Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ತಿಮೊಥೆಯನಿಗೆ 1

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನದ ಪ್ರಕಾರ ದೇವರ ಚಿತ್ತದಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೆಂಬ ನಾನು,
2ನನ್ನ ಪ್ರಿಯ ಪುತ್ರನಾದ ತಿಮೊಥೆಯನಿಗೆ ಬರೆಯುವುದು: ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ. ನಂಬಿಗಸ್ತನಾಗಿರಲು ಪ್ರೋತ್ಸಾಹ
3ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ನೆನೆಸಿಕೊಳ್ಳುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕರಂತೆ ದೇವರ ಸೇವೆಮಾಡುತ್ತಾ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.
4ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು, ನಿನ್ನನ್ನು ನೋಡಿ ಆನಂದಭರಿತನಾಗಬೇಕೆಂದು ಬಹಳವಾಗಿ ಹಂಬಲಿಸುತ್ತೇನೆ.
5ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನಿಕೆಯಲ್ಲಿಯೂ ಮೊದಲು ಇದ್ದ ನಂಬಿಕೆಯು ಈಗ ನಿನ್ನಲ್ಲಿಯೂ ಇದೆಯೆಂದು ನಾನು ದೃಢವಾಗಿ ನಂಬಿದ್ದೇನೆ. ಪೌಲನಿಗೂ ಸುವಾರ್ತೆಗೂ ಇರಬೇಕಾದ ನಂಬಿಗಸ್ತಿಕೆ
6ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತಗಳನ್ನು ಇಟ್ಟಿದ್ದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ.
7ದೇವರು ನಮಗೆ ಕೊಟ್ಟಿರುವ ಆತ್ಮವು ಶಕ್ತಿ, ಪ್ರೀತಿ ಹಾಗೂ ಸ್ವಶಿಸ್ತು ಆತ್ಮವೇ ಹೊರತು ಭಯದ ಆತ್ಮವಲ್ಲ.
8ಹೀಗಿರುವುದರಿಂದ ನಮ್ಮ ಕರ್ತ ಯೇಸುವಿನ ಸಾಕ್ಷಿಯ ವಿಷಯವಾಗಿಯೂ ಅವರ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡಬೇಡ. ಅದರ ಬದಲಾಗಿ, ದೇವರ ಶಕ್ತಿಗೆ ಅನುಸಾರವಾಗಿ, ಸುವಾರ್ತೆಗೋಸ್ಕರ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು.
9ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು.
10ಆದರೆ ಈಗ ನಮಗೆ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಕೃಪೆ ಪ್ರಕಟವಾಯಿತು. ಕ್ರಿಸ್ತ ಯೇಸು ಮರಣವನ್ನು ನಾಶಮಾಡಿ, ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದರು.
11ಈ ಸುವಾರ್ತೆಯನ್ನು ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಯೆಹೂದ್ಯರಲ್ಲದವರಿಗೆ ಉಪದೇಶಕನಾಗಿಯೂ ದೇವರಿಂದ ನೇಮಕವಾದೆನು.
12ಇದಕ್ಕಾಗಿಯೇ ನಾನು ಈ ಶ್ರಮೆಗಳನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ಏಕೆಂದರೆ ನಾನು ನಂಬಿರುವ ಕ್ರಿಸ್ತ ಯೇಸುವನ್ನು ಬಲ್ಲೆನು. ನಾನು ಕ್ರಿಸ್ತ ಯೇಸುವಿಗೆ ಒಪ್ಪಿಸಿದ್ದನ್ನು ಅವರು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತರಾಗಿದ್ದಾರೆಂಬ ದೃಢವಿಶ್ವಾಸ ನನಗಿದೆ.
13ನೀನು ನನ್ನಿಂದ ಕೇಳಿದ ಸ್ವಸ್ಥವಾಕ್ಯಗಳನ್ನು ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸ ಹಾಗೂ ಪ್ರೀತಿಯೊಂದಿಗೆ ಒಂದು ಮಾದರಿಯಾಗಿ ಹಿಡಿದುಕೋ.
14ನಿನಗೆ ಒಪ್ಪಿಸಲಾಗಿರುವ ಆ ಒಳ್ಳೆಯದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮ ದೇವರ ಮೂಲಕ ನೀನು ಕಾಪಾಡು. ನಂಬಿಗಸ್ತಿಕೆ ಮತ್ತು ಅಪನಂಬಿಗಸ್ತಿಕೆ
15ಏಷ್ಯ ಸೀಮೆಯಲ್ಲಿ ಫುಗೇಲನೂ ಹರ್ಮೊಗೇನನೂ ಒಳಗೊಂಡು ಎಲ್ಲರೂ ನನ್ನನ್ನು ಬಿಟ್ಟು ಹೋದರೆಂಬುದನ್ನು ನೀನು ಬಲ್ಲೆ.
16ಒನೇಸಿಫೊರನ ಮನೆಯವರಿಗೆ ಕರ್ತ ಯೇಸು ಕರುಣೆಯನ್ನು ದಯಪಾಲಿಸಲಿ. ಏಕೆಂದರೆ ಅವನು ಅನೇಕಾವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆ ಪಡಲಿಲ್ಲ.
17ಆದರೆ ಅವನು ರೋಮಿನಲ್ಲಿದ್ದಾಗ ಪ್ರಯಾಸದಿಂದ ನನ್ನನ್ನು ಹುಡುಕಿ ಕಂಡುಕೊಂಡನು.
18ಅವನು ಆ ದಿನದಲ್ಲಿ ಕರ್ತ ಯೇಸುವಿನಿಂದ ಕರುಣೆಯನ್ನು ಕಂಡುಕೊಳ್ಳುವಂತೆ ಕರ್ತ ಯೇಸುವೇ ಅವನಿಗೆ ಅನುಗ್ರಹ ಮಾಡಲಿ. ಎಫೆಸದಲ್ಲಿ ಅವನು ನನಗೆ ಎಷ್ಟು ಸಹಾಯಮಾಡಿದನೆಂಬುದು ನಿನಗೆ ಚೆನ್ನಾಗಿ ಗೊತ್ತಿದೆ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.