Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಥೆಸಲೋನಿಕದವರಿಗೆ 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಕೊನೆಯದಾಗಿ ಪ್ರಿಯರೇ, ಕರ್ತ ಯೇಸುವಿನ ವಾಕ್ಯವು ನಿಮ್ಮಲ್ಲಿ ಹಬ್ಬಿದಂತೆ ಎಲ್ಲ ಕಡೆಗಳಲ್ಲಿಯೂ ಅತಿವೇಗದಿಂದ ಹಬ್ಬಿ ಹರಡುವಂತೆ ನಮಗಾಗಿ ಬೇಡಿಕೊಳ್ಳಿರಿ.
2ವಕ್ರಬುದ್ಧಿಯುಳ್ಳ ದುಷ್ಟರ ಕೈಯಿಂದ ನಾವು ತಪ್ಪಿಸಿಕೊಳ್ಳುವಂತೆಯೂ ಪ್ರಾರ್ಥಿಸಿರಿ. ಏಕೆಂದರೆ ಎಲ್ಲರಲ್ಲಿಯೂ ವಿಶ್ವಾಸವಿಲ್ಲವಲ್ಲಾ.
3ಆದರೆ ಕರ್ತ ಯೇಸು ನಂಬಿಗಸ್ತರು, ಅವರು ನಿಮ್ಮನ್ನು ದೃಢಪಡಿಸಿ ನಿಮ್ಮನ್ನು ಕೆಡುಕನಿಂದ ತಪ್ಪಿಸುವರು.
4ನಾವು ನಿಮಗೆ ಆಜ್ಞಾಪಿಸಿದವುಗಳನ್ನು ನೀವು ಮಾಡುತ್ತೀರೆಂತಲೂ ಮುಂದೆಯೂ ಮಾಡುವಿರೆಂತಲೂ ನಿಮ್ಮ ವಿಷಯವಾಗಿ ಕರ್ತ ಯೇಸುವಿನಲ್ಲಿ ನಮಗೆ ಭರವಸೆಯಿದೆ.
5ಕರ್ತ ಯೇಸು ದೇವರ ಪ್ರೀತಿಯಲ್ಲಿಯೂ ತಮ್ಮ ತಾಳ್ಮೆಯಲ್ಲಿಯೂ ನಿಮ್ಮ ಹೃದಯಗಳನ್ನು ನಡೆಸಲಿ. ಸೋಮಾರಿತನದ ಬಗ್ಗೆ ಎಚ್ಚರಿಕೆ
6ಪ್ರಿಯರೇ, ನಮಗೆ ಕರ್ತ ಆಗಿರುವ ಯೇಸುಕ್ರಿಸ್ತರ ಹೆಸರಿನಲ್ಲಿ ನಾವು ನಿಮಗೆ ಆಜ್ಞಾಪಿಸುವುದೇನೆಂದರೆ, ನಮ್ಮಿಂದ ಸ್ವೀಕರಿಸಿದ ಬೋಧನೆಯನ್ನು ಅನುಸರಿಸದೆ, ಸೋಮಾರಿಯಾಗಿ ಅಶಿಸ್ತಿನಿಂದ ನಡೆಯುವ ಪ್ರತಿ ವಿಶ್ವಾಸಿಗೆ ನೀವು ದೂರವಾಗಿರಬೇಕು.
7ನೀವು ನಮ್ಮ ಮಾದರಿಯನ್ನು ಅನುಸರಿಸಿ ಹೇಗೆ ನಡೆಯಬೇಕೆಂದು ನೀವೇ ಬಲ್ಲಿರಿ. ಏಕೆಂದರೆ ನಾವು ನಿಮ್ಮಲ್ಲಿರುವಾಗ ಸೋಮಾರಿಗಳಾಗಿರಲಿಲ್ಲ.
8ನಾವು ಉಚಿತವಾಗಿ ಯಾರ ಬಳಿಯಲ್ಲಿಯೂ ಊಟ ಮಾಡಲಿಲ್ಲ. ನಿಮ್ಮಲ್ಲಿ ಒಬ್ಬರಿಗೂ ನಾವು ಭಾರವಾಗಬಾರದೆಂದು ಹಗಲಿರುಳೂ ಕಷ್ಟದಿಂದಲೂ ಪ್ರಯಾಸದಿಂದಲೂ ದುಡಿದೆವು.
9ನಿಮ್ಮಿಂದ ಪೋಷಣೆ ಹೊಂದುವುದಕ್ಕೆ ನಮಗೆ ಹಕ್ಕಿಲ್ಲವೆಂದಲ್ಲ. ನೀವು ನಮ್ಮನ್ನು ಅನುಸರಿಸುವುದಕ್ಕಾಗಿ ನಿಮಗೆ ಆದರ್ಶರಾಗಿರಬೇಕೆಂದು ಹಾಗೆ ಮಾಡಿದೆವು.
10ನಾವು ನಿಮ್ಮ ಸಂಗಡ ಇದ್ದಾಗ, “ಕೆಲಸ ಮಾಡಲೊಲ್ಲದವನು ಉಣ್ಣಲೂಬಾರದು,” ಎಂದು ನಿಮಗೆ ಆಜ್ಞಾಪಿಸಿದ್ದೆವು.
11ಆದರೆ ನಿಮ್ಮಲ್ಲಿ ಕೆಲವರು ಯಾವ ಕೆಲಸವನ್ನೂ ಮಾಡದೆ ಇತರರ ಕೆಲಸದಲ್ಲಿ ಮಾತ್ರ ತಲೆಹಾಕಿ ಅಶಿಸ್ತಿನಿಂದ ನಡೆಯುತ್ತಾರೆಂದು ಕೇಳಿದ್ದೇವೆ.
12ಅಂಥವರು ಶಾಂತವಾಗಿ ಕೆಲಸಮಾಡಿ ತಮ್ಮ ಸ್ವಂತ ಆಹಾರವನ್ನೇ ಊಟ ಮಾಡಬೇಕೆಂದು ನಮಗೆ ಕರ್ತ ಆಗಿರುವ ಯೇಸು ಕ್ರಿಸ್ತರಲ್ಲಿ ನಾವು ಆಜ್ಞಾಪಿಸಿ ಪ್ರಬೋಧಿಸುತ್ತೇವೆ.
13ಪ್ರಿಯರೇ, ನೀವಾದರೋ ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ.
14ಈ ಪತ್ರದ ಮೂಲಕ ಹೇಳಿರುವ ನಮ್ಮ ಮಾತಿಗೆ ಯಾರಾದರೂ ವಿಧೇಯರಾಗದಿದ್ದರೆ ಅಂಥವರನ್ನು ಗುರುತಿಸಿ ಅವರಿಗೆ ನಾಚಿಕೆಯಾಗುವಂತೆ ಅವರ ಸಹವಾಸದಲ್ಲಿ ಸೇರಬೇಡಿರಿ.
15ಆದರೂ ಅಂಥವರನ್ನು ವೈರಿಯೆಂದು ಎಣಿಸದೆ, ಜೊತೆ ವಿಶ್ವಾಸಿಯೆಂದು ಭಾವಿಸಿ ಬುದ್ಧಿಹೇಳಿರಿ. ಅಂತಿಮ ವಂದನೆಗಳು
16ನಮಗೆ ಕರ್ತ ಆಗಿರುವ ಯೇಸು ಈ ಸಮಾಧಾನದಲ್ಲಿ ತಾವೇ ಸದಾಕಾಲದಲ್ಲಿಯೂ ಸಕಲ ವಿಧದಲ್ಲಿಯೂ ನಿಮಗೆ ಸಮಾಧಾನವನ್ನು ದಯಪಾಲಿಸಲಿ. ಕರ್ತದೇವರು ನಿಮ್ಮೆಲ್ಲರೊಂದಿಗೆ ಇರಲಿ.
17ಪೌಲನೆಂಬ ನಾನು ಸ್ವತಃ ನನ್ನ ಕೈಯಿಂದ ಬರೆದ ವಂದನೆಯಿದು. ನನ್ನ ಎಲ್ಲಾ ಪತ್ರಗಳಲ್ಲಿಯೂ ಇದೇ ಗುರುತು. ನಾನು ಹೀಗೆಯೇ ಬರೆಯುತ್ತೇನೆ.
18ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಕೃಪೆಯು ನಿಮ್ಮೆಲ್ಲರ ಸಂಗಡ ಇರಲಿ.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.