Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ತಿಮೊಥೆಯನಿಗೆ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಆದರೆ ಕಡೆಯ ದಿವಸಗಳಲ್ಲಿ ಕಷ್ಟಕರವಾದ ಕಾಲಗಳು ಬರುವುವೆಂಬುದನ್ನು ಸಹ ತಿಳಿದುಕೋ.
2ಮನುಷ್ಯರು ತಮ್ಮನ್ನು ತಾವೇ ಪ್ರೀತಿಸಿಕೊಳ್ಳುವವರೂ ಹಣದಾಶೆಯುಳ್ಳವರೂ ಬಡಾಯಿ ಕೊಚ್ಚುವವರೂ ಅಹಂಕಾರಿಗಳೂ ದೇವದೂಷಕರೂ ತಂದೆತಾಯಿಗಳಿಗೆ ಅವಿಧೇಯರೂ ಕೃತಜ್ಞತೆಯಿಲ್ಲದವರೂ ಅಶುದ್ಧರೂ
3ಮಾನವತ್ವವಿಲ್ಲದವರೂ ಸಮಾಧಾನವಾಗದವರೂ ಚಾಡಿಕೋರರೂ ಸಂಯಮವಿಲ್ಲದವರೂ ಉಗ್ರತೆಯುಳ್ಳವರೂ ಒಳ್ಳೆಯದನ್ನು ಪ್ರೀತಿಸದವರೂ
4ದ್ರೋಹಿಗಳೂ ದುಡುಕುವವರೂ ಉಬ್ಬಿಕೊಂಡವರೂ ದೇವರನ್ನು ಪ್ರೀತಿಸುವುದಕ್ಕಿಂತಲೂ ಭೋಗಗಳನ್ನೇ ಪ್ರೀತಿಸುವವರೂ
5ಭಕ್ತಿಯ ವೇಷವಿದ್ದು ಅದರ ಬಲವನ್ನು ಅಲ್ಲಗಳೆಯುವವರೂ ಆಗಿರುವರು. ಇಂಥವರನ್ನು ಬಿಟ್ಟು ಪ್ರತ್ಯೇಕವಾಗಿರು.
6ಇಂಥವರು ಮನೆಗಳಲ್ಲಿ ನುಸುಳಿ ಪಾಪಗಳಿಂದ ತುಂಬಿದವರೂ ನಾನಾ ವಿಧವಾದ ಇಚ್ಛೆಗಳಿಂದ ಪ್ರೇರಣೆ ಹೊಂದಿ ಸುಲಭವಾಗಿ ಮೋಸಹೋಗುವ ಸ್ತ್ರೀಯರನ್ನು ವಶಮಾಡಿಕೊಳ್ಳುವರು.
7ಇಂಥ ಸ್ತ್ರೀಯರು ಯಾವಾಗಲೂ ಕಲಿಯುತ್ತಿದ್ದರೂ ಸತ್ಯದ ಜ್ಞಾನಕ್ಕೆ ಬರಲಾರದವರು ಆಗಿರುವರು.
8ಯನ್ನ, ಯಂಬ್ರ ಎಂಬವರು ಮೋಶೆಯನ್ನು ವಿರೋಧಿಸಿದಂತೆಯೇ, ಈ ಸುಳ್ಳು ಬೋಧಕರು ಸಹ ಸತ್ಯವನ್ನು ವಿರೋಧಿಸುತ್ತಾರೆ. ಇದಲ್ಲದೆ ಇವರು ಬುದ್ಧಿಗೆಟ್ಟವರೂ ವಿಶ್ವಾಸದ ವಿಷಯದಲ್ಲಿ ಭ್ರಷ್ಠರೂ ಆಗಿ, ತಿರಸ್ಕಾರ ಹೊಂದಿರುತ್ತಾರೆ.
9ಆದರೆ ಇವರು ಇನ್ನು ಮುಂದುವರಿಯಲಾರರು. ಯನ್ನ, ಯಂಬ್ರರ ಮೂರ್ಖತನವು ಎಲ್ಲರಿಗೂ ಸ್ಪಷ್ಟವಾಗಿ ತಿಳಿದುಬಂದಂತೆಯೇ, ಇವರದೂ ತಿಳಿದುಬರುವುದು. ತಿಮೊಥೆಗೆ ಪೌಲನ ಅಪ್ಪಣೆ
10ನೀನಾದರೋ ನನ್ನ ಎಲ್ಲಾ ಬೋಧನೆ, ನನ್ನ ನಡತೆ, ನನ್ನ ಉದ್ದೇಶ, ನಂಬಿಕೆ, ದೀರ್ಘಶಾಂತಿ, ಪ್ರೀತಿ, ಸೈರಣೆ,
11ನಾನು ಎಂತೆಂಥ ಹಿಂಸೆಗಳನ್ನು ಸಹಿಸಿಕೊಂಡೆನೆಂಬುದನ್ನೂ ಅಂತಿಯೋಕ್ಯ, ಇಕೋನ್ಯ, ಲುಸ್ತ್ರ ಪಟ್ಟಣಗಳಲ್ಲಿ ನನಗೆ ಸಂಭವಿಸಿದ ಕಷ್ಟಾನುಭವಗಳನ್ನೂ ನನಗುಂಟಾದ ಎಲ್ಲಾ ಹಿಂಸೆಗಳನ್ನೂ ನೀನು ಪೂರ್ಣವಾಗಿ ತಿಳಿದವನಾಗಿದ್ದೀ. ಆದರೆ ಕರ್ತದೇವರು ನನ್ನನ್ನು ಇವೆಲ್ಲವುಗಳಿಂದ ಬಿಡಿಸಿದರು.
12ನಿಜವಾಗಿಯೂ ಕ್ರಿಸ್ತ ಯೇಸುವಿನಲ್ಲಿ ಭಕ್ತಿಯುಳ್ಳವರಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂಸೆಗೊಳಗಾಗುವರು.
13ಆದರೆ ದುಷ್ಟರೂ ಇತರರಂತೆ ನಟಿಸುವ ವೇಷಧಾರಿಗಳೂ ಇತರರನ್ನು ವಂಚಿಸುತ್ತಾ ತಮ್ಮನ್ನೂ ವಂಚಿಸಿಕೊಳ್ಳುತ್ತಾ ಹೆಚ್ಚಾದ ಕೆಟ್ಟತನಕ್ಕೆ ಸಾಗುವರು.
14ನೀನಾದರೋ, ಕಲಿತು ನಿಶ್ಚಯಗೊಂಡವುಗಳಲ್ಲಿ ಮುಂದುವರಿಯುತ್ತಿರು. ನಿನಗೆ ಕಲಿಸಿಕೊಟ್ಟವರು ಯಾರೆಂಬುದು ನಿನಗೆ ತಿಳಿದಿದೆ.
15ಕ್ರಿಸ್ತ ಯೇಸುವಿನಲ್ಲಿ ವಿಶ್ವಾಸದ ಮೂಲಕ ರಕ್ಷಣೆ ಹೊಂದುವಂತೆ ನಿನ್ನನ್ನು ಜ್ಞಾನಿಯನ್ನಾಗಿ ಮಾಡಲು ಶಕ್ತವಾಗಿರುವ ಪವಿತ್ರ ವೇದಗಳನ್ನು ನೀನು ಚಿಕ್ಕಂದಿನಿಂದಲೂ ತಿಳಿದವನಾಗಿದ್ದೀಯಲ್ಲಾ.
16ಪವಿತ್ರ ವೇದಗಳೆಲ್ಲವೂ ದೇವರ ಶ್ವಾಸದಿಂದಲೇ ಉಂಟಾದದ್ದು. ಅದು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಯ ಶಿಕ್ಷಣಕ್ಕೂ ಉಪಯುಕ್ತವಾಗಿದೆ.
17ಆದ್ದರಿಂದ ದೇವರ ಮನುಷ್ಯನು ಪರಿಪೂರ್ಣನಾಗಿ ಸಕಲ ಸತ್ಕಾರ್ಯಗಳಿಗೆ ಸನ್ನದ್ಧನಾಗುವನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.