Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ವಿಮೋಚನಕಾಂಡ 13

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
2“ಇಸ್ರಾಯೇಲರಲ್ಲಿ ಹುಟ್ಟಿರುವ ಪ್ರತಿಯೊಂದು ಚೊಚ್ಚಲ ಗಂಡನ್ನು ನನಗಾಗಿ ಮೀಸಲಾಗಿಡು. ಮನುಷ್ಯರಾಗಿರಲಿ, ಪಶುಪ್ರಾಣಿಗಳಾಗಿರಲಿ ಪ್ರಥಮ ಗರ್ಭಫಲವು ನನ್ನದಾಗಿದೆ,” ಎಂದರು.
3ಆಗ ಮೋಶೆಯು ಜನರಿಗೆ, “ನೀವು ಈಜಿಪ್ಟಿನ ದಾಸತ್ವದಿಂದ ಹೊರಬಂದ ಈ ದಿನವನ್ನು ಜ್ಞಾಪಕಮಾಡಿಕೊಳ್ಳಿರಿ. ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಅಲ್ಲಿಂದ ಹೊರಗೆ ಬರಮಾಡಿದ್ದಾರೆ. ಹೀಗಿರುವುದರಿಂದ ಈ ದಿನ ನೀವು ಹುಳಿರೊಟ್ಟಿಯನ್ನು ತಿನ್ನಬಾರದು.
4ಅಬೀಬ ತಿಂಗಳಿನ ಈ ದಿನದಲ್ಲಿ ನೀವು ಹೊರಗೆ ಬಂದಿದ್ದೀರಿ.
5ಆದ್ದರಿಂದ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶಕ್ಕೆ ಅಂದರೆ ಕಾನಾನ್ಯರ, ಹಿತ್ತಿಯರ, ಅಮೋರಿಯರ, ಹಿವ್ವಿಯರ, ಯೆಬೂಸಿಯರ ದೇಶಕ್ಕೆ ನಿಮ್ಮನ್ನು ಕರೆತಂದು ಅದನ್ನು ನಿಮಗೆ ಕೊಟ್ಟಾಗ ಈ ಹಬ್ಬವನ್ನು ಈ ತಿಂಗಳಲ್ಲಿ ಆಚರಿಸಬೇಕು.
6ನೀವು ಹುಳಿಯಿಲ್ಲದ ರೊಟ್ಟಿಯನ್ನು ಏಳು ದಿವಸ ತಿನ್ನಬೇಕು. ಏಳನೆಯ ದಿನದಲ್ಲಿ ಯೆಹೋವ ದೇವರಿಗೆ ಹಬ್ಬವನ್ನಾಚರಿಸಬೇಕು.
7ಆ ಏಳು ದಿನಗಳಲ್ಲಿ ಹುಳಿಯಿಲ್ಲದ ರೊಟ್ಟಿಯನ್ನು ತಿನ್ನಬೇಕು. ಅಲ್ಲದೆ ನಿಮ್ಮ ಬಳಿಯಲ್ಲಿ ಹುಳಿಯಾಗಲಿ ಇಲ್ಲವೆ ಹುಳಿಹಿಟ್ಟಾಗಲಿ ನಿಮ್ಮ ಯಾವ ಮೇರೆಯಲ್ಲೂ ಕಾಣಬಾರದು.
8ಆ ದಿನದಲ್ಲಿ ನಿಮ್ಮ ಮಕ್ಕಳಿಗೆ, ‘ನಾವು ಈಜಿಪ್ಟಿನಿಂದ ಹೊರಗೆ ಬಂದಾಗ ಯೆಹೋವ ದೇವರು ನಮಗೆ ಮಾಡಿದ್ದನ್ನು ಸ್ಮರಿಸುವುದಕ್ಕಾಗಿ ಇದನ್ನು ಆಚರಿಸುತ್ತೇವೆ,’ ಎಂದು ತಿಳಿಸಬೇಕು.
9ಏಕೆಂದರೆ ಯೆಹೋವ ದೇವರು ನಿಮ್ಮನ್ನು ತಮ್ಮ ಭುಜಬಲದಿಂದ ಈಜಿಪ್ಟಿನಿಂದ ಹೊರಗೆ ಬರಮಾಡಿದ್ದಾರೆ. ಆದ್ದರಿಂದ ದೇವರ ನಿಯಮವು ನಿಮ್ಮ ಬಾಯಲ್ಲಿ ಇರುವಂತೆ, ಈ ಆಚರಣೆಯು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯಲ್ಲಿ ಜ್ಞಾಪಕಾರ್ಥವಾಗಿಯೂ ಇರಬೇಕು.
10ಹೀಗಿರುವುದರಿಂದ ನೀವು ಪ್ರತಿ ವರುಷವು ನೇಮಿತವಾದ ಕಾಲದಲ್ಲಿ ಈ ಶಾಸನವನ್ನು ಕೈಗೊಳ್ಳಬೇಕು.
11“ಯೆಹೋವ ದೇವರು ನಿಮಗೂ ನಿಮ್ಮ ಪಿತೃಗಳಿಗೂ ಪ್ರಮಾಣ ಮಾಡಿದ ಪ್ರಕಾರ, ನಿಮ್ಮನ್ನು ಕಾನಾನ್ಯರ ದೇಶಕ್ಕೆ ಬರಮಾಡಿ, ಅದನ್ನು ನಿಮಗೆ ಕೊಟ್ಟನಂತರ,
12ನಿಮ್ಮಲ್ಲಿಯೂ ನಿಮ್ಮ ಪಶುಪ್ರಾಣಿಗಳಲ್ಲಿಯೂ ಹುಟ್ಟುವ ಪ್ರತಿಯೊಂದು ಗರ್ಭದ ಪ್ರಥಮ ಫಲವನ್ನು ನೀವು ಯೆಹೋವ ದೇವರಿಗೆ ಕೊಡಬೇಕು.
13ಕತ್ತೆಯ ಚೊಚ್ಚಲು ಮರಿಗೆ ಬದಲಾಗಿ ಕುರಿಮರಿಯನ್ನು ಕೊಟ್ಟು ವಿಮೋಚಿಸಿಕೊಳ್ಳಬೇಕು. ಹಾಗೆ ವಿಮೋಚಿಸಿಕೊಳ್ಳದೆ ಹೋದರೆ ಅದರ ಕುತ್ತಿಗೆ ಮುರಿಯಬೇಕು. ಮನುಷ್ಯರಲ್ಲಿ ಚೊಚ್ಚಲ ಗಂಡು ಮಕ್ಕಳನ್ನು ಬದಲುಕೊಟ್ಟು, ವಿಮೋಚಿಸಲೇಬೇಕು.
14“ಮುಂದೆ ಬರುವ ಕಾಲದಲ್ಲಿ ನಿಮ್ಮ ಪುತ್ರರು ನಿಮಗೆ, ‘ಇದರ ಅರ್ಥವೇನು?’ ಎಂದು ಕೇಳುವಾಗ, ನೀವು ಅವರಿಗೆ, ‘ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನ ದಾಸತ್ವದೊಳಗಿಂದ ಹೊರಗೆ ಬರಮಾಡಿದ್ದಾರೆ.
15ಫರೋಹನು ಹಟಮಾರಿತನದಿಂದ ನಮ್ಮನ್ನು ಕಳುಹಿಸದೆ ಇದ್ದಾಗ, ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ಚೊಚ್ಚಲಾದದ್ದನ್ನೆಲ್ಲಾ ಎಂದರೆ, ಮನುಷ್ಯರ ಹಾಗೂ ಪಶುಪ್ರಾಣಿಗಳ ಚೊಚ್ಚಲಾದವುಗಳನ್ನು ಕೊಂದುಹಾಕಿದರು. ಆದ್ದರಿಂದ ಚೊಚ್ಚಲ ಗಂಡುಗಳನ್ನೆಲ್ಲಾ ಯೆಹೋವ ದೇವರಿಗೆ ಅರ್ಪಿಸುತ್ತೇವೆ. ನಮ್ಮ ಪುತ್ರರಲ್ಲಿ ಚೊಚ್ಚಲಾದವರೆಲ್ಲರನ್ನು ವಿಮೋಚಿಸುತ್ತೇವೆ,’
16ಇದು ನಿಮ್ಮ ಕೈಯಲ್ಲಿ ಗುರುತಾಗಿಯೂ ನಿಮ್ಮ ಹಣೆಯ ಮೇಲೆ ಸಂಕೇತವಾಗಿಯೂ ಇರಲಿ. ಏಕೆಂದರೆ ಯೆಹೋವ ದೇವರು ತಮ್ಮ ಭುಜಬಲದಿಂದ ನಮ್ಮನ್ನು ಈಜಿಪ್ಟಿನೊಳಗಿಂದ ಹೊರಗೆ ಬರಮಾಡಿದ್ದಾರೆ ಎಂದು ಹೇಳಬೇಕು,” ಎಂದರು. ಸಮುದ್ರವನ್ನು ದಾಟಿದ್ದು
17ಫರೋಹನು ಜನರನ್ನು ಕಳುಹಿಸಿಬಿಟ್ಟಾಗ, ಫಿಲಿಷ್ಟಿಯರ ದೇಶದ ದಾರಿಯು ಸಮೀಪವಿದ್ದರೂ ದೇವರು ಅವರನ್ನು ಅದರಲ್ಲಿ ನಡೆಸಲಿಲ್ಲ. ಏಕೆಂದರೆ ದೇವರು, “ಜನರು ಯುದ್ಧವನ್ನು ನೋಡಿ, ಮನಸ್ಸನ್ನು ಬೇರೆಮಾಡಿಕೊಂಡು, ಈಜಿಪ್ಟಿಗೆ ಹಿಂದಿರುಗಿಯಾರು,” ಎಂದು ಹೇಳಿದರು.
18ಹೀಗಿರುವುದರಿಂದ ಯೆಹೋವ ದೇವರು ಜನರನ್ನು ಕೆಂಪುಸಮುದ್ರದ ಮರುಭೂಮಿಯಲ್ಲಿ ಸುತ್ತಿಕೊಂಡು ಹೋಗುವಂತೆ ಮಾಡಿದರು. ಇಸ್ರಾಯೇಲರು ಯುದ್ಧಸನ್ನದ್ಧರಾಗಿ ಈಜಿಪ್ಟ್ ದೇಶದೊಳಗಿಂದ ಹೋದರು.
19ಆಗ ಮೋಶೆಯು ತನ್ನೊಂದಿಗೆ ಯೋಸೇಫನ ಎಲುಬುಗಳನ್ನು ತೆಗೆದುಕೊಂಡು ಹೋದನು. ಏಕೆಂದರೆ ಯೋಸೇಫನು ಇಸ್ರಾಯೇಲರಿಗೆ, “ದೇವರು ನಿಜವಾಗಿಯೂ ನಿಮ್ಮ ಸಹಾಯಕ್ಕೆ ಬರುವರು. ಆಗ ನೀವು ನನ್ನ ಎಲುಬುಗಳನ್ನು ಇಲ್ಲಿಂದ ನಿಮ್ಮ ಕೂಡ ತೆಗೆದುಕೊಂಡು ಹೋಗಬೇಕು,” ಎಂದು ಹೇಳಿ ಅವರಿಂದ ದೃಢಪ್ರಮಾಣ ಮಾಡಿಸಿದ್ದನು.
20ಹೀಗೆ ಅವರು ಸುಕ್ಕೋತಿನಿಂದ ಪ್ರಯಾಣಮಾಡಿ, ಏತಾಮಿನ ಮರುಭೂಮಿಯ ಅಂಚಿನಲ್ಲಿ ಇಳಿದುಕೊಂಡರು.
21ಇದಲ್ಲದೆ ಅವರು ಹಗಲೂ ರಾತ್ರಿಯೂ ಪ್ರಯಾಣ ಮಾಡುವ ಹಾಗೆ ಯೆಹೋವ ದೇವರು ಹಗಲಲ್ಲಿ ಅವರಿಗೆ ದಾರಿ ತೋರಿಸುವುದಕ್ಕೆ ಮೇಘದ ಸ್ತಂಭದಲ್ಲಿಯೂ ರಾತ್ರಿಯಲ್ಲಿ ಅವರಿಗೆ ಬೆಳಕು ಕೊಡುವುದಕ್ಕೆ ಅಗ್ನಿಯ ಸ್ತಂಭದಲ್ಲಿಯೂ ಅವರ ಮುಂದೆ ಹೋದರು.
22ದೇವರು ಹಗಲಲ್ಲಿ ಮೇಘಸ್ತಂಭವನ್ನೂ ರಾತ್ರಿಯಲ್ಲಿ ಅಗ್ನಿಸ್ತಂಭವನ್ನೂ ಜನರ ಎದುರಿನಿಂದ ತೆಗೆದುಬಿಡಲಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.