Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಪೇತ್ರನು 3

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಪ್ರಿಯರೇ, ನಿಮಗೀಗ ಬರೆಯುವುದು ಎರಡನೆಯ ಪತ್ರ. ಈ ಎರಡು ಪತ್ರಗಳಲ್ಲಿಯೂ ನಿಮ್ಮ ನೆನಪಿಗೆ ತಂದು ನಿಮ್ಮ ನಿರ್ಮಲವಾದ ಮನಸ್ಸನ್ನು ಉತ್ತೇಜಿಸಿದ್ದೇನೆ.
2ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ನಮಗೆ ಕರ್ತ ಹಾಗೂ ರಕ್ಷಕ ಆಗಿರುವವರು ನಿಮ್ಮ ಅಪೊಸ್ತಲರ ಮೂಲಕ ಕೊಟ್ಟ ಅಪ್ಪಣೆಯನ್ನೂ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತೇನೆ.
3ಕಡೇ ದಿವಸಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು,
4“ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ಪಿತೃಗಳು ನಿದ್ರೆಹೊಂದಿದಂದಿನಿಂದ ಸಮಸ್ತವೂ ಸೃಷ್ಟಿ ಮೊದಲುಗೊಂಡು ಹಾಗೆಯೇ ಇರುತ್ತದಲ್ಲಾ?” ಎಂದು ಕುಚೋದ್ಯದಿಂದ ಕೇಳುವರೆಂದು ನೀವು ಮೊದಲು ತಿಳಿದುಕೊಳ್ಳಬೇಕು.
5ಆದರೆ ಪೂರ್ವಕಾಲದಲ್ಲಿ ದೇವರ ವಾಕ್ಯದಿಂದ ಆಕಾಶವು ಅಸ್ತಿತ್ವಕ್ಕೆ ಬಂದಿತು ಎಂತಲೂ ಜಲದಿಂದ ಜಲದ ಮೂಲಕ ಭೂಮಿಯು ಉಂಟಾಯಿತೆಂಬುದನ್ನು ಅವರು ಬೇಕೆಂತಲೇ ಮರೆತುಬಿಡುತ್ತಾರೆ.
6ಈ ಜಲದಿಂದ ಆ ಸಮಯದಲ್ಲಿ ಜಗತ್ತು ಪ್ರಳಯದಲ್ಲಿ ನಾಶವಾಯಿತು.
7ಆದರೆ ಈಗಿನ ಆಕಾಶವೂ ಭೂಮಿಯೂ ಅದೇ ವಾಕ್ಯದಿಂದ ಬೆಂಕಿಗಾಗಿ ಕಾದಿರಿಸಲಾಗಿವೆ. ಅವು ನ್ಯಾಯತೀರ್ಪಿಗಾಗಿ ಮತ್ತು ಭಕ್ತಿಹೀನರ ನಾಶನಕ್ಕಾಗಿ ಇಡಲಾಗಿವೆ.
8ಆದರೆ ಪ್ರಿಯರೇ, ಕರ್ತದೇವರ ಎಣಿಕೆಯಲ್ಲಿ ಒಂದು ದಿನವು ಸಾವಿರ ವರ್ಷಗಳಂತೆಯೂ ಸಾವಿರ ವರ್ಷಗಳು ಒಂದು ದಿನದಂತೆಯೂ ಇವೆ ಎಂಬುದನ್ನು ಮಾತ್ರ ಮರೆಯಬೇಡಿರಿ.
9ಕರ್ತದೇವರು ತಮ್ಮ ವಾಗ್ದಾನದ ವಿಷಯವಾಗಿ ತಡಮಾಡುತ್ತಾರೆಂಬದಾಗಿ ಕೆಲವರು ಎಣಿಸುವ ಪ್ರಕಾರ ಅವರು ತಡಮಾಡುವವರಲ್ಲ. ಆದರೆ ಯಾವನಾದರೂ ನಾಶವಾಗುವುದರಲ್ಲಿ ಅವರು ಇಷ್ಟಪಡದೆ ಎಲ್ಲರೂ ಪಶ್ಚಾತ್ತಾಪಡಬೇಕೆಂದು ಅಪೇಕ್ಷಿಸುವವರಾಗಿದ್ದು ನಮ್ಮ ಕಡೆಗೆ ದೀರ್ಘಶಾಂತರಾಗಿದ್ದಾರೆ.
10ಆದರೂ ಕರ್ತ ಯೇಸುವಿನ ದಿನವು ರಾತ್ರಿಯಲ್ಲಿ ಕಳ್ಳನು ಬರುವಂತೆ ಬರುತ್ತದೆ. ಆ ದಿನದಲ್ಲಿ ಆಕಾಶಗಳು ಮಹಾಘೋಷದಿಂದ ಇಲ್ಲದೆ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಲಯವಾಗಿ ಹೋಗುವವು. ಭೂಮಿಯೂ ಅದರಲ್ಲಿರುವ ಕೆಲಸಗಳೂ ಸುಟ್ಟು ಹೋಗುವವು.
11ಇವೆಲ್ಲವುಗಳು ಹೀಗೆ ಲಯವಾಗಿ ಹೋಗುವುದರಿಂದ ನೀವು ಎಷ್ಟೋ ಪರಿಶುದ್ಧವಾದ ನಡವಳಿಕೆಯೂ ಭಕ್ತಿಯೂ ಉಳ್ಳವರಾಗಿರಬೇಕು.
12ದೇವರ ದಿನದ ಪ್ರತ್ಯಕ್ಷತೆಯನ್ನು ಎದುರುನೋಡುತ್ತಾ ಆತುರಪಡುವ ಆ ದಿನದಲ್ಲಿ ಆಕಾಶಗಳು ಬೆಂಕಿಹತ್ತಿ ಲಯವಾಗಿ ಹೋಗುವವು. ಅತಿ ಉಷ್ಣದಿಂದ ಪಂಚಭೂತಗಳು ಉರಿದು ಕರಗಿ ಹೋಗುವವಲ್ಲವೇ?
13ಆದರೂ ನಾವು ದೇವರ ವಾಗ್ದಾನದ ಪ್ರಕಾರ ನೂತನ ಆಕಾಶಗಳನ್ನೂ ನೂತನ ಭೂಮಿಯನ್ನೂ ಎದುರುನೋಡುತ್ತಾ ಇದ್ದೇವೆ. ಅವುಗಳಲ್ಲಿ ನೀತಿಯು ವಾಸವಾಗಿರುವುದು.
14ಆದಕಾರಣ ಪ್ರಿಯ ಸ್ನೇಹಿತರೇ, ನೀವು ಇಂಥವುಗಳನ್ನು ಎದುರು ನೋಡುವವರಾಗಿರುವುದರಿಂದ ಸಮಾಧಾನದಲ್ಲಿದ್ದು ನಿರ್ಮಲರಾಗಿಯೂ ನಿರ್ದೋಷಿಗಳಾಗಿಯೂ ಅವರಿಗೆ ಕಾಣಿಸಿಕೊಳ್ಳುವಂತೆ ಜಾಗ್ರತೆಯುಳ್ಳವರಾಗಿರಿ.
15ನಮ್ಮ ಕರ್ತದೇವರ ದೀರ್ಘಶಾಂತಿಯು ನಮ್ಮ ರಕ್ಷಣೆಯ ಕಾರಣಕ್ಕಾಗಿ ಇದೆ ಎಂದು ಎಣಿಸಿಕೊಳ್ಳಿರಿ. ನಮ್ಮ ಪ್ರಿಯ ಸಹೋದರನಾದ ಪೌಲನು ಸಹ ತನಗೆ ಅನುಗ್ರಹಿಸಿರುವ ಜ್ಞಾನದ ಪ್ರಕಾರ ನಿಮಗೆ ಬರೆದಿದ್ದಾನೆ.
16ಅವನು ತನ್ನ ಎಲ್ಲಾ ಪತ್ರಿಕೆಗಳಲ್ಲಿಯೂ ಈ ವಿಷಯಗಳನ್ನು ಕುರಿತು ಹೇಳಿದ್ದಾನೆ. ಆ ಪತ್ರಗಳಲ್ಲಿರುವ ಕೆಲವು ವಿಷಯಗಳು ತಿಳಿಯುವುದಕ್ಕೆ ಕಷ್ಟವಾಗಿವೆ. ಪವಿತ್ರ ವೇದದ ಮಿಕ್ಕಾದ ಭಾಗಗಳಿಗೆ ಸಹ ತಪ್ಪಾದ ಅರ್ಥಮಾಡಿಕೊಂಡ ಹಾಗೆಯೇ ವಿದ್ಯಾಹೀನರೂ ಚಪಲಚಿತ್ತರೂ ಇವುಗಳಿಗೂ ತಪ್ಪಾದ ಅರ್ಥಮಾಡಿಕೊಂಡು ತಮಗೆ ನಾಶವನ್ನುಂಟುಮಾಡಿಕೊಳ್ಳುತ್ತಾರೆ.
17ಆದಕಾರಣ ಪ್ರಿಯರೇ, ನೀವು ಈ ಸಂಗತಿಗಳನ್ನು ಮುಂದಾಗಿ ತಿಳಿದುಕೊಂಡಿರುವುದರಿಂದ ನಿಯಮರಹಿತರ ಸೆಳೆಯುವಿಕೆಗೆ ಮರುಳಾಗಿ ನಿಮ್ಮ ಸ್ಥಿರತೆಯಿಂದ ಬಿದ್ದುಹೋಗದಂತೆ ಎಚ್ಚರಿಕೆಯಿಂದಿರಿ.
18ನೀವು ಕೃಪೆಯಲ್ಲಿ ಬೆಳೆಯಿರಿ ಮತ್ತು ನಮಗೆ ಕರ್ತ ಹಾಗೂ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ವಿಷಯವಾದ ಜ್ಞಾನದಲ್ಲಿಯೂ ಬೆಳೆಯಿರಿ. ಅವರಿಗೆ ಈಗಲೂ ಸರ್ವಕಾಲವೂ ಮಹಿಮೆ ಇರಲಿ! ಆಮೆನ್.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.