Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪ್ರಸಂಗಿ 10

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸತ್ತ ನೊಣಗಳು ಸುಗಂಧ ತೈಲವನ್ನು ದುರ್ವಾಸನೆಗೆ ಒಳಪಡಿಸುತ್ತದೆ. ಹಾಗೆಯೇ ಸ್ವಲ್ಪ ಮೂಢತನವು ಜ್ಞಾನ ಮಾನಗಳನ್ನು ಕೆಡಿಸಿಬಿಡುತ್ತದೆ.
2ಜ್ಞಾನಿಯ ಹೃದಯವು ಬಲಗಡೆ ಸಾಗಿದರೆ, ಮೂರ್ಖನ ಹೃದಯವು ಎಡಗಡೆ ಸಾಗುವುದು.
3ಮೂರ್ಖನು ಮಾರ್ಗದಲ್ಲಿ ನಡೆಯುವಾಗಲೂ, ತಾನು ಅರಿವಿಲ್ಲದ ಮೂರ್ಖನೆಂದು ಪ್ರತಿಯೊಬ್ಬರಿಗೂ ಪ್ರಕಟಿಸುತ್ತಾನೆ.
4ಅಧಿಕಾರಿಯು ನಿನಗೆ ವಿರುದ್ಧವಾಗಿ ಸಿಟ್ಟುಗೊಂಡರೆ, ನಿನ್ನ ಉದ್ಯೋಗವನ್ನು ಬಿಟ್ಟುಬಿಡಬೇಡ. ಏಕೆಂದರೆ ತಾಳ್ಮೆಯು ದೊಡ್ಡ ಅಪರಾಧಗಳನ್ನು ಶಾಂತಪಡಿಸುತ್ತದೆ.
5ಮತ್ತೊಂದು ವ್ಯಸನವನ್ನು ನಾನು ಸೂರ್ಯನ ಕೆಳಗೆ ನೋಡಿದ್ದೇನೆ. ಅದು ಆಳುವವರಿಂದ ಬರುವ ತಪ್ಪಿನಿಂದಾದದ್ದು.
6ಅದು ಯಾವುದೆಂದರೆ, ಮೂರ್ಖರನ್ನು ಉನ್ನತ ಪದವಿಗೆ ನೇಮಿಸುವುದು. ಘನವಂತರನ್ನು ಕೆಳಗಿನ ಸ್ಥಳದಲ್ಲಿ ಕೂತುಕೊಳ್ಳುವಂತೆ ಮಾಡುವುದು.
7ಕುದುರೆಗಳ ಮೇಲೆ ಸವಾರಿ ಮಾಡುವ ಸೇವಕರನ್ನೂ ಅಧಿಕಾರಿಗಳು ಸೇವಕರ ಹಾಗೆ ನಡೆದುಕೊಂಡು ಹೋಗುವುದನ್ನೂ ನಾನು ನೋಡಿದ್ದೇನೆ.
8ಗುಂಡಿಯನ್ನು ಅಗೆಯುವವನೇ ಅದರಲ್ಲಿ ಬೀಳುವನು. ಗೋಡೆಯನ್ನು ಒಡೆಯುವವನನ್ನು ಹಾವು ಕಡಿಯುವುದು.
9ಗಣಿಯಿಂದ ಬಂಡೆಗಳನ್ನು ಸೀಳುವವನು ಗಾಯಗೊಳ್ಳುವನು. ಮರಕಡಿಯುವವನು ಅದರಿಂದಲೇ ಅಪಾಯಕ್ಕೊಳಗಾಗುವನು.
10ಮೊಂಡುಕೊಡಲಿಯ ಬಾಯನ್ನು ಮೊನೆಮಾಡದಿದ್ದರೆ, ಹೆಚ್ಚು ಬಲವನ್ನು ಪ್ರಯೋಗಿಸಬೇಕಾಗುವುದು, ಆದರೆ ಜ್ಞಾನವೇ ಯಶಸ್ಸನ್ನು ತರುತ್ತದೆ.
11ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ, ಹಾವಾಡಿಗನಿಗೆ ಏನು ಪ್ರಯೋಜನ?
12ಜ್ಞಾನಿಯ ಮಾತುಗಳು ಹಿತಕರ. ಆದರೆ ಬುದ್ಧಿಹೀನನ ಮಾತುಗಳು ಅವನಿಗೆ ವಿನಾಶಕರ.
13ಅವನ ಮಾತುಗಳು ಆರಂಭದಲ್ಲಿ ಮೂಢತನವಾಗಿರುವುದು. ಅವನ ಮಾತಿನ ಅಂತ್ಯವು ಹುಚ್ಚುತನವಾಗಿರುವುದು.
14ಮೂಢನು ಮಾತುಗಳನ್ನು ಹೆಚ್ಚಿಸುತ್ತಾನೆ. ಆದರೂ ಅವನು ಭವಿಷ್ಯ ಏನೆಂದು ತಿಳಿಯನು. ಅವನ ತರುವಾಯ ಆಗುವುದನ್ನೂ ಅವನಿಗೆ ತಿಳಿಸುವವರು ಇಲ್ಲ.
15ಮೂಢರ ಕಷ್ಟವು ಅವರನ್ನು ದಣಿಸುತ್ತದೆ. ನಗರಕ್ಕೆ ಹೇಗೆ ಹೋಗಬೇಕೆಂದು ಸಹ ಅವನಿಗೆ ತಿಳಿಯದು.
16ಬಾಲಕನಾಗಿದ್ದವನು ದೇಶಕ್ಕೆ ಅರಸನಾಗಿದ್ದರೆ, ನಾಯಕರೆಲ್ಲರು ಬೆಳಿಗ್ಗೆಯೇ ಔತಣಕ್ಕೆ ಕೂತುಕೊಂಡರೆ ಅಯ್ಯೋ ಕಷ್ಟ!
17ಶ್ರೇಷ್ಠ ಹಿನ್ನೆಲೆಯವನು ದೇಶಕ್ಕೆ ಅರಸನಾದರೆ, ರಾಜಕುಮಾರರು ಕುಡುಕರಾಗುವುದಕ್ಕೆ ಬದಲು, ಸರಿಯಾದ ಸಮಯದಲ್ಲಿ ಶಕ್ತಿಗಾಗಿ ಊಟ ಮಾಡಿದರೆ ಅದು ದೇಶಕ್ಕೆ ಆಶೀರ್ವಾದ.
18ಸೋಮಾರಿತನದಿಂದ ಮನೆ ಕುಸಿಯುತ್ತದೆ. ಜೋಲುಗೈಯಿಂದ ಮನೆ ಸೋರುತ್ತದೆ.
19ವಿನೋದಕ್ಕಾಗಿ ಔತಣ ಮಾಡುತ್ತಾರೆ, ಆನಂದಕ್ಕಾಗಿ ದ್ರಾಕ್ಷಾರಸ ಕುಡಿಯುತ್ತಾರೆ; ಎಲ್ಲವನ್ನೂ ಒದಗಿಸಿಕೊಡುವುದಕ್ಕಾಗಿ ಹಣವು.
20ನಿನ್ನ ಆಲೋಚನೆಯಲ್ಲಿಯೂ ಅರಸನನ್ನು ನಿಂದಿಸಬೇಡ. ನೀನು ಮಲಗುವ ಕೋಣೆಯಲ್ಲಿ ಐಶ್ವರ್ಯವಂತರನ್ನು ಶಪಿಸಬೇಡ. ಏಕೆಂದರೆ ಆಕಾಶದ ಪಕ್ಷಿಗಳು ನಿನ್ನ ಮಾತನ್ನು ತೆಗೆದುಕೊಂಡು ಹೋಗಬಹುದು. ಹಾರುವ ಪಕ್ಷಿ ನಿನ್ನ ಸುದ್ದಿಯನ್ನು ತಿಳಿಸಬಹುದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.