Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಸಮುಯೇಲ 11

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಮರು ವರ್ಷ ವಸಂತ ಕಾಲದಲ್ಲಿ ಅರಸರು ಯುದ್ಧಕ್ಕೆ ಹೊರಡುವ ಸಮಯದಲ್ಲಿ ದಾವೀದನು ಯೋವಾಬನನ್ನೂ, ಅವನ ಸಂಗಡದಲ್ಲಿದ್ದ ಅವನ ಸೇವಕರನ್ನೂ, ಸಮಸ್ತ ಇಸ್ರಾಯೇಲರನ್ನೂ ಕಳುಹಿಸಿದನು. ಅವರು ಅಮ್ಮೋನಿಯರ ಪ್ರಾಂತಗಳನ್ನು ಹಾಳು ಮಾಡಿ ರಬ್ಬ ನಗರಕ್ಕೆ ಮುತ್ತಿಗೆ ಹಾಕಿದರು. ಆದರೆ ದಾವೀದನು ಯೆರೂಸಲೇಮಿನಲ್ಲಿಯೇ ಇದ್ದನು.
2ದಾವೀದನು ಒಂದು ದಿನ ಸಾಯಂಕಾಲದಲ್ಲಿ ತನ್ನ ಹಾಸಿಗೆಯಿಂದ ಎದ್ದು, ಅರಮನೆಯ ಉಪ್ಪರಿಗೆಯ ಮೇಲೆ ತಿರುಗಾಡುತ್ತಾ ಇದ್ದು, ಸ್ನಾನ ಮಾಡುತ್ತಿರುವ ಒಬ್ಬ ಸ್ತ್ರೀಯನ್ನು ಕಂಡನು.
3ಆ ಸ್ತ್ರೀಯು ಬಹು ಸೌಂದರ್ಯವುಳ್ಳ ರೂಪವತಿಯಾಗಿದ್ದಳು. ಆಗ ದಾವೀದನು ಆ ಸ್ತ್ರೀ ಯಾರೆಂದು ಕೇಳುವುದಕ್ಕೆ ಕಳುಹಿಸಿದಾಗ ಒಬ್ಬನು, “ಅವಳು ಎಲೀಯಾಮನ ಮಗಳೂ, ಹಿತ್ತಿಯನಾದ ಊರೀಯನ ಹೆಂಡತಿಯೂ ಬತ್ಷೆಬೆಳು,” ಎಂದನು.
4ಆಗ ದಾವೀದನು ದೂತರನ್ನು ಕಳುಹಿಸಿ ಅವಳನ್ನು ಬರಮಾಡಿಕೊಂಡನು. ಅವಳು ಅವನ ಬಳಿಗೆ ಬಂದಾಗ, ಅವಳು ತನ್ನ ಮೈಲಿಗೆಯನ್ನು ಕಳೆದುಕೊಂಡು ಶುಚಿಯಾಗಿದ್ದದರಿಂದ, ದಾವೀದನು ಅವಳ ಸಂಗಡ ಮಲಗಿದನು.
5ತರುವಾಯ ಆಕೆಯು ತನ್ನ ಮನೆಗೆ ಹೋದಳು. ಆ ಸ್ತ್ರೀಯು ಗರ್ಭಧರಿಸಿ, “ತಾನು ಗರ್ಭವತಿ,” ಎಂಬ ವಿಷಯವನ್ನು ದಾವೀದನಿಗೆ ಹೇಳಿ ಕಳುಹಿಸಿದಳು.
6ಆಗ ದಾವೀದನು, “ಹಿತ್ತಿಯನಾದ ಊರೀಯನನ್ನು ತನ್ನ ಬಳಿಗೆ ಕಳುಹಿಸು,” ಎಂದು ಯೋವಾಬನಿಗೆ ಹೇಳಿ ಕಳುಹಿಸಿದನು. ಹಾಗೆಯೇ ಯೋವಾಬನು ಊರೀಯನನ್ನು ದಾವೀದನ ಬಳಿಗೆ ಕಳುಹಿಸಿದನು.
7ಊರೀಯನು ದಾವೀದನ ಬಳಿಗೆ ಬಂದಾಗ, ದಾವೀದನು ಅವನನ್ನು, “ಯೋವಾಬನೂ ಸೈನ್ಯದವರೂ ಹೇಗಿದ್ದಾರೆ? ಮತ್ತು ಯುದ್ಧವು ಹೇಗಿದೆ?” ಎಂದು ವಿಚಾರಿಸಿದನು.
8ದಾವೀದನು ಊರೀಯನಿಗೆ, “ನೀನು ನಿನ್ನ ಮನೆಗೆ ಹೋಗಿ ನಿನ್ನ ಕಾಲುಗಳನ್ನು ತೊಳಕೋ,” ಎಂದನು. ಊರೀಯನು ಅರಸನ ಮನೆಯಿಂದ ಹೊರಟುಹೋದನು. ನಂತರ ಅರಸನು ಅವನಿಗೆ ಉಪಹಾರ ಕಳುಹಿಸಿದನು.
9ಆದರೆ ಊರೀಯನು ತನ್ನ ಮನೆಗೆ ಹೋಗದೆ, ಅರಮನೆಯ ಬಾಗಿಲ ಬಳಿಯಲ್ಲಿ ತನ್ನ ಅರಸನ ಸಮಸ್ತ ಸೇವಕರ ಸಂಗಡ ಮಲಗಿದ್ದನು.
10ಊರೀಯನು ತನ್ನ ಮನೆಗೆ ಹೋಗಲಿಲ್ಲವೆಂಬ ವರ್ತಮಾನವು ದಾವೀದನಿಗೆ ಮುಟ್ಟಿದಾಗ ದಾವೀದನು ಊರೀಯನಿಗೆ, “ನೀನು ಪ್ರಯಾಣದಿಂದ ಬರಲಿಲ್ಲವೋ? ಏಕೆ ನಿನ್ನ ಮನೆಗೆ ಹೋಗಲಿಲ್ಲ?” ಎಂದನು.
11ಊರೀಯನು ದಾವೀದನಿಗೆ, “ಮಂಜೂಷವೂ, ಇಸ್ರಾಯೇಲಿನವರೂ, ಯೆಹೂದದವರೂ ಡೇರೆಗಳಲ್ಲಿ ವಾಸಿಸಿರುವಾಗಲೂ; ನನ್ನ ಒಡೆಯನಾದ ಯೋವಾಬನೂ, ನನ್ನ ಒಡೆಯನ ಸೇವಕರೂ ಬೈಲಿನಲ್ಲಿ ದಂಡಿಳಿದಿರುವಾಗ ನಾನು ಉಣ್ಣುವುದಕ್ಕೂ, ಕುಡಿಯುವುದಕ್ಕೂ, ನನ್ನ ಹೆಂಡತಿಯ ಸಂಗಡ ಮಲಗುವುದಕ್ಕೂ ನನ್ನ ಮನೆಗೆ ಹೋಗಲೋ? ನಿನ್ನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಾನು ಈ ಕಾರ್ಯ ಮಾಡುವುದಿಲ್ಲ,” ಎಂದನು.
12ಆಗ ದಾವೀದನು ಊರೀಯನಿಗೆ, “ಈ ಹೊತ್ತು ಇಲ್ಲಿರು. ನಾಳೆ ನಿನ್ನನ್ನು ಕಳುಹಿಸುತ್ತೇನೆ,” ಎಂದನು. ಹಾಗೆಯೇ ಊರೀಯನೂ ಆ ದಿನವೂ, ಮಾರನೆಯ ದಿವಸವೂ ಯೆರೂಸಲೇಮಿನಲ್ಲಿ ಇದ್ದನು.
13ದಾವೀದನು ಅವನನ್ನು ಕರೆದಾಗ, ಅವನು ಅವನ ಮುಂದೆ ಉಂಡು ಕುಡಿದನು. ಇದಲ್ಲದೆ ದಾವೀದನು ಅವನನ್ನು ಅಮಲೇರುವಂತೆ ಮಾಡಿಸಿದನು. ಅವನು ಸಾಯಂಕಾಲದಲ್ಲಿ ತನ್ನ ಮನೆಗೆ ಹೋಗದೆ, ತನ್ನ ಯಜಮಾನನ ಸೇವಕರ ಸಂಗಡ ಮಲಗುವುದಕ್ಕೆ ಹೊರಟುಹೋದನು.
14ಉದಯದಲ್ಲಿ ದಾವೀದನು ಯೋವಾಬನಿಗೆ ಒಂದು ಪತ್ರವನ್ನು ಬರೆದು, ಊರೀಯನ ಕೈಯಲ್ಲಿ ಕಳುಹಿಸಿದನು.
15ಆ ಪತ್ರದಲ್ಲಿ, “ಊರೀಯನನ್ನು ಘೋರ ಯುದ್ಧ ನಡೆಯುತ್ತಿರುವ ಕಡೆ ಮುಂದೆ ನಿಲ್ಲಿಸಿ, ಅವನು ಗಾಯಗೊಂಡು ಸಾಯುವಂತೆ, ಅವನನ್ನು ಬಿಟ್ಟು ನೀವು ಹಿಂದಕ್ಕೆ ಸರಿದುಕೊಳ್ಳಿರಿ,” ಎಂದು ಬರೆದಿದ್ದನು.
16ಹಾಗೆಯೇ ಯೋವಾಬನು ಆ ಪಟ್ಟಣವನ್ನು ಮುತ್ತಿಗೆ ಹಾಕುವಾಗ, ಯಾವ ಸ್ಥಳದಲ್ಲಿ ಪರಾಕ್ರಮಶಾಲಿಗಳು ಇರುವರೆಂದು ತಿಳಿದುಕೊಂಡು, ಅಲ್ಲಿ ಊರೀಯನನ್ನು ನಿಲ್ಲಿಸಿದನು.
17ಪಟ್ಟಣದ ಮನುಷ್ಯರು ಹೊರಟು ಯೋವಾಬನ ಸಂಗಡ ಯುದ್ಧಮಾಡುವಾಗ, ದಾವೀದನ ಸೇವಕರಾದವರಲ್ಲಿ ಕೆಲವರು ಸತ್ತರು. ಇದಲ್ಲದೆ ಹಿತ್ತಿಯನಾದ ಊರೀಯನೂ ಸತ್ತನು.
18ಆಗ ಯೋವಾಬನು ಯುದ್ಧದ ವರ್ತಮಾನಗಳನ್ನೆಲ್ಲಾ ದಾವೀದನಿಗೆ ತಿಳಿಸುವುದಕ್ಕೆ ದೂತನನ್ನು ಕಳುಹಿಸುವಾಗ ಅವನಿಗೆ ಹೇಳಿದ್ದೇನೆಂದರೆ:
19“ನೀನು ಈ ಯುದ್ಧದ ವರ್ತಮಾನಗಳನ್ನೆಲ್ಲಾ ಅರಸನಿಗೆ ಹೇಳಿ ತೀರಿಸಿದ ತರುವಾಯ,
20ಅರಸನಿಗೆ ಕೋಪ ಉರಿದು, ‘ನೀವು ಯುದ್ಧಮಾಡುವುದಕ್ಕೆ ಪಟ್ಟಣಕ್ಕೆ ಇಷ್ಟು ಸಮೀಪವಾಗಿ ಸೇರಿದ್ದೇನು?
21ಅವರು ಗೋಡೆಯಿಂದ ಬಾಣಗಳನ್ನು ಎಸೆಯುವರೆಂದು ನಿಮಗೆ ತಿಳಿದಿರಲಿಲ್ಲವೋ? ಯೆರುಬ್ಬೆಷೆತನ ಮಗ ಅಬೀಮೆಲೆಕನನ್ನು ಕೊಂದವರ‍್ಯಾರು? ತೆಬೇಚಿನಲ್ಲಿ ಒಬ್ಬ ಹೆಂಗಸು ಗೋಡೆಯ ಮೇಲಿನಿಂದ ಒಂದು ಬೀಸುವ ಕಲ್ಲಿನ ತುಂಡನ್ನು ಅವನ ಮೇಲೆ ಹಾಕಿದಾಗ, ಅವನು ಸತ್ತನಲ್ಲವೋ? ನೀವು ಗೋಡೆಗೆ ಅಷ್ಟು ಸಮೀಪ ಏಕೆ ಹೋದಿರಿ?’ ಎಂದು ಕೇಳಿದರೆ; ಆಗ ನೀನು ಅವನಿಗೆ, ನಿಮ್ಮ ಸೇವಕನಾದ ಊರೀಯನೆಂಬ ಹಿತ್ತಿಯನು ಸತ್ತನೆಂದು ಹೇಳು,” ಎಂದನು.
22ಹಾಗೆಯೇ ಆ ದೂತನು ಹೋಗಿ ದಾವೀದನಿಗೆ ಯೋವಾಬನು ತನ್ನೊಂದಿಗೆ ಕಳುಹಿಸಿದ ವರ್ತಮಾನಗಳನ್ನೆಲ್ಲಾ ತಿಳಿಸಿದನು.
23ಆ ದೂತನು ದಾವೀದನಿಗೆ, “ಆ ಮನುಷ್ಯರು ನಿಶ್ಚಯವಾಗಿ ನಮ್ಮ ಮೇಲೆ ಬಲಗೊಂಡು ಬಯಲಿನಲ್ಲಿ ನಮ್ಮ ಮೇಲೆ ಹೊರಟುಬಂದಾಗ, ನಾವು ಪಟ್ಟಣದ ಬಾಗಿಲವರೆಗೆ ಅವರ ಮೇಲೆ ಬಂದೆವು.
24ಆಗ ಬಿಲ್ಲುಗಾರರು ಗೋಡೆಯ ಮೇಲಿನಿಂದ ನಿನ್ನ ಸೇವಕರ ಮೇಲೆ ಬಾಣಗಳನ್ನು ಎಸೆದ ಕಾರಣ, ಅರಸನ ಸೇವಕರಲ್ಲಿ ಕೆಲವರು ಸತ್ತರು. ಇದಲ್ಲದೆ ನಿನ್ನ ಸೇವಕನಾದ ಊರೀಯನೆಂಬ ಹಿತ್ತಿಯನು ಸತ್ತನು,” ಎಂದನು.
25ಆಗ ದಾವೀದನು ಆ ದೂತನಿಗೆ, “ನೀನು ಯೋವಾಬನಿಗೆ, ‘ಇದು ನಿನ್ನನ್ನು ಕದಲಿಸದಿರಲಿ. ಖಡ್ಗವು ಇವನನ್ನಾದರೂ ಸರಿ, ಅವನನ್ನಾದರೂ ಸರಿ ತಿಂದುಬಿಡುವುದು. ನೀನು ಪಟ್ಟಣವನ್ನು ನಿರ್ಮೂಲ ಮಾಡುವ ಹಾಗೆ, ಅದರ ಮೇಲೆ ನಿನ್ನ ಯುದ್ಧವು ಹೆಚ್ಚು ಬಲವಾಗಿರಲಿ,’ ಎಂದು ಹೇಳಿ, ಅವನನ್ನು ಬಲಪಡಿಸು,” ಎಂದನು.
26ತನ್ನ ಗಂಡನಾದ ಊರೀಯನು ಸತ್ತನೆಂದು ಊರೀಯನ ಹೆಂಡತಿಯು ಕೇಳಿದಾಗ, ಅವಳು ತನ್ನ ಗಂಡನಿಗೋಸ್ಕರ ಗೋಳಾಡಿದಳು.
27ದುಃಖದ ದಿವಸಗಳು ತೀರಿದ ತರುವಾಯ, ದಾವೀದನು ಅವಳನ್ನು ತನ್ನ ಮನೆಗೆ ಕರೆಯಕಳುಹಿಸಿದನು. ಅವಳು ಅವನಿಗೆ ಹೆಂಡತಿಯಾಗಿ ಒಬ್ಬ ಮಗನನ್ನು ಹೆತ್ತಳು. ದಾವೀದನು ಮಾಡಿದ ಈ ಕಾರ್ಯವು ಯೆಹೋವ ದೇವರ ದೃಷ್ಟಿಗೆ ಕೆಟ್ಟದ್ದಾಗಿತ್ತು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.