Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆಮೋಸ 6

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಚೀಯೋನಿನಲ್ಲಿ ಹಾಯಾಗಿರುವವರಿಗೂ, ಸಮಾರ್ಯ ಬೆಟ್ಟದಲ್ಲಿ ಸುಭದ್ರವಾಗಿರುವವರಿಗೂ, ಇಸ್ರಾಯೇಲಿನ ಮನೆತನದವರು ಯಾರ ಬಳಿಗೆ ಬರುತ್ತಾರೋ, ಆ ಪ್ರಮುಖ ಜನಾಂಗದಲ್ಲಿ ಹೆಸರುಗೊಂಡವರಿಗೂ ಕಷ್ಟ!
2ಕಲ್ನೇ ಪಟ್ಟಣಕ್ಕೆ ಹೋಗಿ ನೋಡಿರಿ. ಅಲ್ಲಿಂದ ಮಹಾ ಪಟ್ಟಣವಾದ ಹಮಾತಿಗೆ ಹೋಗಿರಿ. ಅಲ್ಲಿಂದ ಫಿಲಿಷ್ಟಿಯರ ಗತ್ ಊರಿಗೆ ಇಳಿಯಿರಿ. ಅವು ನಿಮ್ಮ ಎರಡು ರಾಜ್ಯಗಳಿಗಿಂತ ಶ್ರೇಷ್ಠವೋ? ಅವುಗಳ ಪ್ರಾಂತ್ಯವು ನಿಮ್ಮ ಪ್ರಾಂತ್ಯಕ್ಕಿಂತ ದೊಡ್ಡದೋ?
3ನೀವು ಕೆಟ್ಟ ದಿವಸವನ್ನು ದೂರಮಾಡಿಕೊಂಡು, ಭಯಂಕರ ಆಳ್ವಿಕೆಯನ್ನು ಹತ್ತಿರ ಮಾಡಿಕೊಳ್ಳುತ್ತೀರಿ.
4ದಂತದ ಮಂಚಗಳ ಮೇಲೆ ಮಲಗಿಕೊಳ್ಳುತ್ತೀರಿ. ತಮ್ಮ ಹಾಸಿಗೆಗಳ ಮೇಲೆ ಹಾಯಾಗಿ ಒರಗಿಕೊಳ್ಳುತ್ತೀರಿ. ಮಂದೆಯೊಳಗಿಂದ ಕುರಿಮರಿಗಳನ್ನೂ ಹಟ್ಟಿಯ ಮಂದೆಯೊಳಗಿಂದ ಕರುಗಳನ್ನೂ ತಿನ್ನುತ್ತೀರಿ.
5ವೀಣೆಯ ಸ್ವರಕ್ಕೆ ಹಾಡುತ್ತೀರಿ, ದಾವೀದನ ಹಾಗೆ ನಿಮಗೆ ನೀವೇ ಗಾನವಾದ್ಯಗಳನ್ನು ಕಲ್ಪಿಸಿಕೊಳ್ಳುತ್ತೀರಿ.
6ನೀವು ತುಂಬಿದ ಪಾತ್ರೆಗಳಲ್ಲಿ ದ್ರಾಕ್ಷಾರಸವನ್ನು ಕುಡಿಯುತ್ತೀರಿ, ಶ್ರೇಷ್ಠವಾದ ಎಣ್ಣೆಗಳಿಂದ ನಿಮ್ಮನ್ನು ಅಭಿಷೇಕಿಸಿಕೊಳ್ಳುತ್ತೀರಿ. ಆದರೆ ಯೋಸೇಫನ ನಷ್ಟಕ್ಕೆ ವ್ಯಸನ ಪಡುವುದಿಲ್ಲ.
7ಆದ್ದರಿಂದ ಸೆರೆಗೆ ಕರೆದೊಯ್ಯುವವರಲ್ಲಿ ನೀವು ಮೊದಲಿಗರಾಗಿರುವಿರಿ, ಭೋಗ ಮಾಡುವವರ ಹರ್ಷ ಧ್ವನಿಯು ಗತಿಸಿ ಹೋಗುವುದು. ಯೆಹೋವ ದೇವರು ಇಸ್ರಾಯೇಲಿನ ಅಹಂಕಾರವನ್ನು ಅಸಹ್ಯಪಡುತ್ತಾರೆ
8ಸಾರ್ವಭೌಮ ಯೆಹೋವ ದೇವರು ಹೀಗೆ ಹೇಳುತ್ತಾರೆ. ಸರ್ವಶಕ್ತ ದೇವರಾದ ಯೆಹೋವ ದೇವರು ತಮ್ಮ ಮೇಲೆ ಆಣೆಯಿಟ್ಟುಕೊಂಡಿದ್ದಾರೆ: ನಾನು ಯಾಕೋಬಿನ ಅಹಂಕಾರವನ್ನು ಅಸಹ್ಯಿಸಿಕೊಂಡು, ಅವನ ಅರಮನೆಗಳನ್ನು ಹಗೆಮಾಡುತ್ತೇನೆ. ಆದಕಾರಣ ಪಟ್ಟಣವನ್ನೂ ಅದರಲ್ಲಿರುವ ಸಮಸ್ತವನ್ನೂ ನಾನು ಒಪ್ಪಿಸಿ ಬಿಡುತ್ತೇನೆ.
9ಒಂದು ಮನೆಯಲ್ಲಿ ಹತ್ತು ಜನರು ಉಳಿದರೆ, ಅವರು ಸಾಯುವರು.
10ಮತ್ತು ಸಂಬಂಧಿಯೊಬ್ಬರು ಮೃತ ದೇಹಗಳನ್ನು ಸುಡಲು ಆ ಮನೆಯಿಂದ ಹೊರತೆಗೆಯಲು ಬಂದಾಗ ಮತ್ತು ಅಲ್ಲಿ ಅಡಗಿಕೊಂಡಿದ್ದ ವ್ಯಕ್ತಿಯನ್ನು, “ನಿಮ್ಮೊಂದಿಗೆ ಬೇರೆ ಯಾರಾದರೂ ಇದ್ದಾರೆಯೇ?” ಎಂದು ಕೇಳಲು ಅವನು ಇಲ್ಲ ಎನ್ನುವನು. ಆಗ ಆ ಸಂಬಂಧಿಕನು, “ಮೌನದಿಂದಿರು! ನಾವು ಯೆಹೋವ ದೇವರ ಹೆಸರನ್ನು ತೆಗೆದುಕೊಳ್ಳಬಾರದು.”
11ಏಕೆಂದರೆ, ಯೆಹೋವ ದೇವರು ಆಜ್ಞಾಪಿಸುತ್ತಾರೆ, ಆತನು ದೊಡ್ಡ ಮನೆಯನ್ನು ಸೀಳುಗಳಿಂದಲೂ ಚಿಕ್ಕ ಮನೆಯನ್ನು ಬಿರುಕುಗಳಿಂದಲೂ ಹೊಡೆಯುವನು.
12ಕುದುರೆಗಳು ಬಂಡೆಯ ಮೇಲೆ ಓಡುವುದುಂಟೇ? ಎತ್ತುಗಳಿಂದ ಅಲ್ಲಿ ಉಳುವನೋ? ನಿಮ್ಮ ನ್ಯಾಯವನ್ನು ವಿಷವನ್ನಾಗಿ, ನೀತಿ ಫಲವನ್ನು ಕಹಿಯನ್ನಾಗಿ ಬದಲಾಯಿಸಿದ್ದೀರಿ.
13ಏನೂ ಇಲ್ಲದಿದ್ದರಲ್ಲಿ ಸಂತೋಷ ಪಡುವವರೇ, ನೀವು ಹೆಚ್ಚಳ ಪಡುವುದು ಶೂನ್ಯವಾಗಿರುವುದರಲ್ಲಿಯೇ? “ಸ್ವಬಲದಿಂದ ಕೊಂಬುಗಳನ್ನು ತೆಗೆದುಕೊಂಡಿಲ್ಲವೇ?” ಅಂದುಕೊಳ್ಳುತ್ತೀರಿ.
14ಸರ್ವಶಕ್ತರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಸ್ರಾಯೇಲಿನ ಮನೆತನದವರೇ, ಜನಾಂಗವನ್ನು ನಿಮಗೆ ವಿರೋಧವಾಗಿ ಎಬ್ಬಿಸುವೆನು. ಲೆಬೊ ಹಮಾತಿನ ಪ್ರದೇಶದಿಂದ ಅರಾಬಾ ತಗ್ಗಿನ ನದಿಯವರೆಗೂ ನಿಮ್ಮನ್ನು ಹಿಂಸಿಸುವರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.