Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಧರ್ಮೋಪದೇಶಕಾಂಡ 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಸ್ವದೇಶದವನ ಎತ್ತಾಗಲಿ, ಕುರಿಯಾಗಲಿ ದಾರಿತಪ್ಪಿ ಹೋಗಿರುವುದನ್ನು ನೀವು ಕಂಡರೆ, ಕಾಣದವರಂತೆ ಅದನ್ನು ಬಿಟ್ಟುಹೋಗಬಾರದು. ಅವನ ಬಳಿಗೆ ಅಟ್ಟಿಕೊಂಡು ಹೋಗಿ ಕೊಡಲೇಬೇಕು.
2ಅವನು ನಿಮಗೆ ದೂರ ಆಗಿದ್ದರೆ, ಇಲ್ಲವೆ ಅವನು ಯಾರು ಎಂದು ನಿಮಗೆ ತಿಳಿಯದೆ ಹೋದರೆ, ಆ ಪ್ರಾಣಿಯನ್ನು ನಿಮ್ಮ ಮನೆಗೆ ಹೊಡೆದುಕೊಂಡು ಬಂದು ಕಾಯಬೇಕು. ಅವನು ಅದನ್ನು ಹುಡುಕುತ್ತಾ ಬಂದಾಗ, ನೀವು ಅದನ್ನು ಅವನಿಗೆ ಮರಳಿ ಕೊಡಬೇಕು.
3ಅವನ ಕತ್ತೆಯಾಗಲಿ, ಅವನ ವಸ್ತ್ರವಾಗಲಿ, ನಿನ್ನ ಸಹೋದರನು ಕಳೆದುಕೊಂಡ ಯಾವ ವಸ್ತುಗಳೇ ಆಗಲಿ ನೀನು ಕಂಡುಕೊಂಡರೆ, ಹಾಗೆಯೇ ಮಾಡಬೇಕು. ನೀನು ಕಾಣದವರಂತೆ ಇರಬಾರದು.
4ನಿನ್ನ ಸಹೋದರನ ಕತ್ತೆಯಾಗಲಿ, ಎತ್ತಾಗಲಿ, ಮಾರ್ಗದಲ್ಲಿ ಬಿದ್ದಿರುವುದನ್ನು ನೋಡಿದರೆ ಅಲಕ್ಷ್ಯ ಮಾಡಬೇಡ. ಅದನ್ನು ಎಬ್ಬಿಸಲು ಅವನಿಗೆ ಸಹಾಯಮಾಡಬೇಕು.
5ಸ್ತ್ರೀಯು ಪುರುಷನ ವಸ್ತ್ರ ಉಟ್ಟುಕೊಳ್ಳಬಾರದು, ಪುರುಷನು ಸ್ತ್ರೀ ವಸ್ತ್ರ ಹಾಕಿಕೊಳ್ಳಬಾರದು. ಏಕೆಂದರೆ ಹೀಗೆ ಮಾಡುವವರೆಲ್ಲ ಯೆಹೋವ ದೇವರಿಗೆ ಅಸಹ್ಯ.
6ನೀನು ದಾರಿಯಲ್ಲಿ ಯಾವುದಾದರೊಂದು ಗಿಡದಲ್ಲಾಗಲಿ, ನೆಲದ ಮೇಲಾಗಲಿ, ನಿನಗೆ ಮರಿಗಳುಳ್ಳ ಇಲ್ಲವೆ ಮೊಟ್ಟೆಗಳುಳ್ಳ ಪಕ್ಷಿಯ ಗೂಡು ಸಿಕ್ಕಿದರೆ, ಮರಿಗಳ ಮೇಲೆಯಾಗಲಿ, ಮೊಟ್ಟೆಗಳ ಮೇಲೆಯಾಗಲಿ ತಾಯಿ ಕೂತುಕೊಂಡಿದ್ದರೆ, ಮರಿಗಳ ಸಂಗಡ ತಾಯಿಯನ್ನು ತೆಗೆದುಕೊಳ್ಳಬಾರದು.
7ನಿನಗೆ ಒಳ್ಳೆಯದಾಗುವ ಹಾಗೆಯೂ ಬಹುಕಾಲ ಬಾಳುವ ಹಾಗೆಯೂ ಹೇಗಾದರೂ ತಾಯಿಯನ್ನು ಕಳುಹಿಸಿಬಿಟ್ಟು, ಮರಿಗಳನ್ನು ತೆಗೆದುಕೊಳ್ಳಬಹುದು.
8ನೀನು ಹೊಸ ಮನೆಯನ್ನು ಕಟ್ಟಿದಾಗ, ಯಾರೂ ಅದರ ಮೇಲಿನಿಂದ ಬಿದ್ದು ನಿನ್ನ ಮನೆಗೆ ರಕ್ತಾಪರಾಧ ಹೊರಿಸದ ಹಾಗೆ ನಿನ್ನ ಮಾಳಿಗೆಯ ಮೇಲೆ ಸುತ್ತಲೂ ಸಣ್ಣ ಕೈಗೋಡೆಯನ್ನು ಕಟ್ಟಬೇಕು.
9ನಿನ್ನ ದ್ರಾಕ್ಷಿತೋಟದಲ್ಲಿ ಎರಡು ತರವಾದ ಬೀಜ ಬಿತ್ತಬಾರದು; ಬಿತ್ತಿದರೆ ನೀನು ಬಿತ್ತಿದ ಬೀಜವೂ, ಬಿತ್ತಿದ ಬೀಜದ ಪೈರೂ, ದ್ರಾಕ್ಷಿತೋಟದ ಹುಟ್ಟುವಳಿಯೂ ಅಶುದ್ಧವಾಗುವುದು.
10ಎತ್ತನ್ನೂ, ಕತ್ತೆಯನ್ನೂ ಜೊತೆ ಮಾಡಿ, ನೇಗಿಲಿಗೆ ಕಟ್ಟಬಾರದು.
11ನಾರು ಮತ್ತು ಉಣ್ಣೆ ಎರಡೂ ಕೂಡಿರುವ ಬಟ್ಟೆಯನ್ನೂ ಧರಿಸಬಾರದು.
12ನೀನು ಹೊದ್ದುಕೊಳ್ಳುವ ಬಟ್ಟೆಯ ನಾಲ್ಕು ಮೂಲೆಗಳಿಗೆ ಗೊಂಡೆಗಳನ್ನು ಮಾಡಿಸಿಕೊಳ್ಳಬೇಕು. ವಿವಾಹ ಬಂಧನಗಳನ್ನು ಮುರಿಯುವ ವಿಷಯ
13ಒಬ್ಬನು ತಾನು ಮದುವೆಮಾಡಿಕೊಂಡ ಹೆಂಡತಿಯನ್ನು ದ್ವೇಷಿಸಿ,
14ಅವಳ ಬಗ್ಗೆ ಇಲ್ಲ ಸಲ್ಲದ ಮಾತುಗಳನ್ನು ಹೇಳಿ, “ನಾನು ಇವಳನ್ನು ಮದುವೆ ಮಾಡಿಕೊಂಡೆ, ಆದರೆ ಕೂಡಿದಾಗ ಇವಳು ಕನ್ನಿಕೆಯಲ್ಲವೆಂದು ತಿಳಿದುಬಂತು,” ಎಂದು ಹೇಳಿ ಅವಳ ಮೇಲೆ ಆಪಾದನೆ ತರಬಹುದು.
15ಅವಳ ತಾಯಿ ತಂದೆಗಳು ತಮ್ಮ ಮಗಳು ವಿವಾಹಕ್ಕೆ ಮುಂಚೆ ಪುರುಷ ಸಂಪರ್ಕ ಇಲ್ಲದವಳು, ಎಂಬುದಕ್ಕೆ ಆಧಾರವನ್ನು ಊರ ಬಾಗಿಲಿಗೆ ಹಿರಿಯರ ಮುಂದೆ ತಂದು ತೋರಿಸಬೇಕು.
16ಆಮೇಲೆ ಹುಡುಗಿಯ ತಂದೆಯು ಹಿರಿಯರಿಗೆ ಹೇಳತಕ್ಕದ್ದೇನೆಂದರೆ, “ನನ್ನ ಮಗಳನ್ನು ಈ ಮನುಷ್ಯನಿಗೆ ಹೆಂಡತಿಯಾಗಿ ಕೊಟ್ಟಿದ್ದೇನೆ, ಅವನು ಅವಳನ್ನು ದ್ವೇಷಿಸಿ,
17ಅವನು, ‘ನಿನ್ನ ಮಗಳು ಕನ್ನಿಕೆಯಲ್ಲವೆಂದು ಕಂಡೆನೆಂಬುದಾಗಿ, ಅವಳಿಗೆ ವಿರೋಧವಾದ ಕೆಟ್ಟ ಮಾತಿಗೆ ಆಸ್ಪದಕೊಟ್ಟಿದ್ದಾನೆ.’ ಆದರೂ ನನ್ನ ಮಗಳ ಕನ್ಯಾಲಕ್ಷಣಕ್ಕೆ ಇದೇ ಪ್ರಮಾಣ,” ಎಂದು ಹೇಳಿ, ಅವರು ಪಟ್ಟಣದ ಹಿರಿಯರ ಮುಂದೆ ಬಟ್ಟೆಯನ್ನು ಹಾಸಬೇಕು.
18ಆಗ ಪಟ್ಟಣದ ಹಿರಿಯರು ಆ ಮನುಷ್ಯನನ್ನು ತೆಗೆದುಕೊಂಡು ಬಂದು ಅವನನ್ನು ಶಿಕ್ಷಿಸಬೇಕು.
19ಅವನು ಇಸ್ರಾಯೇಲಿನಲ್ಲಿ ಒಬ್ಬ ಕನ್ನಿಕೆಯ ಹೆಸರನ್ನು ಕೆಡಿಸಿದ್ದರಿಂದ, ಅವನಿಗೆ ನೂರು ಬೆಳ್ಳಿ ಶೆಕೆಲ್‌ಗಳ ದಂಡವನ್ನು ವಿಧಿಸಿ, ಅದನ್ನು ಆ ಹುಡುಗಿಯ ತಂದೆಗೆ ಕೊಡಬೇಕು. ಇದಲ್ಲದೆ ಅವಳು ಅವನಿಗೆ ಹೆಂಡತಿಯಾಗಬೇಕು, ಅವನು ಬದುಕಿರುವವರೆಗೆ ಅವಳನ್ನು ಪರಿತ್ಯಾಗಮಾಡಬಾರದು.
20ಆದರೆ ಆ ಮಾತು ಸತ್ಯವಾಗಿದ್ದರೆ, ಆ ಹುಡುಗಿಯಲ್ಲಿ ಕನ್ಯಾಲಕ್ಷಣ ಕಾಣದೆ ಇದ್ದರೆ,
21ಆ ಹುಡುಗಿಯನ್ನು ಅವಳ ತಂದೆಯ ಮನೆ ಬಾಗಿಲಿಗೆ ತರಬೇಕು. ಅವಳ ಪಟ್ಟಣದ ಮನುಷ್ಯರು ಅವಳನ್ನು ಸಾಯುವ ಹಾಗೆ ಕಲ್ಲೆಸೆಯಬೇಕು. ಏಕೆಂದರೆ ಅವಳು ತಂದೆಯ ಮನೆಯಲ್ಲಿರುವಾಗಲೇ ಅಕ್ರಮವಾಗಿ ನಡೆದು, ಇಸ್ರಾಯೇಲಿನಲ್ಲಿ ಸೂಳೆತನ ಮಾಡಿದ್ದಾಳೆ. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಿಂದ ತೆಗೆದುಹಾಕಬೇಕು.
22ಒಬ್ಬ ಮನುಷ್ಯನು ಪರನ ಹೆಂಡತಿಯೊಡನೆ ಮಲಗಿಕೊಂಡವನಾಗಿ ಸಿಕ್ಕಿಬಿದ್ದರೆ, ಆ ಸ್ತ್ರೀಯ ಸಂಗಡ ಮಲಗಿಕೊಂಡ ಮನುಷ್ಯನೂ ಆ ಸ್ತ್ರೀಯೂ ಇಬ್ಬರೂ ಸಾಯಬೇಕು. ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು.
23ಕನ್ನಿಕೆಯಾದ ಒಬ್ಬ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯ ಮಾಡಿರಲಾಗಿ, ಮತ್ತೊಬ್ಬ ಮನುಷ್ಯನು ಆ ಪಟ್ಟಣದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ,
24ಅವರಿಬ್ಬರನ್ನೂ ಆ ಪಟ್ಟಣದ ಬಾಗಿಲಿನ ಹೊರಗೆ ತಂದು, ಅವರು ಸಾಯುವ ಹಾಗೆ ಕಲ್ಲೆಸೆಯಬೇಕು. ಆ ಹುಡುಗಿಯು ಪಟ್ಟಣದಲ್ಲಿ ಇದ್ದರೂ, ಕೂಗದೆ ಇದ್ದದ್ದರಿಂದಲೂ, ಆ ಮನುಷ್ಯನು ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸಬೇಕು. ಹೀಗೆ ಕೆಟ್ಟದ್ದನ್ನು ನಿಮ್ಮ ಮಧ್ಯದಲ್ಲಿಂದ ತೆಗೆದುಹಾಕಬೇಕು.
25ಆದರೆ ಆ ಮನುಷ್ಯನು ನಿಶ್ಚಯಮಾಡಿದ ಹುಡುಗಿಯನ್ನು ಹೊಲದಲ್ಲಿ ಕಂಡು ಅವಳನ್ನು ಬಲಾತ್ಕರಿಸಿ, ಅವಳ ಸಂಗಡ ಮಲಗಿದರೆ, ಅವಳ ಸಂಗಡ ಮಲಗಿದ ಮನುಷ್ಯನು ಮಾತ್ರ ಸಾಯಬೇಕು. ಆದರೆ ಆ ಹುಡುಗಿಗೆ ಏನೂ ಮಾಡಬಾರದು.
26ಆ ಹುಡುಗಿಯಲ್ಲಿ ಮರಣಕ್ಕೆ ಯೋಗ್ಯವಾದ ಪಾಪವಿಲ್ಲ. ಆ ಕಾರ್ಯವು ಒಬ್ಬನು ತನ್ನ ನೆರೆಯವನಿಗೆ ವಿರೋಧವಾಗಿ ಎದ್ದು ಅವನನ್ನು ಕೊಂದುಹಾಕಿದ ಹಾಗಿದೆ.
27ಏಕೆಂದರೆ ಅವನು ಹೊಲದಲ್ಲಿ ಅವಳನ್ನು ಕಂಡನು, ನಿಶ್ಚಯಮಾಡಿದ ಆ ಹುಡುಗಿ ಕೂಗಿದಳು. ಆದರೆ ರಕ್ಷಿಸುವವನು ಅವಳಿಗೆ ಯಾರೂ ಇರಲಿಲ್ಲ.
28ಒಬ್ಬ ಮನುಷ್ಯನು ನಿಶ್ಚಯ ಮಾಡದಿರುವ ಕನ್ಯೆಯನ್ನು ಕಂಡು, ಅವಳನ್ನು ಹಿಡಿದು, ಅವಳ ಸಂಗಡ ಮಲಗಿ ಸಿಕ್ಕಿಬಿದ್ದರೆ,
29ಅವಳ ಸಂಗಡ ಮಲಗಿದ ಮನುಷ್ಯನು ಆ ಹುಡುಗಿಯ ತಂದೆಗೆ ಐವತ್ತು ಬೆಳ್ಳಿ ಶೆಕೆಲ್‌ಗಳನ್ನು ಕೊಟ್ಟು ಅವಳನ್ನು ಹೆಂಡತಿಯನ್ನಾಗಿ ಮಾಡಿಕೊಳ್ಳಬೇಕು, ಏಕೆಂದರೆ ಅವನು ಅವಳನ್ನು ಕೆಡಿಸಿದ್ದರಿಂದ, ಬದುಕುವ ದಿವಸಗಳೆಲ್ಲಾ ಅವಳನ್ನು ಪರಿತ್ಯಾಗಮಾಡಬಾರದು.
30ಯಾರೂ ತನ್ನ ತಂದೆಯ ಹೆಂಡತಿಯನ್ನು ಮದುವೆ ಮಾಡಿಕೊಳ್ಳಬಾರದು. ತನ್ನ ತಂದೆಯ ಹಾಸಿಗೆಯನ್ನು ಅಗೌರವಿಸಬಾರದು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.