Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಎಸ್ತೇರಳು 5

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮೂರನೆಯ ದಿವಸದಲ್ಲಿ, ಎಸ್ತೇರಳು ರಾಜವಸ್ತ್ರ ಆಭರಣಗಳನ್ನು ಧರಿಸಿಕೊಂಡು ಅರಮನೆಗೆ ಎದುರಾಗಿರುವ ಅರಸನ ಒಳಗಣ ಪ್ರಾಕಾರವನ್ನು ಪ್ರವೇಶಿಸಿ ನಿಂತಳು. ಅರಸನು ರಾಜಮಂದಿರದೊಳಗೆ ತನ್ನ ರಾಜಸಿಂಹಾಸನದ ಮೇಲೆ ಬಾಗಿಲಿಗೆ ಎದುರಾಗಿ ಕುಳಿತಿದ್ದನು.
2ಅರಸನು ಪ್ರಾಕಾರದಲ್ಲಿ ನಿಂತಿರುವ ಎಸ್ತೇರ್ ರಾಣಿಯನ್ನು ಕಂಡ ಕೂಡಲೆ, ಆಕೆಗೆ ತನ್ನ ಮೆಚ್ಚುಗೆಯನ್ನು ತೋರಿ ತನ್ನ ಕೈಯಲ್ಲಿದ್ದ ಸ್ವರ್ಣದಂಡವನ್ನು ಎಸ್ತೇರಳ ಕಡೆಗೆ ಚಾಚಿದನು. ಎಸ್ತೇರಳು ಸಮೀಪಕ್ಕೆ ಬಂದು ರಾಜದಂಡದ ತುದಿಯನ್ನು ಮುಟ್ಟಿದಳು.
3ಆಗ ಅರಸನು ಅವಳಿಗೆ, “ಎಸ್ತೇರ್ ರಾಣಿಯೇ, ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
4ಅದಕ್ಕೆ ಎಸ್ತೇರಳು ಅರಸನಿಗೆ, “ಸಮ್ಮತಿಯಾದರೆ ನಾನು ಅರಸನಿಗಾಗಿ ಸಿದ್ಧಮಾಡಿಸಿರುವ ಔತಣಕ್ಕೆ ಅರಸನೂ ಹಾಮಾನನೂ ಈ ಹೊತ್ತು ಬರಬೇಕು,” ಎಂದಳು.
5ಆಗ ಅರಸನು, “ಎಸ್ತೇರಳು ಹೇಳಿದ ಪ್ರಕಾರ ನಾವು ಮಾಡಲು, ಬೇಗನೆ ಹಾಮಾನನನ್ನು ಕರೆದುಕೊಂಡು ಬನ್ನಿರಿ,” ಎಂದು ಆಜ್ಞಾಪಿಸಿದನು. ಎಸ್ತೇರಳು ಏರ್ಪಡಿಸಿದ್ದ ಔತಣಕ್ಕೆ ಅರಸನೂ ಹಾಮಾನನೂ ಬಂದರು.
6ದ್ರಾಕ್ಷಾರಸವನ್ನು ಪಾನಮಾಡುತ್ತಿರುವಾಗ ಅರಸನು ಮತ್ತೊಮ್ಮೆ ಎಸ್ತೇರಳಿಗೆ, “ಈಗ ನಿನ್ನ ವಿಜ್ಞಾಪನೆ ಏನು? ನಿನ್ನ ಬೇಡಿಕೆ ಏನು? ಅದು ನನ್ನ ರಾಜ್ಯದ ಅರ್ಧವಾಗಿದ್ದರೂ ಸರಿ, ನಾನು ಅದನ್ನು ನಿನಗೆ ಕೊಡುವೆನು,” ಎಂದನು.
7ಅದಕ್ಕೆ ಎಸ್ತೇರಳು, “ನನ್ನ ಬೇಡಿಕೆಯೂ ನನ್ನ ವಿಜ್ಞಾಪನೆಯೂ ಇದೇ:
8ಅರಸನಿಗೆ ಸಮ್ಮತಿಯಾದರೆ, ಅರಸನಿಗೂ ಹಾಮಾನನಿಗೂ ನಾನು ಮಾಡಲಿರುವ ಔತಣಕ್ಕೆ ನಾಳೆಯೂ ಬರಬೇಕು. ಆಗ ಅರಸನ ಪ್ರಶ್ನೆಗೆ ಉತ್ತರಕೊಡುವೆನು,” ಎಂದಳು. ಹಾಮಾನನು ಮೊರ್ದೆಕೈಯನ್ನು ಗಲ್ಲಿಗೆ ಹಾಕಬೇಕೆಂದು ನಿರ್ಣಯಿಸಿಕೊಂಡದ್ದು
9ಆ ದಿನದಲ್ಲಿ ಹಾಮಾನನು ಹರ್ಷಭರಿತನಾಗಿ ಹೊರಟುಹೋದನು. ಆದರೆ ಅರಮನೆಯ ಹೆಬ್ಬಾಗಿಲಲ್ಲಿರುವ ಮೊರ್ದೆಕೈ ತನಗೆ ಭಯಪಡದೆ ಕುಳಿತುಕೊಂಡೇ ಇರುವುದನ್ನು ಹಾಮಾನನು ಕಂಡು ಮೊರ್ದೆಕೈಯ ಮೇಲೆ ಕೋಪಗೊಂಡನು.
10ಆದರೂ ಹಾಮಾನನು ಬಿಗಿಹಿಡಿದುಕೊಂಡು ತನ್ನ ಮನೆಗೆ ಹೋದನು. ಅವನು ತನ್ನ ಸ್ನೇಹಿತರನ್ನೂ ತನ್ನ ಹೆಂಡತಿಯಾದ ಜೆರೆಷಳನ್ನೂ ಕರೆಯಿಸಿದನು.
11ಹಾಮಾನನು ತನ್ನ ಐಶ್ವರ್ಯದ ಘನವನ್ನೂ, ತನ್ನ ಮಕ್ಕಳ ಹೆಚ್ಚಳವನ್ನೂ, ಅರಸನು ತನ್ನನ್ನು ಹೆಚ್ಚಿಸಿದ್ದನ್ನೂ, ಅರಸನ ಪ್ರಭುಗಳ ಹಾಗೂ ಸೇವಕರ ಮೇಲೆ ಎತ್ತಿದ್ದನ್ನೂ ಹೀಗೆ ಎಲ್ಲವನ್ನೂ ಅವರಿಗೆ ವಿವರವಾಗಿ ಹೇಳಿದನು.
12ಇದಲ್ಲದೆ ಹಾಮಾನನು, “ಎಸ್ತೇರ್ ರಾಣಿಯು ತಾನು ಮಾಡಿಸಿದ ಔತಣಕ್ಕೆ ನನ್ನ ಹೊರತು ಅರಸನ ಸಂಗಡ ಬೇರೆ ಯಾರನ್ನು ಕರೆಯಲಿಲ್ಲ. ಮರುದಿನವೂ ಅರಸನೊಂದಿಗೆ ಔತಣಮಾಡಲು ನನ್ನನ್ನು ಆಹ್ವಾನಿಸಿದ್ದಾಳೆ.
13ಆದರೆ ಯೆಹೂದ್ಯನಾದ ಮೊರ್ದೆಕೈಯು ಅರಮನೆಯ ಬಾಗಿಲಲ್ಲಿ ನನ್ನ ಕಣ್ಣೆದುರು ಕುಳಿತಿರುವವರೆಗೂ ಇದೆಲ್ಲದರಿಂದ ನನಗೆ ತೃಪ್ತಿಯಾಗುವುದಿಲ್ಲ” ಎಂದನು.
14ಆಗ ಅವನ ಹೆಂಡತಿಯಾದ ಜೆರೆಷಳೂ ಅವನ ಸಮಸ್ತ ಸ್ನೇಹಿತರೂ ಅವನಿಗೆ, “ಅರಸನ ಅಪ್ಪಣೆಯನ್ನು ಪಡೆದು ಮೊರ್ದೆಕೈಯನ್ನು ಬೆಳಿಗ್ಗೆ ಗಲ್ಲಿಗೇರಿಸಲು ಇಪ್ಪತ್ತು ಮೀಟರ್ ಉದ್ದದ ಒಂದು ಗಲ್ಲುಮರವನ್ನು ಮಾಡು. ತರುವಾಯ ಅರಸನ ಸಂಗಡ ಔತಣಕ್ಕೆ ಹೋಗಿ ಸಂತೋಷವಾಗಿರು,” ಎಂದರು. ಈ ಸಲಹೆ ಹಾಮಾನನಿಗೆ ಮೆಚ್ಚಿಕೆಯಾದದ್ದರಿಂದ ಗಲ್ಲುಮರವನ್ನು ಸಿದ್ಧಮಾಡಿಸಿದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.