Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 24

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.
2ಮೋಶೆ ಒಬ್ಬನೇ ಯೆಹೋವ ದೇವರ ಸಮೀಪಕ್ಕೆ ಬರಲಿ. ಬೇರೆ ಯಾರೂ ಸಮೀಪಕ್ಕೆ ಬರಬಾರದು. ಜನರೂ ಅವನ ಸಂಗಡ ಮೇಲೇರಿ ಬರಬಾರದು,” ಎಂದು ಹೇಳಿದರು.
3ಮೋಶೆಯು ಬಂದು ಯೆಹೋವ ದೇವರ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲಾ ಒಂದೇ ಸ್ವರದಿಂದ, “ಯೆಹೋವ ದೇವರು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ,” ಎಂದು ಉತ್ತರಕೊಟ್ಟರು.
4ಮೋಶೆಯು ಯೆಹೋವ ದೇವರು ಪ್ರಕಟಪಡಿಸಿದ ಮಾತುಗಳನ್ನೆಲ್ಲಾ ಬರೆದಿಟ್ಟನು. ಅವನು ಮರುದಿನ ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಬಲಿಪೀಠವನ್ನು ಕಟ್ಟಿಸಿ, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.
5ಅವನು ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಹೋರಿಗಳನ್ನೂ ಅರ್ಪಿಸುವುದಕ್ಕಾಗಿ ಇಸ್ರಾಯೇಲರ ಯೌವನಸ್ಥರನ್ನು ಕಳುಹಿಸಲು ಅವರು ಅದನ್ನು ಅರ್ಪಿಸಿದರು.
6ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿದನು ಮತ್ತು ರಕ್ತದಲ್ಲಿ ಮಿಕ್ಕ ಅರ್ಧವನ್ನು ಬಲಿಪೀಠದ ಮೇಲೆ ಚಿಮುಕಿಸಿದನು.
7ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರ ಸಭೆಯಲ್ಲಿ ಓದಿದನು. ಆಗ ಅವರು, “ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ಅವುಗಳಿಗೆ ವಿಧೇಯರಾಗುವೆವು,” ಎಂದರು.
8ತರುವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಈ ಎಲ್ಲಾ ಮಾತುಗಳ ವಿಷಯದಲ್ಲಿ ಯೆಹೋವ ದೇವರು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತ,” ಎಂದನು.
9ಆಗ ಮೋಶೆ, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಮೇಲಕ್ಕೆ ಹೋದರು.
10ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲ ವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ, ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.
11ಆದರೆ ದೇವರು ಇಸ್ರಾಯೇಲರ ಶ್ರೇಷ್ಠರನ್ನು ತಳ್ಳಿಬಿಡಲಿಲ್ಲ. ಅವರು ಸಹ ದೇವರನ್ನು ನೋಡಿ, ಊಟಮಾಡಿ, ಪಾನಮಾಡಿದರು.
12ಯೆಹೋವ ದೇವರು ಮೋಶೆಗೆ, “ಬೆಟ್ಟವನ್ನೇರಿ, ನನ್ನ ಬಳಿಗೆ ಬಂದು ಇಲ್ಲೇ ಇರು. ನಿಯಮವನ್ನು ಹಾಗು ಆಜ್ಞೆಗಳನ್ನು ನೀನು ಜನರಿಗೆ ಬೋಧನೆಮಾಡುವಂತೆ ಬರೆದಿರುವ ಕಲ್ಲಿನ ಹಲಗೆಗಳನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು.
13ಆಗ ಮೋಶೆಯೂ ಅವನ ಸಹಾಯಕನಾದ ಯೆಹೋಶುವನೂ ದೇವರ ಬೆಟ್ಟದ ಮೇಲೆ ಹೊರಟರು.
14ಆಗ ಮೋಶೆ ಹಿರಿಯರಿಗೆ, “ನಾವು ನಿಮ್ಮ ಬಳಿಗೆ ತಿರುಗಿ ಬರುವವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರಿ. ಆರೋನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿಗಾದರೂ ವ್ಯಾಜ್ಯವಿದ್ದರೆ ಅವರ ಬಳಿಗೆ ಹೋಗಲಿ,” ಎಂದನು.
15ಮೋಶೆ ಬೆಟ್ಟವನ್ನೇರಿ ಹೋದಾಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.
16ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.
17ಯೆಹೋವ ದೇವರ ಮಹಿಮೆಯ ದೃಶ್ಯವು ಇಸ್ರಾಯೇಲರ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ದಹಿಸುವ ಅಗ್ನಿಯಂತಿತ್ತು.
18ಆಗ ಮೋಶೆಯು ಮೇಘದ ಮಧ್ಯಕ್ಕೆ ಬಂದು ಬೆಟ್ಟವನ್ನೇರಿದನು. ಅವನು ಹಗಲಿರುಳು ನಲವತ್ತು ದಿವಸ ಪರ್ವತದ ಮೇಲಿದ್ದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.