Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಆಮೋಸ 2

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ಹೀಗೆ ಹೇಳುತ್ತಾನೆ: “ಮೋವಾಬಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವನು ಎದೋಮಿನ ಅರಸನ ಎಲುಬುಗಳನ್ನು, ಸುಟ್ಟು ಸುಣ್ಣ ಮಾಡಿದ್ದಾನೆ.
2ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಕೆರೀಯೋತಿನ ಕೋಟೆಗಳನ್ನು ದಹಿಸಿಬಿಡುವುದು. ಮೋವಾಬು ಆರ್ಭಟದ ಮತ್ತು ತುತೂರಿಯ ಧ್ವನಿಯ ಸಂಗಡ ಗಲಿಬಿಲಿಯಲ್ಲಿ ಸಾಯುವುದು.
3ನಾನು ಅದರ ಮಧ್ಯದಿಂದ ನ್ಯಾಯಾಧಿಪತಿಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನು,” ಎಂದು ಯೆಹೋವ ದೇವರು ಹೇಳುತ್ತಾರೆ.
4ಯೆಹೋವ ದೇವರು ಹೀಗೆ ಹೇಳುತ್ತಾರೆ: “ಯೆಹೂದದವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ಯೆಹೋವ ದೇವರ ನಿಯಮವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳು ದೇವರುಗಳೇ, ಇವರನ್ನು ದಾರಿ ತಪ್ಪುವವರನ್ನಾಗಿ ಮಾಡಿವೆ.
5ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು. ಅದು ಯೆರೂಸಲೇಮಿನ ಕೋಟೆಗಳನ್ನು ದಹಿಸಿಬಿಡುವುದು.” ಇಸ್ರಾಯೇಲರ ಮೇಲೆ ತೀರ್ಪು
6ಯೆಹೋವ ದೇವರು ಹೀಗೆ ಹೇಳುತ್ತಾರೆ: “ಇಸ್ರಾಯೇಲಿನವರು ಮಾಡಿರುವ ಮೂರು ಹೌದು ನಾಲ್ಕು ಪಾಪಗಳಿಗಾಗಿ, ಆಗಬೇಕಾದ ದಂಡನೆಯನ್ನು ನಾನು ತಪ್ಪಿಸುವುದೇ ಇಲ್ಲ. ಏಕೆಂದರೆ ಅವರು ನಿರಪರಾಧಿಗಳನ್ನು ಬೆಳ್ಳಿಗೆ ಮತ್ತು ಬಡವರನ್ನು ಒಂದು ಜೋಡಿ ಕೆರಗಳಿಗೆ ಮಾರಿದರು.
7ಬಡವರ ತಲೆಗಳನ್ನು ಬೀದಿಯ ಧೂಳಿನಂತೆ ತುಳಿದು ಬಿಡುತ್ತಾರೆ. ದೀನದಲಿತರಿಗೆ ನ್ಯಾಯ ದೊರಕದಂತೆ ಮಾಡುತ್ತಾರೆ. ತಂದೆಯೂ ಮಗನೂ ಒಬ್ಬ ಮಹಿಳೆಯನ್ನು ಇಟ್ಟುಕೊಂಡು, ನನ್ನ ಪವಿತ್ರ ನಾಮಕ್ಕೆ ಅಪಕೀರ್ತಿ ತರುತ್ತಾರೆ.
8ಅವರು ಅಡವು ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ. ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿಯುತ್ತಾರೆ.
9“ಆದರೂ ನನ್ನ ಜನರೇ, ದೇವದಾರು ಮರದಂತೆ ಎತ್ತರವಾಗಿ, ಅಲ್ಲೋನ್ ಮರದಂತೆ ಬಲಿಷ್ಠರಾಗಿ ಇದ್ದ, ಅಮೋರಿಯರನ್ನು ನಾನು ನಾಶ ಪಡಿಸಿದೆನು. ನಾನು ಮೇಲೆ ಅದರ ಫಲವನ್ನು ಮತ್ತು ಕೆಳಗೆ ಅದರ ಬೇರನ್ನು ಕಿತ್ತು ಹಾಕುವಂತೆ, ಅವರನ್ನು ನಿರ್ಮೂಲ ಮಾಡುವೆನು.
10ನಾನೇ ನಿಮ್ಮನ್ನು ಈಜಿಪ್ಟ್ ದೇಶದಿಂದ ಕರೆತಂದೆನು. ಅಮೋರಿಯರ ದೇಶವನ್ನು ನಿಮಗೆ ಸೊತ್ತಾಗಿ ಕೊಡಲು, ನಿಮ್ಮನ್ನು ನಾಲ್ವತ್ತು ವರ್ಷ ಮರುಭೂಮಿಯಲ್ಲಿ ನಡೆಸಿದೆನು.
11“ನಾನು ನಿಮ್ಮ ಪುತ್ರರಲ್ಲಿ ಪ್ರವಾದಿಗಳನ್ನೂ ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನೂ ಎಬ್ಬಿಸಿದೆನು. ಇಸ್ರಾಯೇಲಿನ ಜನರೇ, ಇದು ಸರಿಯಲ್ಲವೋ?” ಎಂದು ಯೆಹೋವ ದೇವರು ಹೇಳುತ್ತಾರೆ.
12“ಆದರೆ ನೀವು ನಾಜೀರರಿಗೆ ಕುಡಿಯಲು ದ್ರಾಕ್ಷಾರಸವನ್ನು ಕೊಟ್ಟಿರಿ. ಪ್ರವಾದಿಗಳಿಗೆ ಪ್ರವಾದಿಸಬೇಡಿರಿ ಎಂದು ಆಜ್ಞಾಪಿಸಿದಿರಿ.
13“ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ, ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.
14ಆದ್ದರಿಂದ ತ್ವರೆಯಾಗಿ ಓಡುವವನು ತಪ್ಪಿಸಿಕೊಳ್ಳನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು. ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
15ಬಿಲ್ಲು ಹಿಡಿಯುವವನು ಭೂಮಿಯ ಮೇಲೆ ನಿಲ್ಲನು. ಪಾದತ್ವರಿತನು ತಪ್ಪಿಸಿಕೊಳ್ಳನು. ಅಶ್ವಾರೂಢನು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.
16ಶೂರರಲ್ಲಿ ಧೈರ್ಯ ಹೃದಯವುಳ್ಳವನು, ಆ ದಿನದಲ್ಲಿ ಬೆತ್ತಲೆಯಾಗಿ ಓಡಿಹೋಗುವನು,” ಎಂದು ಯೆಹೋವ ದೇವರು ಹೇಳುತ್ತಾರೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.