Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಎಫೆಸದವರಿಗೆ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಈ ಕಾರಣದಿಂದ ಯೆಹೂದ್ಯರಲ್ಲದವರಾಗಿರುವ ನಿಮ್ಮ ನಿಮಿತ್ತ ಕ್ರಿಸ್ತ ಯೇಸುವಿನ ಸೆರೆಯಾಳಾಗಿರುವ ಪೌಲನೆಂಬ ನಾನು ಹೇಳುವುದೇನೆಂದರೆ:
2ನಿಮಗೋಸ್ಕರವಾಗಿ ನನಗೆ ಕೊಡಲಾದ ದೇವರ ಕೃಪೆಯ ಕಾರ್ಯಭಾರವನ್ನು ನೀವು ಕೇಳಿದ್ದೀರಿ,
3ಅವರು ರಹಸ್ಯವನ್ನು ಪ್ರಕಟನೆಯಿಂದ ನನಗೆ ತಿಳಿಸಿದರೆಂದು ನಾನು ನಿಮಗೆ ಮೊದಲೇ ಸಂಕ್ಷೇಪವಾಗಿ ಬರೆದಿದ್ದೇನೆ.
4ಅದನ್ನು ನೀವು ಓದಿದರೆ ಕ್ರಿಸ್ತನ ರಹಸ್ಯದ ಕುರಿತಾಗಿ ನನಗಿರುವ ಒಳನೋಟವನ್ನು ನೀವೇ ಅರ್ಥಮಾಡಿಕೊಳ್ಳುವಿರಿ.
5ಈ ರಹಸ್ಯವು ದೇವರ ಪರಿಶುದ್ಧ ಅಪೊಸ್ತಲರಿಗೂ ಪ್ರವಾದಿಗಳಿಗೂ ದೇವರಾತ್ಮರ ಮೂಲಕ ಈಗ ಪ್ರಕಟಿಸಿದಂತೆ, ಬೇರೆ ತಲೆಮಾರುಗಳಲ್ಲಿದ್ದ ಜನರಿಗೆ ತಿಳಿಸಿರಲಿಲ್ಲ.
6ಸುವಾರ್ತೆಯ ಮೂಲಕ ಯೆಹೂದ್ಯರಲ್ಲದವರೂ ಸಹ ಇಸ್ರಾಯೇಲರೊಂದಿಗೆ ವಾರಸುದಾರರೂ ಒಂದೇ ದೇಹದ ಅವಯವಗಳೂ ಕ್ರಿಸ್ತ ಯೇಸುವಿನಲ್ಲಿ ದೇವರ ವಾಗ್ದಾನದ ಸಹಪಾಲುಗಾರರೂ ಆಗಿರಬೇಕೆಂಬುದೇ ಈ ರಹಸ್ಯ.
7ದೇವರ ಶಕ್ತಿಯ ಕ್ರಿಯೆಯಿಂದ ನನಗೆ ಕೊಡಲಾದ ಅವರ ದೇವ ಕೃಪಾದಾನಕ್ಕೆ ಅನುಸಾರವಾಗಿ ನಾನು ಈ ಸುವಾರ್ತೆಗೆ ಸೇವಕನಾದೆನು.
8ನಾನು ಕರ್ತನ ಜನರೆಲ್ಲರಲ್ಲಿಯೂ ಅತ್ಯಲ್ಪನಾಗಿದ್ದೇನೆ. ಹಾಗಿದ್ದರೂ, ನನಗೆ ಈ ಕೃಪೆ ಕೊಡಲಾಯಿತು: ಏಕೆಂದರೆ, ನಾನು ಕ್ರಿಸ್ತನ ಅಪರಿಮಿತವಾದ ಐಶ್ವರ್ಯವನ್ನು ಯೆಹೂದ್ಯರಲ್ಲದವರಿಗೆ ಸಾರುವಂತೆಯೂ
9ಸಮಸ್ತವನ್ನೂ ಸೃಷ್ಟಿಸಿದ ದೇವರಲ್ಲಿ ಲೋಕಾದಿಯಿಂದ ಮರೆಯಾಗಿದ್ದ ಕಾರ್ಯಭಾರದ ರಹಸ್ಯವು ಏನೆಂಬುದನ್ನು ಎಲ್ಲರಿಗೂ ಸ್ಪಷ್ಟಪಡಿಸುವುದಕ್ಕಾಗಿಯೂ ಆಗಿರುತ್ತದೆ.
10ಬಹು ಪ್ರಕಾರದ ದೇವರ ಜ್ಞಾನವು ಪರಲೋಕದಲ್ಲಿ ರಾಜತ್ವಗಳಿಗೂ ಅಧಿಕಾರಗಳಿಗೂ ಈಗ ಸಭೆಯ ಮೂಲಕ ಗೊತ್ತಾಗಬೇಕೆಂಬುದೇ ದೇವರ ಉದ್ದೇಶ.
11ಹೀಗೆ ದೇವರು ತಮ್ಮ ನಿತ್ಯ ಉದ್ದೇಶದ ಪ್ರಕಾರ ಇದನ್ನು ನಮ್ಮ ಕರ್ತ ಆಗಿರುವ ಕ್ರಿಸ್ತ ಯೇಸುವಿನಲ್ಲಿ ನೆರವೇರಿಸಿದರು.
12ಕ್ರಿಸ್ತನಲ್ಲಿಯೂ ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದರ ಮೂಲಕವೂ ನಾವು ಸ್ವಾತಂತ್ರ್ಯದಿಂದಲೂ ಭರವಸೆಯಿಂದಲೂ ದೇವರನ್ನು ಸಮೀಪಿಸಲು ಈಗ ಸಾಧ್ಯ.
13ಆದ್ದರಿಂದ, ನಿಮಗಾಗಿ ನನಗುಂಟಾದ ಸಂಕಟಗಳು ನಿಮಗೆ ಮಹಿಮೆಯಾಗಿರುವುದರಿಂದ, ನೀವು ಧೈರ್ಯಗೆಡಬಾರದೆಂದು ನಾನು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಎಫೆಸದವರಿಗಾಗಿ ಪ್ರಾರ್ಥನೆ
14–15ಈ ಕಾರಣದಿಂದ, ಪರಲೋಕ ಭೂಲೋಕದಲ್ಲಿರುವ ಪ್ರತಿ ಕುಟುಂಬವೂ ಹೆಸರು ಪಡೆದಿರಲು ಕಾರಣವಾಗಿರುವ ತಂದೆಯ ಮುಂದೆ ನಾನು ಮೊಣಕಾಲೂರುತ್ತೇನೆ:
16ದೇವರು ತಮ್ಮ ಮಹಿಮೆಯ ಐಶ್ವರ್ಯಕ್ಕನುಸಾರವಾಗಿ ತಮ್ಮ ಆತ್ಮನ ಮೂಲಕ ನಿಮ್ಮನ್ನು ಆಂತರ್ಯದಲ್ಲಿ ಶಕ್ತಿಯಿಂದ ಬಲಪಡಿಸಲಿ ಎಂದು ಪ್ರಾರ್ಥಿಸುತ್ತೇನೆ.
17ನಂಬಿಕೆಯ ಮೂಲಕ ಕ್ರಿಸ್ತನು ನಿಮ್ಮ ಹೃದಯಗಳಲ್ಲಿ ವಾಸಿಸಲಿ. ನೀವು ಪ್ರೀತಿಯಲ್ಲಿ ಬೇರೂರಿ ನೆಲೆಗೊಂಡು ನಿಂತು
18ದೇವರ ಪರಿಶುದ್ಧರೆಲ್ಲರೊಂದಿಗೆ ಅದರ ಅಗಲ, ಉದ್ದ, ಆಳ ಮತ್ತು ಎತ್ತರವನ್ನು ಪೂರ್ಣವಾಗಿ ಕ್ರಿಸ್ತನ ಪ್ರೀತಿಯನ್ನು ಅರಿಯುವುದಕ್ಕೆ ಶಕ್ತರಾಗಲಿ.
19ಮತ್ತು ತಿಳುವಳಿಕೆಗೆ ಅಪಾರವಾದ ಕ್ರಿಸ್ತನ ಪ್ರೀತಿಯನ್ನು ನೀವು ತಿಳಿದುಕೊಂಡು ದೇವರ ಸರ್ವಸಂಪೂರ್ಣತೆಯಿಂದ ತುಂಬಿದವರಾಗಲಿ ಎಂದು ಅವರನ್ನು ಬೇಡಿಕೊಳ್ಳುತ್ತೇನೆ.
20ನಮ್ಮಲ್ಲಿ ಕಾರ್ಯಸಾಧಿಸುವ ತಮ್ಮ ಶಕ್ತಿಯ ಪ್ರಕಾರ ನಾವು ಬೇಡುವುದಕ್ಕಿಂತಲೂ ಯೋಚಿಸುವುದಕ್ಕಿಂತಲೂ ಅತ್ಯಧಿಕವಾಗಿಯೇ ಎಲ್ಲವನ್ನೂ ಮಾಡಲು ಶಕ್ತರಾದ ದೇವರಿಗೆ
21ಸಭೆಯಲ್ಲಿ ಕ್ರಿಸ್ತ ಯೇಸುವಿನ ಮೂಲಕ ತಲತಲಾಂತರಕ್ಕೂ ಯುಗಯುಗಾಂತರಕ್ಕೂ ಮಹಿಮೆ ಉಂಟಾಗಲಿ. ಆಮೆನ್.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.