Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 16

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಇಸ್ರಾಯೇಲರ ಸಭೆಯೆಲ್ಲಾ ಏಲೀಮಿನಿಂದ ಪ್ರಯಾಣಮಾಡಿ, ಈಜಿಪ್ಟ್ ದೇಶದಿಂದ ಹೊರಟ ಎರಡನೆಯ ತಿಂಗಳಿನ ಹದಿನೈದನೆಯ ದಿನದಲ್ಲಿ ಏಲೀಮಿಗೂ, ಸೀನಾಯಿ ಪರ್ವತಕ್ಕೂ ಮಧ್ಯೆ ಇರುವ ಸೀನ್ ಮರುಭೂಮಿಗೆ ಬಂದರು.
2ಆಗ ಇಸ್ರಾಯೇಲರ ಸಭೆಯೆಲ್ಲಾ ಮರುಭೂಮಿಯಲ್ಲಿ ಮೋಶೆ ಮತ್ತು ಆರೋನರ ವಿರೋಧವಾಗಿ ಗೊಣಗುಟ್ಟಿದರು.
3ಇಸ್ರಾಯೇಲರು ಅವರಿಗೆ, “ನಾವು ಈಜಿಪ್ಟ್ ದೇಶದಲ್ಲಿ ಮಾಂಸದ ಪಾತ್ರೆಗಳ ಬಳಿಯಲ್ಲಿ ಕುಳಿತುಕೊಂಡು ಸಾಕಾಗುವಷ್ಟು ರೊಟ್ಟಿಯನ್ನು ತಿನ್ನುತ್ತಿದ್ದಾಗ, ಯೆಹೋವ ದೇವರ ಕೈಯಿಂದ ಸತ್ತು ಹೋಗಿದ್ದರೆ ಒಳ್ಳೆಯದಾಗಿತ್ತು. ಇಡೀ ಜನಾಂಗವೇ ಹಸಿವೆಯಿಂದ ಸತ್ತು ಹೋಗುವಂತೆ ನಮ್ಮನ್ನು ಈ ಮರುಭೂಮಿಗೆ ಬರಮಾಡಿದ್ದೀರಿ,” ಎಂದರು.
4ಆಗ ಯೆಹೋವ ದೇವರು ಮೋಶೆಗೆ, “ನಾನು ರೊಟ್ಟಿಯನ್ನು ನಿಮಗಾಗಿ ಆಕಾಶದಿಂದ ಸುರಿಸುತ್ತೇನೆ. ಜನರು ಹೊರಗೆ ಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದದ್ದನ್ನು ಕೂಡಿಸಲಿ. ಇದರಿಂದ ಅವರು ನನ್ನ ಆಜ್ಞೆಗಳನ್ನು ಕೈಗೊಳ್ಳುವರೋ, ಇಲ್ಲವೋ ಎಂಬುದನ್ನು ಪರೀಕ್ಷಿಸುತ್ತೇನೆ.
5ಆರನೆಯ ದಿವಸದಲ್ಲಿ ಮಾತ್ರ ಅವರು ತಂದದ್ದನ್ನು ಸಿದ್ಧಪಡಿಸಿಕೊಳ್ಳುವಾಗ, ಪ್ರತಿದಿನ ಕೂಡಿಸುವುದಕ್ಕಿಂತಲೂ ಎರಡರಷ್ಟಾಗಿರುವುದು,” ಎಂದು ಹೇಳಿದರು.
6ಆಗ ಮೋಶೆ, ಆರೋನರು ಇಸ್ರಾಯೇಲರಿಗೆಲ್ಲಾ, “ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ಬರಮಾಡಿದವರು ಯೆಹೋವ ದೇವರೇ, ಎಂದು ಸಾಯಂಕಾಲವಾದಾಗ ನಿಮಗೆ ತಿಳಿಯುವುದು.
7ಬೆಳಿಗ್ಗೆ ಯೆಹೋವ ದೇವರ ಮಹಿಮೆಯನ್ನು ನೋಡುವಿರಿ. ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ನೀವು ಗೊಣಗುಟ್ಟಿದ್ದನ್ನು ಅವರು ಕೇಳಿದ್ದಾರೆ. ನಮಗೆ ವಿರೋಧವಾಗಿ ನೀವು ಗೊಣಗುಟ್ಟುವ ಹಾಗೆ ನಾವು ಯಾರು?” ಎಂದರು.
8ಮೋಶೆ ಮುಂದುವರಿಸಿ, “ಸಂಜೆಯಲ್ಲಿ ಯೆಹೋವ ದೇವರು ನಿಮಗೆ ಮಾಂಸಾಹಾರವನ್ನೂ, ಬೆಳಿಗ್ಗೆ ಬೇಕಾದಷ್ಟು ರೊಟ್ಟಿಯನ್ನೂ ಕೊಡುವರು. ನಿಮ್ಮ ಗೊಣಗುಟ್ಟುವಿಕೆಯು ಯೆಹೋವ ದೇವರಿಗೆ ಹೊರತು ನಮಗಲ್ಲ. ನಾವು ಎಷ್ಟು ಮಾತ್ರದವರು,” ಎಂದನು.
9ಅನಂತರ ಮೋಶೆ ಆರೋನನಿಗೆ, “ನೀನು ಇಸ್ರಾಯೇಲರ ಸಮೂಹಕ್ಕೆ, ‘ನಿಮ್ಮ ಗೊಣಗುಟ್ಟುವಿಕೆಯನ್ನು ಯೆಹೋವ ದೇವರು ಕೇಳಿದ್ದರಿಂದ ನೀವು ಅವರ ಮುಂದೆ ಬನ್ನಿರಿ,’ ಎಂದು ಹೇಳು,” ಎಂದನು.
10ಆರೋನನು ಇಸ್ರಾಯೇಲರ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಮರುಭೂಮಿಯ ಕಡೆಗೆ ನೋಡಿದರು. ಆಗ, ಯೆಹೋವ ದೇವರ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.
11ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
12“ಇಸ್ರಾಯೇಲರ ಗೊಣಗುಟ್ಟುವಿಕೆಯನ್ನು ಕೇಳಿದ್ದೇನೆ. ಅವರ ಸಂಗಡ ನೀನು ಮಾತನಾಡಿ, ‘ನೀವು ಸಂಜೆಯಲ್ಲಿ ಮಾಂಸವನ್ನು ತಿನ್ನುವಿರಿ. ಬೆಳಿಗ್ಗೆ ರೊಟ್ಟಿಯಿಂದ ತೃಪ್ತರಾಗುವಿರಿ. ನಾನೇ ನಿಮ್ಮ ದೇವರಾದ ಯೆಹೋವ ದೇವರೆಂದು ತಿಳಿದುಕೊಳ್ಳುವಿರಿ,’ ಎಂದು ಅವರಿಗೆ ಹೇಳು,” ಎಂದರು.
13ಸಂಜೆಯಲ್ಲಿ ಲಾವಕ್ಕಿಗಳು ಬಂದು ಅವರ ಪಾಳೆಯವನ್ನು ಮುಚ್ಚಿಕೊಂಡವು. ಬೆಳಿಗ್ಗೆ ಮಂಜು ಪಾಳೆಯದ ಸುತ್ತಲೂ ಬಿದ್ದಿತ್ತು.
14ಬಿದ್ದಿದ್ದ ಮಂಜು ಹೋದ ಮೇಲೆ, ಗಟ್ಟಿಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕದಾದದ್ದೂ, ಗುಂಡಾದದ್ದೂ ಮರುಭೂಮಿಯಲ್ಲಿ ಹರಡಿತ್ತು.
15ಇಸ್ರಾಯೇಲರು ಅದನ್ನು ನೋಡಿದಾಗ ಅವರು, ಒಬ್ಬರಿಗೊಬ್ಬರು, “ಇದೇನು?” ಎಂದರು. ಏಕೆಂದರೆ ಅದು ಏನಾಗಿತ್ತೆಂದು ಅವರಿಗೆ ತಿಳಿಯಲಿಲ್ಲ. ಆಗ ಮೋಶೆಯು ಅವರಿಗೆ, “ಯೆಹೋವ ದೇವರು ನಿಮಗೆ ಕೊಟ್ಟಿರುವ ರೊಟ್ಟಿಯು ಇದೇ.
16ಯೆಹೋವ ದೇವರು, ‘ಪ್ರತಿಯೊಬ್ಬನು ತಾನು ಎಷ್ಟು ತಿನ್ನುವನೋ ಅದರ ಪ್ರಕಾರ ಅದನ್ನು ಕೂಡಿಸಲಿ. ಪ್ರತಿಯೊಬ್ಬನಿಗೆ ಸುಮಾರು ಒಂದು ಕಿಲೋಗ್ರಾಂದಷ್ಟು ನಿಮ್ಮ ಡೇರೆಗಳಲ್ಲಿರುವ ವ್ಯಕ್ತಿಗಳ ಲೆಕ್ಕದ ಪ್ರಕಾರ ನೀವು ತೆಗೆದುಕೊಳ್ಳಿರಿ,’ ಎಂದು ಹೇಳಿದ್ದಾರೆ,” ಎಂದನು.
17ಇಸ್ರಾಯೇಲರು ಅದರಂತೆ ಮಾಡಿ ಕೆಲವರು ಹೆಚ್ಚು, ಕೆಲವರು ಕಡಿಮೆ ಕೂಡಿಸಿದರು.
18ಓಮೆರದಿಂದ ಅಳತೆಮಾಡಿದಾಗ, ಅತಿಯಾಗಿ ಕೂಡಿಸಿದವನಿಗೆ ಹೆಚ್ಚಾಗಲಿಲ್ಲ, ಮಿತವಾಗಿ ಕೂಡಿಸಿದವನಿಗೆ ಕೊರತೆಯಾಗಲಿಲ್ಲ. ಒಬ್ಬೊಬ್ಬನು ಊಟಮಾಡುವಷ್ಟು ಅವರು ಕೂಡಿಸಿದರು.
19ಮೋಶೆ ಅವರಿಗೆ, “ಇದನ್ನು ಯಾರೂ ಮರುದಿನದವರೆಗೆ ಇಟ್ಟುಕೊಳ್ಳಬಾರದು,” ಎಂದು ಹೇಳಿದನು.
20ಆದರೂ ಅವರು ಮೋಶೆಯ ಮಾತನ್ನು ಕೇಳಲಿಲ್ಲ. ಕೆಲವರು ಅದನ್ನು ಬೆಳಗಿನವರೆಗೆ ಇಟ್ಟುಕೊಂಡಾಗ, ಅದು ಹುಳ ಬಿದ್ದು ಹೊಲಸುವಾಸನೆ ಹುಟ್ಟಿತು. ಆಗ ಮೋಶೆಯು ಅವರ ಮೇಲೆ ಕೋಪಿಸಿಕೊಂಡನು.
21ಹೀಗೆ ಅವರಲ್ಲಿ ಪ್ರತಿಯೊಬ್ಬನು ತಿನ್ನುವಷ್ಟು ಪ್ರತಿದಿನದ ಬೆಳಿಗ್ಗೆ ಅದನ್ನು ಕೂಡಿಸುತ್ತಿದ್ದರು. ಬಿಸಿಲು ಬಹಳವಾದಾಗ ಅದು ಕರಗಿ ಹೋಗುತ್ತಿತ್ತು.
22ಆರನೆಯ ದಿನದಲ್ಲಿ ಅವರು ಎರಡರಷ್ಟು ಅಂದರೆ ಒಬ್ಬನಿಗೆ ಎರಡು ಓಮೆರದಂತೆ ಕೂಡಿಸಿದ್ದರಿಂದ ಸಭೆಯ ಎಲ್ಲಾ ಅಧಿಕಾರಿಗಳು ಬಂದು ಮೋಶೆಗೆ ತಿಳಿಸಿದರು.
23ಅದಕ್ಕೆ ಮೋಶೆ, “ಯೆಹೋವ ದೇವರು ಆಜ್ಞಾಪಿಸಿದ ಮಾತು ಇದೇ: ‘ನಾಳೆ ಯೆಹೋವ ದೇವರಿಗೆ ಪರಿಶುದ್ಧ ಸಬ್ಬತ್ ದಿನವಾಗಿದೆ. ಇಂದೇ ಸುಡಬೇಕಾದದ್ದನ್ನು ಸುಟ್ಟು, ಬೇಯಿಸಬೇಕಾದದ್ದನ್ನು ಬೇಯಿಸಿರಿ. ಇದರಲ್ಲಿ ಮಿಕ್ಕಾದದ್ದನ್ನೆಲ್ಲಾ ಬೆಳಗಿನವರೆಗೆ ಇಟ್ಟುಕೊಳ್ಳಿರಿ,’ ” ಎಂದನು.
24ಮೋಶೆಯು ಆಜ್ಞಾಪಿಸಿದ ಪ್ರಕಾರ ಅದನ್ನು ಮರುದಿನದವರೆಗೆ ಇಟ್ಟುಕೊಂಡಾಗ, ಅದು ಹೊಲಸುವಾಸನೆ ಹೊಂದಲಿಲ್ಲ. ಅದರಲ್ಲಿ ಹುಳಗಳೂ ಇರಲಿಲ್ಲ.
25ಆಗ ಮೋಶೆಯು, “ಈ ಹೊತ್ತು ಅದನ್ನು ಊಟಮಾಡಿರಿ. ಏಕೆಂದರೆ ಈ ದಿನವು ಯೆಹೋವ ದೇವರ ಸಬ್ಬತ್ ದಿನವಾಗಿದೆ. ಈ ಹೊತ್ತು ನಿಮಗೆ ಹೊಲದಲ್ಲಿ ಆಹಾರ ಸಿಕ್ಕುವುದಿಲ್ಲ.
26ಆರು ದಿವಸ ಅದನ್ನು ಕೂಡಿಸಬೇಕು. ಏಳನೆಯ ದಿನ ಸಬ್ಬತ್ ದಿನವಾಗಿರುವುದರಿಂದ ಅದು ದೊರೆಯುವುದಿಲ್ಲ,” ಎಂದನು.
27ಏಳನೆಯ ದಿನ ಜನರಲ್ಲಿ ಕೆಲವರು ಕೂಡಿಸುವುದಕ್ಕೆ ಹೊರಗೆ ಹೋದಾಗ, ಅವರಿಗೆ ಏನೂ ಸಿಕ್ಕಲಿಲ್ಲ.
28ಆಗ ಯೆಹೋವ ದೇವರು ಮೋಶೆಗೆ, “ಎಷ್ಟು ಕಾಲ ನನ್ನ ಕಟ್ಟಳೆಗಳನ್ನೂ, ನಿಯಮಗಳನ್ನೂ ಕೈಗೊಳ್ಳದೆ ನಿರಾಕರಿಸುವಿರಿ?
29ನೋಡಿರಿ, ಯೆಹೋವ ದೇವರಾದ ನಾನು ನಿಮಗೆ ಸಬ್ಬತ್ ದಿನವನ್ನು ಕೊಟ್ಟಿದ್ದರಿಂದಲೇ, ಆರನೆಯ ದಿನದಲ್ಲಿ ನಿಮಗೆ ಎರಡು ದಿನಗಳಿಗೆ ಸಾಕಾಗುವಷ್ಟು ಆಹಾರ ಕೊಟ್ಟಿದ್ದೇನೆ. ಪ್ರತಿಯೊಬ್ಬನೂ ತನ್ನ ತನ್ನ ಸ್ಥಳದಲ್ಲಿ ಇರಲಿ. ಏಳನೆಯ ದಿನದಲ್ಲಿ ಯಾರೂ ತನ್ನ ಸ್ಥಳವನ್ನು ಬಿಟ್ಟುಹೋಗಬಾರದು,” ಎಂದರು.
30ಹೀಗೆ ಜನರು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡರು.
31ಇಸ್ರಾಯೇಲರು ಆ ಆಹಾರಕ್ಕೆ ಮನ್ನಾ, ಎಂದು ಹೆಸರಿಟ್ಟರು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನುತುಪ್ಪ ಕಲಸಿದ ದೋಸೆಯಂತೆ ಇತ್ತು.
32ಮೋಶೆಯು ಅವರಿಗೆ, “ಯೆಹೋವ ದೇವರು ಆಜ್ಞಾಪಿಸಿದ್ದು ಇದೇ: ‘ನಾನು ನಿಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಡಿಸಿದಾಗ, ಮರುಭೂಮಿಯಲ್ಲಿ ನಿಮಗೆ ತಿನ್ನಿಸಿದ ರೊಟ್ಟಿಯನ್ನು ನಿಮ್ಮ ಸಂತಾನಗಳು ನೋಡುವಂತೆ ಒಂದು ಓಮೆರ್ ಮನ್ನವನ್ನು ತುಂಬಿಸಿ ಇಟ್ಟಿರಬೇಕು,’ ಎಂಬುದು,” ಎಂದನು.
33ಮೋಶೆ ಆರೋನನಿಗೆ, “ನೀನು ಒಂದು ಪಾತ್ರೆಯನ್ನು ತೆಗೆದುಕೊಂಡು ಒಂದು ಓಮೆರ್ ಮನ್ನವನ್ನು ಅದರಲ್ಲಿ ಹಾಕಿ ನಿಮ್ಮ ಸಂತತಿಯವರು ನೋಡುವುದಕ್ಕೋಸ್ಕರ ಅದನ್ನು ಯೆಹೋವ ದೇವರ ಮುಂದೆ ಇಡು,” ಎಂದನು.
34ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮನ್ನವನ್ನು ಸಂರಕ್ಷಿಸುವುದಕ್ಕೆ ಸಾಕ್ಷಿಯಾಗಿ ಇಟ್ಟನು.
35ಇಸ್ರಾಯೇಲರು ತಾವು ವಾಸವಾಗಿರತಕ್ಕ ದೇಶಕ್ಕೆ ಬರುವವರೆಗೆ, ನಲವತ್ತು ವರುಷ ಮನ್ನವನ್ನು ತಿಂದರು. ಕಾನಾನ್ ದೇಶದ ಮೇರೆಗಳಿಗೆ ಸೇರುವವರೆಗೂ ಅವರು ಮನ್ನವನ್ನು ತಿಂದರು.
36ಓಮೆರ್ ಎಂದರೆ ಏಫಾದಲ್ಲಿ ಹತ್ತನೆಯ ಒಂದು ಪಾಲು ಹಿಡಿಯುವಂಥ ಅಳತೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.