ಅವುಗಳಲ್ಲಿ ಕೋಲುಗಳನ್ನು ಸಿಕ್ಕಿಸಬೇಕು.
5ಆ ಕೋಲುಗಳನ್ನು ಜಾಲಿ ಮರದಿಂದ ಮಾಡಿ, ಅವುಗಳನ್ನು ಬಂಗಾರದಿಂದ ಹೊದಿಸಬೇಕು.
6ಅದನ್ನು ಒಡಂಬಡಿಕೆಯ ಮಂಜೂಷದ ಮುಂದೆ ಇರುವ ಪರದೆಯ ಮುಂದೆಯೂ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಇರುವ ಮಂಜೂಷದ ಮೇಲಿನ ಕರುಣಾಸನದ ಮುಂದೆಯೂ ಇಡಬೇಕು.
7“ಅದರ ಮೇಲೆ ಆರೋನನು ಪರಿಮಳ ಧೂಪವನ್ನು ಸುಡಬೇಕು. ಪ್ರತಿದಿನ ಬೆಳಿಗ್ಗೆ ಸುಡಬೇಕು. ಪ್ರತಿದಿನ ಬೆಳಿಗ್ಗೆ ದೀಪಗಳನ್ನು ಸಿದ್ಧಮಾಡುವಾಗ ಅದನ್ನು ಸುಡಬೇಕು.
8ಆರೋನನು ಸಂಜೆ ದೀಪಗಳನ್ನು ಹಚ್ಚುವ ಸಮಯದಲ್ಲಿ ಧೂಪವೇದಿಯ ಮೇಲೆ ಧೂಪವನ್ನು ಸುಡಬೇಕು. ಅದೇ ನಿಮ್ಮ ಸಂತತಿಯವರಿಗೆ ಯೆಹೋವ ದೇವರ ಮುಂದೆ ಅರ್ಪಿಸಬೇಕಾದ ನಿತ್ಯವಾದ ಧೂಪವು.
9ನೀವು ಅದರ ಮೇಲೆ ಬೇರೆ ಧೂಪವನ್ನಾಗಲಿ, ದಹನಬಲಿಗಳನ್ನಾಗಲಿ, ಧಾನ್ಯಗಳ ಅರ್ಪಣೆಯನ್ನಾಗಲಿ ಅರ್ಪಿಸಬಾರದು. ಇಲ್ಲವೆ ಪಾನಾರ್ಪಣೆಯನ್ನು ಅದರ ಮೇಲೆ ಹೊಯ್ಯಬಾರದು.
10ಆರೋನನು ಮತ್ತು ಅವನ ಸಂತತಿಯವರು ವರ್ಷಕ್ಕೆ ಒಂದು ಸಾರಿ ಪಾಪ ಪರಿಹಾರದ ಬಲಿಯ ರಕ್ತದಿಂದ ಅದರ ಕೊಂಬುಗಳಿಗೆ ಹಚ್ಚಿ ಪ್ರಾಯಶ್ಚಿತ್ತ ಮಾಡಬೇಕು. ಅದು ಯೆಹೋವ ದೇವರಿಗೆ ಮಹಾಪರಿಶುದ್ಧವಾದದ್ದು.” ಪ್ರಾಯಶ್ಚಿತ್ತದ ಹಣ
11ಆಗ ಯೆಹೋವ ದೇವರು ಪ್ರಕಟಪಡಿಸಿ ಮೋಶೆಗೆ,
12“ನೀನು ಇಸ್ರಾಯೇಲರನ್ನು ಎಣಿಸಲು ಜನಗಣತಿಯನ್ನು ತೆಗೆದುಕೊಂಡಾಗ ಪ್ರತಿಯೊಬ್ಬನು ತನ್ನ ಜೀವನದ ವಿಮೋಚನೆಯ ಕ್ರಯವನ್ನು ಯೆಹೋವ ದೇವರಿಗೆ ಕೊಡಬೇಕು. ಈ ರೀತಿ ಮಾಡಿದಲ್ಲಿ ಅವರನ್ನು ಎಣಿಸುವಾಗ ಅವರಲ್ಲಿ ವ್ಯಾಧಿ ಉಂಟಾಗುವುದಿಲ್ಲ.
13ಲೆಕ್ಕಿತರಾದವರಲ್ಲಿ ಸೇರುವ ಪ್ರತಿಯೊಬ್ಬ ಮನುಷ್ಯನು ಕೊಡಬೇಕಾದದ್ದು ಏನೆಂದರೆ ಶೆಕೆಲಿಗೆ ಇಪ್ಪತ್ತು ಗೇರಾಗಳ ಪ್ರಕಾರವಾಗಿ ಪರಿಶುದ್ಧ ಆಲಯದ ಶೆಕೆಲಿನ ಮೇರೆಗೆ ಅರ್ಧ ಶೆಕೆಲ್ ಕೊಡಬೇಕು. ಅರ್ಧ ಶೆಕೆಲ್ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯಾಗಿರಬೇಕು.
14ಲೆಕ್ಕಿತರಾದವರಲ್ಲಿ ಇಪ್ಪತ್ತು ವರ್ಷದವರೂ ಅದಕ್ಕೂ ಹೆಚ್ಚು ಪ್ರಾಯವುಳ್ಳವರೂ ಯೆಹೋವ ದೇವರಿಗೆ ಕಾಣಿಕೆಯನ್ನು ಕೊಡಬೇಕು.
15ನಿಮ್ಮ ಜೀವನದ ಪ್ರಾಯಶ್ಚಿತ್ತಕ್ಕೆ ಯೆಹೋವ ದೇವರಿಗೆ ಅರ್ಪಿಸುವ ಕಾಣಿಕೆಯನ್ನು ಕೊಡುವುದರಲ್ಲಿ ಐಶ್ವರ್ಯವಂತರು ಅರ್ಧ ಶೇಕೆಲಿಗಿಂತ ಹೆಚ್ಚು ಕೊಡಬಾರದು. ಬಡವನು ಕಡಿಮೆ ಕೊಡಬಾರದು.
16ಪ್ರಾಯಶ್ಚಿತ್ತದ ಹಣವನ್ನು ಇಸ್ರಾಯೇಲರಿಂದ ತೆಗೆದುಕೊಂಡು ದೇವದರ್ಶನದ ಗುಡಾರದ ಕೆಲಸಕ್ಕಾಗಿ ಪ್ರತ್ಯೇಕಿಸಬೇಕು. ಇದೇ ಯೆಹೋವ ದೇವರ ಮುಂದೆ ಇಸ್ರಾಯೇಲರಿಗೆ ಜ್ಞಾಪಕಾರ್ಥಕ್ಕಾಗಿಯೂ ಅವರ ಪ್ರಾಯಶ್ಚಿತ್ತಕ್ಕಾಗಿಯೂ ಇರುವುದು,” ಎಂದರು. ತೊಳೆಯುವುದಕ್ಕೆ ಬೋಗುಣಿ
17ಯೆಹೋವ ದೇವರು ಮೋಶೆಗೆ,
18“ತೊಳೆದುಕೊಳ್ಳುವದಕ್ಕಾಗಿ ಕಂಚಿನ ಬೋಗುಣಿಯನ್ನು ಮಾಡಿಸಿ ಅದಕ್ಕೆ ಕಂಚಿನ ಪೀಠವನ್ನೂ ಮಾಡಿಸಿ, ಅದನ್ನು ದೇವದರ್ಶನದ ಗುಡಾರ ಮತ್ತು ಬಲಿಪೀಠದ ಮಧ್ಯದಲ್ಲಿಟ್ಟು, ಅದರಲ್ಲಿ ನೀರನ್ನು ತುಂಬಿಸಿಡಬೇಕು.
19ಏಕೆಂದರೆ ಆರೋನನೂ ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆಯಬೇಕು.
20ಅವರು ದೇವದರ್ಶನದ ಗುಡಾರದಲ್ಲಿ ಪ್ರವೇಶಿಸುವಾಗ ಸೇವೆ ಮಾಡುವುದಕ್ಕೂ, ಬೆಂಕಿಯಿಂದ ಯೆಹೋವ ದೇವರಿಗೆ ದಹನಬಲಿಯನ್ನು ಅರ್ಪಿಸುವುದಕ್ಕೂ ಬಲಿಪೀಠದ ಬಳಿಗೆ ಬರುವಾಗ ಅವರು ಸಾಯದ ಹಾಗೆ ನೀರಿನಲ್ಲಿ ತೊಳೆದುಕೊಳ್ಳಬೇಕು.
21ಅವರು ಸಾಯದ ಹಾಗೆ ತಮ್ಮ ಕೈಕಾಲುಗಳನ್ನು ತೊಳೆದುಕೊಳ್ಳಬೇಕು. ಇದೇ ಅವನಿಗೂ ಅವನ ಸಂತತಿಯವರಿಗೂ ತಲತಲಾಂತರಗಳಲ್ಲಿ ನಿತ್ಯವಾದ ಕಟ್ಟಳೆಯಾಗಿರಬೇಕು,” ಎಂದರು. ಅಭಿಷೇಕ ತೈಲ
22ಯೆಹೋವ ದೇವರು ಮೋಶೆಗೆ,
23“ಉತ್ತಮವಾದ ತೈಲಗಳನ್ನು ಆರು ಕಿಲೋಗ್ರಾಂ ಸ್ವಚ್ಛವಾದ ರಕ್ತಬೋಳವು, ಇದರ ಅರ್ಧದಷ್ಟು ಮೂರು ಕಿಲೋಗ್ರಾಂ ಸುಗಂಧವಾದ ಲವಂಗಚಕ್ಕೆಯನ್ನು ಮತ್ತು ಮೂರು ಕಿಲೋಗ್ರಾಂ ಸುಗಂಧವಾದ ಬಜೆಯನ್ನು,
24ಆರು ಕಿಲೋಗ್ರಾಂ ದಾಲ್ಚಿನ್ನಿಯನ್ನು ಪರಿಶುದ್ಧಸ್ಥಳದ ಅಳತೆಯ ಮೇರೆಗೆ ಇವುಗಳನ್ನು ನೀನು ತೆಗೆದುಕೊಳ್ಳಬೇಕು. ಸುಮಾರು ನಾಲ್ಕು ಲೀಟರಷ್ಟು ಓಲಿವ್ ಎಣ್ಣೆಯನ್ನು ಸಹ ತೆಗೆದುಕೊಂಡು,
25ಅದರಿಂದ ಸುಗಂಧಕಾರನ ವಿದ್ಯೆಯ ಪ್ರಕಾರ ಪರಿಶುದ್ಧವಾದ ಅಭಿಷೇಕ ತೈಲವನ್ನು ಮಾಡು. ಇದು ಪರಿಶುದ್ಧವಾದ ಅಭಿಷೇಕದ ತೈಲವಾಗಿರುವುದು.
26ಅದರಿಂದ ಸಭೆಯ ಗುಡಾರವನ್ನೂ ಒಡಂಬಡಿಕೆಯ ಮಂಜೂಷವನ್ನೂ
27ಮೇಜನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ದೀಪಸ್ತಂಭವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಧೂಪದ ವೇದಿಯನ್ನೂ
28ದಹನಬಲಿಯ ಪೀಠವನ್ನೂ ಅದರ ಎಲ್ಲಾ ಸಲಕರಣೆಗಳನ್ನೂ ಗಂಗಾಳವನ್ನೂ, ಅದರ ಕಾಲುಗಳನ್ನೂ ಅಭಿಷೇಕಿಸು.
29ಅವು ಮಹಾಪರಿಶುದ್ಧವಾಗುವಂತೆ ಅವುಗಳನ್ನು ಶುದ್ಧಮಾಡು. ಅವುಗಳನ್ನು ಮುಟ್ಟುವುದೆಲ್ಲವೂ ಪರಿಶುದ್ಧವಾಗಿರಬೇಕು.
30“ಆರೋನನನ್ನೂ, ಅವನ ಪುತ್ರರನ್ನೂ ಅಭಿಷೇಕಿಸಿ, ಅವರು ನನಗೆ ಯಾಜಕ ಸೇವೆಮಾಡುವಂತೆ ಅವರನ್ನು ಪ್ರತಿಷ್ಠೆ ಮಾಡು, ಎಂದರು.
31ನೀನು ಇಸ್ರಾಯೇಲರಿಗೆ: ‘ತಲತಲಾಂತರಗಳಲ್ಲಿ ಇದು ನನಗೆ ಪರಿಶುದ್ಧವಾದ ಅಭಿಷೇಕ ಎಣ್ಣೆಯಾಗಿರಬೇಕು.
32ಇದನ್ನು ಮನುಷ್ಯರ ಮೇಲೆ ಹೊಯ್ಯಬಾರದು. ಇದರ ಮಾದರಿಯಂತೆ ಅಥವಾ ಇದಕ್ಕೆ ಸಮಾನವಾದದ್ದನ್ನು ಮಾಡಬಾರದು. ಇದು ಪರಿಶುದ್ಧವಾದದ್ದು. ನೀವು ಸಹ ಇದನ್ನು ಪರಿಶುದ್ಧವೆಂದು ತಿಳಿದುಕೊಳ್ಳಬೇಕು.
33ಇದರ ಹಾಗೆ ತೈಲ ಮಾಡುವವನೂ ಯಾಜಕನಲ್ಲದವನ ಮೇಲೆ ಇದನ್ನು ಹಚ್ಚುವವನನ್ನು ಸ್ವಜನರೊಳಗಿಂದ ತೆಗೆದುಹಾಕಬೇಕು,’ ಎಂದು ಹೇಳು,” ಎಂದರು. ಪರಿಮಳ ದ್ರವ್ಯಗಳು
34ಯೆಹೋವ ದೇವರು ಮೋಶೆಗೆ, “ನೀನು ಹಾಲು ಮಡ್ಡಿ, ಗುಗ್ಗಲ ಹಾಗೂ ಗಂಧದ ಚಕ್ಕೆ ಎಂಬ ಪರಿಮಳಗಳನ್ನೂ ಶುದ್ಧವಾದ ಸಾಮ್ರಾಣಿಯನ್ನೂ ತೆಗೆದುಕೋ. ಅವು ಸಮತೂಕವಾಗಿರಲಿ.
35ಅದನ್ನು ಸುಗಂಧ ತೈಲ ಮಾಡುವವರ ವಿದ್ಯೆಯ ಪ್ರಕಾರ ಬೆರಸಿ, ಶುದ್ಧವಾದ ಮತ್ತು ಪವಿತ್ರವಾದ ತೈಲವನ್ನು ಮಾಡಬೇಕು.
36ಅದರಲ್ಲಿ ಸ್ವಲ್ಪ ಪುಡಿಮಾಡಿ, ದೇವದರ್ಶನದ ಗುಡಾರದಲ್ಲಿ ನಾನು ನಿನ್ನನ್ನು ಸಂಧಿಸುವ ಸ್ಥಳದಲ್ಲಿ ಒಡಂಬಡಿಕೆಯ ಮಂಜೂಷದ ಮುಂದೆ ಇಡು. ಅದು ನಿಮಗೆ ಮಹಾಪರಿಶುದ್ಧವಾಗಿರಲಿ.
37ನೀನು ಮಾಡುವ ಧೂಪದ ಮಾದರಿಯಂತೆ ನಿಮಗೋಸ್ಕರ ಮಾಡಿಕೊಳ್ಳಬಾರದು. ಅದನ್ನು ಯೆಹೋವ ದೇವರಿಗೆ ಪವಿತ್ರವೆಂದು ಪರಿಗಣಿಸಬೇಕು.
38ಸುವಾಸನೆಗಾಗಿ ಅದನ್ನು ಮಾಡಿಕೊಳ್ಳುವವನನ್ನು ಅವನ ಕುಲದಿಂದ ಬಹಿಷ್ಕರಿಸಬೇಕು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.