Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 8

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಎಲೀಷನು ತಾನು ಬದುಕಿಸಿದ ಹುಡುಗನ ತಾಯಿಗೆ, “ನೀನು, ನಿನ್ನ ಮನೆಯವರು ಎದ್ದು ಎಲ್ಲಿ ಇಳಿದುಕೊಳ್ಳುವ ಸ್ಥಳ ಉಂಟೋ ಅಲ್ಲಿ ಹೋಗಿ ವಾಸಿಸಿರಿ. ಏಕೆಂದರೆ ಯೆಹೋವ ದೇವರು ಬರವನ್ನು ಕಳುಹಿಸಲಿದ್ದಾರೆ. ಅದು ದೇಶದ ಮೇಲೆ ಏಳು ವರ್ಷದವರೆಗೂ ಬರುವುದು,” ಎಂದು ಹೇಳಿದನು.
2ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ, ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರ್ಷ ವಾಸವಾಗಿದ್ದಳು.
3ಏಳು ವರ್ಷ ಆದ ತರುವಾಯ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರುಗಿಬಂದು ತನ್ನ ಹೊಲಮನೆಗಳಿಗೋಸ್ಕರ ಅರಸನಿಗೆ ಮೊರೆಯಿಟ್ಟಳು.
4ಅರಸನು ದೇವರ ಮನುಷ್ಯನ ಸೇವಕನಾದ ಗೇಹಜಿಯ ಸಂಗಡ ಮಾತನಾಡಿ, “ಎಲೀಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರಿಸು,” ಎಂದು ಅವನಿಗೆ ಹೇಳಿದನು.
5ಗೇಹಜಿಯು ಸತ್ತ ಹುಡುಗನನ್ನು ಹೇಗೆ ಎಲೀಷನು ಬದುಕಿಸಿದನೆಂದು ಅರಸನಿಗೆ ವಿವರವಾಗಿ ಹೇಳುತ್ತಿರುವಾಗಲೇ, ಎಲೀಷನು ಬದುಕಿಸಿದ ಹುಡುಗನ ತಾಯಿಯು ತನ್ನ ಹೊಲಮನೆಗೋಸ್ಕರ, ಮೊರೆಯಿಡಲು ಅರಸನ ಬಳಿಗೆ ಬಂದಳು. ಕೂಡಲೆ ಗೇಹಜಿಯು, “ನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಆ ಹುಡುಗನು ಇವನೇ,” ಎಂದನು.
6ಅರಸನು ಆ ಸ್ತ್ರೀಯನ್ನು ವಿಚಾರಿಸಿದಾಗ, ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ನೇಮಿಸಿ, ಅವನಿಗೆ, “ಅವಳಿಗೆ ಸೇರಿದ ಎಲ್ಲವನ್ನು, ಅವಳು ದೇಶವನ್ನು ಬಿಟ್ಟ ದಿನದಿಂದ ಇಂದಿನವರೆಗೆ ಅವಳಿಗೆ ಸಲ್ಲತಕ್ಕ ಆ ಹೊಲದ ಆದಾಯವನ್ನೆಲ್ಲಾ ಅವಳಿಗೆ ಕೊಡಿಸು,” ಎಂದನು. ಹಜಾಯೇಲನು ಬೆನ್ಹದದನನ್ನು ಕೊಲೆಮಾಡಿದ್ದು
7ಅರಾಮಿನ ಅರಸನಾದ ಬೆನ್ಹದದನು ಅಸ್ವಸ್ಥನಾಗಿರುವಾಗ ಎಲೀಷನು ದಮಸ್ಕಕ್ಕೆ ಬಂದನು. “ದೇವರ ಮನುಷ್ಯನು ಇಲ್ಲಿಗೆ ಬಂದಿದ್ದಾನೆ,” ಎಂದು ಅವನಿಗೆ ತಿಳಿಸಲಾಯಿತು.
8ಆಗ ಅರಸನು ಹಜಾಯೇಲನಿಗೆ, “ನೀನು ಕೈಯಲ್ಲಿ ಕಾಣಿಕೆಯನ್ನು ತೆಗೆದುಕೊಂಡುಹೋಗಿ ದೇವರ ಮನುಷ್ಯನನ್ನು ಎದುರುಗೊಂಡು, ಈ ವ್ಯಾಧಿಯಿಂದ ನಾನು ಗುಣವಾಗುವೆನೋ? ಎಂದು ಅವನಿಂದ ಯೆಹೋವ ದೇವರನ್ನು ವಿಚಾರಿಸು,” ಎಂದನು.
9ಹಜಾಯೇಲನು ದಮಸ್ಕದಲ್ಲಿರುವ ಸಕಲ ಉತ್ತಮವಾದವುಗಳಲ್ಲಿ ನಲವತ್ತು ಒಂಟೆಗಳು ಹೊರುವಷ್ಟು ಕಾಣಿಕೆಗಳನ್ನು ತೆಗೆದುಕೊಂಡು, ಎಲೀಷನನ್ನು ಎದುರುಗೊಳ್ಳಲು ಹೋಗಿ, ಅವನ ಮುಂದೆ ಬಂದು ನಿಂತು, “ಅರಾಮಿನ ಅರಸನಾಗಿರುವ ನಿನ್ನ ಮಗ ಬೆನ್ಹದದನು, ‘ಈ ವ್ಯಾಧಿಯಿಂದ ಬದುಕುವೆನೋ?’ ಎಂದು ಕೇಳಲು ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ,” ಎಂದನು.
10ಅದಕ್ಕೆ ಎಲೀಷನು, “ನೀನು ಹೋಗಿ ಅವನಿಗೆ, ನಿಜವಾಗಿಯೂ ಸ್ವಸ್ಥನಾಗುವೆ, ಎಂದು ಹೇಳು. ಆದರೆ ಅವನು ಸಾಯುವನೆಂದು ಯೆಹೋವ ದೇವರು ನನಗೆ ತೋರಿಸಿದ್ದಾರೆ,” ಎಂದನು.
11ದೇವರ ಮನುಷ್ಯನಾದ ಎಲೀಷನು ಹಜಾಯೇಲನು ಮುಜುಗರಕ್ಕೆ ಒಳಗಾಗುವವರೆಗೂ ಅವನನ್ನು ದಿಟ್ಟಿಸಿ ನೋಡುತ್ತಿದ್ದನು. ನಂತರ ದೇವರ ಮನುಷ್ಯನು ಅಳತೊಡಗಿದನು.
12ಆಗ ಹಜಾಯೇಲನು, “ನನ್ನ ಒಡೆಯನು ಅಳುವುದೇಕೆ?” ಎಂದನು. ಅದಕ್ಕವನು, “ಏಕೆಂದರೆ ಇಸ್ರಾಯೇಲರಿಗೆ ನೀನು ಮಾಡಲು ಹೋಗುವ ಕೇಡು ನನಗೆ ತಿಳಿದದೆ. ನೀನು ಅವರ ಕೋಟೆಗಳಿಗೆ ಬೆಂಕಿ ಹತ್ತಿಸಿ, ಅವರ ಯೌವನಸ್ಥರನ್ನು ಖಡ್ಗದಿಂದ ಕೊಂದು, ಅವರ ಕೂಸುಗಳನ್ನು ತುಂಡು ತುಂಡುಗಳಾಗಿ ಮಾಡಿ, ಅವರ ಗರ್ಭಿಣಿ ಸ್ತ್ರೀಯರನ್ನು ಸೀಳಿಬಿಡುವೆ,” ಎಂದ ಉತ್ತರಕೊಟ್ಟನು.
13ಆದರೆ ಹಜಾಯೇಲನು, “ನಿಮ್ಮ ಸೇವಕನು ಕೇವಲ ನಾಯಿ, ಇಂಥಾ ಮಹಾ ಕೆಲಸವನ್ನು ಮಾಡುವುದಕ್ಕೆ ಹೇಗೆ ಸಾಧ್ಯ?” ಎಂದನು. ಎಲೀಷನು, “ನೀನು ಅರಾಮಿನ ಮೇಲೆ ಅರಸನಾಗುವೆ ಎಂದು ಯೆಹೋವ ದೇವರು ನನಗೆ ತಿಳಿಸಿದ್ದಾರೆ,” ಎಂದನು.
14ಹಜಾಯೇಲನು ಎಲೀಷನನ್ನು ಬಿಟ್ಟು ಹೊರಟು ತನ್ನ ಯಜಮಾನನ ಬಳಿಗೆ ಬಂದನು. ಆಗ ಅವನು, “ಎಲೀಷನು ನಿನಗೆ ಏನು ಹೇಳಿದನು?” ಎಂದು ಕೇಳಿದ್ದಕ್ಕೆ ಹಜಾಯೇಲನು, “ನೀನು ನಿಜವಾಗಿ ಬದುಕುವೆ ಎಂದು ನನಗೆ ಹೇಳಿದನು,” ಎಂದನು.
15ಆದರೆ ಮಾರನೆಯ ದಿವಸದಲ್ಲಿ, ಅವನು ದಪ್ಪ ಬಟ್ಟೆಯನ್ನು ತೆಗೆದುಕೊಂಡು ನೀರಿನಲ್ಲಿ ಅದ್ದಿ, ಅರಸನ ಮುಖದ ಮೇಲೆ ಹಾಕಿದ್ದರಿಂದ ಅವನು ಮರಣಹೊಂದಿದನು. ಹಜಾಯೇಲನು ಅವನಿಗೆ ಬದಲಾಗಿ ಅರಸನಾದನು. ಯೆಹೂದ್ಯರ ಅರಸನಾದ ಯೆಹೋರಾಮ್
16ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಐದನೆಯ ವರ್ಷದಲ್ಲಿ, ಯೆಹೂದದ ರಾಜನಾದ ಯೆಹೋಷಾಫಾಟನ ಮಗ ಯೆಹೋರಾಮನು ಆಳತೊಡಗಿದನು.
17ಅವನು ಆಳಲಾರಂಭಿಸಿದಾಗ, ಮೂವತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಎಂಟು ವರ್ಷ ಆಳಿದನು.
18ಅಹಾಬನ ಮಗಳು ಅವನಿಗೆ ಹೆಂಡತಿಯಾಗಿದ್ದರಿಂದ ಅವನು ಅಹಾಬನ ಮನೆಯವರು ನಡೆದ ಹಾಗೆ ಇಸ್ರಾಯೇಲರ ಅರಸರ ಮಾರ್ಗವನ್ನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
19ಆದರೂ ಯೆಹೋವ ದೇವರು ಯೆಹೂದದ ರಾಜ್ಯವನ್ನು ನಾಶಮಾಡಲಿಲ್ಲ. “ನಿನ್ನ ಮತ್ತು ನಿನ್ನ ಸಂತಾನದವರ ದೀಪವನ್ನು ಎಂದೂ ನಂದಿಸುವುದಿಲ್ಲ,” ಎಂಬುದಾಗಿ ತಮ್ಮ ದಾಸನಾದ ದಾವೀದನಿಗೆ ಪ್ರಮಾಣ ಮಾಡಿದ ಕಾರಣ ಉಳಿಸಿದರು.
20ಯೆಹೋರಾಮನ ದಿನಗಳಲ್ಲಿ ಯೆಹೂದದ ಕೈಕೆಳಗಿದ್ದ ಎದೋಮ್ಯರು ತಿರುಗಿಬಿದ್ದು, ತಮ್ಮ ಅರಸನನ್ನು ತಾವೇ ನೇಮಿಸಿಕೊಂಡರು.
21ಆದ್ದರಿಂದ ಯೆಹೋರಾಮನು ತನ್ನ ಬಳಿಯಲ್ಲಿದ್ದ ಎಲ್ಲಾ ರಥಬಲವನ್ನು ತೆಗೆದುಕೊಂಡು ಚಾಯೀರಿಗೆ ಹೋಗಿ, ರಾತ್ರಿಯಲ್ಲಿ ಎದ್ದು, ತನ್ನನ್ನೂ ತನ್ನ ರಥಗಳ ಅಧಿಪತಿಗಳನ್ನೂ ಎದೋಮ್ಯರನ್ನು ಸೋಲಿಸಿದನು. ಅವನ ಸೈನಿಕರು ತಮ್ಮ ತಮ್ಮ ಡೇರೆಗಳಿಗೆ ಓಡಿಹೋದರು.
22ಯೆಹೂದ್ಯರಿಗೆ ವಿರೋಧವಾಗಿ ದಂಗೆಯೆದ್ದ ಎದೋಮ್ಯರು ಅಂದಿನಿಂದ ಇಂದಿನವರೆಗೂ ಸ್ವತಂತ್ರರಾಗಿದ್ದಾರೆ. ಅದೇ ಕಾಲದಲ್ಲಿ ಲಿಬ್ನದವರೂ ಸ್ವತಂತ್ರರಾದರು.
23ಯೆಹೋರಾಮನ ಇತರ ಕ್ರಿಯೆಗಳೂ ಅವನು ಮಾಡಿದ್ದೆಲ್ಲವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
24ಯೆಹೋರಾಮನು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು. ಅವನ ಶವವನ್ನು ದಾವೀದನ ಪಟ್ಟಣದಲ್ಲಿ ಸಮಾಧಿಮಾಡಿದರು. ಅವನ ಮಗ ಅಹಜ್ಯನು ಅವನಿಗೆ ಬದಲಾಗಿ ಅರಸನಾದನು. ಯೆಹೂದ್ಯರ ಅರಸನಾದ ಅಹಜ್ಯ
25ಅಹಾಬನ ಮಗನೂ ಇಸ್ರಾಯೇಲರ ಅರಸನೂ ಆದ ಯೋರಾಮನ ಆಳ್ವಿಕೆಯ ಹನ್ನೆರಡನೆಯ ವರ್ಷದಲ್ಲಿ ಯೆಹೂದದ ಅರಸನಾದ ಯೆಹೋರಾಮನ ಮಗ ಅಹಜ್ಯನು ಅರಸನಾದನು.
26ಇವನು ಆಳಲು ಆರಂಭಿಸಿದಾಗ ಇಪ್ಪತ್ತೆರಡು ವರ್ಷದವನಾಗಿದ್ದು, ಯೆರೂಸಲೇಮಿನಲ್ಲಿ ಒಂದು ವರ್ಷ ಆಳಿದನು. ಇವನ ತಾಯಿಯ ಹೆಸರು ಅತಲ್ಯಳು, ಅವಳು ಇಸ್ರಾಯೇಲಿನ ಅರಸನಾದ ಒಮ್ರಿಯ ಮೊಮ್ಮಗಳು.
27ಇವನು ಅಹಾಬನ ಮನೆಯವರ ಮಾರ್ಗಗಳಲ್ಲಿ ನಡೆದು, ಅಹಾಬನ ಮನೆಯವರ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು. ಏಕೆಂದರೆ ಇವನು ಅಹಾಬನ ಅಳಿಯನಾಗಿದ್ದನು.
28ಅಹಜ್ಯನು ಅಹಾಬನ ಮಗ ಯೋರಾಮನ ಸಂಗಡ ಗಿಲ್ಯಾದಿನ ರಾಮೋತಿಗೆ ಅರಾಮಿನ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಲು ಹೋದನು. ಆದರೆ ಅರಾಮ್ಯರು ಯೋರಾಮನನ್ನು ಹೊಡೆದು ಗಾಯಗೊಳಿಸಿದರು.
29ಆದ್ದರಿಂದ ಅರಸನಾದ ಯೋರಾಮನು ಅರಾಮ್ಯ ದೇಶದ ಅರಸನಾದ ಹಜಾಯೇಲನ ಮೇಲೆ ಯುದ್ಧಮಾಡಿದಾಗ, ರಾಮೋತಿನಲ್ಲಿ ಅರಾಮ್ಯರು ತನ್ನನ್ನು ಹೊಡೆದ ಗಾಯಗಳನ್ನು ಗುಣಪಡಿಸಿಕೊಳ್ಳುವುದಕ್ಕೆ ಇಜ್ರೆಯೇಲ್ ಪಟ್ಟಣಕ್ಕೆ ತಿರುಗಿಹೋದನು. ಆಗ ಅಹಾಬನ ಮಗ ಯೋರಾಮನು ಇಜ್ರೆಯೇಲಿನಲ್ಲಿ ಅಸ್ವಸ್ಥನಾಗಿದ್ದುದರಿಂದ ಯೆಹೂದದ ಅರಸನಾಗಿರುವ ಯೆಹೋರಾಮನ ಮಗ ಅಹಜ್ಯನು ಅವನನ್ನು ನೋಡಲು ಹೋದನು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.