Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™ (2022)

ಅರಸುಗಳು 22

ಈ ಅಧ್ಯಾಯವನ್ನು ಕನ್ನಡದಲ್ಲಿ ಓದಬಹುದು. Divine Threads ಅಧ್ಯಯನ ಸಾಮಗ್ರಿಯನ್ನು ನಂತರ ಸೇರಿಸಲಾಗುತ್ತದೆ.

1ಯೋಷೀಯನು ಅರಸನಾದಾಗ ಎಂಟು ವರ್ಷದವನಾಗಿದ್ದನು, ಅವನು ಮೂವತ್ತೊಂದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿ ಬೊಚ್ಕತಿನ ಅದಾಯನ ಮಗಳಾದ ಯೆದೀದಾ ಎಂಬವಳು.
2ಅವನು ಯೆಹೋವ ದೇವರ ದೃಷ್ಟಿಗೆ ಒಳ್ಳೆಯದನ್ನು ಮಾಡಿ, ಎಡಕ್ಕಾಗಲಿ ಬಲಕ್ಕಾಗಲಿ ತಿರುಗದೆ ತನ್ನ ಪೂರ್ವಜನಾದ ದಾವೀದನ ಮಾರ್ಗಗಳಲ್ಲಿಯೇ ನಡೆದನು.
3ಯೋಷೀಯನ ಆಳ್ವಿಕೆಯ ಹದಿನೆಂಟನೆಯ ವರ್ಷದಲ್ಲಿ, ಅರಸನು ಕಾರ್ಯದರ್ಶಿಯಾದ ಮೆಷುಲ್ಲಾಮನ ಮಗ, ಅಚಲ್ಯನ ಮಗನಾದ ಶಾಫಾನನನ್ನು ಯೆಹೋವ ದೇವರ ಆಲಯಕ್ಕೆ ಕಳುಹಿಸಿ,
4“ನೀನು ಮಹಾಯಾಜಕನಾದ ಹಿಲ್ಕೀಯನ ಬಳಿಗೆ ಹೋಗು. ಅವನು ಯೆಹೋವ ದೇವರ ಆಲಯದ ದ್ವಾರಪಾಲಕರು ಜನರಿಂದ ತೆಗೆದುಕೊಂಡು ಕೂಡಿಸಿದ ಹಣವನ್ನು ಲೆಕ್ಕ ಮಾಡಲಿ.
5ಅವರು ಅದನ್ನು ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಲಿ.
6ಆಲಯ ದುರಸ್ತಿ ಮಾಡುವಂತೆ ಯೆಹೋವ ದೇವರ ಆಲಯದಲ್ಲಿ ಕೆಲಸ ಮಾಡುವವರಾದ ಬಡಗಿಯರಿಗೂ, ಶಿಲ್ಪಿಗಾರರಿಗೂ, ಕಲ್ಲುಕೆಲಸದವರಿಗೂ ಕೊಟ್ಟು, ಆಲಯವನ್ನು ದುರಸ್ತಿ ಮಾಡಲು ಮರಗಳನ್ನೂ, ಕೆತ್ತಿದ ಕಲ್ಲುಗಳನ್ನೂ ಕೊಂಡುಕೊಳ್ಳುವುದಕ್ಕೆ ಕೊಡಲಿ.
7ಆದರೆ ಅವರು ನಂಬಿಗಸ್ತರಾಗಿ ಕೆಲಸ ಮಾಡಿದ್ದರಿಂದ, ಅವರ ಕೈಗೆ ಒಪ್ಪಿಸಿದ ಹಣವನ್ನು ಕುರಿತು ಅವರಿಂದ ಲೆಕ್ಕ ಕೇಳುವ ಅವಶ್ಯಕತೆ ಇಲ್ಲ, ಎಂದು ಹೇಳು,” ಎಂದನು.
8ಆಗ ಮಹಾಯಾಜಕನಾದ ಹಿಲ್ಕೀಯನು ಕಾರ್ಯದರ್ಶಿಯಾದ ಶಾಫಾನನಿಗೆ, “ನನಗೆ ಯೆಹೋವ ದೇವರ ಆಲಯದಲ್ಲಿ ಮೋಶೆಯ ನಿಯಮದ ಗ್ರಂಥವು ಸಿಕ್ಕಿರುತ್ತದೆ,” ಎಂದನು. ಹಿಲ್ಕೀಯನು ಆ ಗ್ರಂಥವನ್ನು ಶಾಫಾನನಿಗೆ ಒಪ್ಪಿಸಿದನು. ಅವನು ಅದನ್ನು ಓದಿದನು.
9ಕಾರ್ಯದರ್ಶಿಯಾದ ಶಾಫಾನನು ಅರಸನ ಬಳಿಗೆ ಬಂದು ಅರಸನಿಗೆ, “ಯೆಹೋವ ದೇವರ ಆಲಯದಲ್ಲಿ ದೊರಕಿದ ಹಣವನ್ನು ನಿನ್ನ ಸೇವಕರು ಕೂಡಿಸಿ, ಯೆಹೋವ ದೇವರ ಆಲಯದ ಕೆಲಸಕ್ಕೆ ನೇಮಕಗೊಂಡ ಮೇಲ್ವಿಚಾರಕರ ಕೈಯಲ್ಲಿ ಒಪ್ಪಿಸಿದ್ದಾರೆ,” ಎಂದನು.
10ಇದಲ್ಲದೆ, “ಯಾಜಕನಾದ ಹಿಲ್ಕೀಯನು ನನಗೆ ಪುಸ್ತಕವನ್ನು ಒಪ್ಪಿಸಿದ್ದಾನೆ,” ಎಂದು ತೋರಿಸಿ, ಶಾಫಾನನು ಅದನ್ನು ಅರಸನ ಮುಂದೆ ಓದಿದನು.
11ಅರಸನು ಮೋಶೆಯ ನಿಯಮದ ಪುಸ್ತಕದ ಮಾತುಗಳನ್ನು ಕೇಳಿದಾಗ, ತನ್ನ ವಸ್ತ್ರಗಳನ್ನು ಹರಿದುಕೊಂಡನು.
12ಇದಲ್ಲದೆ ಅರಸನು ಯಾಜಕನಾದ ಹಿಲ್ಕೀಯನಿಗೂ, ಶಾಫಾನನ ಮಗನಾದ ಅಹೀಕಾಮನಿಗೂ, ಮೀಕಾಯನ ಮಗನಾದ ಅಕ್ಬೋರನಿಗೂ, ಕಾರ್ಯದರ್ಶಿಯಾದ ಶಾಫಾನನಿಗೂ, ಅರಸನ ಸೇವಕನಾದ ಅಸಾಯನಿಗೂ ಆಜ್ಞಾಪಿಸಿ,
13“ನೀವು ಹೋಗಿ ಸಿಕ್ಕಿದ ಈ ಗ್ರಂಥದ ವಾಕ್ಯಗಳ ಕುರಿತು ನನಗೋಸ್ಕರವೂ, ಜನರಿಗೋಸ್ಕರವೂ, ಸಮಸ್ತ ಯೆಹೂದ್ಯರಿಗೋಸ್ಕರವೂ ಯೆಹೋವ ದೇವರ ಬಳಿಯಲ್ಲಿ ವಿಚಾರಿಸಿರಿ. ಏಕೆಂದರೆ ನಮ್ಮನ್ನು ಕುರಿತು ಬರೆದಿರುವ ಎಲ್ಲವನ್ನೂ ಕೈಗೊಂಡು ನಡೆಯಲು ನಮ್ಮ ಪಿತೃಗಳು ಈ ಗ್ರಂಥದ ಮಾತುಗಳನ್ನು ಕೇಳದೆ ಹೋದುದರಿಂದ, ದೇವರ ಮಹಾಕೋಪಕ್ಕೆ ಪಾತ್ರರಾಗಿದ್ದೇವೆ,” ಎಂದನು.
14ಯಾಜಕನಾದ ಹಿಲ್ಕೀಯ, ಅಹೀಕಾಮ್, ಅಕ್ಬೋರ್, ಶಾಫಾನ್ ಅಸಾಯ ಎಂಬವರು ಪ್ರವಾದಿನಿ ಹುಲ್ದಳ ಬಳಿಗೆ ವಿಚಾರಿಸಲು ಹೋದರು. ಆಕೆಯು ಹರ್ಹಸನ ಮೊಮ್ಮಗನೂ ತಿಕ್ವನ ಮಗನೂ ರಾಜವಸ್ತ್ರಗಳ ಮೇಲ್ವಿಚಾರಕನೂ ಆದ ಶಲ್ಲೂಮನ ಹೆಂಡತಿ. ಅವಳು ಯೆರೂಸಲೇಮಿನೊಳಗೆ ಹೊಸದಾದ ನಿರ್ಮಿತ ಭಾಗದಲ್ಲಿ ವಾಸವಾಗಿದ್ದಳು.
15ಹುಲ್ದಳು ಅವರಿಗೆ, “ನಿಮ್ಮನ್ನು ನನ್ನ ಬಳಿಗೆ ಕಳುಹಿಸಿದವನಿಗೆ ನೀವು ಇಸ್ರಾಯೇಲ್ ದೇವರಾದ ಯೆಹೋವ ದೇವರ ಮಾತುಗಳನ್ನು ತಿಳಿಸಿರಿ:
16‘ನಾನು ಈ ಸ್ಥಳದ ಮೇಲೆಯೂ ಅದರ ನಿವಾಸಿಗಳ ಮೇಲೆಯೂ ಯೆಹೂದದ ಅರಸನು ಓದಿದ ಗ್ರಂಥದಲ್ಲಿ ಬರೆದಿರುವ ಪ್ರತಿಯೊಂದರಂತೆ ಕೇಡನ್ನು ಬರಮಾಡುವೆನು.
17ಏಕೆಂದರೆ ಅವರು ನನ್ನನ್ನು ಬಿಟ್ಟುಬಿಟ್ಟು, ತಮ್ಮ ಸಮಸ್ತ ಕ್ರಿಯೆಗಳಿಂದ ನನಗೆ ಕೋಪವನ್ನು ಎಬ್ಬಿಸುವಂತೆ ಇತರ ದೇವರುಗಳಿಗೆ ಧೂಪವನ್ನು ಸುಟ್ಟಿದ್ದಾರೆ. ಆದ್ದರಿಂದ ನನ್ನ ಕೋಪವು ಈ ಸ್ಥಳದ ಮೇಲೆ ಹೊತ್ತಿ ಉರಿಯುತ್ತಿದೆ, ಅದು ಆರಿಹೋಗುವುದಿಲ್ಲ.’
18ಆದರೆ ಯೆಹೋವ ದೇವರನ್ನು ವಿಚಾರಿಸಲು ನಿಮ್ಮನ್ನು ಕಳುಹಿಸಿದ ಯೆಹೂದದ ಅರಸನಿಗೆ ನೀವು ಹೇಳಬೇಕಾದದ್ದು ಇದೇ, ‘ನೀವು ಕೇಳಿದ ಮಾತುಗಳನ್ನು ಕುರಿತು ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ,
19ಈ ಸ್ಥಳವೂ ಅದರ ನಿವಾಸಿಗಳೂ ನಾಶಕ್ಕೂ ಶಾಪಕ್ಕೂ ಗುರಿಯಾಗುವರೆಂದು ನಾನು ಹೇಳಿದ್ದನ್ನು ನೀನು ಕೇಳಿದಾಗ, ನಿನ್ನ ಹೃದಯವು ಮೃದುವಾಗಿ ನೀನು ನಿನ್ನನ್ನು ಯೆಹೋವ ದೇವರ ಮುಂದೆ ತಗ್ಗಿಸಿಕೊಂಡೆ. ನಿನ್ನ ವಸ್ತ್ರಗಳನ್ನು ಹರಿದುಕೊಂಡು ನನ್ನ ಸಮ್ಮುಖದಲ್ಲಿ ಕಣ್ಣೀರು ಸುರಿಸಿದ್ದರಿಂದ ನಾನು ನಿನ್ನ ಮೊರೆಯನ್ನು ಕೇಳಿದೆನು.
20ಆದ್ದರಿಂದ ನಾನು ನಿನ್ನನ್ನು ನಿನ್ನ ಪಿತೃಗಳ ಬಳಿಯಲ್ಲಿ ಸೇರಿಸಿಕೊಳ್ಳುವೆನು; ನೀನು ಸಮಾಧಾನದಿಂದ ನಿನ್ನ ಸಮಾಧಿಗೆ ಸೇರುವೆ. ನಾನು ಈ ಸ್ಥಳದ ಮೇಲೆ ಬರಮಾಡುವ ಕೇಡನ್ನು ನಿನ್ನ ಕಣ್ಣುಗಳು ಕಾಣುವುದಿಲ್ಲ,’ ಎಂದು ಯೆಹೋವ ದೇವರು ಹೇಳುತ್ತಾರೆ,” ಎಂದಳು. ಅವರು ಹೋಗಿ ಈ ಉತ್ತರವನ್ನು ಅರಸನಿಗೆ ತಿಳಿಸಿದರು.
Biblica® ಉಚಿತ ಕನ್ನಡ ಸಮಕಾಲಿಕ ಭಾಷಾಂತರ™
ಕೃತಿಸ್ವಾಮ್ಯ © 1999, 2020, 2022 Biblica, Inc.
Biblica® Open Kannada Contemporary Version™
Copyright © 1999, 2020, 2022 by Biblica, Inc.
“Biblica” is a trademark registered in the United States Patent and Trademark Office by Biblica, Inc. Used with permission.

This Scripture text is available under the Creative Commons Attribution-ShareAlike 4.0 International (CC BY-SA 4.0) license. The original work is freely available at biblica.com and open.bible. See the complete source copyright and license notice. The website presents the same Scripture wording in separate verse rows and preserves combined verse-number ranges; source HTML markup and inline footnote popups are omitted from this reader. Any adaptations to the Bible text remain subject to CC BY-SA 4.0; Divine Threads study content is separately authored.