Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಧರ್ಮೋಪದೇಶಕಾಂಡ 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನೀವು ಬದುಕಿ ಅಭಿವೃದ್ಧಿಯಾಗಿ ಯೆಹೋವ ದೇವರು ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ದೇಶಕ್ಕೆ ಹೋಗಿ, ಅದನ್ನು ಸ್ವಾಧೀನ ಮಾಡಿಕೊಳ್ಳುವ ಹಾಗೆ ನಾನು ಈ ಹೊತ್ತು ನಿಮಗೆ ಆಜ್ಞಾಪಿಸುವ ಆಜ್ಞೆಗಳನ್ನೆಲ್ಲಾ ಲಕ್ಷ್ಯವಿಟ್ಟು ಕೈಗೊಳ್ಳಿರಿ.
2ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಈ ನಲವತ್ತು ವರ್ಷ ಮರುಭೂಮಿಯಲ್ಲಿ ತಗ್ಗಿಸಿ, ನೀವು ದೇವರ ಆಜ್ಞೆಗಳನ್ನು ಕಾಪಾಡುವಿರೋ ಇಲ್ಲವೋ ಎಂದು ನಿಮ್ಮ ಹೃದಯವನ್ನು ಪರೀಕ್ಷಿಸುವುದಕ್ಕೆ ನಿಮ್ಮನ್ನು ನಡೆಸಿದ ಮಾರ್ಗವನ್ನೆಲ್ಲಾ ಜ್ಞಾಪಕಮಾಡಿಕೊಳ್ಳಿರಿ.
3ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ ಯೆಹೋವ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾನೆಂದು ನಿಮಗೆ ಬೋಧಿಸುವಂತೆ ದೇವರು ನಿಮ್ಮನ್ನು ಹಸಿವೆಯಿಂದ ಬಳಲುವಂತೆ ಮಾಡಿದರು. ನೀವು ತಿಳಿಯದಂಥ ಮತ್ತು ನಿಮ್ಮ ಪಿತೃಗಳು ತಿಳಿಯದಂಥ ಮನ್ನವನ್ನು ನಿಮಗೆ ಉಣ್ಣಲು ಕೊಟ್ಟರು.
4ಈ ನಲವತ್ತು ವರ್ಷ ನಿಮ್ಮ ಮೇಲಿರುವ ವಸ್ತ್ರಗಳು ಹಳೆಯದಾಗಲಿಲ್ಲ, ನಿಮ್ಮ ಕಾಲುಗಳು ಬಾತುಹೋಗಲಿಲ್ಲ.
5ಇದಲ್ಲದೆ ಒಬ್ಬನು ತನ್ನ ಮಗನನ್ನು ಶಿಸ್ತುಪಡಿಸುವ ಪ್ರಕಾರ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಶಿಸ್ತಿನಿಂದ ನಡೆಸುತ್ತಾ ಬಂದರೆಂದು ನಿಮ್ಮ ಹೃದಯದಲ್ಲಿ ತಿಳಿದುಕೊಳ್ಳಿರಿ.
6ಹೀಗಿರುವುದರಿಂದ ನಿಮ್ಮ ದೇವರಾದ ಯೆಹೋವ ದೇವರ ಆಜ್ಞೆಗಳನ್ನು ಕೈಗೊಂಡು, ಅವರ ಮಾರ್ಗಗಳಲ್ಲಿ ನಡೆದು ಅವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.
7ಏಕೆಂದರೆ ನಿಮ್ಮ ದೇವರಾದ ಯೆಹೋವ ದೇವರು ನಿಮ್ಮನ್ನು ಒಳ್ಳೆಯ ದೇಶಕ್ಕೆ ಬರಮಾಡುತ್ತಾರೆ. ಅದು ನೀರಿನ ಹಳ್ಳಗಳೂ, ತಗ್ಗುಗಳಲ್ಲಿಯೂ, ಬೆಟ್ಟದಲ್ಲಿಯೂ, ಉಕ್ಕುವ ಬುಗ್ಗೆಗಳೂ ಇರುವ ದೇಶವಾಗಿರುತ್ತದೆ.
8ಆ ದೇಶದಲ್ಲಿ ಗೋಧಿಯೂ, ಜವೆಗೋಧಿಯೂ, ದ್ರಾಕ್ಷೆಯೂ, ಅಂಜೂರ ಮರಗಳೂ, ದಾಳಿಂಬೆಗಳೂ ಇರುತ್ತವೆ. ಅದು ಓಲಿವ್ ಎಣ್ಣೆಯೂ, ಜೇನೂ ಉಳ್ಳ ದೇಶವೇ.
9ಆ ದೇಶದಲ್ಲಿ ನಿಮಗೆ ಆಹಾರಕ್ಕೆ ಕೊರತೆ ಇರುವುದಿಲ್ಲ. ಅಲ್ಲಿ ಯಾವುದರ ಕೊರತೆ ನಿಮಗೆ ಆಗದು. ಅದರ ಕಲ್ಲುಗಳಲ್ಲಿ ಕಬ್ಬಿಣವನ್ನೂ, ಅದರ ಬೆಟ್ಟಗಳಲ್ಲಿ ತಾಮ್ರದ ಗಣಿಗಳನ್ನೂ ಅಗೆಯಬಹುದು.
10ನೀವು ತಿಂದು ತೃಪ್ತಿ ಹೊಂದಿದಾಗ, ನಿಮ್ಮ ದೇವರಾದ ಯೆಹೋವ ದೇವರು ನಿಮಗೆ ಕೊಟ್ಟ ಒಳ್ಳೆಯ ದೇಶದಲ್ಲಿ ಅವರನ್ನು ಸ್ತುತಿಸಬೇಕು.
11ನಾನು ಈ ಹೊತ್ತು ನಿಮಗೆ ಕೊಡುವ ದೇವರ ಆಜ್ಞೆಗಳನ್ನೂ ನಿಯಮಗಳನ್ನೂ ತೀರ್ಪುಗಳನ್ನೂ ಕೈಕೊಳ್ಳದವರೂ, ಯೆಹೋವ ದೇವರನ್ನು ಮರೆಯದವರೂ ಆಗದಂತೆ ನೋಡಿಕೊಳ್ಳಿರಿ.
12ನೀವು ತಿಂದು ತೃಪ್ತಿಹೊಂದಿ, ಒಳ್ಳೆಯ ಮನೆಗಳನ್ನು ಕಟ್ಟಿ ಅವುಗಳಲ್ಲಿ ವಾಸಮಾಡುವಾಗಲೂ,
13ನಿಮ್ಮ ಪಶು ಕುರಿಗಳು ಹೆಚ್ಚಿದಾಗಲೂ, ಬೆಳ್ಳಿಬಂಗಾರ ನಿಮಗೆ ಹೆಚ್ಚಿದಾಗಲೂ, ನಿಮಗಿರುವ ಆಸ್ತಿಯೆಲ್ಲವೂ ಹೆಚ್ಚುತ್ತಿರುವಾಗ,
14ನಿಮ್ಮ ಹೃದಯವು ಗರ್ವಗೊಂಡು, ನಿಮ್ಮನ್ನು ಈಜಿಪ್ಟ್ ದೇಶದ ದಾಸತ್ವದ ಮನೆಯೊಳಗಿಂದ ಹೊರಗೆ ಬರಮಾಡಿದಂಥ ನಿಮ್ಮ ದೇವರಾದ ಯೆಹೋವ ದೇವರನ್ನೇ ಮರೆತುಬಿಡಬೇಡಿರಿ.
15ದೇವರು ಅಗ್ನಿಸರ್ಪಗಳೂ, ಚೇಳುಗಳೂ ತುಂಬಿದ ಮತ್ತು ನೀರಿಲ್ಲದ ಆ ಭಯಂಕರವಾದ ವಿಶಾಲ ಮರುಭೂಮಿಯಲ್ಲಿ ನಿಮ್ಮನ್ನು ನಡೆಸಿ, ಗಟ್ಟಿಯಾದ ಬಂಡೆಯೊಳಗಿಂದ ನಿಮಗೆ ನೀರು ಬರಮಾಡಿದರು.
16ನಿಮ್ಮನ್ನು ದೀನತ್ವಕೆ ಒಳಪಡಿಸಿ, ಪರೀಕ್ಷಿಸಿದ ನಂತರ, ಕಡೆಯಲ್ಲಿ ನಿಮಗೆ ಒಳ್ಳೆಯದನ್ನು ಮಾಡುವಂತೆ ನಿಮ್ಮ ಪಿತೃಗಳು ಅರಿಯದ ಮನ್ನವನ್ನು ಮರುಭೂಮಿಯಲ್ಲಿ ನಿಮಗೆ ಪೋಷಿಸಿದರು.
17ನಿಮ್ಮ ದೇವರಾದ ಯೆಹೋವ ದೇವರನ್ನು ಮರೆತು, “ನಮ್ಮ ಹಸ್ತ ಬಲ ಸಾಮರ್ಥ್ಯವೇ ನಮಗೆ ಈ ಆಸ್ತಿಯನ್ನು ಸಂಪಾದಿಸಿತು,” ಎಂದು ನಿಮ್ಮ ಹೃದಯದಲ್ಲಿ ಹೇಳಿಕೊಳ್ಳದ ಹಾಗೆ ನೋಡಿಕೊಳ್ಳಿರಿ.
18ನಿಮ್ಮ ದೇವರಾದ ಯೆಹೋವ ದೇವರನ್ನು ಜ್ಞಾಪಕಮಾಡಿಕೊಳ್ಳಿರಿ. ಅವರೇ ನಿಮ್ಮ ಪಿತೃಗಳಿಗೆ ಪ್ರಮಾಣ ಮಾಡಿದ ತಮ್ಮ ಒಡಂಬಡಿಕೆಯನ್ನು ಸ್ಥಾಪಿಸುವಂತೆ ಇಂದು ನೀವು ಇಷ್ಟು ಆಸ್ತಿಯನ್ನು ಸಂಪಾದಿಸುವ ಸಾಮರ್ಥ್ಯವನ್ನು ನಿಮಗೆ ಕೊಟ್ಟಿದ್ದಾರೆ.
19ಒಂದು ವೇಳೆ ನೀವು ನಿಮ್ಮ ಯೆಹೋವ ದೇವರನ್ನು ಮರೆತು, ಬೇರೆ ದೇವರುಗಳನ್ನು ಹಿಂಬಾಲಿಸಿ, ಅವುಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದರೆ, ನಿಶ್ಚಯವಾಗಿ ನಾಶವಾಗುವಿರೆಂದು ನಿಮಗೆ ವಿರೋಧವಾಗಿ ಈ ಹೊತ್ತು ಸಾಕ್ಷಿ ಹೇಳುತ್ತೇನೆ.
20ನೀವು ನಿಮ್ಮ ಯೆಹೋವ ದೇವರ ಮಾತಿಗೆ ವಿಧೇಯರಾಗದ ಕಾರಣ ಅವರು ನಿಮ್ಮ ಮುಂದೆ ನಾಶಮಾಡುವ ಇತರ ಜನಾಂಗಗಳ ಹಾಗೆಯೇ ನೀವೂ ನಾಶವಾಗಿಹೋಗುವಿರಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.