Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 18

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ದೇವರು ಮೋಶೆಗೂ, ತಮ್ಮ ಜನರಾದ ಇಸ್ರಾಯೇಲರಿಗೂ ಮಾಡಿದವುಗಳೆಲ್ಲವನ್ನೂ ಯೆಹೋವ ದೇವರು ಇಸ್ರಾಯೇಲರನ್ನು ಈಜಿಪ್ಟಿನೊಳಗಿಂದ ಹೊರಗೆ ತಂದದ್ದನ್ನೂ, ಮಿದ್ಯಾನಿನ ಯಾಜಕನೂ, ಮೋಶೆಯ ಮಾವನೂ ಆಗಿದ್ದ ಇತ್ರೋವನಿಗೆ ಮುಟ್ಟಿತು.
2ಅವನು ತನ್ನ ಬಳಿಗೆ ಕಳುಹಿಸಲಾಗಿದ್ದ ಮೋಶೆಯ ಹೆಂಡತಿ ಚಿಪ್ಪೋರಳನ್ನು ಮತ್ತು ಆಕೆಯ ಇಬ್ಬರು ಪುತ್ರರನ್ನು ಕರೆದುಕೊಂಡು ಬಂದನು.
3ಮೋಶೆಯು, “ನಾನು ಪರದೇಶದಲ್ಲಿ ಅನ್ಯನಾಗಿದ್ದೆನು,” ಎಂದು ಹೇಳಿ ಆ ಪುತ್ರರಲ್ಲಿ ಒಬ್ಬನಿಗೆ ಗೇರ್ಷೋಮ್ ಎಂದು ಹೆಸರಿಟ್ಟಿದ್ದನು.
4“ನನ್ನ ತಂದೆಯ ದೇವರು ನನ್ನ ಸಹಾಯಕನಾಗಿದ್ದು, ಫರೋಹನ ಖಡ್ಗದಿಂದ ಬಿಡುಗಡೆ ಮಾಡಿದನು,” ಎಂದು ಹೇಳಿ ಇನ್ನೊಬ್ಬ ಮಗನಿಗೆ ಎಲೀಯೆಜೆರ್ ಎಂದು ಹೆಸರಿಟ್ಟಿದ್ದನು.
5ಮೋಶೆಯ ಮಾವನಾದ ಇತ್ರೋವನ ಸಂಗಡ ಮೋಶೆಯ ಹೆಂಡತಿಯನ್ನೂ, ಅವನ ಪುತ್ರರನ್ನೂ ಮೋಶೆಯ ಬಳಿಗೆ ಅವನು ತಂಗಿದ್ದ ಮರುಭೂಮಿಯಲ್ಲಿ ದೇವರ ಬೆಟ್ಟದ ಬಳಿಗೆ ಬಂದರು.
6ಆಗ ಅವನು ಮೋಶೆಗೆ, “ನಿನ್ನ ಮಾವ ಇತ್ರೋವನೆಂಬ ನಾನು ನಿನ್ನ ಹೆಂಡತಿ, ಇಬ್ಬರು ಮಕ್ಕಳನ್ನೂ ಕರೆದುಕೊಂಡು ನಿನ್ನ ಬಳಿಗೆ ಬಂದಿದ್ದೇನೆ,” ಎಂದು ಹೇಳಿ ಕಳುಹಿಸಿದನು.
7ಮೋಶೆಗೆ ತನ್ನ ಮಾವನನ್ನು ಎದುರುಗೊಂಡು ಅವನನ್ನು ವಂದಿಸಿ, ಮುದ್ದಿಟ್ಟನು. ಅವರು ಪರಸ್ಪರ ಕ್ಷೇಮಸಮಾಚಾರವನ್ನು ಕೇಳಿಕೊಂಡು ಗುಡಾರಕ್ಕೆ ಬಂದರು.
8ಇಸ್ರಾಯೇಲರಿಗೋಸ್ಕರ ಯೆಹೋವ ದೇವರು ಫರೋಹನಿಗೂ ಈಜಿಪ್ಟಿನವರಿಗೂ ಮಾಡಿದ್ದೆಲ್ಲವನ್ನೂ, ಅವರಿಗೆ ಒದಗಿದ ಎಲ್ಲಾ ಸಂಕಟವನ್ನೂ ಯೆಹೋವ ದೇವರು ತಮ್ಮನ್ನು ಹೇಗೆ ತಪ್ಪಿಸಿದನೆಂಬುದನ್ನೂ ಮೋಶೆಯು ತನ್ನ ಮಾವನಿಗೆ ತಿಳಿಯಪಡಿಸಿದನು.
9ಇದಲ್ಲದೆ ಯೆಹೋವ ದೇವರು ಇಸ್ರಾಯೇಲರಿಗೆ ಮಾಡಿದ ಎಲ್ಲಾ ಉಪಕಾರಕ್ಕಾಗಿಯೂ, ಯೆಹೋವ ದೇವರು ಅವರನ್ನು ಈಜಿಪ್ಟಿನವರ ಕೈಗಳಿಂದ ತಪ್ಪಿಸಿದ್ದಕ್ಕಾಗಿಯೂ ಇತ್ರೋವನು ಸಂತೋಷಪಟ್ಟನು.
10ಇತ್ರೋವನು, “ಈಜಿಪ್ಟಿನವರ ಕೈಗೂ ಫರೋಹನ ಕೈಗೂ ಈಜಿಪ್ಟಿನವರ ಅಧಿಕಾರದೊಳಗಿಂದಲೂ ಜನರನ್ನು ತಪ್ಪಿಸಿದ ಯೆಹೋವ ದೇವರಿಗೆ ಸ್ತೋತ್ರವಾಗಲಿ.
11ಎಲ್ಲಾ ದೇವರುಗಳಿಗಿಂತ ಯೆಹೋವ ದೇವರೇ ದೊಡ್ಡವರೆಂದು ಈಗ ನಾನು ತಿಳಿದುಕೊಂಡಿದ್ದೇನೆ. ಏಕೆಂದರೆ ಈಜಿಪ್ಟಿನವರು ಗರ್ವಪಟ್ಟಿದ್ದರಿಂದ ಯೆಹೋವ ದೇವರು ಅವರನ್ನು ತಗ್ಗಿಸಿದರು,” ಎಂದನು.
12ಮೋಶೆಯ ಮಾವ ಇತ್ರೋವನು ದಹನಬಲಿಯನ್ನೂ, ಯಜ್ಞಗಳನ್ನೂ ದೇವರಿಗಾಗಿ ತೆಗೆದುಕೊಂಡು ಬಂದನು. ಆರೋನನೂ, ಇಸ್ರಾಯೇಲಿನ ಹಿರಿಯರೆಲ್ಲರೂ ದೇವರ ಸನ್ನಿಧಿಯಲ್ಲಿ ಮೋಶೆಯ ಮಾವನ ಸಂಗಡ ಭೋಜನವನ್ನು ಮಾಡುವುದಕ್ಕೆ ಬಂದರು.
13ಮರುದಿನ ಮೋಶೆಯು ಜನರಿಗೆ ನ್ಯಾಯತೀರಿಸುವುದಕ್ಕೆ ಕೂತುಕೊಂಡಾಗ, ಜನರು ಬೆಳಗಿನಿಂದ ಸಂಜೆಯವರೆಗೆ ಮೋಶೆಯ ಬಳಿಯಲ್ಲಿ ನಿಂತಿದ್ದರು.
14ಇತ್ರೋವನು ಮೋಶೆಯು ಜನರಿಗಾಗಿ ಮಾಡುವುದನ್ನೆಲ್ಲಾ ನೋಡಿದಾಗ, ಅವನು ಮೋಶೆಗೆ, “ಇದೇನು ಜನರಿಗೆ ನೀನು ಮಾಡುವುದು? ಏಕೆ ನೀನೊಬ್ಬನೇ ನ್ಯಾಯಾಧೀಶನಾಗಿ ಕೂತಿರಲಾಗಿ, ಜನರು ಬೆಳಗಿನಿಂದ ಸಂಜೆಯವರೆಗೆ ನಿನ್ನ ಬಳಿಯಲ್ಲಿ ನಿಂತಿರಬೇಕು?” ಎಂದನು.
15ಅದಕ್ಕೆ ಮೋಶೆಯು ತನ್ನ ಮಾವನಿಗೆ, “ದೇವರ ವಿಷಯವಾಗಿ ಕೇಳುವುದಕ್ಕಾಗಿ ಜನರು ನನ್ನ ಬಳಿಗೆ ಬರುತ್ತಾರೆ.
16ಅವರಿಗೆ ಏನಾದರೂ ವ್ಯಾಜ್ಯವಿದ್ದರೆ ನನ್ನ ಬಳಿಗೆ ಬರುತ್ತಾರೆ. ನಾನು ಒಬ್ಬರ ಸಂಗಡ ಇನ್ನೊಬ್ಬರಿಗಿರುವ ವ್ಯಾಜ್ಯವನ್ನು ತೀರಿಸುತ್ತೇನೆ. ದೇವರ ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ತಿಳಿಯಪಡಿಸುತ್ತೇನೆ,” ಎಂದನು.
17ಮೋಶೆಯ ಮಾವನು ಅವನಿಗೆ, “ನೀನು ಮಾಡುವ ಕಾರ್ಯವಿಧಾನ ಸರಿಯಲ್ಲ,
18ನೀನೂ, ನಿನ್ನ ಸಂಗಡ ಇರುವ ಜನರೂ ಖಂಡಿತ ಬಳಲುವಿರಿ. ಏಕೆಂದರೆ ಇದು ನಿನಗೆ ಬಹು ಭಾರ. ನೀನೊಬ್ಬನೇ ಇದನ್ನು ಮಾಡಲಾರೆ.
19ಆದ್ದರಿಂದ ಈಗ ನನ್ನ ಮಾತನ್ನು ಕೇಳು, ನಿನಗೆ ಆಲೋಚನೆ ಹೇಳುತ್ತೇನೆ. ದೇವರು ನಿನ್ನ ಸಂಗಡ ಇರಲಿ. ನೀನು ಜನರಿಗಾಗಿ ದೇವರ ಪಕ್ಷದಲ್ಲಿದ್ದು, ಅವರ ವ್ಯಾಜ್ಯಗಳನ್ನು ದೇವರ ಮುಂದೆ ತರಬೇಕು.
20ನಿಯಮಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕಲಿಸಿ, ಅವರು ನಡೆಯಬೇಕಾದ ಮಾರ್ಗವನ್ನೂ, ಅವರು ಮಾಡಬೇಕಾದ ಕೆಲಸವನ್ನೂ ಅವರಿಗೆ ತೋರಿಸಬೇಕು.
21ಇದಲ್ಲದೆ ನೀನು ಸಮಸ್ತ ಜನರೊಳಗೆ ಸಮರ್ಥರು ಅಂದರೆ ದೇವರಿಗೆ ಭಯಪಡುವವರೂ, ಸತ್ಯವಂತರೂ, ದುರಾಶೆಯನ್ನು ಹಗೆಮಾಡುವವರೂ ಆಗಿರುವವರನ್ನು ಸಾವಿರ ಮಂದಿಯ ಮೇಲೆಯೂ, ನೂರು ಮಂದಿಯ ಮೇಲೆಯೂ, ಐವತ್ತು ಮಂದಿಯ ಮೇಲೆಯೂ, ಹತ್ತು ಮಂದಿಯ ಮೇಲೆಯೂ ಅಧಿಕಾರಿಗಳನ್ನಾಗಿ ನೇಮಿಸು.
22ಇವರು ಎಲ್ಲಾ ಕಾಲಗಳಲ್ಲಿಯೂ ಜನರಿಗೆ ನ್ಯಾಯತೀರಿಸಲಿ. ಆದರೆ ದೊಡ್ಡ ವ್ಯಾಜ್ಯಗಳನ್ನೆಲ್ಲಾ ನಿನ್ನ ಮುಂದೆ ತಂದು, ಸಣ್ಣ ವ್ಯಾಜ್ಯಗಳನ್ನೆಲ್ಲಾ ತಾವೇ ತೀರಿಸಲಿ. ಆಗ ನಿನಗೆ ಸುಲಭವಾಗುವುದು. ಅವರೂ ನಿನ್ನ ಸಂಗಡ ಭಾರವನ್ನು ಹೊರುವರು.
23ಈ ಕಾರ್ಯವನ್ನು ಮಾಡುವುದಕ್ಕೆ ದೇವರು ನಿನಗೆ ಅಪ್ಪಣೆ ಕೊಟ್ಟರೆ, ಆಗ ನೀನು ಇದನ್ನು ನಿರ್ವಹಿಸಲು ಶಕ್ತನಾಗುವೆ. ಈ ಜನರೆಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ಸಮಾಧಾನದಿಂದ ಹೋಗುವರು,” ಎಂದನು.
24ಮೋಶೆಯು ತನ್ನ ಮಾವನ ಮಾತನ್ನು ಕೇಳಿ, ಅವನು ಹೇಳಿದ್ದನ್ನೆಲ್ಲಾ ಮಾಡಿದನು.
25ಮೋಶೆಯು ಇಸ್ರಾಯೇಲರಲ್ಲಿ ಇರುವ ಸಮರ್ಥರನ್ನು ಆರಿಸಿಕೊಂಡು, ಅವರನ್ನು ಜನರ ಮೇಲೆ ಮುಖ್ಯಸ್ಥರನ್ನಾಗಿ ಮಾಡಿ, ಸಾವಿರ ಮಂದಿಯ ಮೇಲೆ, ನೂರು ಮಂದಿಯ ಮೇಲೆ, ಐವತ್ತು ಮಂದಿಯ ಮೇಲೆ, ಹತ್ತು ಮಂದಿಯ ಮೇಲೆ ಅಧಿಕಾರಿಗಳನ್ನಾಗಿ ನೇಮಿಸಿದನು.
26ಇವರು ಎಲ್ಲಾ ಕಾಲಗಳಲ್ಲಿ ಜನರಿಗೆ ನ್ಯಾಯತೀರಿಸಿ, ಕಠಿಣ ವ್ಯಾಜ್ಯಗಳನ್ನು ಮೋಶೆಯ ಬಳಿಗೆ ತರುತ್ತಿದ್ದರು. ಸಣ್ಣ ವ್ಯಾಜ್ಯಗಳನ್ನು ತಾವೇ ತೀರಿಸಿದರು.
27ತರುವಾಯ ಮೋಶೆಯು ತನ್ನ ಮಾವ ಇತ್ರೋವನಿಗೆ ಸಾಗಕಳುಹಿಸಿದಾಗ, ಅವನು ಸ್ವದೇಶಕ್ಕೆ ಹೊರಟುಹೋದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.