Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೆಹೋವ ದೇವರು ದಾವೀದನನ್ನು ಅವನ ಎಲ್ಲಾ ಶತ್ರುಗಳಿಂದಲೂ, ಸೌಲನ ಕೈಯಿಂದಲೂ ತಪ್ಪಿಸಿಕೊಂಡಾಗ ಯೆಹೋವ ದೇವರಿಗೆ ಈ ಪದ್ಯವನ್ನು ಹಾಡಿದ್ದು.
2ಅವನು ಹೇಳಿದನು: “ಯೆಹೋವ ದೇವರು ನನ್ನ ಬಂಡೆಯೂ ನನ್ನ ಕೋಟೆಯೂ ನನ್ನ ವಿಮೋಚಕರೂ ಆಗಿದ್ದಾರೆ,
3ನನ್ನ ಬಂಡೆಯಾದ ದೇವರಲ್ಲಿ, ನಾನು ಭರವಸವಿಡುವೆನು; ಅವರು ನನ್ನ ಗುರಾಣಿ ಮತ್ತು ನನ್ನ ರಕ್ಷಣೆಯ ಕೊಂಬು, ಅವರು ನನ್ನ ಉನ್ನತವಾದ ದುರ್ಗವೂ, ನನ್ನ ಆಶ್ರಯವೂ, ಬಲಾತ್ಕಾರಿಯಿಂದ ನನ್ನನ್ನು ರಕ್ಷಿಸುವವರೂ ಅವರೇ ಆಗಿದ್ದಾರೆ.
4“ಸ್ತುತಿ ಪಾತ್ರರಾಗಿರುವ ಯೆಹೋವ ದೇವರನ್ನು ನಾನು ಮೊರೆಯಿಟ್ಟದ್ದರಿಂದ, ಅವರು ನನ್ನ ಶತ್ರುಗಳಿಂದ ನನ್ನನ್ನು ಕಾಪಾಡಿದ್ದಾರೆ.
5ಮರಣದಲೆಗಳು ನನ್ನನ್ನು ಆವರಿಸಿಕೊಂಡವು. ವಿನಾಶಪ್ರವಾಹಗಳು ನನ್ನ ಮೇಲೆ ಹರಿದವು;
6ಪಾತಾಳದ ಪಾಶಗಳು ನನ್ನನ್ನು ಸುತ್ತಿಕೊಂಡವು; ಮರಣದ ಬಲೆಗಳು ನನ್ನನ್ನು ಎದುರಿಸಿದವು.
7“ನನ್ನ ಇಕ್ಕಟ್ಟಿನಲ್ಲಿ ಯೆಹೋವ ದೇವರನ್ನು ಕರೆದೆನು; ನನ್ನ ದೇವರಿಗೆ ಮೊರೆಯಿಟ್ಟೆನು. ಅವರು ತಮ್ಮ ಮಂದಿರದೊಳಗಿಂದ ನನ್ನ ಧ್ವನಿಯನ್ನು ಕೇಳಿದರು; ನನ್ನ ಮೊರೆಯು ಅವರ ಕಿವಿಗೆ ಮುಟ್ಟಿತು.
8ಆಗ ದೇವರು ಬೇಸರಗೊಂಡಿದ್ದರಿಂದ ಭೂಮಿಯು ನಡುಗಿ ಕದಲಿದವು, ಆಕಾಶಗಳ ಅಸ್ತಿವಾರಗಳು ಸಹ ಕದಲಿದವು.
9ಮೂಗಿನಿಂದ ಹೊಗೆ ಬಂದಂತೆಯೂ, ಬಾಯಿಯೊಳಗಿಂದ ದಹಿಸುವ ಅಗ್ನಿ ಹೊರಟಂತೆಯೂ; ಕೆಂಡಗಳು ಅದರಿಂದ ಜ್ವಾಲಿಸಿದಂತೆಯೂ ಇತ್ತು.
10ದೇವರು ಆಕಾಶಗಳನ್ನು ಬಾಗಿಸಿ ಕೆಳಗಿಳಿದು ಬಂದರು; ಅವರ ಪಾದಗಳ ಕೆಳಗೆ ಕಾರ್ಮೋಡಗಳಿದ್ದವು;
11ಅವರು ಕೆರೂಬಿಯ ಮೇಲೆ ಕೂತು ಹಾರಿದರು, ಗಾಳಿಯ ರೆಕ್ಕೆಗಳ ಮೇಲೆ ಕಾಣಿಸಿಕೊಂಡರು.
12ಕತ್ತಲನ್ನೂ, ಮಳೆ ತರುವ ಆಕಾಶದ ಕಾರ್ಮೋಡಗಳನ್ನೂ ತಮ್ಮ ಸುತ್ತಲೂ ಹೊದಿಕೆಯನ್ನಾಗಿ ಮಾಡಿಕೊಂಡರು.
13ಅವರ ಸನ್ನಿಧಿಯ ಪ್ರಕಾಶದಿಂದ ಮಿಂಚಿನ ಜ್ವಾಲೆಗಳು ಹೊರಹೊಮ್ಮಿದವು.
14ಯೆಹೋವ ದೇವರು ಆಕಾಶಗಳಲ್ಲಿ ಗುಡುಗಿದರು. ಮಹೋನ್ನತ ದೇವರ ಧ್ವನಿಯು ಕಲ್ಮಳೆ ಹಾಗೂ ಮಿಂಚುಗಳಿಂದ ಪ್ರತಿಧ್ವನಿಸಿತು.
15ಅವರು ತಮ್ಮ ಬಾಣಗಳನ್ನು ಎಸೆದು ವೈರಿಗಳನ್ನು ಚದರಿಸಿದರು, ಸಿಡಿಲಿನಿಂದ ವೈರಿಗಳನ್ನೆಲ್ಲ ಅಟ್ಟಿಸಿಬಿಟ್ಟರು.
16ಆಗ ಯೆಹೋವ ದೇವರ ಗದರಿಕೆಯಿಂದಲೂ, ಅವರ ಮೂಗಿನ ಶ್ವಾಸದ ಗಾಳಿಯಿಂದಲೂ ಸಮುದ್ರದ ತಳವು ಕಾಣಿಸಿತು. ಭೂಲೋಕದ ಅಸ್ತಿವಾರಗಳು ಬಯಲಾದವು.
17“ಅವರು ಮೇಲಿನಿಂದ ಕೈಚಾಚಿ ನನ್ನನ್ನು ಹಿಡಿದು, ಅಗಾಧವಾದ ಜಲರಾಶಿಗಳಿಂದ ಹೊರಗೆಳೆದರು.
18ಅವರು ನನಗಿಂತ ಶಕ್ತಿಶಾಲಿಯಾದ ಶತ್ರುಗಳಿಂದ, ದ್ವೇಷಿಸುತ್ತಿದ್ದ ವೈರಿಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದರು.
19ನನ್ನ ಆಪತ್ತಿನ ದಿನದಲ್ಲಿ ನನ್ನನ್ನು ಆ ಶತ್ರುಗಳು ದಾಳಿಮಾಡಿದರು; ಆದರೆ ಯೆಹೋವ ದೇವರು ನನಗೆ ಆಧಾರವಾಗಿದ್ದರು.
20ಅವರು ನನ್ನನ್ನು ಹೊರಗೆ ವಿಶಾಲ ಸ್ಥಳಕ್ಕೆ ತಂದರು; ನನ್ನಲ್ಲಿ ಸಂತೋಷಪಟ್ಟದ್ದರಿಂದ ನನ್ನನ್ನು ಕಾಪಾಡಿದರು.
21“ಯೆಹೋವ ದೇವರು ನನ್ನ ನೀತಿಯ ಪ್ರಕಾರ ನನ್ನೊಂದಿಗೆ ವ್ಯವಹರಿಸಿದರು; ನನ್ನ ಕೈಗಳ ಶುದ್ಧತ್ವದ ಪ್ರಕಾರ ನನಗೆ ಪ್ರತಿಫಲಕೊಟ್ಟರು.
22ಏಕೆಂದರೆ ನಾನು ಯೆಹೋವ ದೇವರ ಮಾರ್ಗಗಳನ್ನು ಅನುಸರಿಸಿದ್ದೇನೆ, ನನ್ನ ದೇವರನ್ನು ಬಿಟ್ಟುಹೋಗುವ ದುಷ್ಟತ್ವವನ್ನು ನಾನು ಮಾಡಲಿಲ್ಲ.
23ಅವರ ಆಜ್ಞೆಗಳೆಲ್ಲಾ ನನ್ನ ಮುಂದೆ ಇಟ್ಟುಕೊಂಡೆನು; ದೇವರ ತೀರ್ಪುಗಳಿಂದ ನಾನು ತೊಲಗಿಹೋಗಲಿಲ್ಲ.
24ನಾನು ಅವರ ದೃಷ್ಟಿಯಲ್ಲಿ ನಿರ್ದೋಷಿಯು, ನಾನು ಪಾಪದಿಂದ ನನ್ನನ್ನು ಕಾಪಾಡಿಕೊಂಡೆನು.
25ಆದ್ದರಿಂದ ಯೆಹೋವ ದೇವರು ನನ್ನ ನೀತಿಯ ಪ್ರಕಾರವೂ, ಅವರ ದೃಷ್ಟಿಯಲ್ಲಿ ನನ್ನ ಶುದ್ಧತ್ವದ ಪ್ರಕಾರವೂ ನನಗೆ ಪ್ರತಿಫಲಕೊಟ್ಟರು.
26“ದಯವಂತರಿಗೆ ನೀವು ನಿಮ್ಮನ್ನು ದಯವಂತರಾಗಿ ತೋರಿಸುತ್ತೀರಿ; ನಿರ್ದೋಷಿಗೆ ನೀವು ನಿರ್ದೋಷಿಯಾಗಿ ತೋರಿಸುತ್ತೀರಿ.
27ಶುದ್ಧರಿಗೆ ನೀವು ಶುದ್ಧರಾಗಿ ತೋರಿಸುತ್ತೀರಿ, ವಕ್ರ ವ್ಯಕ್ತಿಗೆ ನಿಮ್ಮ ಬುದ್ಧಿವಂತಿಕೆಯನ್ನು ತೋರಿಸುತ್ತೀರಿ.
28ದೀನರನ್ನು ರಕ್ಷಿಸುತ್ತೀರಿ; ಆದರೆ ನೀವು ಗರ್ವಿಷ್ಠರನ್ನು ತಗ್ಗಿಸಲು ನಿಮ್ಮ ಕಣ್ಣುಗಳು ಅವರ ಮೇಲೆ ಇರುತ್ತವೆ.
29ಯೆಹೋವ ದೇವರೇ, ನನ್ನ ದೀಪವು ನೀವೇ; ಯೆಹೋವ ದೇವರು ನನ್ನ ಕತ್ತಲೆಯನ್ನು ಬೆಳಕನ್ನಾಗಿ ಮಾರ್ಪಡಿಸುವರು.
30ನಿಮ್ಮ ಸಹಾಯದಿಂದ ವೈರಿಸೇನೆಯ ವಿರುದ್ಧ ಹೋಗುವೆನು. ನನ್ನ ದೇವರೊಂದಿಗೆ ಕೋಟೆಗೋಡೆಯನ್ನೂ ಹಾರುವೆನು.
31“ದೇವರ ಮಾರ್ಗವು ಪರಿಪೂರ್ಣವಾದದ್ದು; ಯೆಹೋವ ದೇವರ ವಾಕ್ಯವು ದೋಷವಿಲ್ಲದ್ದು; ತಮ್ಮಲ್ಲಿ ಆಶ್ರಯ ಹೊಂದಿದ ಎಲ್ಲರಿಗೂ ಅವರು ಗುರಾಣಿಯಾಗಿದ್ದಾರೆ.
32ಏಕೆಂದರೆ ಯೆಹೋವ ದೇವರಲ್ಲದೆ ಬೇರೆ ದೇವರು ಯಾರು? ಮತ್ತು ನಮ್ಮ ದೇವರನ್ನು ಹೊರತುಪಡಿಸಿ ಬಂಡೆ ಯಾರು?
33ಬಲದಿಂದ ನನಗೆ ಆಯುಧವನ್ನು ಧರಿಸುವಂತೆ ಮಾಡಿ; ನನ್ನ ಮಾರ್ಗವನ್ನು ಸುರಕ್ಷಿತಗೊಳಿಸುವ ದೇವರು ಅವರೇ.
34ನನ್ನ ಕಾಲುಗಳನ್ನು ಜಿಂಕೆಗಳ ಕಾಲುಗಳಂತೆ ಚುರುಕು ಮಾಡಿ, ಅವರು ನನ್ನನ್ನು ಉನ್ನತ ಸ್ಥಳಗಳ ಮೇಲೆ ನಿಲ್ಲಿಸುತ್ತಾರೆ.
35ಅವರು ಯುದ್ಧಕ್ಕಾಗಿ ನನ್ನ ಕೈಗಳಿಗೆ ತರಬೇತುಕೊಟ್ಟು. ನನ್ನ ಭುಜದಿಂದ ಕಂಚಿನ ಬಿಲ್ಲನ್ನು ಬಗ್ಗಿಸುವಂತೆ ಮಾಡುತ್ತಾರೆ.
36ನಿಮ್ಮ ರಕ್ಷಣೆಯ ಸಹಾಯವನ್ನು ನನಗೆ ಗುರಾಣಿಯನ್ನಾಗಿ ಮಾಡಿದ್ದೀರಿ, ನಿಮ್ಮ ಸಹಾಯವು ನನ್ನನ್ನು ಘನವಂತನನ್ನಾಗಿ ಮಾಡಿದೆ.
37ನೀವು ನನ್ನ ಕಾಲಡಿಗಳಿಗೆ ವಿಶಾಲಸ್ಥಳ ಒದಗಿಸಿದ್ದೀರಿ, ಆದುದರಿಂದ ನನ್ನ ಹಿಮ್ಮಡಿಗಳು ಜಾರುವುದಿಲ್ಲ.
38“ನನ್ನ ಶತ್ರುಗಳನ್ನು ಹಿಂದಟ್ಟಿ ಅವರನ್ನು ನಾಶಮಾಡಿದೆನು. ಅವರನ್ನು ಸಂಹರಿಸಿಬಿಡುವವರೆಗೂ ನಾನು ಹಿಂದಿರುಗಲಿಲ್ಲ.
39ಏಳಲಾರದಂತೆ ಅವರನ್ನು ಸಂಪೂರ್ಣವಾಗಿ ತುಳಿದುಬಿಟ್ಟೆನು; ಅವರು ನನ್ನ ಪಾದಗಳ ಕೆಳಗೆ ಬಿದ್ದರು.
40ನೀವು ಯುದ್ಧಕ್ಕಾಗಿ ನನಗೆ ಬಲವನ್ನು ಆಯುಧವನ್ನಾಗಿ ನೀಡಿ; ನನ್ನ ಎದುರಾಳಿಗಳನ್ನು ನನಗೆ ಅಧೀನ ಮಾಡಿದ್ದೀರಿ.
41ನನ್ನ ಶತ್ರುಗಳು ನನಗೆ ಬೆನ್ನುಮಾಡಿ ಓಡಿಹೋಗುವಂತೆ ಮಾಡಿದಿರಿ; ನಾನು ನನ್ನ ವೈರಿಗಳನ್ನು ಸಂಹರಿಸಿದೆನು.
42ಅವರು ಸಹಾಯಕ್ಕಾಗಿ ಮೊರೆಯಿಟ್ಟರು, ಆದರೆ ರಕ್ಷಿಸುವವರು ಯಾರೂ ಇರಲಿಲ್ಲ; ಯೆಹೋವ ದೇವರಿಗೂ ಮೊರೆಯಿಟ್ಟರು, ಆದರೆ ಅವರೂ ಉತ್ತರ ಕೊಡಲಿಲ್ಲ.
43ನಾನು ಅವರನ್ನು ನೆಲದ ಧೂಳಿನಂತೆ ಪುಡಿಪುಡಿ ಮಾಡಿದೆನು; ಬೀದಿಯಲ್ಲಿನ ಕೆಸರು ಎಂಬಂತೆ ತುಳಿದು ಎಸೆದುಬಿಟ್ಟೆನು.
44“ನೀವು ನನ್ನ ಜನರ ಒಳಕಲಹದಿಂದ ನನ್ನನ್ನು ತಪ್ಪಿಸಿದ್ದೀರಿ, ನನ್ನನ್ನು ಜನಾಂಗಗಳಿಗೆ ನಾಯಕನನ್ನಾಗಿ ಉಳಿಸಿದ್ದೀ; ನಾನು ಅರಿಯದ ಜನರು ನನಗೆ ವಿಧೇಯರಾಗುವರು.
45ವಿದೇಶಿಯರು ನನಗೆ ಅಧೀನರಾದರು; ನನ್ನ ಸುದ್ದಿ ಕೇಳಿದ ಕೂಡಲೇ ನನಗೆ ವಿಧೇಯರಾಗುವರು.
46ಅವರು ಭಯಗೊಳ್ಳುವರು; ನಡುಗುತ್ತಾ ತಮ್ಮ ಕೋಟೆಗಳಿಂದ ಹೊರಬರುವರು.
47“ಯೆಹೋವ ದೇವರು ಜೀವಿಸುವ ದೇವರು! ನನ್ನ ಆಶ್ರಯವಾಗಿರುವ ದೇವರಿಗೆ ಸ್ತೋತ್ರ. ನನ್ನ ಬಂಡೆಯು, ನನ್ನ ರಕ್ಷಕರಾದ ದೇವರು ಮಹಿಮೆ ಹೊಂದಲಿ.
48ದೇವರೇ ನನಗೋಸ್ಕರ ಮುಯ್ಯಿಗೆ ಮುಯ್ಯಿ ತೀರಿಸುವವರೂ ಜನರನ್ನು ನನಗೆ ಅಧೀನಪಡಿಸುವವರೂ ಆಗಿದ್ದಾರೆ.
49ಅವರು ನನ್ನ ಶತ್ರುಗಳಿಂದ ನನ್ನನ್ನು ಬಿಡಿಸುತ್ತಾರೆ. ನೀವು ನನ್ನ ಎದುರಾಳಿಗಳಿಂದ ನನ್ನನ್ನು ತಪ್ಪಿಸಿ ಗೌರವಿಸುತ್ತೀರಿ. ಬಲಾತ್ಕಾರ ಮಾಡುವವನಿಂದ ನನ್ನನ್ನು ರಕ್ಷಿಸುತ್ತೀರಿ.
50ಆದ್ದರಿಂದ ಯೆಹೋವ ದೇವರೇ, ನಾನು ಜನಾಂಗಗಳಲ್ಲಿ ನಿಮ್ಮನ್ನು ಕೊಂಡಾಡುವೆನು. ನಿಮ್ಮನ್ನು ಕೊಂಡಾಡಿ ನಿಮ್ಮ ಹೆಸರನ್ನು ಕೀರ್ತಿಸುವೆನು.
51“ಅವರು ತಮ್ಮ ಅರಸನಿಗೆ ವಿಶೇಷ ರಕ್ಷಣೆಯನ್ನು ಕೊಡುವರು; ತಮ್ಮ ಅಭಿಷಿಕ್ತನಿಗೂ, ದಾವೀದನಿಗೂ, ಅವನ ಸಂತತಿಯವರಿಗೂ ದಯೆಯನ್ನು ಯುಗಯುಗಕ್ಕೂ ಅನುಗ್ರಹಿಸುವರು.”
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.