Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಕೊಲೊಸ್ಸೆಯವರಿಗೆ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ನೀವು ಕ್ರಿಸ್ತನೊಂದಿಗೆ ಜೀವಂತವಾಗಿ ಎದ್ದವರಾಗಿದ್ದರೆ, ಮೇಲಿರುವವುಗಳನ್ನೇ ಹುಡುಕಿರಿ. ಅಲ್ಲಿ ಕ್ರಿಸ್ತ ಯೇಸು ದೇವರ ಬಲಗಡೆಯಲ್ಲಿ ಕುಳಿತುಕೊಂಡಿದ್ದಾರೆ.
2ಪರಲೋಕದ ಕಾರ್ಯಗಳ ಮೇಲೆಯೇ ನಿಮ್ಮ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಮನಸ್ಸಿಡಬೇಡಿರಿ.
3ಏಕೆಂದರೆ ನೀವು ಸತ್ತಿರುವಿರಲ್ಲಾ, ನಿಮ್ಮ ಜೀವವು ಕ್ರಿಸ್ತ ಯೇಸುವಿನೊಂದಿಗೆ ದೇವರಲ್ಲಿ ಮರೆಯಾಗಿದೆ.
4ನಿಮಗೆ ಜೀವವಾಗಿರುವ ಕ್ರಿಸ್ತ ಯೇಸು ಪ್ರತ್ಯಕ್ಷರಾಗುವಾಗ, ನೀವು ಸಹ ಅವರೊಂದಿಗೆ ಮಹಿಮೆಯಲ್ಲಿ ಪ್ರತ್ಯಕ್ಷರಾಗುವಿರಿ.
5ಆದ್ದರಿಂದ ಅನೈತಿಕತೆ, ಅಶುದ್ಧತ್ವ, ಕಾಮಾಭಿಲಾಷೆ, ದುರಾಶೆ, ದೇವರಲ್ಲದವುಗಳನ್ನು ಆರಾಧಿಸುವುದಕ್ಕೆ ಸಮರಾಗಿರುವರು ಲೋಭ ಮುಂತಾದ ನಿಮ್ಮ ಲೌಕಿಕವಾದ ಸ್ವಭಾವಗಳನ್ನು ಸಾಯಿಸಿರಿ.
6ಇವುಗಳ ನಿಮಿತ್ತ ದೇವರ ಕೋಪವು ಉಂಟಾಗುತ್ತಲಿದೆ.
7ಒಮ್ಮೆ ನೀವೂ ಸಹ ಅಂಥವುಗಳನ್ನು ಅನುಸರಿಸುತ್ತಿದ್ದಾಗ ಅವುಗಳಲ್ಲಿಯೇ ಜೀವಿಸಿದಿರಿ.
8ಈಗಲಾದರೋ ಕ್ರೋಧ, ಕೋಪ, ಮತ್ಸರ, ದೂಷಣೆ, ನಿಮ್ಮ ಬಾಯಿಂದ ಹೊರಡುವ ದುರ್ಭಾಷೆ ಇವುಗಳನ್ನು ಬಿಟ್ಟುಬಿಡಿರಿ.
9ಒಬ್ಬರಿಗೊಬ್ಬರು ಸುಳ್ಳಾಡಬೇಡಿರಿ, ನೀವು ಹಳೆಯ ಸ್ವಭಾವವನ್ನು ಅದರ ಕೃತ್ಯಗಳನ್ನು ಕೂಡ ತೆಗೆದು ಹಾಕಿದ್ದೀರಲ್ಲವೇ!
10ಸೃಷ್ಟಿಕರ್ತನ ಸ್ವರೂಪವನ್ನು, ತಿಳುವಳಿಕೆಯಲ್ಲಿ ನವೀಕರಣ ಹೊಂದುತ್ತಿರುವ ಆ ನೂತನ ಸ್ವಭಾವವನ್ನೇ ಧರಿಸಿಕೊಂಡವರಾಗಿದ್ದೀರಲ್ಲಾ.
11ಯೆಹೂದ್ಯರು ಯೆಹೂದ್ಯರಲ್ಲದವರು, ಸುನ್ನತಿ ಹೊಂದಿದವರು, ಸುನ್ನತಿ ಹೊಂದದವರು, ನಾಗರಿಕ, ಅನಾಗರಿಕ, ಆಳು, ಸ್ವತಂತ್ರರು ಎಂಬ ಭೇದವಿಲ್ಲ. ಆದರೆ ಕ್ರಿಸ್ತ ಯೇಸುವೇ ಸಮಸ್ತರಲ್ಲಿಯೂ ಸಮಸ್ತವೂ ಆಗಿದ್ದಾರೆ.
12ಆದಕಾರಣ ದೇವರಿಂದ ಆಯ್ಕೆಯಾದವರೂ ಪರಿಶುದ್ಧರೂ ಪ್ರಿಯರೂ ಆಗಿರುವ ನೀವು ಕನಿಕರ, ದಯೆ, ದೀನತ್ವ, ಸಾತ್ವಿಕತ್ವ, ದೀರ್ಘಶಾಂತಿ ಇವುಗಳನ್ನು ಧರಿಸಿಕೊಳ್ಳಿರಿ.
13ಯಾವನಿಗಾದರೂ ಇನ್ನೊಬ್ಬನ ಮೇಲೆ ದೂರು ಇದ್ದರೂ, ಒಬ್ಬರನ್ನೊಬ್ಬರು ಸಹಿಸಿಕೊಂಡು ಕ್ಷಮಿಸಿರಿ. ಕರ್ತ ಯೇಸುವು ನಿಮ್ಮನ್ನು ಕ್ಷಮಿಸಿದಂತೆಯೇ, ನೀವು ಒಬ್ಬರನ್ನೊಬ್ಬರು ಕ್ಷಮಿಸಿರಿ.
14ಎಲ್ಲದಕ್ಕಿಂತ ಮಿಗಿಲಾಗಿ, ಎಲ್ಲವನ್ನೂ ಪರಿಪೂರ್ಣವಾದ ಐಕ್ಯತೆಯಲ್ಲಿ ಬಂಧಿಸುವ ಪ್ರೀತಿಯನ್ನು ಧರಿಸಿಕೊಳ್ಳಿರಿ.
15ಕ್ರಿಸ್ತ ಯೇಸುವಿನ ಸಮಾಧಾನವು ನಿಮ್ಮ ಹೃದಯಗಳಲ್ಲಿ ಆಳಲಿ, ಆ ಸಮಾಧಾನಕ್ಕಾಗಿಯೇ ನೀವು ಸಹ ಒಂದೇ ದೇಹವಾಗಿರುವಂತೆ ಕರೆಯಲಾಗಿದ್ದೀರಿ. ನೀವು ಕೃತಜ್ಞತೆಯುಳ್ಳವರಾಗಿರಿ.
16ಕ್ರಿಸ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಸಮೃದ್ಧಿಯಾಗಿ ವಾಸಿಸಲಿ. ಆ ವಾಕ್ಯದಿಂದಲೇ, ನೀವು ಸಕಲ ಜ್ಞಾನದಲ್ಲಿ ಕೃತಜ್ಞತೆಯೊಂದಿಗೆ ನಿಮ್ಮ ಹೃದಯಗಳಲ್ಲಿ ಕೀರ್ತನೆಗಳಿಂದಲೂ ಸಂಗೀತಗಳಿಂದಲೂ ಆತ್ಮಿಕ ಹಾಡುಗಳಿಂದಲೂ ಕರ್ತ ಯೇಸುವನ್ನು ಕೊಂಡಾಡುತ್ತಾ ಒಬ್ಬರಿಗೊಬ್ಬರು ಉಪದೇಶಿಸುತ್ತಾ, ಬುದ್ಧಿ ಹೇಳುತ್ತಾ ಇರಿ.
17ನೀವು ಮಾತಿನಿಂದಾಗಲಿ, ಕ್ರಿಯೆಯಿಂದಾಗಲಿ ಏನು ಮಾಡಿದರೂ ಅದೆಲ್ಲವನ್ನೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನ ಹೆಸರಿನಲ್ಲಿಯೇ ಮಾಡಿರಿ, ಕ್ರಿಸ್ತ ಯೇಸುವಿನ ಮೂಲಕ ತಂದೆಯಾದ ದೇವರಿಗೆ ಕೃತಜ್ಞತಾಸ್ತುತಿಯನ್ನು ಸಲ್ಲಿಸಿರಿ. ವಿಶ್ವಾಸಿಗಳ ಕುಟುಂಬಗಳಿಗಾಗಿ ನಿಯಮಗಳು
18ಹೆಂಡತಿಯರೇ, ನೀವು ಕರ್ತ ಯೇಸುವಿನಲ್ಲಿ ಯೋಗ್ಯರಾಗಿರುವಂತೆ ನಿಮ್ಮ ನಿಮ್ಮ ಗಂಡಂದಿರಿಗೆ ಅಧೀನರಾಗಿರಿ.
19ಗಂಡಂದಿರೇ, ನಿಮ್ಮ ಹೆಂಡತಿಯರನ್ನು ಪ್ರೀತಿಸಿರಿ. ಅವರೊಂದಿಗೆ ಕಠಿಣವಾಗಿ ವರ್ತಿಸಬೇಡಿರಿ.
20ಮಕ್ಕಳೇ, ಎಲ್ಲಾ ವಿಧಗಳಲ್ಲಿ ನಿಮ್ಮ ತಂದೆತಾಯಿಗಳಿಗೆ ವಿಧೇಯರಾಗಿರಿ. ಏಕೆಂದರೆ ಇದು ಕರ್ತ ಯೇಸುವಿಗೆ ಬಹು ಮೆಚ್ಚಿಕೆಯಾಗಿದೆ.
21ತಂದೆಯರೇ, ನಿಮ್ಮ ಮಕ್ಕಳನ್ನು ರೇಗಿಸಬೇಡಿರಿ. ಹಾಗೆ ಮಾಡಿದರೆ, ಅವರು ನಿರಾಶರಾಗುವರು.
22ಸೇವಕರೇ, ಭೂಮಿಯಲ್ಲಿ ನಿಮ್ಮ ಯಜಮಾನರಾಗಿರುವವರು ನೋಡುತ್ತಿರುವಾಗ ಮಾತ್ರ ಸೇವೆ ಮಾಡುವವರಾಗದೆ, ಕರ್ತ ಯೇಸುವಿಗೆ ಭಯಪಡುವವರಾಗಿ ಸರಳ ಹೃದಯದಿಂದ ಕೆಲಸಮಾಡಿ, ಅವರಿಗೆ ವಿಧೇಯರಾಗಿರಿ.
23ನೀವು ಏನನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಹೃದಯಪೂರ್ವಕವಾಗಿ ಮಾಡಿರಿ.
24ಕರ್ತ ಯೇಸುವಿನಿಂದ ಬಾಧ್ಯತೆಯನ್ನು ಬಹುಮಾನವಾಗಿ ಹೊಂದುವಿರೆಂದು ತಿಳಿದಿದ್ದೀರಲ್ಲಾ. ಏಕೆಂದರೆ ನೀವು ಕರ್ತ ಆಗಿರುವ ಕ್ರಿಸ್ತ ಯೇಸುವನ್ನೇ ಸೇವೆಮಾಡುವವರಾಗಿದ್ದೀರಿ.
25ಆದರೆ ಅನ್ಯಾಯ ಮಾಡುವವನು ತಾನು ಮಾಡಿದ ಅನ್ಯಾಯಕ್ಕೆ ತಕ್ಕದ್ದನ್ನು ಹೊಂದುವನು ಮತ್ತು ದೇವರಲ್ಲಿ ಪಕ್ಷಪಾತವಿರುವುದಿಲ್ಲ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.